ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಬಿಟ್ಟು ಬೇರಾವ ಮಾಧ್ಯಮವೂ ಸಿದ್ಧಿಸಿಲ್ಲ...

Last Updated 23 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ನಿಮ್ಮ ನಿರ್ದೇಶನದ ಮೊದಲ ಚಿತ್ರ ‘ಘಟಶ್ರಾದ್ಧ’ ತೆರೆಕಂಡು ಮೂರೂವರೆ ದಶಕವಾಗುತ್ತಾ ಬಂತು. ಈಗ ಹಿಂತಿರುಗಿ ನೋಡಿದರೆ ಹೇಗನಿಸುತ್ತದೆ. ಇಷ್ಟು ದೀರ್ಘಕಾಲ ನಿರಂತವಾಗಿ ಸಿನಿಮಾ ಮಾಡಿಕೊಂಡು ಬಂದದ್ದರ ಹಿಂದಿನ ಸ್ಫೂರ್ತಿ ಏನು?

ಎಲ್ಲರಿಗೂ ಬೇರೆ ಬೇರೆ ಮಾಧ್ಯಮಗಳಲ್ಲಿ ಏನಾದರೂ ಹೇಳಬೇಕು ಎಂದು ಅನ್ನಿಸಿರುತ್ತದೆ. ನನಗೆ ಸಂಗೀತ, ಪೇಂಟಿಂಗ್ ಮೊದಲಾದ ಮಾಧ್ಯಮಗಳು ಸಿದ್ಧಿಸಲಿಲ್ಲ. ಹಾಗಾಗಿ ಸಿನಿಮಾ ಮಾಡೋಣ ಎಂದು ಒಂದು ಹಂತದಲ್ಲಿ ನಿರ್ಧರಿಸಿದೆ.
 
ಈ ಮಾಧ್ಯಮದ ಬಗ್ಗೆ ಇರುವ ಪ್ರೀತಿ ಹಾಗೂ ಈ ಮಾಧ್ಯಮದಿಂದ ಏನಾದರೂ ನನ್ನ ಅನಿಸಿಕೆಗಳನ್ನು ಹೇಳಬಹುದು ಎಂಬ ತುಡಿತ- ಇವೆರಡೇ ಸಿನಿಮಾ ಮಾಡಲಿಕ್ಕೆ ಕಾರಣ. ನನ್ನ ಸಿನಿಮಾಗಳು ಜನರನ್ನು ತಲುಪುತ್ತಿಲ್ಲ ಎಂಬುದು ನನಗೆ ಗೊತ್ತು.

ಅದಕ್ಕೆ ಕಾರಣ ನನ್ನ ಸಿನಿಮಾಗಳಲ್ಲ ಎಂಬುದೂ ತಿಳಿದಿದೆ. ನನ್ನ ಚಿತ್ರಗಳು ತಲುಪದೇ ಇರಲು ಕಾರಣ ನಮ್ಮ ವಿತರಣಾ ವ್ಯವಸ್ಥೆ. ಇದರ ನಡುವೆಯೂ ಎಲ್ಲೆಲ್ಲಿ ಸಿನಿಮಾಗಳನ್ನು ತೋರಿಸಿದ್ದಾರೋ, ಅಲ್ಲೆಲ್ಲಾ ‘ಕಮ್ಯುನಿಕೇಟ್’ ಆಗಿದೆ.

ಸಿನಿಮಾದಲ್ಲಿ ಆಸಕ್ತಿ ಮೂಡಿದ ಕ್ಷಣ ಯಾವುದು?
ಅದು ಆಕಸ್ಮಿಕವಷ್ಟೆ. ಬರ್ಗ್‌ಮನ್ ಮೊದಲಾದವರ ಜೀವನ ಚರಿತ್ರೆ ಓದುವಾಗ ಅವರು ಸಣ್ಣ ವಯಸ್ಸಿಗೇ ಸಿನಿಮಾ ಮಾಡಿದ್ದನ್ನು ತಿಳಿದು ಚಕಿತಗೊಂಡಿದ್ದೇನೆ. ನನ್ನ ಬದುಕಿನಲ್ಲಿ ಹಾಗೆ ಆಗಲಿಲ್ಲ. ಪೇಪರ್‌ನಲ್ಲಿ ನೋಡಿ, ಸುಮ್ಮನೆ ಅರ್ಜಿ ಹಾಕಿದೆನಷ್ಟೆ.ಹೇಳಿಕೇಳಿ ನಾನು ಕಲಾ ವಿದ್ಯಾರ್ಥಿಯಲ್ಲ, ಓದಿದ್ದು ವಿಜ್ಞಾನ. ಆ ಹಂತದಲ್ಲಿ ನನಗೆ ನಾಟಕ, ಸಾಹಿತ್ಯ ಏನೂ ಗೊತ್ತಿರಲಿಲ್ಲ.

ಕೆ.ವಿ.ಸುಬ್ಬಣ್ಣನವರ ಒತ್ತಾಸೆಯೂ ಇತ್ತಂತಲ್ಲವೇ?
ಅದು ಒತ್ತಾಸೆ ಅಲ್ಲ. 1967ರಲ್ಲಿ ಅವರು ಪುಣೆ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾ ಕೋರ್ಸ್ ಮಾಡಿಕೊಂಡು ಬಂದರು. ಅದುವರೆಗೆ ನಾನು ಸಿನಿಮಾ ಒಂದು ನಿಕೃಷ್ಟ ಮಾಧ್ಯಮ ಎಂದುಕೊಂಡಿದ್ದೆ. ಸುಬ್ಬಣ್ಣನವರಂಥ ಬಹಳ ಮಹತ್ವದ ಲೇಖಕರು, ಚಿಂತಕರು, ರಂಗಭೂಮಿಯಲ್ಲಿ ತೊಡಗಿಕೊಂಡವರು ಸಿನಿಮಾಕ್ಕೆ ಯಾಕೆ ಹೋದರು ಎಂಬುದೇ ನನಗೆ ಅಚ್ಚರಿಯಾಗಿ ಕಂಡಿತ್ತು. ಅವರನ್ನು ಭೇಟಿ ಮಾಡಿ, ಸಿನಿಮಾಸಕ್ತಿಯ ಬಗ್ಗೆ ಕೇಳಿದ್ದೆ. ಅವರು ಒಂದೆರಡು ಪುಸ್ತಕಗಳನ್ನು ಕೊಟ್ಟಿದ್ದರು. ಅವುಗಳಲ್ಲಿದ್ದ ಚಿತ್ರಗಳನ್ನು ನೋಡಿ, ನಮ್ಮ ಚಿತ್ರಗಳಿಗಿಂತ ಇವು ಭಿನ್ನವಾಗಿವೆಯಲ್ಲ ಎನ್ನಿಸಿತು. ಸಿನಿಮಾದಲ್ಲಿ ಬೇರೆ ಏನೋ ಸಾಧ್ಯವಿದೆ ಎಂದು ಹೊಳೆದದ್ದೇ ಆಗ.

ಕನ್ನಡದಲ್ಲಿ ‘ಸಂಸ್ಕಾರ’ ನಂತರ ಬೇರೆ ತರಹದ ಚಿತ್ರಗಳು ಶುರುವಾದವು. ಹಾಗಂತ ನನಗೆ ಸಿನಿಮಾದಲ್ಲಿ ಆಸಕ್ತಿ ಅದರಿಂದ ಮೂಡಿತು ಎಂದರೆ ತಪ್ಪಾಗುತ್ತದೆ. ಅದಕ್ಕೂ ಮೊದಲು ಸಾಂಸಾರಿಕ ಅಥವಾ ಭಕ್ತಿ ಪ್ರಧಾನ ಚಿತ್ರಗಳಿಗಿಂತ ಬೇರೆ ಏನನ್ನಾದರೂ ಹೇಳಲು ಸಾಧ್ಯವಿದೆ ಎಂಬುದು ಗೊತ್ತಾಗಿತ್ತು. ಲಕ್ಷ್ಮೀನಾರಾಯಣ ಅವರು ಹೇಳಬೇಕಾದದ್ದನ್ನು ತುಂಬಾ ‘ರಿಸ್ಟ್ರೇನ್ಡ್’ ಆಗಿ ಹೇಳುತ್ತಾರಲ್ಲ ಎನ್ನಿಸಿತ್ತು.

‘ಸಂಸ್ಕಾರ’ ಮೊದಲ ನೋಟಕ್ಕೆ ನನಗೆ ರುಚಿಸಿರಲಿಲ್ಲ. ಮತ್ತೆಮತ್ತೆ ನೋಡುತ್ತಾ ಹೋದಾಗ ಅದರ ಶಕ್ತಿ ಅರಿವಾಗುತ್ತಾ ಹೋಯಿತು. ಆಮೇಲೆ ಸಿನಿಮಾ ಬಗ್ಗೆ ಆಸಕ್ತಿ ಇಟ್ಟುಕೊಂಡು ಓದಲಾರಂಭಿಸಿದೆ. ಆಗ ಬಾಂಬೆಯಿಂದ ಸಿನಿಮಾದ್ದೇ ವಿಶೇಷ ಮ್ಯಾಗಜಿನ್ ಬರುತ್ತಿತ್ತು. ಕನ್ನಡದವರೇ ಆದ ಜೆ.ಎಸ್.ರಾವ್ ಬರೆಯುತ್ತಿದ್ದ ಟ್ಯಾಬ್ಲಾಯ್ಡಾ ಅದು. ಅದರಲ್ಲಿ ಒಂದು ಪುಟವನ್ನು ಈ ತರಹದ ಸಿನಿಮಾಗಳ ಬಗ್ಗೆ ಮೀಸಲಿಡುತ್ತಿದ್ದರು.
 
ಉಡುಪಿಗೆ ಬರುತ್ತಿದ್ದ ನಾಲ್ಕು ಪ್ರತಿಗಳಲ್ಲಿ ಒಂದನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಆಗ ನನಗೆ ಯಾವ ಸಿನಿಮಾಗಳ ಪರಿಚಯವೂ ಇರಲಿಲ್ಲ. ಭುವನ್ ಶೋಮ್, ಸಾರಾಕಶ್, ಬದ್ನಂ ಬಸ್ತಿ ಮೊದಲಾದವುಗಳ ಬಗ್ಗೆ ಓದಿ ಅವನ್ನು ನೋಡಬೇಕು ಎಂದು ಆಸಕ್ತಿ ಮೂಡುತ್ತಿತ್ತು. ಆದರೆ, ಆಗ ಸಿನಿಮಾ ನೋಡಲು ಇಲ್ಲಿ ಸಿಗುತ್ತಿರಲಿಲ್ಲ.

ಹೈದರಾಬಾದ್‌ಗೆ ಕೆಲಸಕ್ಕೆ ಸೇರಲು ಹೋದಾಗ ಕೆಲವು ಸಿನಿಮಾಗಳು ನೋಡಲು ಸಿಕ್ಕವು. ಅಷ್ಟರೊಳಗೆ ‘ಸಂಸ್ಕಾರ’, ‘ವಂಶವೃಕ್ಷ’ ನೋಡಿದ್ದೆ. ಆಗ ಅಂಥ ಚಿತ್ರಗಳ ಬಗ್ಗೆ ಆಸಕ್ತಿ ಕೆರಳಿತು. ಭುವನ್ ಶೋಮ್ ಮೊದಲು ನೋಡಿದಾಗಲೂ ನನಗೆ ಇಷ್ಟವಾಗಿರಲಿಲ್ಲ.

‘ಅಪರಾಜಿತ’ ಬಹಳ ಹಿಡಿಸಿತು. ಎಲ್ಲಕ್ಕಿಂತ ಆಗ ಹೆಚ್ಚು ಪರಿಣಾಮ ಬೀರಿದ್ದು ‘ಪ್ರತಿಧ್ವನಿ’. ಅದರಿಂದ ಎಷ್ಟು ಸ್ಫೂರ್ತಿ ಬಂತೆಂದರೆ, ಕರ್ನಾಟಕದಲ್ಲಿ ಯಾವ ಯಾವ ಕಾದಂಬರಿ, ಕಥೆಗಳನ್ನು ಸಿನಿಮಾ ಮಾಡಬಹುದು ಎಂದು ಒಂದು ಪಟ್ಟಿ ಮಾಡಿಕೊಂಡೆ. ನಾಲ್ಕೈದು ಕಾದಂಬರಿಗಳನ್ನು ಪಟ್ಟಿ ಮಾಡಿದ್ದೆನಾದರೂ ಆ ಯಾವುದನ್ನೂ ಇದುವರೆಗೂ ಸಿನಿಮಾ ಮಾಡಲಿಲ್ಲ.
 
ಕುಸುಮಾಕರ ದೇವರಗಣ್ಣೂರ ಅವರ ‘ನಾಲ್ಕನೇ ಆಯಾಮ’,ಅನಂತಮೂರ್ತಿಯವರ ‘ಪ್ರಶ್ನೆ ಮತ್ತು ಕಾರ್ತೀಕ’, ಖಾಸನೀಸರ ‘ಮಂದಿಯ ರಹಸ್ಯ’ ಎಂಬ ಒಂಟಿತನದ ಸುತ್ತ ಹೆಣೆದ ಕಥೆ, ದೇಸಾಯಿಯವರ ‘ನಿಂಗ್ಯ ಹೋಗಿ ನಿಖಿಲ್ ಆದದ್ದು’ ಎಂಬ ಇನ್ನೊಂದು ಕಥೆ ಆ ಪಟ್ಟಿಯಲ್ಲಿದ್ದವು.

ಆಮೇಲೆ ಕ್ಯಾಷುಯಲ್ ಆಗಿ ಪೂನಾ ಇನ್‌ಸ್ಟಿಟ್ಯೂಟ್‌ಗೆ ಅರ್ಜಿ ಹಾಕಿದೆ. ಅಲ್ಲಿಗೆ ಆಯ್ಕೆ ಆದಮೇಲೆ ನನಗೆ ಸಿನಿಮಾ ಬಗ್ಗೆ ಆಸಕ್ತಿ ಹೆಚ್ಚಾಗತೊಡಗಿತು. ನಾನು ಅಲ್ಲಿ ಗಂಭೀರವಾಗಿ ತೊಡಗಿಕೊಂಡೆ. ಅಲ್ಲಿಗೆ ನನ್ನೊಟ್ಟಿಗೆ ಸೇರಿದವರಲ್ಲಿ ತುಂಬಾ ಬುದ್ಧಿವಂತನಾಗಿದ್ದ ಒಬ್ಬ ಮೂರು ತಿಂಗಳಾದ ಮೇಲೆ ಬರುವುದನ್ನೇ ಬಿಟ್ಟ.

ಬಹುಶಃ ಅವನು ಅಲ್ಲಿ ಕಲಿತಿದ್ದರೆ ಸತ್ಯಜಿತ್ ರೇ ನಂತರದ ತುಂಬಾ ಮುಖ್ಯ ನಿರ್ದೇಶಕನಾಗುತ್ತಿದ್ದ. ಸಿನಿಮಾದಲ್ಲಿ ಏನೂ ಸಿಗದೆ ಹೋದರೆ ಬೇರೆಲ್ಲೂ ಏನೂ ಸಿಗುವುದಿಲ್ಲ ಎಂಬ ಒಂದು ಅಳುಕು ನನಗಿತ್ತು. ಹಾಗಾಗಿ ನಾನು ಅಲ್ಲಿ ಗಂಭೀರವಾಗಿ ಕಲಿತೆ.

ಸರ್ಟಿಫಿಕೇಟ್ ತಗೊಳ್ಳೋಕಿಂತ ಮುಂಚೆಯೇ ಇನ್‌ಸ್ಟಿಟ್ಯೂಟ್‌ನಿಂದ ಹೊರಬಂದಿರಂತೆ, ಹೌದಾ?
ನಾನು ಕೊನೆ ವರ್ಷದಲ್ಲಿದ್ದೆ. ಎರಡು ಎಕ್ಸರ್‌ಸೈಜ್‌ಗಳನ್ನು ಮುಗಿಸಿ ಆಗಿತ್ತು. ಆಗ ಬಿ.ವಿ.ಕಾರಂತರು ‘ಚೋಮನದುಡಿ’ ಮಾಡಲು ನಿರ್ಧರಿಸಿದ್ದರು. ಸಿನಿಮಾ ಗೊತ್ತಿರುವ ಒಬ್ಬರು ಬೇಕೆಂದು ಕೇಳಿದ್ದರು. ಸುಬ್ಬಣ್ಣನವರು ನನ್ನ ಹೆಸರನ್ನು ಅವರಿಗೆ ಸೂಚಿಸಿದ್ದರು.
 
ಕಾರಂತರು ನನ್ನನ್ನು ಕರೆದರು. ನಮ್ಮ ವಿಭಾಗದ ಮುಖ್ಯಸ್ಥರನ್ನು ಕೇಳಿದೆ. ಅವರ ಅನುಮತಿ ಇಲ್ಲದೆ ಹೋಗುವಂತಿರಲಿಲ್ಲ. ಸಾಮಾನ್ಯವಾಗಿ ಪೂರ್ತಿ ಕೋರ್ಸ್ ಮುಗಿಯದೆ ಯಾರನ್ನೂ ಕಳಿಸುವುದಿಲ್ಲ. ಆದರೆ, ನಾನು ಎರಡು ಎಕ್ಸರ್‌ಸೈಜ್ ಮುಗಿಸಿದ್ದೆ. ಮೂರನೆಯದಕ್ಕೆ ಇನ್ನೂ ಕಾಲಾವಕಾಶವಿತ್ತು. ಹಾಗಾಗಿ ಅವರು ಹೋಗು ಎಂದು ಅನುಮತಿ ಕೊಟ್ಟರು. ಆಮೇಲೆ ಕಾಲೇಜಿನಲ್ಲಿ ಬಿಟ್ಟು ಹೊರಟುಹೋಗಿದ್ದಾನೆ ಅಂತ ಗಲಾಟೆ ಶುರುವಾಯಿತು.

ನಾನು ವಾಪಸ್ ಹೋದಾಗ, ನನಗೆ ಅನುಮತಿ ಕೊಟ್ಟವರು ನಿವೃತ್ತರಾಗಿದ್ದರು.ಗಿರೀಶ್ ಕಾರ್ನಾಡರು ಅಲ್ಲಿದ್ದರು. ನನ್ನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರು. ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರಿಂದ ಮತ್ತೆ ನನ್ನನ್ನು ಸೇರಿಸಿಕೊಳ್ಳಬೇಕಾಯಿತು. ಮುಂದೆ ಎಲ್ಲರೂ ‘ಸ್ಕ್ರಿಪ್ಟ್’ ನೀಡಬೇಕಿತ್ತು. ನಾನು ‘ಘಟಶ್ರಾದ್ಧ’ ಕೊಟ್ಟೆ.
 
ನಬೇಂದು ಘೋಷ್ ಎಂಬುವರು ಅದನ್ನು ರಿಜೆಕ್ಟ್ ಮಾಡಿದ್ದರು. ನಾನು ತಲೆಬಾಗಲಿಲ್ಲವೆಂಬ ಸಿಟ್ಟು ಸ್ಟಾಫ್‌ಗೆ ಇತ್ತೇನೊ? ನನ್ನ ಸ್ಕ್ರಿಪ್ಟ್ ಚೆನ್ನಾಗಿದೆ ಎಂಬ ವಿಶ್ವಾಸ ನನಗಿತ್ತು. ಬೆಂಗಳೂರಲ್ಲಿ ಯಾರೂ ಸರ್ಟಿಫಿಕೇಟ್ ಕೇಳೋಲ್ಲ, ಸಿನಿಮಾ ಮಾಡಿ ತೋರಿಸಬೇಕಷ್ಟೆ ಎಂಬುದು ನನಗೆ ಗೊತ್ತಿತ್ತು. ಮುಂದೆ ಅದೇ ಸ್ಕ್ರಿಪ್ಟ್‌ಗೆ ಅವಾರ್ಡ್ ಕೂಡ ಬಂತು.

ಐರನಿ ಎಂದರೆ ಅದೇ ನಬೇಂದು ಘೋಷ್ ಅವರ ಮಗ ಮುಂದೆ ನನಗೆ ಅಸಿಸ್ಟೆಂಟ್ ಆಗಿ ಜೊತೆಗಿದ್ದರು. ಮೊನ್ನೆ ನಾನು ಜ್ಯೂರಿ ಆಗಿ ಹೋಗಿದ್ದಾಗ, ನಬೇಂದು ಅವರ ಮಗಳೂ ನನ್ನ ಕೋ-ಜ್ಯೂರಿ ಆಗಿ ಬಂದಿದ್ದರು.

ಇನ್‌ಸ್ಟಿಟ್ಯೂಟ್‌ನಲ್ಲಿ ಸತ್ಯಜಿತ್ ರೇ, ಬರ್ಗ್‌ಮನ್‌ರ ಚಿತ್ರಗಳನ್ನು ಪಠ್ಯದಂತೆ ಅಭ್ಯಾಸ ಮಾಡಿದವರು ನೀವು. ನಿಮ್ಮ ಮೇಲೆ ಅವರ ಪ್ರಭಾವ ಯಾವ ರೀತಿಯದು?
ಪುಣೆ ಇನ್‌ಸ್ಟಿಟ್ಯೂಟ್‌ಗೆ ಹೋಗದೇ ಇದ್ದರೆ ನಾನು ಈ ರೀತಿಯ ಚಿತ್ರಗಳನ್ನು ಮಾಡಲು ಸಾಧ್ಯವಿರಲಿಲ್ಲ. ಅಲ್ಲಿ ಭೂಮಿಕೆ ಹಾಗಿತ್ತು. ದಿನಕ್ಕೆ ಮೂರು ಸಿನಿಮಾ ನೋಡಿ ಮೂರು ಹೊತ್ತೂ ಅವುಗಳ ಬಗ್ಗೆಯೇ ಮಾತಾಡುತ್ತಿದ್ದೆವು. ಅಲ್ಲಿ ಸಿನಿಮಾ ಎಂಬುದು ನಮಗೆ ಏಕೈಕ ಚಿಂತನೆಯಾಗಿತ್ತು.

ಹೊರಗೆ ಏನು ನಡೆಯುತ್ತಿದೆ ಎಂಬುದರ ಜೊತೆಗೆ ಸಂಪರ್ಕ ಕಲ್ಪಿಸಿಕೊಂಡು ನಾವು ಸಿನಿಮಾ ನೋಡುತ್ತಿರಲಿಲ್ಲ. ನನಗೆ ಅದು ಅಲ್ಲಿಂದ ಹೊರಗೆ ಬಂದಮೇಲೆ ಗೊತ್ತಾಯಿತು. ತಕ್ಷಣ ನಾನು ಸಿನಿಮಾದಲ್ಲಿ ಬೇರೆ ರೀತಿ ಅದನ್ನು ಅಳವಡಿಸುತ್ತಾ ಬಂದೆ.
 
ಸಿನಿಮಾದಲ್ಲಿ ಈಡಿಯಂ ಹೇಗಿರಬೇಕು, ಗ್ರಾಮರ್ ಏನು ಎಂಬುದನ್ನು ಪೂನಾದಲ್ಲಿ ಚೆನ್ನಾಗಿ ಕಲಿತಿದ್ದೆ. ಮುಂದೆ ನಾನು ಹಾಗೂ ರಾಮಚಂದ್ರ ಐತಾಳ್ ಇಮೇಜ್, ಲೈಟಿಂಗ್, ಲೆನ್ಸಿಂಗ್ ಫಿಲಾಸಫಿಗಳ ಬಗ್ಗೆ ಎಷ್ಟೋ ಸಲ ಮಾತಾಡಿದಾಗ ಆ ಮಾತುಗಳು ನಮ್ಮ ಗೆಳೆಯರಿಗೆ ಅರ್ಥವಾಗುತ್ತಿರಲಿಲ್ಲ. ಏನೋ ಒಂಥರಾ ನಾವೇ ‘ಏಲಿಯನ್’ ಎನ್ನಿಸುತ್ತಿತ್ತು. ಆದರೆ, ಪುಣೆಯಲ್ಲಿ ಅಂಥ ಚರ್ಚೆ ಸಾಧ್ಯವಿತ್ತು. ಅದು ನನಗೆ ದೊಡ್ಡ ಅಡ್ವಾಂಟೇಜ್.

‘ಘಟಶ್ರಾದ್ಧ’ ನಂತರದ ನಿಮ್ಮ ಚಿತ್ರಗಳ ಮೇಲೆ ಸತ್ಯಜಿತ್ ರೇ ಸ್ಫೂರ್ತಿ ಏನಾದರೂ ಇದೆಯೇ?
ಪುಣೆಯಲ್ಲಿ ನಾನು ಕಲಿತದ್ದು ಸಿನಿಮಾ ಗ್ರಾಮರ್ ಅಷ್ಟೆ. ಆದರೆ, ಉಳಿದ ಸಂವೇದನೆ ಹುಟ್ಟಿಕೊಂಡಿದ್ದು ನಮ್ಮಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ವಾಗ್ವಾದಗಳಿಂದ. ಮುಖ್ಯವಾಗಿ ಬ್ರಾಹ್ಮಣ್ಯದ ವ್ಯವಸ್ಥೆಯನ್ನು ಪ್ರಶ್ನಿಸುವುದು ಆಗ ಹೆಚ್ಚಾಗಿತ್ತು. ಪದರ ಪದರವಾಗಿ ಸಮಾಜವನ್ನು ಕಟ್ಟಿರುವುದರಲ್ಲೇ ದೋಷವಿದೆ ಎನ್ನಿಸತೊಡಗಿತ್ತು.
 
ನನಗೂ ಆ ಪ್ರಶ್ನೆಗಳು ಮುಖ್ಯವೆನ್ನಿಸಿದವು. ಯಾವುದೇ ಸಿದ್ಧಾಂತಕ್ಕೆ ಸಾಂಸ್ಥಿಕ ರೂಪ ಬಂದರೆ ಅದು ಭಯಾನಕ ರೂಪ ಪಡೆದುಕೊಳ್ಳುತ್ತದೆ ಎಂಬುದು ಗೊತ್ತಾಯಿತು.ನಾನು ‘ಘಟಶ್ರಾದ್ಧ’ ಎತ್ತಿಕೊಂಡದ್ದು ಆ ಕಾರಣಕ್ಕಾಗಿಯೇ. ಅನಂತಮೂರ್ತಿ ಅದನ್ನು ಬರೆದದ್ದು 1963-64ರಲ್ಲಿಯಾದರೂ ನಾನು ಅದನ್ನು ಸಿನಿಮಾ ಮಾಡಿದ್ದು 78ರಲ್ಲಿ. ‘ನಾನೂ ಸೇರಿಕೊಂಡಂತೆಯೇ ಏನೋ ತಪ್ಪಾಗುತ್ತಿದೆ. ಹಾಗಾಗಿ ಒಳಗೆ ನಿಂತು ನೋಡಬೇಕು’ ಎಂಬ ಕಾರಣಕ್ಕಾಗಿ ‘ತಬರನ ಕಥೆ’ ಮಾಡಿದೆ.
 
ನನ್ನ ದೇಶ-ರಾಜ್ಯದ ರಾಜಕೀಯ, ಇಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವಾಗ್ವಾದಗಳಿಂದಲೇ ನನ್ನ ಸಿನಿಮಾಗಳನ್ನು ರೂಪಿಸಿಕೊಂಡು ಬಂದಿದ್ದೇನೆ. ಇದಕ್ಕೂ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೂ ಯಾವುದೇ ಸಂಬಂಧವಿಲ್ಲ. ಇದಕ್ಕೂ ಜಾಗತಿಕ ಸಿನಿಮಾಗೂ ಯಾವ ಸಂಬಂಧವೂ ಇಲ್ಲ. ಯಾಕೆಂದರೆ, ನಾನು ಮಾಡುತ್ತಿದ್ದದ್ದು ಇಲ್ಲಿನ ವಸ್ತುಗಳ ಚಿತ್ರಗಳನ್ನು.

‘ಮನೆ’, ‘ಕ್ರೌರ್ಯ’ ಮಾಡುವ ಹೊತ್ತಿಗೆ ರಾಜೀವ್‌ಗಾಂಧಿ ಯುಗ ಉತ್ತುಂಗದಲ್ಲಿತ್ತು.ಅವರು ನಮ್ಮ ದೇಶದ ಬಗ್ಗೆ ಮಾತಾಡುತ್ತಿದ್ದುದನ್ನು ಕಂಡಾಗ ಹುಟ್ಟಿದ ಅಸಹನೆಯಿಂದಾಗಿ ಈ ಚಿತ್ರಗಳು ಮೂಡಿದವು. ಎಂದೋ ಬರೆದ ಕಾದಂಬರಿಗಳಿಗೆ ನಾನು ನವ ಆರ್ಥಿಕ ನೀತಿಯ ಮೂಲಕವೇ ಪ್ರತಿಕ್ರಿಯಿಸಿದ್ದು.

ಆಮೇಲೆ ಜಾಗತೀಕರಣ ಆಗಿ ಅದರ ಸ್ವರೂಪ ಬೇರೆಯದೇ ಆಯಿತು. ಅದರಿಂದ ನಮ್ಮ ಸಾಮಾಜಿಕ ವ್ಯವಸ್ಥೆ ಹೇಗೆ ತೊಂದರೆ ಅನುಭವಿಸುತ್ತಾ ಇದೆ ಎಂಬುದು ನನಗೆ ಮುಖ್ಯವಾಗತೊಡಗಿತು. ಎಲ್ಲಾ ಚಿತ್ರಗಳ ಹಿಂದಿನ ಈಡಿಯಂ ಕಲಿತದ್ದು ಪುಣೆಯಲ್ಲೇ ಆದರೂ ಅದರ ಹಿಂದಿನ ಪಾಲಿಟಿಕ್ಸ್ ಮತ್ತು ಫಿಲಾಸಫಿ ಕಲಿತದ್ದು ಇಲ್ಲೇ.
 
ನನ್ನ ಮೇಲೆ ಕುರಸೋವಾ ಎಷ್ಟು ಪ್ರಭಾವ ಬೀರಿದ್ದಾನೋ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಪ್ರಭಾವವನ್ನು ಕುವೆಂಪು, ಕಾರಂತ, ಅನಂತಮೂರ್ತಿ ಬೀರಿದ್ದಾರೆ. ನನ್ನ ಚಿತ್ರಗಳ ಸ್ತ್ರೀ ಪಾತ್ರಗಳನ್ನು ಮೂಡಿಸುವಾಗ ಕಾರಂತರ ಪ್ರಭಾವ ದಟ್ಟವಾಗಿದೆ.

ಈಗ ಜಾಗತಿಕ ಚಿತ್ರಗಳ ಸ್ವರೂಪವೇ ಬದಲಾಗಿದೆ. ಇದಕ್ಕೆ ನಿಮ್ಮ ಸ್ಪಂದನ ಹೇಗೆ?
ಅದು ಈಡಿಯಂನಲ್ಲಿ ಆಗುವ ಬದಲಾವಣೆ. ಅಮೆರಿಕನ್ ಪ್ರಣೀತವಾದ ಸುಸಂಬದ್ಧವಾಗಿ ಕಟ್ಟುವ ಕ್ರಮವನ್ನು ಪ್ರಶ್ನಿಸುವ ಪ್ರಯತ್ನವನ್ನು ‘ಗುಲಾಬಿ ಟಾಕೀಸ್’ನಲ್ಲಿ ಮಾಡಿದ್ದೇನೆ. ‘ಕನಸೆಂಬ ಕುದುರೆಯನೇರಿ’ಯಲ್ಲಿ ಲೀನಿಯರ್ ನಿರೂಪಣೆಯನ್ನು ಬಿಟ್ಟೆ. ಹಿಂದೆ ‘ಮನೆ’ಯಲ್ಲಿ ಅದನ್ನು ಬೇರೆ ರೀತಿ ಪ್ರಯತ್ನಿಸಿದ್ದೆ.

‘ತಬರನ ಕಥೆ’ ಬಂದಾಗ ಅದನ್ನು ಬ್ಯೂರೋಕ್ರಸಿ ಸಿನಿಮಾ ಎಂದಾಗ ನನಗೆ ರೇಜಿಗೆ ಬಂತು. ತನ್ನ ಪಾಪವನ್ನು ತಾನೇ ಹೊತ್ತುಕೊಂಡು ಹೋಗುವ ವ್ಯಕ್ತಿತ್ವವನ್ನು ಅದರಲ್ಲಿ ನಾನು ಕಟ್ಟಿಕೊಟ್ಟಿದ್ದೇನೆ ಎಂದು ಟಿ.ಜಿ.ವೈದ್ಯನಾಥನ್ ಅವರು ಬರೆದಿದ್ದರು. ನನ್ನ ಪರಿಕಲ್ಪನೆ ಇದ್ದದ್ದೂ ಅದೇ. ‘ಮನೆ’ ಮಾಡುವಾಗ ಹೆಚ್ಚು ರಿಯಾಲಿಸಂಗೆ ಹೋಗದೆ, ಇಮೇಜಸ್ ಕಟ್ಟಿದೆ. ‘ಮನೆ’ಗೆ ಪ್ರತಿಕ್ರಿಯೆಯಾಗಿ ‘ಕ್ರೌರ್ಯ’ ಬಂದಿದೆ.

ನಿಮ್ಮ ಅನುಭವದಲ್ಲಿ ಕಥೆ - ಕಾದಂಬರಿಯೊಂದು ಸಿನಿಮಾ ಆಗುವ ಬಗೆ ಹೇಗೆ?
ಎಂದೋ ಓದಿದ ಕಾದಂಬರಿಯನ್ನು ಇನ್ಯಾವಾಗಲೋ ಬೇರೆ ರೀತಿ ರಿಲೇಟ್ ಮಾಡಿಕೊಂಡಾಗಲೇ ಸಿನಿಮಾ ಆಗೋದು. ನೆಹರೂ ಕಾಲದಲ್ಲಿ ಜಹಗೀರದಾರಿ ಪದ್ಧತಿ ಹೋಗಿದ್ದು, ಹೆಣ್ಣು ತನ್ನ ಸ್ಥಾನ ಕಂಡುಕೊಳ್ಳತೊಡಗಿದ್ದನ್ನು, ಗಾಂಧಿ ಸಿದ್ಧಾಂತಗಳು ಹೋಗತೊಡಗಿದ್ದು ಎಲ್ಲವನ್ನೂ ‘ತಾಯಿಸಾಹೇಬ’ದಲ್ಲಿ ನಾನು ಪ್ರತಿಫಲನದ ರೂಪದಲ್ಲಿ ಹೇಳಿದ್ದೇನೆ. ಗಾಂಧಿ ಸಾವಿನಿಂದ ನೆಹರೂ ಸಾವಿನವರೆಗಿನ ಸಿನಿಮಾ ಅದು.

ಹಿಂದೆ ‘ಫ್ರೀಡಂ ಮೂವ್‌ಮೆಂಟ್’ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ಮಾಡಲು ಹೋಗಿದ್ದೆ.ಆಗ ಸಿಕ್ಕಿದ್ದ ಹೊಳಹುಗಳೂ ‘ತಾಯಿ ಸಾಹೇಬ’ದಲ್ಲಿವೆ. ನಾವು ದೊಡ್ಡ ಅಲೆಗಳನ್ನೇ ಹಿಡಿಯಬೇಕಿಲ್ಲ, ದಡಕ್ಕೆ ಅಪ್ಪಳಿಸುವ ಅವುಗಳ ರೀತಿಯನ್ನು ಅರಿತರೆ ಸಾಕು.
ರಾಜಕೀಯ ಬಿಟ್ಟು ಮನುಷ್ಯ, ಪರಿಸರವನ್ನು ಮುಖ್ಯವಾಗಿಸಿಕೊಂಡ ‘ದ್ವೀಪ’ವನ್ನು ಆಮೇಲೆ ಮಾಡಿದೆ. ಸಾಮಾಜಿಕ ಪರಿವರ್ತನೆಯ ಹಿನ್ನೆಲೆಯಲ್ಲಿ ಮನುಷ್ಯನ ಒಳಗಾಗುವ ತಲ್ಲಣಗಳನ್ನು ಒಂದು ರೀತಿಯ ಉತ್ಪ್ರೇಕ್ಷೆಯ ನೆಲೆಯಲ್ಲಿ ಹೇಳುವ ಚಿತ್ರವಿದು.

ನಿಮ್ಮ ಸಿನಿಮಾ ಬದುಕಿನ ಮುಖ್ಯವಾದ ತಿರುವು ಯಾವುದು?
‘ತಾಯಿಸಾಹೇಬ’ ಎಂದೇ ನಾನು ಅಂದುಕೊಂಡಿರುವುದು.

ಪುನರ್ಜನ್ಮದ ಕಥೆಯ ‘ನಾಯಿ ನೆರಳು’ ನಿಮ್ಮ ಗಮನ ಸೆಳೆದದ್ದು ಹೇಗೆ?

ಆಗ ‘ಕಲೋನಿಯಲಿಸಂ’ ಪ್ರಭಾವ, ಅದು ಸೃಷ್ಟಿ ಮಾಡುತ್ತಿರುವ ವಿಸ್ಮೃತಿಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಶೀಶ್ ನಂದಿ ಅದರ ಹರಿಕಾರರಾದರೂ ಅನಂತಮೂರ್ತಿ, ಸುಬ್ಬಣ್ಣ ಮೊದಲಾದವರು ಅದಕ್ಕೆ ಬಹಳ ಚೆನ್ನಾಗಿ ರಿಯಾಕ್ಟ್ ಮಾಡಿದ್ದರು.

‘ಎಲ್ಲಾ ಮೂಢನಂಬಿಕೆ, ಆಚರಣೆಗಳ ಹಿಂದೆ ಪ್ರತಿಭಟನೆಯ ದನಿ ಇರುತ್ತದೆ’ ಎಂದು ಡಿ.ಆರ್.ನಾಗರಾಜ್ ಹೇಳಿದ್ದರು. ಸದಾನಂದ ಸುವರ್ಣ ಅವರು ನಾರಾಯಣ ಗುರು ಬಗ್ಗೆ ಒಂದು ಸಿನಿಮಾ ಮಾಡಲು ಹೊರಟಿದ್ದರು. ಅದಕ್ಕೆ ನಾನು ಸ್ಕ್ರಿಪ್ಟ್ ಮಾಡಿದ್ದೆ.

ಅದನ್ನು ಡಿ.ಆರ್.ನಾಗರಾಜ್ ಅವರಿಗೆ ತೋರಿಸಲು ಹೋದೆ. ‘ನಾರಾಯಣ ಗುರು ಪವಾಡಗಳನ್ನು ಮಾಡಿದ್ದಾರೆ. ಇದರಲ್ಲಿ ಪವಾಡಗಳೇ ಇಲ್ಲವಲ್ಲ’ ಎಂದರು. ನನಗೆ ಆಶ್ಚರ್ಯವಾಯಿತು. ನಾವು ರಿಯಲಿಸ್ಟರು ಪವಾಡಗಳನ್ನು ತೋರಿಸಕೂಡದು ಎಂದೇ ಭಾವಿಸಿದ್ದೆ.

ಆದರೆ, ಡಿ.ಆರ್.- ‘ನೀವು ರಿಯಲಿಸ್ಟರು ಪವಾಡದ ಹಿಂದಿನ ಪ್ರತಿಭಟನೆಯನ್ನು ಗಮನಿಸುವುದೇ ಇಲ್ಲ’ ಎಂದು ಶಿಶುನಾಳ ಶರೀಫರ ಕಥೆಯನ್ನು ಹೇಳಿದರು. ನನಗೆ ಹೌದಲ್ಲ ಎನ್ನಿಸಿತು.

ತನ್ನ ಶ್ರಾದ್ಧವನ್ನು ತಾನೇ ಮಾಡಿಕೊಳ್ಳುವ ಮೂಲಕ ಹುಟ್ಟಿದ ‘ಘಟಶ್ರಾದ್ಧ’ ಮುಂದೆ ಸಾಂಸ್ಥಿಕ ರೂಪ ಪಡೆದುಕೊಂಡಾಗ ಬಹಿಷ್ಕಾರ ಹಾಕಲು ಕೂಡ ಬಳಕೆಯಾಗತೊಡಗಿತು.

‘ನಾಯಿ ನೆರಳು’ ಓದುತ್ತಿದ್ದಾಗ ವೆಂಕಟಲಕ್ಷ್ಮಿಯ ಪಾತ್ರ ನನ್ನಲ್ಲಿ ಆಸಕ್ತಿ ಮೂಡಿಸಿತು. ಆಗ ಬೆನ್ನಿಹಿನ್ ಬೆಂಗಳೂರಿಗೆ ಬಂದಿದ್ದರು. ಅವನ ಚಿಕಿತ್ಸೆ ಮೂಢನಂಬಿಕೆ ಎಂದೇ ನಾನು ಭಾವಿಸಿದ್ದೆ. ಆಗ ಜಿ.ರಾಜಶೇಖರ್- ‘ಇಲ್ಲ, ಏನೇನೋ ಚಿಕಿತ್ಸೆ ಪಡೆದವನಿಗೆ ಅದು ಇನ್ನೊಂದು ನಂಬಿಕೆಯಷ್ಟೆ. ಅದರಿಂದ ಅವನು ಕಳೆದುಕೊಳ್ಳುವುದು ಏನೂ ಇಲ್ಲ. ಲಕ್ಷ ಲಕ್ಷ ಖರ್ಚು ಮಾಡಲಾಗದವರಿಗೆ ಅದು ಆ ಕ್ಷಣಕ್ಕೆ ನೆಮ್ಮದಿ ತರುತ್ತದೆ’ ಎಂದರು.

‘ನಾಯಿ ನೆರಳು’ ಚಿತ್ರದಲ್ಲೂ ವೆಂಕಟಲಕ್ಷ್ಮಿ ಪುನರ್ಜನ್ಮವನ್ನು ನಂಬುವುದು ಅವಳ ಪ್ರತಿಭಟನೆಯ ಸಂಕೇತ. ಹಾಗೆ ಅವಳು ನಂಬದೇ ಇದ್ದರೆ ವಿಧವೆಯಾಗಿಯೇ ಉಳಿಯಬೇಕಾಗುತ್ತದೆ. ಕೊನೆಗೆ ಅವಳು ‘ನಾನು ಪುನರ್ಜನ್ಮವನ್ನು ನಂಬೇ ಇರಲಿಲ್ಲ’ ಎಂದಾಗ ರ್ಯಾಷನಲಿಸ್ಟ್ ಆದ ಅವಳ ಮಗಳಿಗೂ ಅಚ್ಚರಿಯಾಗುತ್ತದೆ.. ‘ಇದು ಪುನರ್ಜನ್ಮದ ಸಿನಿಮಾ ಅಷ್ಟೆ’ ಎಂದಾಗ ಒಂದು ರೀತಿಯಲ್ಲಿ ನೋವಾಗುತ್ತದೆ. ಅದನ್ನು ಇಟ್ಟುಕೊಂಡು ನಾವು ಇನ್ನೂ ಏನನ್ನೋ ಹೇಳಲು ಹೊರಟಿರುತ್ತೇವೆ.

ಕನ್ನಡದಲ್ಲಿ ಹೊಸ ಅಲೆಯ ಸಿನಿಮಾ ಶುರುವಾದಾಗ ಕಾರ್ನಾಡರು, ಬಿ.ವಿ.ಕಾರಂತರು, ಶಿವರಾಮ ಕಾರಂತರು ಮೊದಲಾದವರು ಆ ಪರಂಪರೆಯ ಭಾಗವಾದರು. ಈಗ, ನಿಮ್ಮ ಕಾಲದಲ್ಲಿ ಅಂಥ ಪರಂಪರೆ ಬಲಗುಂದಿರುವುದು ಯಾಕೆ?
ಅದಕ್ಕೆ ಬಹಳ ದೊಡ್ಡ ಕಾರಣವಿದೆ. ಜಾಗತಿಕವಾಗಿಯೂ ಅದನ್ನು ಅರ್ಥ ಮಾಡಿಕೊಳ್ಳಬಹುದು. ಇಲ್ಲಿ ‘ಸಂಸ್ಕಾರ’, ‘ವಂಶವೃಕ್ಷ’ ಬರುವ ಕಾಲದಲ್ಲೇ ಅಲ್ಲಿ ‘ಭುವನ್ ಶೋಮ್’ ಬರುತ್ತಿತ್ತು. ಕನ್ನಡದ ಮಟ್ಟಿಗೆ ಹೇಳುವುದಾದರೆ ಇದ್ದಕ್ಕಿದ್ದ ಹಾಗೆ ಬ್ಲ್ಯಾಕ್ ಅಂಡ್ ವೈಟ್‌ನಿಂದ ಸಿನಿಮಾ ಕಲರ್‌ಗೆ ಬಂತು. ಎಷ್ಟೋ ಜನ ಆ ಬಜೆಟ್‌ಗೆ ಹೊಂದಿಕೊಳ್ಳಲಾಗದೆ ದೂರ ಉಳಿದರು.
 
ಕಾರ್ನಾಡರು, ಕಾರಂತರು, ಲಂಕೇಶರು, ಕಂಬಾರರು ಎಲ್ಲರೂ ನಿಲ್ಲಿಸಿದ್ದೇ ಈ ಕಾರಣಕ್ಕೆ. ಒಂದೂವರೆ ಎರಡು ಲಕ್ಷಕ್ಕೆ ಆಗುತ್ತಿದ್ದ ಸಿನಿಮಾ ಹತ್ತು ಲಕ್ಷಕ್ಕೆ ಏರಿದರೆ ಬಜೆಟ್ ಹೊಂದಿಸುವುದು ಕಷ್ಟ. ಇವತ್ತಿಗೂ ಕನ್ನಡದಲ್ಲಿ ದೊಡ್ಡ ಹಿನ್ನಡೆ ಬಜೆಟ್.
 
ನನಗೆ ಸ್ವಲ್ಪ ಡೀಸೆಂಟ್ ಆದ ಬಜೆಟ್ ಸಿಗುತ್ತೆ. ಉಳಿದವರಿಗೆ ನನ್ನ ಅರ್ಧದಷ್ಟು ಬಜೆಟ್ ಸಿಗುತ್ತದಷ್ಟೆ. ನಾನು 35-40 ದಿನ ಶೂಟಿಂಗ್ ಮಾಡ್ತೀನಿ. ಬಜೆಟ್ ಕಡಿಮೆ ಅಂದ ತಕ್ಷಣ ಶೂಟಿಂಗ್ ದಿನಗಳನ್ನು ತಗ್ಗಿಸಬೇಕಾಗುತ್ತದೆ. ಹಾಗೆ ಮಾಡಿದಾಗ, ಆ್ಯಕ್ಟಿಂಗ್ ತೆಗೆಸೋಕಾಗಲ್ಲ, ಪರ್ಫೆಕ್ಷನ್ ಸಾಧ್ಯವಾಗೋಲ್ಲ. ಎಲ್ಲರಿಗೂ ಒಳ್ಳೆಯ ಸಿನಿಮಾ ಮಾಡುವುದು ಸಾಧ್ಯವಿದೆ.

ಇದು ಕನ್ನಡದ ಸಮಸ್ಯೆ ಮಾತ್ರವೇ?

ಉಳಿದೆಡೆ ಇಷ್ಟು ಸಮಸ್ಯೆ ಇಲ್ಲ. ಜನಪ್ರಿಯ ಸಿನಿಮಾಗಳಿಗೇ ಈಗ ಥಿಯೇಟರ್‌ಗಳಿಲ್ಲ. ಇನ್ನು ನಮ್ಮ ಸಿನಿಮಾಗಳಿಗೆ ಸಿಗುವ ಮಾತೆಲ್ಲಿ. ಒಳ್ಳೆ ಸಿನಿಮಾ ಬರುತ್ತಿಲ್ಲ ಎಂಬುದು ಕಾರಣವಲ್ಲ. ಕೆಟ್ಟ ಸಿನಿಮಾ, ಒಳ್ಳೆ ಸಿನಿಮಾ ಎರಡನ್ನೂ ಜನ ನೋಡುತ್ತಿಲ್ಲ.
 
ಜನಪ್ರಿಯ ಚಿತ್ರಗಳ ನಿರ್ಮಾಪಕರು ಗ್ಯಾಂಬ್ಲಿಂಗ್ ಮಾಡುತ್ತಿದ್ದಾರೆ. ಹೊಸ ಅಲೆಯ ಚಿತ್ರ ಮಾಡುವ ನಮ್ಮಂಥವರು ಈ ವಿಷಯದಲ್ಲಿ ತುಂಬಾ ಪ್ರಾಕ್ಟಿಕಲ್. ನನ್ನ ಸಿನಿಮಾದಿಂದ ಎಷ್ಟು ಹಣ ಬರುತ್ತದೆ ಎಂಬ ಖಾತರಿ ಇದೆ. ಸಬ್ಸಿಡಿ ಎಷ್ಟು, ಅವಾರ್ಡ್ ಬಂದರೆ ಎಷ್ಟು, ಟೀವಿ ರೈಟ್ಸ್‌ನಿಂದ ಎಷ್ಟು ಸಿಗುತ್ತದೆ ಎಂಬ ಸ್ಪಷ್ಟತೆ ನಮಗಿದೆ.

ಕನ್ನಡದಲ್ಲಿ ಸರಾಸರಿ 25-30 ಲಕ್ಷಕ್ಕೆ ಆಫ್‌ಬೀಟ್ ಸಿನಿಮಾ ಮಾಡುತ್ತಿದ್ದೇವೆ.ಮರಾಠಿಯಲ್ಲಿ ಒಂದು ಕೋಟಿಗೆ ಕಡಿಮೆ ಯಾವ ಆಫ್‌ಬೀಟ್ ಚಿತ್ರವೂ ತಯಾರಾಗುತ್ತಿಲ್ಲ. ಮಲಯಾಳಂನಲ್ಲೂ ಅಷ್ಟೆ. ಒಂದೂವರೆ ಕೋಟಿಗೆ ಕಡಿಮೆ ಸಿನಿಮಾ ಮಾಡಬೇಡ ಅಂತ ಅಡೂರು ಹೇಳುತ್ತಾರೆ.

ಶಾಜಿ ‘ಕುಟ್ಟಿ ಸ್ರಾಂಕ್’ ಮಾಡಿದ್ದು ನಾಲ್ಕು ಕೋಟಿಯಲ್ಲಿ. ಮೊನ್ನೆ ಮೊನ್ನೆವರೆಗೂ ಕೇರಳದಲ್ಲಿ ರಿಲೀಸ್ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ಅಲ್ಲೂ ಈ ಸಮಸ್ಯೆ ಶುರುವಾಗಿದೆ. ಅವರಿಗೆ ಚಾನೆಲ್‌ಗಳು ಹೆಚ್ಚಾಗಿವೆ.

ನಮ್ಮಲ್ಲಿ ಇಂಥ ಚಿತ್ರಗಳನ್ನು ಒಂದೇ ಚಾನೆಲ್ ಕೊಂಡುಕೊಳ್ಳುತ್ತದೆ. ಮರಾಠಿಯಲ್ಲಿ 50 ಲಕ್ಷ ಚಾನೆಲ್ ರೈಟ್ಸ್ ಬಂದರೆ, 30 ಲಕ್ಷ ಸಬ್ಸಿಡಿ ಸಿಗುತ್ತದೆ. ಥಿಯೇಟರ್‌ನಿಂದ 15-20 ಲಕ್ಷ ಎತ್ತುತ್ತಾರೆ. ಅದಕ್ಕೇ ಅಲ್ಲಿನ ಬಜೆಟ್ ದೊಡ್ಡದು. ನಮ್ಮಲ್ಲಿ ಆ ಪರಿಸ್ಥಿತಿ ಇಲ್ಲ.

ಫಿಲ್ಮ್ ಸೊಸೈಟಿಗಳ ಸಂಸ್ಕೃತಿ ಕೂಡ ಕಡಿಮೆಯಾಗುತ್ತಿದೆ ಅಲ್ಲವೇ?
ನಮ್ಮಲ್ಲಿ ಪರ್ಯಾಯವಾದ ಫಿಲ್ಮ್ ಸೊಸೈಟಿಗಳು ಹುಟ್ಟಲೇ ಇಲ್ಲ. ಇದ್ದ ಸೊಸೈಟಿಗಳವರು ವಿದೇಶಿ ಚಿತ್ರಗಳನ್ನು ನೋಡುತ್ತಾ, ಕನ್ನಡ ಚಿತ್ರಗಳನ್ನು ಬೈದುಕೊಂಡು ಓಡಾಡಿದರು. ಅಲ್ಲಿ ನೋಡಿದ್ದನ್ನು ಇಲ್ಲಿಗೆ ಅಳವಡಿಸುವ ಚಿಂತನೆಯನ್ನು ಅವರು ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಸಿನಿಮಾ ಸಾಹಿತ್ಯ ಬೆಳೆಸಬಹುದಿತ್ತು. ಅದ್ಯಾವುದನ್ನೂ ಮಾಡಲಿಲ್ಲ.

ಸರ್ಕಾರ ಏನು ಮಾಡಬಹುದು?
ಸರ್ಕಾರವೇ ಅವಾರ್ಡ್ ಕೊಡುತ್ತದೆ. ವಾರ್ತಾ ಇಲಾಖೆಯು ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಂಥ ಚಿತ್ರಗಳ ಒಂದೊಂದು ಶೋ ಆಯೋಜಿಸಬಹುದು. ಒಂದು ಐದು ವರ್ಷ ಹೀಗೆ ಮಾಡಬೇಕು. ಒಂದಿಷ್ಟು ಅವಧಿ ರಾಜ್ಯದ ಎಲ್ಲಾ ಊರಿನ ಜನರಿಗೆ ಈ ಸಿನಿಮಾಗಳು ನೋಡಲು ಸಿಕ್ಕಾಗ ಒಂದು ಪ್ರಜ್ಞೆ ಮೂಡಲು ಸಾಧ್ಯ.

ಇದಲ್ಲದೆ, ಮಿನಿ ಥಿಯೇಟರ್‌ಗಳನ್ನು ಇಲ್ಲಿ ಸೃಷ್ಟಿಸಬೇಕು. ಈಗ ಮಲ್ಟಿಪ್ಲೆಕ್ಸ್‌ಗಳಿವೆ. ಅವು ಬಂದಮೇಲೆ ನನ್ನ ಸಿನಿಮಾ ಬಿಡುಗಡೆ ಮಾಡುವುದು ಸಾಧ್ಯ. ಆದರೆ, ಅಲ್ಲಿ ಟಿಕೆಟ್‌ಗೆ 150-200 ರೂ. ಕೊಡಬೇಕು. ಅದು ಕನ್ನಡದ ಪ್ರೇಕ್ಷಕರಿಗೆ ಹೊರೆ.

ಬ್ರಿಜ್ ಸಿನಿಮಾ ಎಂಬುದು ಇದೆಯೇ? ಆ ಹೆಸರಿನಲ್ಲಿ ಕೆಲವು ದುರ್ಬಲ ಚಿತ್ರಗಳೂ ಬರುತ್ತಿವೆಯಲ್ಲವೇ?
ನನಗೆ ಬ್ರಿಜ್ ಸಿನಿಮಾ ಪರಿಕಲ್ಪನೆಯ ಕುರಿತೇ ಅನುಮಾನಗಳಿವೆ. ಅವರು ಹಾಡುಗಳನ್ನು ಹಾಕಿದರೂ ನನಗೆ ತಕರಾರಿಲ್ಲ. ನಮ್ಮಲ್ಲಿ ಬ್ರಿಜ್ ಸಿನಿಮಾದಲ್ಲಿ ಅಂಥದ್ದೇನೂ ಆಗುತ್ತಿಲ್ಲ. ಹಿಂದಿಯಲ್ಲಿ ಕೆಲವರು ಬೇರೆ ತರಹದ ಚಿತ್ರಗಳನ್ನು ಮಾಡುತ್ತಿದ್ದಾರೆ. ಅವು ಬ್ರಿಜ್ ಸಿನಿಮಾ ಇರಬಹುದು.

ಬರ್ಗ್‌ಮನ್ ಚಿತ್ರದಲ್ಲಿ ಬೆತ್ತಲೆ ದೃಶ್ಯವಿದ್ದರೆ ನನಗೆ ಸಮಸ್ಯೆ ಇಲ್ಲ. ಆ ದೃಶ್ಯದ ಮೂಲಕ ಅವನು ಬೇರೆ ಏನೋ ಹೇಳುತ್ತಿರುತ್ತಾನೆ. ‘ಸೈಕ್ಲೋ’, ‘ಟ್ಯಾಕ್ಸಿ ಡ್ರೈವರ್’ನಲ್ಲಿ ಇರುವ ಹಿಂಸೆ ಬೇಕೆಂದೇ ಇರುವಂಥದ್ದಲ್ಲ. ಆ ಹಿಂಸೆಯ ಮೂಲಕ ಬೇರೇನೋ ಹೇಳುವುದು ನಿರ್ದೇಶಕನ ಉದ್ದೇಶ.
 
ನಾನು ಒಂದು ಕಡೆ ಹೇಳಿದ್ದೆ- ಪುಟ್ಟಣ್ಣ ಕಣಗಾಲ್ ಬಹಳ ಪರಿಣಾಮಕಾರಿಯಾಗಿ ಸಿನಿಮಾ ಮಾಡುತ್ತಿದ್ದರು. ಆದರೆ, ಅವರು ಹೇಳುತ್ತಿದ್ದ ಮೌಲ್ಯಗಳು ಬಹಳ ಅಪಾಯಕಾರಿಯಾಗಿದ್ದವು. ಲಕ್ಷ್ಮೀನಾರಾಯಣ್ ಹೇಳುತ್ತಿದ್ದ ಮೌಲ್ಯಗಳು ಆರೋಗ್ಯಕರವಾದದ್ದು. ಆದರೆ, ಅದನ್ನು ಪರಿಣಾಮಕಾರಿ ಹೇಳುತ್ತಿರಲಿಲ್ಲ. ನಾನು ಲಕ್ಷ್ಮೀನಾರಾಯಣ್ ಅವರನ್ನು ಒಪ್ಪಿಕೊಳ್ಳುತ್ತೇನೆ.

ಕನ್ನಡದಲ್ಲಿ ಸಿನಿಮಾ ಈಗಲೂ ಸಂಸ್ಕೃತಿಯ ಭಾಗವಾಗಿ ಉಳಿದಿದೆಯೇ?
ಕರ್ನಾಟಕದಲ್ಲಿ ಆ ಮಡಿವಂತಿಕೆ ಇನ್ನೂ ಹೋಗಿಲ್ಲ. ಮಲಯಾಳಂನಲ್ಲಿ ಸಾಹಿತ್ಯ-ಸಿನಿಮಾ ನಂಟು ಗಟ್ಟಿಯಾಗೇ ಬಂತು. ತಮಿಳಿನಲ್ಲಿ ಗಟ್ಟಿ ಸಾಹಿತಿಗಳು ಸೇರಲಿಲ್ಲ. ಯಾರ್ಯಾರು ಸೇರಿದರೋ ಅವರೆಲ್ಲಾ ಜನಪ್ರಿಯ ಸಾಹಿತ್ಯದಲ್ಲೇ ಬೇರೆ ಏನೋ ಮಾಡಿದರು.

(ಏಪ್ರಿಲ್ 25ರಂದು ಸುಚಿತ್ರ ಫಿಲ್ಮ್ ಸೊಸೈಟಿ ಮತ್ತುಸುಚಿತ್ರ ಚಲನಚಿತ್ರ ಮತ್ತು ಸಾಂಸ್ಕೃತಿಕ ಅಕಾಡೆಮಿ ‘ಪದ್ಮಶ್ರೀ ಗಿರೀಶ್ ಕಾಸರವಳ್ಳಿ 60’ ಕಾರ್ಯಕ್ರಮವನ್ನು ಆಯೋಜಿಸಿವೆ. ಸುಚಿತ್ರ ಆವರಣದಲ್ಲಿ ಅಂದು ಮಧ್ಯಾಹ್ನ 3ರಿಂದ ಸಂವಾದ. ಸಂಜೆ 6ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಸನ್ಮಾನ. )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT