ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಉದ್ಯಮವೂ ಹೌದು ಮಾಧ್ಯಮವೂ ಹೌದು

Last Updated 17 ಡಿಸೆಂಬರ್ 2013, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಏಕಕಾಲಕ್ಕೆ ಉದ್ಯಮವೂ ಹೌದು, ಮಾಧ್ಯಮವೂ ಹೌದು ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಕರ್ನಾಟಕ  ಚಲನಚಿತ್ರ ಅಕಾಡೆ­ಮಿಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಸಿನಿಮಾ ಉದ್ಯಮ– ಮಾಧ್ಯಮ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಇಂದು ಎಲ್ಲಾ ಮಾಧ್ಯಮಗಳು ಉದ್ಯಮಗಳಾಗಿ ಪರಿವರ್ತಿತವಾಗುತ್ತಿವೆ. ಈ ಸಂದರ್ಭದಲ್ಲಿ ಸಿನಿಮಾರಂಗವು ಬೌದ್ಧಿಕ ವರ್ಗವನ್ನು ಒಳಗೊಂಡೂ ಅವು­ಗಳ ಹಿಡಿತದಿಂದ ಬಿಡುಗಡೆ ಹೊಂದ­ಬೇಕಾಗಿದೆ.  ಸಂಪಾದನೆ ಮತ್ತು ಸಂವೇ­ದನೆ­ಗಳ ನಡುವೆ ಸಮನ್ವಯ ಸಾಧಿಸ­ಬೇಕಿದೆ’ ಎಂದರು.

ಗೃಹ ಸಚಿವ ಕೆ.ಜೆ.ಜಾರ್ಜ್, ‘ಈಗಿನ ಕನ್ನಡ ಸಿನಿಮಾಗಳಲ್ಲಿ ಹಿಂಸೆಯೇ ವಿಜೃಂಭಿಸುತ್ತಿದ್ದು,  ತತ್ವ–ಸಿದ್ಧಾಂತಗಳಿಲ್ಲದ ಸಿನಿಮಾಗಳು ಯುವಜನತೆ ಮೇಲೆ ದುಷ್ಪರಿಣಾಮ ಬೀರುತ್ತಿವೆ’ ಎಂದು ವಿಷಾದ ವ್ಯಕ್ತ ಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಮಾತನಾಡಿ, ಸಿನಿಮಾದ ಜೀವಾಳವಾದ ಕಥೆಯೆಡೆಗೆ ನಿರ್ಮಾಪಕರ ಮತ್ತು ನಿರ್ದೇಶಕರ ಗಮ­ನ­ವಿಲ್ಲದಿರುವುದು ದುರಂತ ಎಂದರು.

ವಿಚಾರ ಸಂಕಿರಣದಲ್ಲಿ ‘ಸುಧಾ’ ವಾರ­­ಪತ್ರಿಕೆ ಸಹಾಯಕ ಸಂಪಾದಕ ಬಿ.ಎಂ.- ಹನೀಫ್ ‘ಪ್ರಾದೇಶಿಕ ಸಿನಿಮಾ­ಗಳ ರಾಷ್ಟ್ರೀಯ, ಅಂತರರಾಷ್ಟ್ರೀಯ ನೆಲೆ –ಬೆಲೆ’ ವಿಷಯ ಕುರಿತು ಮಾತನಾಡಿ, ಕನ್ನಡ ಸಿನಿಮಾಗಳು ದುಬಾರಿ ಮಲ್ಟಿ ಫ್ಲೆಕ್ಸ್ ಸಂಸ್ಕೃತಿಯಿಂದ ಹೊರಬರಬೇಕು ಎಂದರು.

‘ಸ್ಥಳೀಯ ಸಿನಿಮಾ: ಜಾಗತಿಕ ಪರಿಣಾಮ’ ವಿಷಯ ಕುರಿತು ಮಾತ­ನಾಡಿದ ಕರ್ನಾಟಕ ಕಾರ್ಯನಿರತ
ಪತ್ರ­ಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್,  ಸ್ಥಳೀಯ ಸಿನಿಮಾಗಳು ಜಾಗತಿಕ ಮಾನ್ಯತೆ ಪಡೆಯುವಲ್ಲಿ ಪ್ರಾದೇಶಿಕ ಸಿನಿಮಾ ರಂಗದ ಪ್ರಯತ್ನ ಶೂನ್ಯ ಎಂದರು.

ನಿರ್ಮಾಪಕ ಸಾ.ರಾ.ಗೋವಿಂದು, ವಾರ್ತಾ ಇಲಾಖೆ ಮಾಜಿ ನಿರ್ದೇಶಕ ಕೆ.ವಿ.ಆರ್.ಟ್ಯಾಗೂರ್,  ಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್  ಮಾತನಾಡಿದರು. ಕರ್ನಾಟಕ ಚಲನ­ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.­ಗಂಗರಾಜು, ಚಿತ್ರ ನಿರ್ದೇಶಕ ಎಚ್.ಎನ್. ನರಹರಿ­ರಾವ್, ವಾರ್ತಾ ಇಲಾಖೆ ಕಾರ್ಯ ದರ್ಶಿ ಕೆ.ಆರ್. ನಿರಂಜನ್,   ಪತ್ರಕರ್ತ ಜೋಗಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT