ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢರಿಗೆ ಶರಣು

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೊಸ ಕಾರು, ಬೈಕ್ ಕೊಂಡರೆ ಪೂಜೆಗೆಂದು ಒಯ್ಯುವುದು ಮಠಕ್ಕೆ. ಹುಡುಗಿ ನೋಡಲು ಬರುವವರಿದ್ದರೆ, ನಿಶ್ಚಿತಾರ್ಥಕ್ಕೆ ಮೊದಲು, ಮದುವೆ ಗೊತ್ತಾದರೆ, ಮಗುವಾದರೆ, ನೌಕರಿ ಸಿಕ್ಕರೆ, ಬಡ್ತಿ ದೊರೆತರೆ... ಹೀಗೆ `ಸಿದ್ಧಾರೂಢ ಸದ್ಗುರು ತಂದೆ ಉದ್ಧಾರ ಆದೆವು ನಿಮ್ಮಿಂದ~ ಎಂದು ಪ್ರತಿ ಶುಭ ಕಾರ್ಯಕ್ಕೆ ಸಿದ್ಧಾರೂಢಮಠಕ್ಕೆ ತೆರಳಿ ಶರಣು ಎಂದು ಕೈ ಮುಗಿಯುವವರಿಗೆ ಲೆಕ್ಕವಿಲ್ಲ. ಹಾಗೆ ಕೈ ಮುಗಿವ, ದೀರ್ಘದಂಡ ನಮಸ್ಕಾರ ಹಾಕುವವರಲ್ಲಿ ಎಲ್ಲ ಧರ್ಮೀಯರನ್ನೂ ಕಾಣಬಹುದು.

ಇದು ಹುಬ್ಬಳ್ಳಿಯ ಸಿದ್ಧಾರೂಢಮಠದಲ್ಲಿ ಕಂಡು ಬರುವ ನಿತ್ಯ ದೃಶ್ಯಗಳು. ಕೇವಲ ಕರ್ನಾಟಕ ಅಲ್ಲ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಗೋವಾ ಮೊದಲಾದ ರಾಜ್ಯಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಅಗಣಿತ.
 
ಇದು ನಿತ್ಯದ ಮಾತಾಯಿತು. ಆದರೆ ಸದ್ಯದ ಮಾತು ಎಂದರೆ, ಸಿದ್ಧಾರೂಢರ 175ನೇ ಜನ್ಮೋತ್ಸವ ಹಾಗೂ ಅವರ ಶಿಷ್ಯರಾಗಿದ್ದ ಗುರುನಾಥಾರೂಢರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳು ಬುಧವಾರ  (ಫೆ. 15) ದಿಂದ 21ರ ವರೆಗೆ ನಡೆಯಲಿವೆ. ಇದಕ್ಕಾಗಿ ಕಳೆದ ನವೆಂಬರ್ 1ರಿಂದ ಮಹಾರುದ್ರಾಭಿಷೇಕ ಆರಂಭಗೊಂಡು ಇದೇ 10ರಂದು ಮುಕ್ತಾಯಗೊಂಡಿದೆ.
 
ಒಟ್ಟು 101 ದಿನ ಮಹಾಗಣಪತಿ, ಸಿದ್ಧಾರೂಢರು ಹಾಗೂ ಗುರುನಾಥರೂಢರ ಮೂರ್ತಿಗಳಿಗೆ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿತ್ಯ ನೂರಾರು ದಂಪತಿಗಳು ಮಹಾರುದ್ರಾಭಿಷೇಕ ಮಾಡಿದ್ದಾರೆ. ಈಗಲೂ ಪ್ರತಿ ಸೋಮವಾರ, ಅಮಾವಾಸ್ಯೆಯಂದು ಅಸಂಖ್ಯಾತ ಭಕ್ತಾದಿಗಳು ಉಭಯಶ್ರೀಗಳ ಗದ್ದುಗೆಗೆ `ಓಂ ನಮಃ ಶಿವಾಯ~ ಎಂಬ ಮಂತ್ರದೊಂದಿಗೆ ಶರಣು ಎನ್ನುತ್ತಾರೆ. ಸಿನಿಮಾದವರ ಚಿತ್ರೀಕರಣಕ್ಕೊಂದು ತಾಣವಾದ, ಹುಬ್ಬಳ್ಳಿಗೆ ಬರುವ ಗಣ್ಯರ ಭೇಟಿಗೊಂದು ಮಠ ಎಂದರೆ ಅದು ಸಿದ್ಧಾರೂಢರ ಮಠ.

ಇಂಥ ಸಿದ್ಧಾರೂಢರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ 1836ರ ಮಾರ್ಚ್ 26ರಂದು ಗುರುಶಾಂತಪ್ಪ ಮತ್ತು ದೇವಮಲ್ಲಮ್ಮ ದಂಪತಿಗೆ ಜನಿಸಿದರು. ಪೂರ್ವಾಶ್ರಮದ ಹೆಸರು ಸಿದ್ಧ. ನಂತರ ಗಜದಂತ ಶಿವಯೋಗಿಗಳು ಸಿದ್ಧಾರೂಢ ಭಾರತಿ ಎಂದು ಕರೆದು ಅವಧೂತ ಆಶ್ರಮದ ದೀಕ್ಷೆ ನೀಡಿದರು. ಶಿವ ಪಂಚಾಕ್ಷರಿ ಮಂತ್ರ ಉಪದೇಶಿಸಲು ಹೇಳಿದರು. ಆಮೇಲೆ ಸಿದ್ಧಾರೂಢರು ದೇಶದಾದ್ಯಂತ ಸುತ್ತಿ ಅದ್ವೈತ ಸಿದ್ಧಾಂತ ಬೋಧಿಸಿದರು. ಜೊತೆಗೆ ಅಜ್ಞಾನ ನಿವಾರಣೆಗೆ ಅವಿರತ ಶ್ರಮಿಸಿದರು. ಹಾಗೆ ಅಲೆಯುತ್ತ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆಸಿದರು.

ಸಿದ್ಧಾರೂಢರ ಭಕ್ತರು ಭಕ್ತಿ ಕಾಣಿಕೆ ನೀಡಿ ಮಠ ಕಟ್ಟಿದರು. ಸಿದ್ಧಾರೂಢರ ಶಿಷ್ಯರಲ್ಲಿ ಪ್ರಮುಖರಾದ ಗುರುನಾಥರೂಢರು ಮಠವನ್ನು ಪ್ರಸಿದ್ಧಗೊಳಿಸಿದರು. ಸಕಲರಿಗೆ ಲೇಸ ಬಯಸುತ್ತಿದ್ದ ಸಿದ್ಧಾರೂಢರು 1929ರ ಆಗಸ್ಟ್ 21ರಂದು ಲಿಂಗೈಕ್ಯರಾದರು. ಈಗಿರುವ ಅವರ ಸಮಾಧಿ ಮಂದಿರ ಜಾತಿ, ಧರ್ಮಗಳ ಭೇದವಿಲ್ಲದೆ, ಮೇಲು-ಕೀಳು ಎಂಬ ತಾರತಮ್ಯವಿಲ್ಲದೆ ಸರ್ವಧರ್ಮ ಸಮನ್ವಯದ ನೆಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT