ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿ ಜವ್ವನಿಗರ ಖಾದಿ ಜಪ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಾಜಕೀಯಕ್ಕೆ `ಗಾಂಧಿನಗರ' ಎಷ್ಟು ಮುಖ್ಯ? ಇದಕ್ಕೆ ಸ್ಪಷ್ಟ ಉತ್ತರ ದೊರೆಯದಿದ್ದರೂ ಗಾಂಧಿನಗರದ ಉತ್ಸಾಹಿಗಳಿಗೆ ಚುನಾವಣಾ ರಾಜಕೀಯ ಮುಖ್ಯವಾಗಿದೆ. ಮತ ಗುಂಗು ಗಾಂಧಿನಗರವನ್ನು ಇನ್ನಿಲ್ಲದಂತೆ ಆವರಿಸಿದೆ. ಟಿಕೆಟ್ ಕೊಡಿ ಎಂದು ಕೇಳುವವರು ಒಂದೆಡೆಯಾದರೆ, ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ ಪಕ್ಷ ಸೇರಿಕೊಳ್ಳೋಣ ಎಂದು ನಂಬಿದವರ ಪಡೆ ಇನ್ನೊಂದೆಡೆ. ಇವೆರಡೂ ಬೇಡ, ಆದರೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ ಎನ್ನುತ್ತಿದೆ ಮತ್ತೊಂದು ಗುಂಪು.

ಚಿತ್ರರಂಗದಲ್ಲಿ ಎಷ್ಟೇ ಅನುಭವ ಹೊಂದಿದ್ದರೂ ರಾಜಕಾರಣದಲ್ಲಿ ಅವರು ಇನ್ನೂ ಹಸುಗೂಸುಗಳು ಎಂಬ ಮಾತಿದೆ. ಅದು ನಿಜವೂ ಹೌದು. ರಾಜಕೀಯವೇ ಬೇರೆ, ಬಣ್ಣದ ಲೋಕವೇ ಬೇರೆ. ಚಿತ್ರರಂಗದಲ್ಲಿ ಗೆದ್ದವರು ಇಲ್ಲಿ ಸೋತ ಅನೇಕ ಉದಾಹರಣೆಗಳಿವೆ. ನಟಿಸಿ ದುಡಿದಿದ್ದನ್ನು ಚುನಾವಣೆಗೆ ಹಾಕಿ ಕಳೆದುಕೊಂಡದ್ದಿದೆ. `ಕ್ಯಾಮೆರಾ ಎದುರು ನಟಿಸುವುದಕ್ಕೂ ನಿಜ ಜೀವನದಲ್ಲಿ ನಟಿಸುವುದಕ್ಕೂ ವ್ಯತ್ಯಾಸವಿದೆ' ಎಂದು ಹಲವು ಕಲಾವಿದರು ರಾಜಕೀಯದಿಂದ ದೂರ ಉಳಿದಿದ್ದಾರೆ.

ಮೇಲಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗಿಂತಲೂ ಇಲ್ಲಿಯ ಸ್ಥಿತಿ ಭಿನ್ನ. ಆಂಧ್ರದಲ್ಲಿ ಇತ್ತೀಚೆಗೆ ನಟ ಜೂನಿಯರ್ ಎನ್‌ಟಿಆರ್ ಹೂಂಕರಿಸುತ್ತಿದ್ದಂತೆ ಒಂದು ಕ್ಷಣ ತೆಲುಗುದೇಶಂ ಪಕ್ಷ ಅಲುಗಾಡಿತು. ಜೂ. ಎನ್‌ಟಿಆರ್ ಪರವಾಗಿ ನಿಂತ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಂಪನ ಉಂಟುಮಾಡಿದರು. ಆದರೆ ರಾಜ್ಯದಲ್ಲಿ ಅಂಥ ಪರಿಸ್ಥಿತಿಯಿಲ್ಲ. ಸಿನಿಮಾ ಅಥವಾ ರಾಜಕಾರಣ ಎರಡನ್ನೂ ರಾಜ್ಯದ ಜನತೆ ತಣ್ಣಗೆ ಕಾಣುವವರು. ಇಷ್ಟಾದರೂ ರಾಜಕಾರಣದ ಸೂಜಿಗಲ್ಲು ಸಿನಿಮಾ ರಂಗದ ಹಲವರನ್ನು ಸೆಳೆಯುತ್ತಲೇ ಇದೆ. ಚಿತ್ರಲೋಕದ ಯುವಪಡೆ ಕೂಡ ಇದಕ್ಕೆ ಹೊರತಲ್ಲ.

ನಾಡಿನ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ನಟ ನಟಿಯರಿರುವುದು ಈ ಬಾರಿ ಚುನಾವಣೆಯ ವಿಶೇಷ. ಹೀಗಾಗಿ ತಾರಾ ಸಮರ ಹಿಂದೆಂದಿಗಿಂತಲೂ ಹೆಚ್ಚು ಹುರಿಗೊಂಡಿದೆ ಎನ್ನಬಹುದು. ಇವರಲ್ಲಿ ಅನೇಕರು ಇನ್ನೂ ರಾಜಕೀಯದ ರುಚಿ ನೋಡದ ಉತ್ಸಾಹಿಗಳು ಎನ್ನುವುದು ಮತ್ತೊಂದು ವಿಶೇಷ. ಹಾಗಾದರೆ ಆ ಯುವಕರ ರಾಜಕೀಯ ಕನಸುಗಳೇನು? ಇಲ್ಲಿದೆ ಉತ್ತರ.

ಚುನಾವಣಾ ರಾಜಕೀಯದ ಹೆಸರಿನಲ್ಲಿ ಭಾರಿ ಸುದ್ದಿಯಲ್ಲಿದ್ದವರು ನಟಿ ಪೂಜಾ ಗಾಂಧಿ. ಕೆಲವೇ ತಿಂಗಳಲ್ಲಿ ಮೂರು ಪಕ್ಷಗಳನ್ನು ಬದಲಿಸಿ ಹಲವರ ಹುಬ್ಬೇರಿಸುವಂತೆ ಮಾಡಿದ್ದು `ಮುಂಗಾರು ಮಳೆ' ಹುಡುಗಿ. ಮೊದಲು ಜೆಡಿಎಸ್ ಸೇರಿದ ಅವರು ಅನೇಕ ಸಭೆಗಳಲ್ಲಿ ಅಕ್ಷರಶಃ ಹುಲ್ಲಿನ ಹೊರೆ ಹೊತ್ತರು. ಆದರೆ ರಾಜಕಾರಣಿಯೊಬ್ಬರು ಸಿಡಿಸಿದ `ಬಾಂಬ್'ನಿಂದಾಗಿ ಆಕೆ ಪಕ್ಷದಿಂದ ಹೊರ ಉಳಿಯಬೇಕಾಯಿತು. ನಂತರ ಅವರು ಜಿಗಿದದ್ದು ಕೆಜೆಪಿಗೆ. ಅಲ್ಲಿಯೂ ಬಹಳ ಹೊತ್ತು ನಿಲ್ಲದ ಪೂಜಾ ಅಚ್ಚರಿ ಎಂಬಂತೆ ಕಾಣಿಸಿಕೊಂಡಿದ್ದು ಬಿಎಸ್‌ಆರ್ ಕಾಂಗ್ರೆಸ್ ಪಾಳೆಯದಲ್ಲಿ. ಮೊದಲು ಉತ್ತರ ಕರ್ನಾಟಕದಿಂದ ಸ್ಪರ್ಧಿಸುತ್ತೇನೆ.

ರಾಯಚೂರಿನಲ್ಲಿ ನಿಲ್ಲುತ್ತೇನೆ ಎಂದಿದ್ದ ಪೂಜಾ, ಹಾಸನ ಜಿಲೆಯ್ಲ ಬೇಲೂರಿನಿಂದಲೂ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೊಂಡಿದ್ದರು. ಮುಂದಿನ ರಾಜಕೀಯ ಬೆಳವಣಿಗೆ ಏನಾಗುತ್ತದೋ ತಿಳಿದಿಲ್ಲ. ಸದ್ಯಕ್ಕಂತೂ ಪೂಜಾ `ಫ್ಯಾನಿನಡಿ' ತಣ್ಣನೆ ಗಾಳಿ ಪಡೆಯುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಎಂದು ಸದಾ ಹೇಳಿಕೊಳ್ಳುವ ಅವರಿಗೆ ನೆಲಮಟ್ಟದಲ್ಲಿ ದುಡಿಯುವ ಆಸೆ ಇದೆಯಂತೆ.

ಪೂಜಾ ಗಾಂಧಿ ಪಕ್ಷಕ್ಕೆ ಸೇರಿದಾಗ ನಟಿ ರಕ್ಷಿತಾ ಮಂಕಾಗಬಹುದು ಎಂದು ಗಾಂಧಿನಗರದ ಅನೇಕರು ಎಣಿಸಿದ್ದರು. ಆದರೆ `ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹೈಕಮಾಂಡ್ ಎಂದೇ ಕರೆಯಲಾಗುವ ಶ್ರೀರಾಮುಲು ವಿವಾದಗಳಿಗೆ ತೆರೆ ಎಳೆದರು. ಸ್ಥಳೀಯ ಸಂಸ್ಥೆ ಚುನಾವಣೆ ನಡೆದ ನಂತರ ಪರಿಸ್ಥಿತಿ ಬದಲಾಗಿದೆ. ಹೊಂದಾಣಿಕೆ ಅನಿವಾರ್ಯ ಎಂಬುದನ್ನು ಪಕ್ಷ ಅರಿತುಕೊಂಡಿದೆ. ಈ ಬದಲಾವಣೆ ರಕ್ಷಿತಾ ಅಥವಾ ಪೂಜಾ ಗಾಂಧಿ ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ.

ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದು ರಕ್ಷಿತಾರನ್ನು ಕೇಳಿದಾಗ ಆಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಮೊದಲೆಲ್ಲಾ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಎಂದು ಪಟ್ಟು ಹಿಡಿದಿದ್ದ ಅವರು ಈಗ ಹಾಗೆ ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. ಹೋಗಲಿ ಬಾದಾಮಿ ನಿಮ್ಮ ಕ್ಷೇತ್ರವಾಗಲಿದೆಯೇ ಎಂದು ಪ್ರಶ್ನಿಸಿದರೆ ಅದಕ್ಕೂ ಅವರಿಂದ ಯಾವುದೇ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ.

ಆದರೂ ಕಣಕ್ಕೆ ಇಳಿಯಬೇಕಾದ ಎಲ್ಲ ತಯಾರಿಯನ್ನೂ ಆಕೆ ಮಾಡಿಕೊಂಡಿದ್ದಾರೆ. ಮೂಲಸೌಕರ್ಯಗಳಿಲ್ಲದ ಉತ್ತರ ಕರ್ನಾಟಕ ಅವರನ್ನು ಹೆಚ್ಚು ಕಾಡಿದೆ. ಅಧಿಕಾರಕ್ಕೆ ಬಂದರೆ ಮಹಿಳೆಯರು ಅಥವಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡುವ ಹುರುಪಿನಲ್ಲಿದ್ದಾರೆ. ಪೂಜಾ ಪಕ್ಷ ಸೇರಿರುವುದರಿಂದ ತಮಗೆ ನಷ್ಟವಾಗಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲಿ ಬಿಡಲಿ ಪಕ್ಷಕ್ಕಾಗಿ, ಜನರಿಗಾಗಿ ದುಡಿಯುತ್ತೇನೆ ಎಂದಿದ್ದಾರೆ.

ಸೊರಬ ಕ್ಷೇತ್ರದಿಂದ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ನೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ. ಸಹೋದರ ಕುಮಾರ್ ಬಂಗಾರಪ್ಪ ಇವರ ರಾಜಕೀಯ ಎದುರಾಳಿ. ಎರಡು ಬಾರಿ ಸೋಲು ಕಂಡಿರುವ ಮಧು ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. `ಸೊರಬ ಶಾಸಕ ಹಾಲಪ್ಪ ಲೈಂಗಿಕ ಹಗರಣದಲ್ಲಿ ಸಿಲುಕಿ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಕುಮಾರ್ ಬಂಗಾರಪ್ಪನವರ ಕಾರ್ಯ ವೈಖರಿಯೂ ಕ್ಷೇತ್ರದ ಜನತೆಗೆ ರುಚಿಸಿಲ್ಲ.

ನಾನು ಕ್ಷೇತ್ರದ ಕಟ್ಟಕಡೆಯ ಮತದಾರರನ್ನು ಗಮನದಲ್ಲಿಟ್ಟುಕೊಂಡು ದುಡಿದಿದ್ದೇನೆ. ಎರಡು ಬಾರಿ ಸೋತರೂ ಕ್ಷೇತ್ರದಿಂದ ದೂರ ಉಳಿದಿಲ್ಲ. ಎಂಟು ವರ್ಷಗಳಿಗೂ ಹೆಚ್ಚು ಕಾಲ ಕ್ಷೇತ್ರದ ಜನರ ಜತೆ ಒಡನಾಡಿದ್ದೇನೆ. ಇದು ಪೂರಕ ಅಂಶವಾಗಲಿದೆ. ಜೊತೆಗೆ ಬಂಗಾರಪ್ಪನವರ ಜನಪ್ರಿಯತೆಯೂ ವರದಾನವಾಗಲಿದೆ' ಎನ್ನುವ ಲೆಕ್ಕಾಚಾರ ಅವರದು. ಭಾರಿ ಅಂತರದಲ್ಲಿ ಗೆಲುವು ಸಾಧಿಸುವ ಆತ್ಮ ವಿಶ್ವಾಸದಲ್ಲಿರುವ ಅವರು ಸೊರಬದಲ್ಲಿ ಬೀಡು ಬಿಟ್ಟಿದ್ದಾರೆ. ನಟ, ಚಿತ್ರೋದ್ಯಮಿ ಎಂಬುದಕ್ಕಿಂತಲೂ ಹೆಚ್ಚಾಗಿ ಪೂರ್ಣ ಪ್ರಮಾಣದ ರಾಜಕಾರಣಿಯಂತೆ ದುಡಿಯುವುದರಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ.

ಈ ಬಾರಿ ಅಖಾಡದಲ್ಲಿರುವ ಹೊಸಮುಖ ವಿ. ನಾಗೇಂದ್ರ ಪ್ರಸಾದ್. ಮೂಲತಃ ಸಿನಿಮಾ ಸಾಹಿತಿಯಾದ ಅವರು ದೊಡ್ಡಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪಕ್ಷ ಕೆಜೆಪಿ. ಇದಕ್ಕೆ ಪಕ್ಷದ ವರಿಷ್ಠರು ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಸೆರಗಿನಲ್ಲಿಯೇ ಇದ್ದರೂ ದೊಡ್ಡಬಳ್ಳಾಪುರ ಹಲವು ದಶಕದಷ್ಟು ಹಿಂದೆಯೇ ಉಳಿದಿದೆ. ಅಲ್ಲದೆ ರೇಷ್ಮೆ ನಗರಿ ಎನ್ನಿಸಿಕೊಂಡ ಅಲ್ಲಿ ರೈತರಿಗೆ ದಲ್ಲಾಳಿ ಕಾಟ ಇದೆ. ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಎಂಬ ನೋವಿದೆ.

ಇಂಥ ಹಿಂದುಳಿದ ಪ್ರದೇಶದಲ್ಲಿ ಸುಧಾರಣೆ ತರಬೇಕು ಎಂಬ ಉದ್ದೇಶದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ನೆನೆಗುದಿಗೆ ಬಿದ್ದಿರುವ ಜಕ್ಕಲುಮಡು ಕುಡಿಯುವ ನೀರು ಯೋಜನೆಗೆ ಜೀವ ತರುವುದಾಗಿ ಹೇಳುತ್ತಿದ್ದಾರೆ. ಕ್ಷೇತ್ರದ ಮುಖಂಡರು ಹಾಗೂ ಜನಾಭಿಪ್ರಾಯವನ್ನು ಸಂಗ್ರಹಿಸಿಯೇ ಅವರು ಸ್ಪರ್ಧೆಗೆ ಇಳಿಯುತ್ತಿದ್ದಾರಂತೆ. ಪಕ್ಷದ ಜಿಲ್ಲಾ ಮುಖಂಡರು ಬೆಂಬಲಕ್ಕೆ ನಿಂತಿರುವುದು ತಮ್ಮ ಖುಷಿ ಇಮ್ಮಡಿಗೊಳ್ಳಲು ಕಾರಣ.

ನಾಗೇಂದ್ರ ಪ್ರಸಾದ್ ಪಕ್ಷ ಸೇರಿದ್ದು ಮಿತ್ರರು, ಹಿತೈಷಿಗಳ ಒತ್ತಾಯದ ಮೇರೆಗೆ. ತೆರೆಯ ಮೇಲೆ ಮಿಂಚುವವರನ್ನೇ ರಾಜಕಾರಣ ಬೇಸ್ತು ಬೀಳಿಸಿದೆ. ಇನ್ನು ತೆರೆಯ ಹಿಂದಿರುವವರ ಗತಿ ಏನು ಎಂಬ ಆತಂಕ ಅವರಿಗಿಲ್ಲ. ಏಕೆಂದರೆ ತಾನೊಬ್ಬ ಸಿನಿಮಾ ಕುಟುಂಬದ ಸದಸ್ಯ ಎಂದಷ್ಟೇ ಇಲ್ಲಿ ಪ್ರಚಾರ ನಡೆಸುತ್ತಿಲ್ಲವಂತೆ.

ಹುಟ್ಟಿದ ಬೆಳೆದ ಊರಿಗೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಮನಸ್ಸಿನಿಂದ ಅವರ ರಾಜಕೀಯ ಹೋರಾಟ ಆರಂಭವಾಗಿದೆ. ಅಲ್ಲದೆ ತೆರೆಯ ಮುಂದಿದ್ದವರನ್ನು ಕೇವಲ ಚಿತ್ರರಂಗದವರು ಎಂದು ಜನ ಗುರುತಿಸುತ್ತಾರೆ. ಆ ರೀತಿ ತಾರಾ ಹಣೆಪಟ್ಟಿ ಇಲ್ಲದಿರುವುದೇ ತಮಗೆ ಪ್ಲಸ್ ಪಾಯಿಂಟ್ ಎನ್ನುತ್ತಾರವರು. ಆದರೂ ಅವರಿಗೆ ಗೆಲುವು ಸುಲಭವಲ್ಲ. ಏಕೆಂದರೆ ನುರಿತ ರಾಜಕಾರಣಿ ಆರ್.ಎಲ್.ಜಾಲಪ್ಪನವರ ಪುತ್ರ ಜೆ. ನಾರಾಯಣಸ್ವಾಮಿ ದೊಡ್ಡಬಳ್ಳಾಪುರ ಕ್ಷೇತ್ರದ ಹುರಿಯಾಳುಗಳಲ್ಲಿ ಒಬ್ಬರು. ಬಿಜೆಪಿ, ಜೆಡಿಎಸ್‌ನಂಥ ಇತರೆ ದೊಡ್ಡ ಪಕ್ಷಗಳಿಂದಲೂ ಅವರು ಪೈಪೋಟಿ ಎದುರಿಸಬೇಕಿದೆ.

ಹೈಟೆಕ್ ಸಿಟಿಗಳನ್ನೆಲ್ಲ ತನ್ನೊಡಲಲ್ಲಿಟ್ಟುಕೊಂಡು ಪೊರೆಯುತ್ತಿರುವ ಕ್ಷೇತ್ರ ಮಹದೇವಪುರ. ಬೆಂಗಳೂರಿನ ಹೊರವಲಯದಲ್ಲಿದ್ದರೂ ಐಟಿ-ಬಿಟಿ ಮತ್ತಿತರ ಬಹುರಾಷ್ಟ್ರೀಯ ಉದ್ಯಮಗಳಿರುವ ಕಾರಣಕ್ಕಾಗಿ ಮಹತ್ವ ಪಡೆದುಕೊಂಡ ಕ್ಷೇತ್ರ ಇದು. ಅಲ್ಲದೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಇಲ್ಲಿಂದಲೇ ರಾಜಕೀಯ ನಡೆ ಕಂಡುಕೊಂಡಿದ್ದು ಇತ್ತೀಚಿನ ವಿಶೇಷ.

 ಲಿಂಬಾವಳಿ ಅವರು ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದರಾದರೂ ಅಭಿನಯವನ್ನು ವೃತ್ತಿಯಾಗಿ ಪರಿಗಣಿಸಿದವರಲ್ಲ. ಅಂಥ ಕ್ಷೇತ್ರಕ್ಕೆ ನಟ ಮಯೂರ್ ಪಟೇಲ್ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಈ ಬಾರಿ ಪ್ರವೇಶ ಪಡೆಯುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕಷ್ಟೇ ತಮ್ಮ ಪಾತ್ರ ಸೀಮಿತವಾಗಿಲ್ಲ ಎನ್ನುವ ಮಯೂರ್ ಮೂರು ತಿಂಗಳ ಹಿಂದಿನಿಂದಲೂ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ತಂತ್ರಜ್ಞಾನ ಉದ್ಯಮಗಳ ಕಾರಣಕ್ಕಾಗಿ ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿರುವ ಮಹದೇವಪುರ ಕ್ಷೇತ್ರ ಮೂಲಸೌಕರ್ಯಗಳಿಂದ ಬಳಲುತ್ತಿರುವುದು ಅವರನ್ನು ಕಾಡಿದೆ.

ಚುನಾವಣೆ ಬಂದಾಗ ಚರಂಡಿ ದುರಸ್ತಿ, ರಸ್ತೆ ವಿಸ್ತರಣೆಗೆ ಮುಂದಾಗಿರುವ ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು ಮಹಿಳೆಯರಿಗೆ, ಶೋಷಿತರಿಗೆ ಸರಿಯಾದ ಸವಲತ್ತುಗಳು ದೊರೆಯುತ್ತಿಲ್ಲ ಎಂಬುದನ್ನು ಅಸ್ತ್ರ ಮಾಡಿಕೊಂಡು ಅಖಾಡಕ್ಕೆ ಧುಮುಕುತ್ತಿದ್ದಾರೆ. ಆದರೆ ಅವರ ತಂದೆ, ನಿರ್ಮಾಪಕ ಮದನ್ ಪಟೇಲ್ ಚುನಾವಣೆಗೆ ಇಳಿಯುತ್ತಾರೆ ಎಂಬುದು ಮಾತ್ರ ಇನ್ನೂ ಊಹಾಪೋಹದ ಸಂಗತಿಯೇ ಆಗಿದೆ. ಮಳವಳ್ಳಿ ಅಥವಾ ಟಿ.ನರಸೀಪುರದಿಂದ ಅವರು ಸ್ಪರ್ಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಇನ್ನೂ ಅದು ಅಂತಿಮವಾಗಿಲ್ಲ.

ಕಾರ್ಪೊರೇಟ್, ಬಹುರಾಷ್ಟ್ರೀಯ ಹೀಗೆ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕಂಪೆನಿಗಳು ತಲೆ ಎತ್ತಿವೆ. ಇಷ್ಟಾದರೂ ಇಲ್ಲಿನ ನಿರುದ್ಯೋಗಿಗಳಿಗೆ ಕೆಲಸವಿಲ್ಲ. ತಾವು ಅಧಿಕಾರಕ್ಕೆ ಬಂದರೆ ಸಾವಿರಾರು ಉದ್ಯೋಗಿಗಳಿಗೆ ನೌಕರಿ ದೊರೆಯುವಂತೆ ಮಾಡುವ ಕನಸು ಹೊಂದಿದ್ದಾರೆ. ಈ ಕುರಿತಂತೆ ಕಂಪೆನಿಗಳೊಂದಿಗೆ ಮಾತನಾಡಲು ಕೂಡ ಸಿದ್ಧ ಎನ್ನುತ್ತಿದ್ದಾರೆ.

ತಮ್ಮನ್ನು ಚಿತ್ರನಟ ಎನ್ನುವುದಕ್ಕಿಂತಲೂ ಮನೆ ಮಗನಂತೆ ಕ್ಷೇತ್ರದ ಜನತೆ ನೋಡುತ್ತಿರುವುದು ಮಯೂರ್‌ಗೆ ಖುಷಿ ತಂದಿದೆ. ಇಷ್ಟಾದರೂ ಘಟಾನುಘಟಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಎದುರು ಮಯೂರ್ ಪ್ರತಿನಿಧಿಸುತ್ತಿರುವ ಪಕ್ಷ ಹೇಗೆ ಗೆಲುವು ಸಾಧಿಸುತ್ತದೆ ಎನ್ನುವುದು ಕದನ ಕುತೂಹಲದಷ್ಟೇ ರೋಚಕ.

ನಟಿ ಶ್ರುತಿ ಕೆಜೆಪಿಗೆ ಸೇರುತ್ತಿದ್ದಂತೆ ಅನೇಕರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದುಂಟು. ಆದರೆ ಚುನಾವಣೆಗೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಅವರು ಅಂದೇ ಕಡ್ಡಿಮುರಿದಂತೆ ಹೇಳಿದ್ದರು. ಈಗ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಅವರು ಸಕ್ರಿಯ. ಯಡಿಯೂರಪ್ಪನವರ ಅವಧಿಯಲ್ಲಿ ನಡೆದ ಅನೇಕ ಉತ್ತಮ ಸಾಧನೆಗಳನ್ನು ಅವರು ಪ್ರಚಾರ ಮಾಡಲಿದ್ದಾರಂತೆ. ಅದರಲ್ಲಿಯೂ ಮಹಿಳಾ ಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಅವರದು. `ಯಡಿಯೂರಪ್ಪನವರು ಅವಧಿ ಪೂರ್ಣಗೊಳಿಸಿದ್ದರೆ ಅನೇಕ ಹೆಣ್ಣುಮಕ್ಕಳಿಗೆ ಉತ್ತಮ ಯೋಜನೆಗಳು ದೊರೆಯುತ್ತಿದ್ದವು. ಈಗ ಅವರನ್ನು ಮರಳಿ ಅಧಿಕಾರಕ್ಕೆ ತರುವ ಮೂಲಕ ಯೋಜನೆಗಳನ್ನು ಸಫಲಗೊಳಿಸಬೇಕು' ಎಂದು ಕರೆ ನೀಡುತ್ತಿದ್ದಾರೆ.

ಕಾಂಗ್ರೆಸ್ `ಕೈ' ಹಿಡಿದಿರುವ ನಟಿ ಭಾವನಾ ಕೂಡ ಇದೇ ಹಾದಿಯಲ್ಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಹಿರಿಯಳಲ್ಲ ನಾನು ಎಂದು ವಿನಯದಿಂದಲೇ ಹೇಳಿಕೊಳ್ಳುವ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರಂತೆ. ಇನ್ನೂ ಚಿತ್ರರಂಗವನ್ನೇ ಪೂರ್ಣ ಅರಿಯದಿರುವಾಗ ರಾಜಕೀಯದಲ್ಲಿ ಸ್ಥಾನ ಪಡೆಯಲು ಮತ್ತೊಂದು ಜನ್ಮ ಬೇಕು ಎಂಬ ವಾಸ್ತವ ಅರಿತಿದ್ದಾರೆ. ಈಗಾಗಲೇ ಪಕ್ಷದ ಪ್ರಚಾರ ಸಮಿತಿಯ ಸದಸ್ಯೆಯಾಗಿರುವ ಅವರು ಅಖಾಡಕ್ಕಿಳಿಯಲು ತಮಗಿನ್ನೂ ಕಾಲವಿದೆ ಎಂದು ಭಾವಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ನಟಿ ರಮ್ಯಾ ರಾಜಕೀಯ ಪ್ರವೇಶ ಪಡೆದದ್ದು ನೋಡಿದರೆ ಆಕೆ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಬಿಡುತ್ತಾರೆ ಎಂಬಂತೆ ಹಲವರು ಹುಬ್ಬೇರಿಸಿದ್ದುಂಟು. ಅಂಥ ವಾತಾವರಣ ಕಾಂಗ್ರೆಸ್ ಪಾಳೆಯದಲ್ಲಿ ಸೃಷ್ಟಿಯಾಗಿತ್ತು. ಸುಲಭವಾಗಿ ಆಕೆಗೆ ರಾಹುಲ್ ಗಾಂಧಿ ಅವರ ಕೃಪಾ ಕಟಾಕ್ಷ ದೊರೆಯಲಿದೆ ಎಂದೇ ನಂಬಲಾಗಿತ್ತು. ರಾಜಕೀಯದಾಟ ಅಷ್ಟು ಸುಲಭವಲ್ಲ.

ರಮ್ಯಾ ಅಲೆ ತಣ್ಣಗಾಯಿತು. ಯುವ ಕಾಂಗ್ರೆಸ್‌ನಲ್ಲಿ ಕೂಡ ಅವರು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವರ ತಾಯಿ ರಂಜಿತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಸರತ್ತು ನಡೆಯುತ್ತಿದೆ. ಸದ್ಯಕ್ಕೆ ರಮ್ಯಾ ಚುನಾವಣಾ ರಾಜಕೀಯಕ್ಕೆ ಇಳಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನಟ ತೂಗುದೀಪ ದರ್ಶನ್‌ರ ತಾಯಿ ಮೀನಾ ತೂಗುದೀಪ ಕೂಡ ಸ್ಪರ್ಧಿಸುವ ಸಾಧ್ಯತೆಗಳಿವೆ. ಹಿಂದೊಮ್ಮೆ ರಾಜಕೀಯ ಸೇರುವ ಕುರಿತಂತೆ ಗಾಳಿಯಲ್ಲಿ ಕಲ್ಲು ತೂರಿದ್ದ ದರ್ಶನ್, ಸುದೀಪ್, ಉಪೇಂದ್ರ ಮುಂತಾದ ಸ್ಟಾರ್ ನಟರು ಸದ್ಯಕ್ಕೆ ಜನತಂತ್ರ ಪರೀಕ್ಷೆಗೆ ಕುಳಿತುಕೊಳ್ಳುತ್ತಿಲ್ಲ.

ರಾಜಕಾರಣ ಎಂಬುದು ಕ್ಷಣಕ್ಕೆ ಹಲವು ಬಾರಿ ತಿರುಗುವ ಕಾಲದ ಮುಳ್ಳು. ಬದಲಾವಣೆ ಇಲ್ಲಿ ಪಾದರಸದಷ್ಟೇ ಚಂಚಲ. ಸಿನಿಮಾರಂಗದ ಇನ್ನೂ ಅನೇಕರಿಗೆ ಟಿಕೆಟ್ ಸಿಗಬಹುದು. ಅವರು ಬಯಸಿದ ಕ್ಷೇತ್ರಗಳಲ್ಲೇ ಗೆಲುವು ಸಾಧಿಸಬಹುದು ಎನ್ನುವ ಆಸೆ ಗಾಂಧಿನಗರದ್ದು. ಮತದಾರರು ಇದನ್ನೆಲ್ಲಾ ದೂರದಲ್ಲಿಯೇ ನಿಂತು ನೋಡುತ್ತಿದ್ದಾರೆ. ಅವರ ಉತ್ತರಕ್ಕೆ ಗಾಂಧಿಟೋಪಿ ತೊಟ್ಟ ಗಾಂಧಿನಗರದ ಮಂದಿ ಕಾಯುತ್ತಿದ್ದಾರೆ.

ಹಿರಿಯರ ಪಥ
ಮಾಜಿ ಸಂಸದ ಅಂಬರೀಷ್, ನಟಿ ಉಮಾಶ್ರೀ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತವಾಗಿದೆ. ನಟರಾದ ಹಾಲಿ ಶಾಸಕ ಬಿ.ಸಿ. ಪಾಟೀಲ್, ಮಾಜಿ ಸಂಸದ ಶಶಿಕುಮಾರ್, ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಒಲಿಯುವ ನಿರೀಕ್ಷೆಗಳಿವೆ.

ಮತ್ತೊಂದೆಡೆ ನಿರ್ಮಾಪಕರಾದ ಮುನಿರತ್ನ ಅವರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಕೆ. ಮಂಜು ಅವರು ಕೂಡ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಸಾಹಸ ಮುಂದುವರಿಸಿದ್ದಾರೆ. ಜೆಡಿಎಸ್‌ನಿಂದ ನಿರ್ದೇಶಕ ಎಸ್.ನಾರಾಯಣ್, ಕಿರುತೆರೆ ನಟಿ ಮಾಳವಿಕಾ ಸ್ಪರ್ಧೆಗೆ ಇಳಿಯಬಹುದು ಎನ್ನಲಾಗುತ್ತಿದ್ದರೂ ಪಕ್ಷ ಈ ಕುರಿತು ತುಟಿ ಬಿಚ್ಚಿಲ್ಲ. ಮೂಲಗಳ ಪ್ರಕಾರ ಬಿಜೆಪಿಯಿಂದ ತಾರಾಮುಖಗಳು ಸದ್ಯಕ್ಕೆ ಕಾಣಿಸಿಕೊಳ್ಳುತ್ತಿಲ್ಲ.

ಜಗ್ಗೇಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಹೀಗಾಗಿ ಅವರು ವಿಧಾನಸಭಾ ಚುನಾವಣೆಯಿಂದ ದೂರ. ಪ್ರಸ್ತುತ ವಿಧಾನಪರಿಷತ್ ಸದಸ್ಯೆಯಾಗಿರುವ ತಾರಾ ಅನುರಾಧ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮಾಜಿ ಸಚಿವ ನಟ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿತ್ತು. ಒಂದೊಮ್ಮೆ ಈ ಬಾರಿ ಸ್ಪರ್ಧಿಸುವುದೇ ಇಲ್ಲ ಎಂದಿದ್ದ ಅವರು ಕಾಂಗ್ರೆಸ್ ಟಿಕೆಟ್ ದೊರೆಯುವ ಆಸೆ ಹೊಂದಿದ್ದರು.

ಅದೇ ಹಿನ್ನೆಲೆಯಲ್ಲಿ ಬಿಜೆಪಿಯಿಂದ ದೂರ ಉಳಿದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಪರೇಷನ್ ಕಮಲದ ಅಡಕತ್ತರಿಗೆ ಸಿಲುಕಿರುವ ಅವರಿಗೆ ಕಾಂಗ್ರೆಸ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಆದರೂ ಕಾಂಗ್ರೆಸ್ ಹೈಕಮಾಂಡ್ ಅವರ ಮೊರೆ ಕೇಳಿದೆ.

ನಟರಾದ ಶ್ರಿನಾಥ್, ಜಗ್ಗೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು, ಕಿರುತೆರೆ ನಿರ್ದೇಶಕ ರವಿಕಿರಣ್, ಕಲಾವಿದ ದಂಪತಿ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಹೆಸರು ಕೇಳಿ ಬರುತ್ತಿದ್ದರೂ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವವರೆಗೂ ಅಸ್ಪಷ್ಟತೆ ಮುಂದುವರಿಯಲಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT