ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢರ ವೈಭವದ ಜಾತ್ರೆಯ ಝಲಕು

Last Updated 22 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಗುರುರಾಜ ಸಿದ್ಧಾರೂಢ ಸಮರ್ಥ ಬೆಳಗುವೆ ಆರತಿಯ ಗುರುವರ ಬೆಳಗುವೆ ಆರತಿಯ~ ಎಂದು ಪೂಜಾರಿಗಳು ಹಾಡಿದರು. ಹಾಗೆ ಹಾಡುವಾಗ ತೇರಿನ ಮುಂದೆ ನಿಂತಿದ್ದವರ ಕೈಗಳಲ್ಲಿದ್ದ ತೆಂಗಿನಕಾಯಿಗಳ ಮೇಲೆ ಹಚ್ಚಿಟ್ಟಿದ್ದ ಕರ್ಪೂರ ಮೂಲಕ ಸಿದ್ಧಾರೂಢ ಸ್ವಾಮಿಗೆ ಬೆಳಗಿದರು.

ಬೆಳಗುವ ಪ್ರಕ್ರಿಯೆ ಮುಗಿದಾಕ್ಷಣ `ಸಿದ್ಧಾರೂಢ ಮಹಾರಾಜ ಕೀ ಜೈ~ ಎಂದು ತೇರನ್ನು ಭಕ್ತರು ಎಳೆಯಲಾರಂಭಿಸಿದರು. ಕೂಡಲೇ ಉತ್ತತ್ತಿ, ಲಿಂಬೆಹಣ್ಣು, ಬಾಳೆಹಣ್ಣು, ಪೇರಲ ಹಣ್ಣುಗಳನ್ನು ತೇರಿನತ್ತ ತೂರಿ ಅಪಾರ ಸಂಖ್ಯೆಯ ಭಕ್ತರು ಕೈ ಮುಗಿದರು. ಕೆಲವರು ಶಿರ ಬಾಗಿಸಿ ನಮಿಸಿದರು. ಹೀಗೆ ನಗರದ ಸಿದ್ಧಾರೂಢಮಠದ ಸಿದ್ಧಾರೂಢ ಸ್ವಾಮೀಜಿ ರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.

ಕೆಂಪು ಬಾವುಟಗಳ ಜೊತೆಗೆ ಚೆಂಡುಹೂವು, ಸೇವಂತಿಗೆ, ಸುಗಂಧಿ ಹೂವುಗಳೊಂದಿಗೆ ಶೃಂಗರಿಸಿದ್ದ ತೇರು ಮುಂದೆ ಸಾಗುತ್ತಿದ್ದಂತೆ ನಗರದ ಹೊಸ ಮ್ಯಾದಾರ ಓಣಿಯ ಮಂಜುನಾಥ ಬ್ಯಾಂಡ್ ಕಂಪೆನಿಯ ಬ್ಯಾಂಡ್ ಮೇಳ ಮುಂದುವರಿಯಿತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದ ಮಹೇಶ ಬಡಿಗೇರ, ರಾಮಪ್ಪ ಬರದೂರ ಹಾಗೂ ಶಂಕ್ರಪ್ಪ ಲಗಿಬಗಿ ಅವರ ಸಮಾಳ ವಾದ್ಯ ಮೆರುಗು ನೀಡಿತು. `ನಮ್ಮಜ್ಜ ಕೊಟ್ರಪ್ಪ ಬರದೂರ ಜಾತ್ರೆಯ ದಿನ ಸಮಾಳ ವಾದ್ಯದ ಸೇವೆ ಸಲ್ಲಿಸುತ್ತಿದ್ದರು. ಇದನ್ನು ಮುಂದುವರಿಸಿಕೊಂಡು ಹೊರಟಿರುವೆವು~ ಎಂದರು ರಾಮಪ್ಪ ಬರದೂರ.

ಶಿವಶಂಕರ ಕಾಲೊನಿಯ ದ್ಯಾಮವ್ವ ದೇವಿ ಝಾಂಜ್ ಮೇಳಕ್ಕೆ ಮಂಗಳಮುಖಿಯರು ನರ್ತಿಸಿದರು. ಅವರಿಂದ ಹುರುಪುಗೊಂಡ ಸುತ್ತಲಿದ್ದವರೂ ಕುಣಿದರು. ಮುಂಬೈಯಿಂದ ಬಂದಿದ್ದ 110ಕ್ಕೂ ಅಧಿಕ ಭಕ್ತೆಯರು ಚಪ್ಪಾಳೆ ತಟ್ಟುತ್ತ, ಕುಣಿಯುತ್ತ ತೇರಿನ ಮುಂದೆ ಸಾಗಿದರು. ಹಾವೇರಿ ಜಿಲ್ಲೆಯ ಕೋಣನತಂಬಿಗೆಯ ಡೊಳ್ಳು ಮೇಳ, ಕರ್ಕಿಬಸವೇಶ್ವರನಗರದ ಡೊಳ್ಳು ಮೇಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಲ್ಲಾಪುರ ಗ್ರಾಮದ ಡೊಳ್ಳು ಕುಣಿತ, ಕುಸುಗಲ್ಲ ಹಾಗೂ ಇನಾಮಕೊಪ್ಪ ಗ್ರಾಮಗಳ ಡೊಳ್ಳು ಮೇಳಗಳು ಮೆರುಗು ತಂದವು.

ಶಿವಶಂಕರ ಕಾಲೊನಿಯ ಆರ್‌ಎಸ್‌ಎಸ್‌ನ 50 ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಶಿಸ್ತಾಗಿ, ಸಾಲಾಗಿ ನಡೆದರು. ಸಿದ್ಧಾರೂಢಮಠದ ಪಾಠ ಶಾಲೆಯ ವಿದ್ಯಾರ್ಥಿಗಳು ತೇರಿನಲ್ಲಿದ್ದ ಸಿದ್ಧಾರೂಢರ ಮೂರ್ತಿಗೆ ಚೌರ ಬೀಸಿದರೆ, ಕೆಲ ಭಕ್ತರು ಶಂಖ ಊದುತ್ತ ಭಕ್ತಿ ಮೆರೆದರು. ಜಾತ್ರೆಯ ವೈಭವ ತಮ್ಮ ಮಕ್ಕಳಿಗೂ ಕಾಣಲೆಂದು ಕೆಲವರು ಹೆಗಲ ಮೇಲೆ ಕೂಡಿಸಿಕೊಂಡರು. ಪ್ರತಿ ವರ್ಷ ಜಾತ್ರೆಗೆ ಚಕ್ಕಡಿ ಕಟ್ಟಿಕೊಂಡು ಬರುವ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಸೋಮಣ್ಣ ಬೆಂಗೇರಿ ಈ ವರ್ಷವೂ ಚಕ್ಕಡಿ ಕಟ್ಟಿಕೊಂಡು ಬಂದಿದ್ದರು. ಜೊತೆಗೆ ಹೊಸ ಬಟ್ಟೆ ಹಾಕಿಕೊಂಡಿದ್ದರು.

ಆರೂಢ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಓದಿದ ಹುಟ್ಟು ಕುರುಡರಾದ ಜಗದೀಶ ಶಿರಗುಪ್ಪಿ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿರುವ ದಿಲೀಪ್ ಕೊಳ್ಳಿ, ಕಣ್ಣಿಲ್ಲ ನಿಜ. ಆದರೂ ಜಾತ್ರೆಗೆ ಬಹಳಷ್ಟು ಜನರು ಬಂದಿದ್ದಾರೆಂದು ಅನುಭವಿಸುತ್ತೇವೆ ಎಂದರು.

ಇವರೊಂದಿಗೆ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದಿಂದ ಟ್ರ್ಯಾಕ್ಟರ್‌ನಲ್ಲಿ ಸೋಮವಾರ ರಾತ್ರಿಯೇ ಬಂದ 50ಕ್ಕೂ ಮಿಕ್ಕಿದ ಭಕ್ತರು ಬೆಳಗಿನವರೆಗೆ ಭಜನೆ ಸೇವೆ ಸಲ್ಲಿಸಿದರು. ಮತ್ತೆ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಭಜನೆಯನ್ನು ಆರಂಭಿಸಿ ರಾತ್ರಿ 8 ಗಂಟೆಯವರೆಗೂ ಮುಂದುವರಿಸಿದರು.

ಬೃಹತ್ ಬಲೂನು

 ಜಾತ್ರೆಯಲ್ಲಿ ಸಿದ್ಧಾರೂಢ ಸ್ವಾಮಿಯ 175ನೇ ಜಯಂತ್ಯುತ್ಸವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವವೆಂದು ಬರೆದ ಬೃಹತ್ ಬಲೂನು ಭಕ್ತರ ಗಮನ ಸೆಳೆಯಿತು.ಈ ಬಾರಿಯ ಜಾತ್ರೆಯ ವಿಶೇಷ ಎಂದರೆ ಸಿದ್ಧಾರೂಢರ 175ನೇ ಜಯಂತ್ಯುತ್ಸವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವ ಅಂಗವಾಗಿ ನಡೆದ ವಿಶ್ವ ವೇದಾಂತ ಪರಿಷತ್. ಇದರಿಂದಾಗಿ ಮುಂಬೈ, ಪುರಿ, ಹರಿದ್ವಾರ ಮೊದಲಾದೆಡೆಯಿಂದ ಬಂದ ಮಹಾಮಂಡಲೇಶ್ವರರು ಭಾಗವಹಿಸಿದ್ದರು.
 
ಜಾತಿ, ಕುಲ, ಗೋತ್ರ, ಮತ, ಪಂಥ ಬೇರೆ ಬೇರೆಯಾದರೂ ಆತ್ಮ ಒಂದೇ. ಆ ಆತ್ಮ ಪರಮಾತ್ಮ ಎನ್ನುವ ಭಕ್ತಿ ಭಾವದಿಂದ ಸಿದ್ಧಾರೂಢರ ಮಠಕ್ಕೆ ಲಿಂಗಾಯತರ ಜೊತೆಗೆ ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳ,ಮಾರ್ವಾಡಿಗಳು, ಜೈನರು, ಬ್ರಾಹ್ಮಣರು ಹೀಗೆ ಎಲ್ಲ ವರ್ಗದವರು ಬರುತ್ತಾರೆ ಜೊತೆಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ~ ಎಂದು ಮಠದ ಟ್ರಸ್ಟಿ ಡಾ.ಆರ್.ಎನ್. ಜೋಶಿ `ಪ್ರಜಾವಾಣಿ~ಗೆ ತಿಳಿಸಿದರು.

ಹರಕೆ ತೀರಿಸಿದ ಭಕ್ತರು
ರಥೋತ್ಸವದ ದಿನವಾದ ಮಂಗಳವಾರ ಬೆಳಿಗ್ಗೆಯಿಂದಲೇ ಭಕ್ತರ ದಂಡು ಸಿದ್ಧಾರೂಢ ಮಠದತ್ತ ಹರಿದು ಬಂತು. ಬಂದ ಭಕ್ತರು ಹೂ-ಕಾಯಿ, ಹಣ್ಣು ಅರ್ಪಿಸಿ ಸಂತುಷ್ಟರಾದರು. ಮಠದ ಆವರಣದಲ್ಲಿ ಕುಳಿತು ಹಣ್ಣು-ಕಾಯಿ ಪ್ರಸಾದ ಸ್ವೀಕರಿಸಿದರು.

ಶಿವರಾತ್ರಿ ಜಾಗರಣೆ ಮಾಡಿ ಬೆಳಗಿನ ಜಾವದಿಂದಲೇ ಹರಕೆ ತೀರಿಸಿದರೆ, ಕೆಲವರು ದೀಡ್ ನಮಸ್ಕಾರ ಹಾಕಿದರು. ಕೆಲವರು ದಿಂಡರಕಿ ಉರುಳಿದರು, ಕೆಲವರು ಪ್ರದಕ್ಷಿಣೆ ಹಾಕಿದರು. ಇನ್ನು ಕೆಲವರು `ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲಾ ಬಂಗಾರ~, `ಸಿದ್ಧಾರೂಢರ ಜೋಳಗಿ ದೇಶಕ್ಕೆಲ್ಲಾ ಹೋಳಿಗಿ~, ಸಿದ್ಧಾರೂಢ ಸದ್ಗುರುನಾಥ ಉದ್ಧಾರಾದೆವು ನಿಮ್ಮಿಂದ~ ಎಂದು ಏರುಧ್ವನಿಯಲ್ಲಿ ಘೋಷಣೆ ಕೂಗುತ್ತಾ ಅಜ್ಜನ ಮಹಿಮೆಯನ್ನು ಸ್ಮರಿಸಿದರು. ಭಕ್ತರಿಗಾಗಿ ಮಠದ ಆವರಣದಲ್ಲಿ ಸಿರಾ-ಉಪ್ಪಿಟ್ಟು ಹಾಗೂ ಚಹಾ ವ್ಯವಸ್ಥೆ  ಮಾಡಲಾಗಿತ್ತು.

ಚಂದದ ರಂಗೋಲಿ, ತಳಿರು ತೋರಣ
ಜಾತ್ರೆಯ ನಿಮಿತ್ತ ವೀರಾಪುರ ಓಣಿಯ ಎರಡೆತ್ತಿನ ಮಠದಿಂದ ಸಿದ್ಧಾರೂಢರ ಮಠದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿ ಹಾಯ್ದು ಬರುವ ಬೀದಿಗಳಾದ ಅಕ್ಕಿಹೊಂಡ, ಜವಳಿ ಸಾಲ, ಬೊಮ್ಮಾಪುರ ಓಣಿ, ಓಲೇಮಠ, ದರ್ಶನಾಪುರ, ಕೃಷ್ಣಾಪುರ ಓಣಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಾಯ್ದು ಮಠಕ್ಕೆ ಆಗಮಿಸಿತು, ಈ ಬೀದಿಗಳಲ್ಲಿ ಭಕ್ತರು ತಮ್ಮ  ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ತಳಿರು-ತೋರಣ ಕಟ್ಟಿ ಶೃಂಗರಿಸಿದ್ದರು. ಈಶ್ವರನಗರದ ವೀರಭದ್ರಪ್ಪ ಕೆರೂರ ಅವರು ಮೈಕಿನಲ್ಲಿ ಭಕ್ತರಿಗೆ ಪಲ್ಲಕ್ಕಿಯ ಮೆರವಣಿಗೆ ಬರುತ್ತಿದೆ ಎಂದು ಸಾರಿದರೆ, ಗುರುನಾಥ ಶಿರೋಳ ತನ್ನ ಆಟೋ ಮೂಲಕ ಸೇವೆ ಸಲ್ಲಿಸಿದರು.

ಉಚಿತ ವಾಹನ ಸೇವೆ
ಸಿದ್ಧಾರೂಢರ ದರ್ಶನಕ್ಕಾಗಿ ಹಾಗೂ ಜಾತ್ರೆಗೆ ಬರುವ ಭಕ್ತ ಸಮೂಹ ಹುಬ್ಬಳ್ಳಿಯತ್ತ ಆಗಮಿಸುತ್ತಿರುವುದು ಒಂದು ತೆರನಾದರೆ, ಬಂದ ಭಕ್ತರಿಗೆ ಬಸ್ ನಿಲ್ದಾಣದಿಂದ ಹಾಗೂ ರೈಲ್ವೆ ನಿಲ್ದಾಣದಿಂದ ಅಜ್ಜನ ಮಠಕ್ಕೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿ ತಮ್ಮ ಭಕ್ತಿಯನ್ನು ಇನ್ನೊಂದು ತೆರನಾಗಿ ಮಾಡುತ್ತಿರುವುದು ಈ ವರ್ಷ ಹೆಚ್ಚಾಗಿ ಕಂಡು ಬಂತು. ಪಾಲಿಕೆ ಸದಸ್ಯ ವೆಂಕಟೇಶ ಮೇಸ್ತ್ರಿ ವಾಹನವೊಂದರ ಸೌಲಭ್ಯವನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಒದಗಿಸಿದರು.

ಶಿವರಾತ್ರಿಯಂದು 7 ರಿಕ್ಷಾ ಚಾಲಕರು ತಮ್ಮ ಕಿಸೆಯಿಂದ ಪೆಟ್ರೋಲ್ ಹಾಕಿಸಿ, ಮಠಕ್ಕೆ ಉಚಿತ ಸೇವೆ ಎಂದು ಬೋರ್ಡ್ ಹಾಕಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಚರಿಸಿದರು. ಇದನ್ನು ಜಾತ್ರೆಯ ದಿನದಂದು ಅನುಕರಿಸಿದ ನಗರದ ವಿವಿಧ ಪಕ್ಷಗಳ ಮುಖಂಡರು ಟೆಂಪೋ ಟ್ರ್ಯಾಕ್ಸ್, ಟಂ-ಟಂ, ಹೀಗೆ ಹಲವು ವಾಹನಗಳಿಂದ ತಮ್ಮ ಭಾವಚಿತ್ರ, ಹುದ್ದೆಗಳ ಬ್ಯಾನರ್ ಹಾಕಿಕೊಂಡು ಮಠಕ್ಕೆ ಹಾಗೂ ಮಠದಿಂದ ಮರಳಿ ನಿಲ್ದಾಣಗಳಿಗೆ ಕರೆದುಕೊಂಡು ಬಂದರು.

ನೀರು-ತಂಪು ಪಾನೀಯ ಸೇವೆ
ಬಿಸಿಲು ಏರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಏರುತ್ತಿತ್ತು. ಬಿಸಿಲಿನಲ್ಲಿ ಬರುವ ಭಕ್ತರ ಬಾಯಾರಿಕೆ ತಣಿಸಲು ಅಲ್ಲಲ್ಲಿ ತಂಪು ನೀರು, ಶರಬತ್ ಅನ್ನು ಬ್ಯಾರಲ್‌ಗಳಲ್ಲಿ ತುಂಬಿಟ್ಟು ಬಾಯಾರಿದವರಿಗೆ ಹಾಗೂ ಹಾಯ್ದು ಹೋಗುವ ಭಕ್ತರನ್ನು ಕರೆ ಕರೆದು ನೀಡುತ್ತಿರುವುದು ವಿಶೇಷವಾಗಿತ್ತು.

ಬಸ್ ಮಾರ್ಗ ಬದಲು
ಸಂಜೆಯ ವೇಳೆಗೆ ಕಣ್ಣು ಹಾಯಿಸಿದಷ್ಟು ಕಡೆ ಜನವೇ ಜನ. ಇದಕ್ಕಾಗಿ ಇಂಡಿ ಪಂಪ್‌ವರೆಗೆ ಮಾತ್ರ ವಾಹನ ಸಂಚಾರವಿತ್ತು. ಮುಂದೆ ಯಾವುದೇ ವಾಹನ ಹೋಗಲು ಅವಕಾಶವಿಲ್ಲದಂತೆ ಬ್ಯಾರಿಕೇಡ್ ಹಾಕಿ, ಕೆಲವೆಡೆ ಬಂಬುಗಳನ್ನು ಕಟ್ಟಿ ರಸ್ತೆ ಸಂಚಾರವನ್ನು ಬದಲಾಯಿಸಲಾಗಿತ್ತು. ಹೀಗಾಗಿ ಬಸ್ ಸೇರಿದಂತೆ ಎಲ್ಲ ವಾಹನಗಳು ಬಸ್ ನಿಲ್ದಾಣದಿಂದ ಕೃಷ್ಣಾಪುರ , ನವಅಯೋಧ್ಯಾನಗರದವರೆಗೆ ಸಂಚರಿಸುತ್ತಿದ್ದವು.

ಆಟದ ಸಾಮಗ್ರಿಗಳು
ಬಲೂನ್, ಗಿರಿ-ಗಿರಿ ತಿರುಗುವ ಚಕ್ರ, ಚೆಂಡು, ಬ್ಯಾಟರಿ ಮೇಲೆ ಓಡುವ ಬಸ್, ಕಾರು, ಜೆಸಿಬಿ ಯಂತ್ರಗಳು ಮೊದಲಾದ ಮಕ್ಕಳಿಗೆ ಆಟಿಕೆ ಸಾಮಗ್ರಿಗಳು ಹೆಚ್ಚಿದ್ದವು. 5 ರೂಪಾಯಿಯಲ್ಲಿ ಕಂಪ್ಯೂಟರ್ ಭವಿಷ್ಯ ಹೇಳುವ ಯಂತ್ರಗಳು ಅಲ್ಲಲ್ಲಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT