ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಶಿಕಾರಿಯಲ್ಲಿ ಸಕ್ಕರೆಯ ಸವಿ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

`ಗುಬ್ಬಚ್ಚಿಗಳು' ಚೊಚ್ಚಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ ಏರಿಸಿಕೊಂಡ ಯುವ ನಿರ್ದೇಶಕ ಅಭಯ ಸಿಂಹ ಅವರ ಮನದಲ್ಲಿ ಜನರ ಮನಮುಟ್ಟುವ ನೂರಾರು ಚಿತ್ರಗಳನ್ನು ನಿರ್ದೇಶಿಸುವ ಕನಸಿನ ಹರಹು. ಅವರದೀಗ ಗುಬ್ಬಚ್ಚಿಯ ಕಲಾತ್ಮಕ ಗೂಡಿನಿಂದ ಹೊರಬಂದು ಕಮರ್ಷಿಯಲ್ ಹಾದಿಯಲ್ಲಿ ಮನೆ-ಮನ ಹೊಕ್ಕುವ ಗುರಿ. ಅವರ ಬದುಕಿನ ಹಾದಿ ಗುಬ್ಬ್ಚಿಗಳ ಚಿಲಿಪಿಲಿಯ್ಟೇ ಸುಂದರ.

ಮೊದಲ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಾಗ ಸಾಗರದಾಳದ ನೀರೆಲ್ಲ ಎದ್ದೆದ್ದು ಸುನಾಮಿಯಂತೆ ಮೈಮೇಲೆ ನುಗ್ಗಿ ಬರುತ್ತಿದೆಯೇನೋ ಎಂಬಂಥ ಅನುಭವ. ಪರೀಕ್ಷೆ ಬರೆದಾಗಿನಿಂದ ನನ್ನೊಳಗಿದ್ದ ಗೊಂದಲ, ಪ್ರಶ್ನೆ, ಅನುಮಾನ, ಭಯ, ಕಾತರ ಎಲ್ಲದಕ್ಕೂ ಆ ಫಲಿತಾಂಶ ಉತ್ತರ ನೀಡಿದಂತಿತ್ತು. ನಿಜ. ನಾನು ಫೇಲಾಗಿದ್ದೆ. ಸೋತ ಬೇಸರ ನನ್ನನ್ನು ಕಾಡುವುದಕ್ಕಿಂತಲೂ ತಂದೆತಾಯಿಯನ್ನು ಎದುರಿಸುವುದು ಹೇಗೆಂಬ ಅಂಜಿಕೆ.

ನಾನು ಫೇಲಾದೆ ಎಂದು ಹೇಗೆ ಹೇಳಿಕೊಳ್ಳುವುದು? ಹತಾಶೆಯ ಮೂಟೆ ಹೊತ್ತು, ಹೆದರಿಕೆಯಿಂದಲೇ ಮನೆಯಂಗಳಕ್ಕೆ ಕಾಲಿಡುವಾಗ ನನ್ನ ಮನಸ್ಸು ಅಪ್ಪ ಅಮ್ಮನ ಬೈಗುಳವನ್ನು ಎದುರು ನೋಡುತ್ತಿತ್ತು. ಹೇಗಿದ್ದರೂ ಅದು ಎದುರಾಗಲೇಬೇಕೆಂಬುದಕ್ಕೆ ಮಾನಸಿಕವಾಗಿ ತುಸು ಸಿದ್ಧನಾಗಿದ್ದೆ. ಆದರೆ ಪರಮಾಶ್ಚರ್ಯ! ಬೈಗುಳದ ಬದಲು ಅಲ್ಲಿ ಸಿಕ್ಕಿದ್ದು ಸಾಂತ್ವಾನ. ಹತ್ತನೇ ತರಗತಿಯವರೆಗೆ ಇಂಗ್ಲಿಷಿನ ಭಯಭಕುತಿಯಿಲ್ಲದೆ ಕನ್ನಡ ಮಾಧ್ಯಮದಲ್ಲೇ ಓದಿದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ವಿಜ್ಞಾನ ಕಲಿಯುವುದು ಸುಲಭವಲ್ಲ ಎಂಬ ಕಾರಣ ನನ್ನ ಸೋಲಿನ ಬೆನ್ನಿಗಿತ್ತು.

ಮೊದಲನೇ ಪ್ರಯತ್ನದಲ್ಲಿ ಫೇಲಾದರೇನಂತೆ, ಮತ್ತೆ ಬರಿ ಎಂದು ಅಪ್ಪ ಅಮ್ಮ ಸಮಾಧಾನ ಹೇಳಿದಾಗ ನನ್ನೊಳಗೆ ಒಂದಷ್ಟು ಆತ್ಮವಿಶ್ವಾಸದ ಚಿಗುರು. ಅಂತೂ ಇಂತೂ ಎರಡನೇ ಪಿಯುಸಿ ಕಷ್ಟಪಟ್ಟು ಮುಗಿಸಿದಾಗ ವಿಜ್ಞಾನ ವಿಷಯದ ಸಹವಾಸ ಸಾಕೆನಿಸಿತ್ತು.

ನನ್ನ ಬಾಲ್ಯದ ನಂಟು ಇದ್ದದ್ದು ನಮ್ಮೂರಿನ ಪರಿಸರ ಮತ್ತು ಸಂಸ್ಕೃತಿಯೊಂದಿಗೆ. ಮಂಗಳೂರಿನ ಆ ವಾತಾವರಣದಲ್ಲಿ ಬೆಳೆಯುವಾಗ ಸಿನಿಮಾ ಎಂಬ ಮಾಯಾಲೋಕ ನನ್ನನ್ನು ಸೆಳೆಯಲಿದೆ ಎಂಬ ಕಲ್ಪನೆಯೂ ಇರಲಿಲ್ಲ. ಸಿನಿಮಾ ಒಂದು ಕಲೆಯಾಗಿಯೂ ನನ್ನನ್ನು ಆಕರ್ಷಿಸಿರಲಿಲ್ಲ. ಊರಲ್ಲಿ ತಂದೆಯವರು ಪುಸ್ತಕದಂಗಡಿ ಇಟ್ಟುಕೊಂಡಿದ್ದರು.

ಅಜ್ಜ ಜಿ.ಟಿ. ನಾರಾಯಣರಾವ್ ವಿಜ್ಞಾನ ಲೇಖಕ. ಹೀಗಾಗಿ ಪುಸ್ತಕದ ಸಖ್ಯ ಸಹಜವಾಗಿಯೇ ಅಂಟಿಕೊಂಡಿತ್ತು. ಅಜ್ಜ ಬರೆಯುವಾಗ ಕೋಣೆಯಲ್ಲಿ ಒಬ್ಬರೇ ಕುಳಿತುಕೊಳ್ಳುತ್ತಿದ್ದರು. ಆ ಕೋಣೆ ನೋಡಿದರೇನೇ ನಮಗೆ ಭಯ. ವಿಜ್ಞಾನ ವಿಷಯದಲ್ಲಿ ಪರಿಣತರಾದ ಅವರು ಜಗತ್ತಿನ ವಿಸ್ಮಯಗಳನ್ನು ತೆರೆದಿಡುತ್ತಿದ್ದರೆ ಆ ಲೋಕದೊಳಗೇ ಓಡಾಡಿ ಬಂದಂಥ ಅನುಭವ ನಮಗೆ. ಅಜ್ಜ ಅವುಗಳನ್ನು ಬಿಡಿಸಿಡುತ್ತಿದ್ದ ಬಗೆ ಈಗಲೂ ಕಣ್ಣಮುಂದೆ ಕಟ್ಟಿದಂತಿದೆ.

ನಿಂತಲ್ಲಿ ನಿಲ್ಲಬಯಸದ ಮನಸ್ಸು ನನ್ನದು. ಬಾಲ್ಯದಿಂದಲೂ ಟ್ರೆಕ್ಕಿಂಗ್ ವ್ಯಾಮೋಹ. ಕಾಡುಮೇಡು ಅಲೆಯಲು ಜೊತೆಗಾರರು ಸಿಕ್ಕರಂತೂ ಅದರ ಮಜವೇ ಬೇರೆ. ಶಾಲಾ ದಿನಗಳಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ. ಇನ್ನು ಜಲಪಾತವಿರುವ ತಾಣಗಳೆಂದರೆ ಪಂಚಪ್ರಾಣ. ನಿಜಕ್ಕೂ ಇಂಥ ಅಲೆದಾಟಗಳು ನೀಡುವ ಅನುಭವದ ಹರಹು ಅಳೆಯಲಾಗದು.

ನಮ್ಮಳಗಿನ ಹೊಸ ಚಿಂತನೆಗಳ ಮೂಲ ಪ್ರೇರಣೆ ಅಲೆದಾಟ. ಮನೆಯಲ್ಲಿ ಜನಪದ ಕಲೆಗಳ ಬಗ್ಗೆ ಅತೀವ ಒಲವು. ಯಕ್ಷಗಾನ, ಗೊಂಬೆಯಾಟ, ನಾಟಕ ಹೀಗೆ ರಂಗದ ಮೇಲಿನ ಕಲೆಗಳ ಸೆಳೆತ ಹೆಚ್ಚಿತ್ತು. ಬೆಳೆದ ವಾತಾವರಣದಲ್ಲಿ ಸಿನಿಮಾ ಸ್ಪರ್ಶ ಇರಲಿಲ್ಲ ಎಂಬುದು ನಿಜವಾದರೂ, ಈಗ ನಾನು ನಿಂತಿರುವ ಜಾಗದಿಂದ ದಶಕಗಳ ಹಿಂದಕ್ಕೆ ಹೊರಳಿದರೆ ನನ್ನೊಳಗೆ ನಿರ್ದೇಶಕನನ್ನು ಹುಟ್ಟುಹಾಕಿದ್ದು ಇದೇ ಕಲೆಗಳಲ್ಲವೇ ಎಂಬುದು ಅರಿವಾಗುತ್ತದೆ.

ಹರಸಾಹಸ ಪಟ್ಟು ಪಿಯುಸಿ ಮುಗಿಸಿದ ಬಳಿಕ ಒಲವು ತೋರಿದ್ದು ಪತ್ರಿಕೋದ್ಯಮ ಮತ್ತು ಸಾಹಿತ್ಯದತ್ತ. ಪದವಿಯಲ್ಲಿ ಆಯ್ದುಕೊಂಡದ್ದು ಕನ್ನಡ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು. ಬರವಣಿಗೆ ಹವ್ಯಾಸ ಮುಂಚಿನಿಂದಲೂ ಇದ್ದಿದ್ದರಿಂದ ಕಾಲೇಜಿನಲ್ಲಿ ಸಣ್ಣಪುಟ್ಟ ನಾಟಕಗಳನ್ನು ಬರೆಯುವ ಗೀಳು ಹತ್ತಿಕೊಂಡಿತು. ಕುಟುಂಬದಲ್ಲಿ ರಂಗಾಸಕ್ತಿ ಇದ್ದಿದ್ದರಿಂದ ಸಹಜವಾಗಿಯೇ ರಂಗಭೂಮಿಯತ್ತ ಮನಸ್ಸು ವಾಲಿತು. ಪತ್ರಿಕೋದ್ಯಮದಲ್ಲಿ `ಸಿನಿಮಾ' ಪಠ್ಯದ ಒಂದು ಅಂಗವಾದ ಕಾರಣಕ್ಕೆ ಸಿನಿಮಾ ಕುರಿತ ವಿಷಯಗಳ ಓದು ಅನಿವಾರ್ಯವಾಗಿತ್ತು.

ಕ್ರಮೇಣ ಅನಿವಾರ್ಯ ಆಸಕ್ತಿಯಾಗಿ ಬದಲಾಯಿತು. ಮೊದಲು ಕ್ಯಾಮೆರಾ ಹಿಡಿದಿದ್ದು `ಜೆಮಿನಸ್' ಎಂಬ ಸಾಕ್ಷ್ಯ ಚಿತ್ರ ತಯಾರಿಕೆಗಾಗಿ. ಕ್ಯಾಮೆರಾ ಹಿಡಿದ ಕೈ ಮತ್ತೆ ಆ ನಂಟನ್ನು ಬಿಡಲೊಪ್ಪಲಿಲ್ಲ. ನನ್ನೆಲ್ಲಾ ಆಸಕ್ತಿಗಳಿಗೆ ಬೆಂಬಲ ನೀಡಿದವರು ಪ್ರಾಂಶುಪಾಲರಾಗಿದ್ದ ಪ್ರಶಾಂತ್ ಮಾಡ್ತ. ಸಿನಿಮಾ ನನ್ನೊಳಗೆ ಬೇರೂರಿತ್ತು. ಪದವಿ ಮುಗಿದ ನಂತರ ಪುಣೆಯಲ್ಲಿನ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರವೇಶ ಪರೀಕ್ಷೆಗೆ ಕುಳಿತೆ.

ಪಾಸಾದ ಬಳಿಕ ಅಲ್ಲಿ 3 ವರ್ಷ ನಿರ್ದೇಶನದ ತರಬೇತಿ. ಸಿನಿಮಾ ಪಟ್ಟುಗಳನ್ನು ಕಲಿಯುವುದು ಮಾತ್ರವಲ್ಲ, ಖ್ಯಾತ ಕಲಾವಿದರನ್ನು ಭೇಟಿ ಮಾಡುವ ಅವಕಾಶಗಳೂ ಅಲ್ಲಿ ದೊರೆಯಿತು. ಸಾಕ್ಷ್ಯಚಿತ್ರ, ಕಿರುಚಿತ್ರ ಹೀಗೆ ಒಂದೊಂದೇ ಮೆಟ್ಟಿಲೇರುವಾಗ ಸಿನಿಮಾ ನಿರ್ದೇಶನದ ತುಡಿತ ಹೆಚ್ಚುತ್ತಲೇ ಇತ್ತು.


ತರಬೇತಿ ಮುಗಿಸಿ ಕಾಲಿಟ್ಟಿದ್ದು ಬೆಂಗಳೂರಿಗೆ. ಮುಂದಿನ ಹಾದಿ ಇನ್ನೂ ಸ್ಪಷ್ಟವಾಗಿರಲಿಲ್ಲ. ಗೆಳೆಯರೊಂದಿಗೆ ಚರ್ಚಿಸಿ, ಅವರ ಬೆಂಬಲದಿಂದ `ಗುಬ್ಬಚ್ಚಿಗಳು' ಎಂಬ ಸಿನಿಮಾ ನಿರ್ದೇಶಿಸಿದೆ. ಬಿ. ಸುರೇಶ್ ಅವರಂಥ ನಿರ್ಮಾಪಕರು ನನ್ನೊಟ್ಟಿಗೆ ಕೈಜೋಡಿಸಿದರು. ನನ್ನ ಮೊದಲ ಸಿನಿಮಾ ಅದು. ಮಕ್ಕಳೊಡನೆ ಬೆರೆಯುವುದೆಂದರೆ ನನಗೆ ಮೊದಲಿನಿಂದಲೂ ಇಷ್ಟವಾದ ಕಾರಣಕ್ಕೋ ಏನೋ, `ಗುಬ್ಬಚ್ಚಿಗಳು' ಅತಿ ನೈಜವಾಗಿ ಮೂಡಿಬಂದಿತ್ತು.

ಸಿನಿಮಾ ತೆಗೆಯುವಾಗ ನನಗಿನ್ನೂ 26ರ ಹರೆಯ. ಈ ಹುಡುಗ ಏನು ಸಿನಿಮಾ ಮಾಡಿಯಾನು ಎಂದು ಹಿಂದಿನಿಂದ ಮಾತನಾಡುತ್ತಿದ್ದವರೂ ಇದ್ದರು. ಅದಕ್ಕೆ ಉತ್ತರವನ್ನು ನನ್ನ ಸಿನಿಮಾ ಮೂಲಕವೇ ನೀಡಿದ ಖುಷಿ ನನ್ನದು. 2008ರಲ್ಲಿ `ಗುಬ್ಬಚ್ಚಿಗಳು' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಆ ಸಂಭ್ರಮವನ್ನು ಅರಗಿಸಿಕೊಳ್ಳಲು ಮೂರು ದಿನ ಬೇಕಾಯಿತು. ಅದೊಂದು ಭಾವುಕ ಕ್ಷಣ. ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಈ ಚಿತ್ರ ಪ್ರದರ್ಶನಗೊಂಡಿದ್ದು ನನ್ನ ಸಿನಿಮಾ ಆಸಕ್ತಿಗೆ ಇಂಬು ನೀಡಿತು.

ಅದರ ಗುಂಗಲ್ಲೇ ತುಸು ವಿಭಿನ್ನ ಹಾಗೂ ಪ್ರಯೋಗಾತ್ಮಕ ಚಿತ್ರ ಮಾಡುವ ಹಂಬಲ ಉಂಟಾಯಿತು. ಆಗ ಕೈಗೆ ಸಿಕ್ಕಿದ್ದು `ಶಿಕಾರಿ' ಕಥೆ. `ನಮ್ಮಳಗಿನ ಬೇಟೆ' ಎಂಬ ಕಲ್ಪನೆ ಅದರೊಳಗಿತ್ತು. ಅದು ಇನ್ನೂ ವಿಶಿಷ್ಟವಾಗಿ ಬರಬೇಕೆಂಬ ಬಯಕೆ ನನ್ನದು. ಹೀಗಾಗಿಯೇ ಖ್ಯಾತ ನಟ ಮಮ್ಮುಟಿ ಅವರನ್ನು ಸಂಪರ್ಕಿಸಿದ್ದು. ಅವರಂಥ ದೈತ್ಯ ಪ್ರತಿಭೆ ನನ್ನಂಥ ಎಳೆಯ ನಿರ್ದೇಶಕನ ಚಿತ್ರದಲ್ಲಿ ನಟಿಸುವುದೆಂದರೆ ಸಣ್ಣ ಮಾತಲ್ಲ. ಅದು ನನ್ನ ಬದುಕಿನ ಹೆಮ್ಮೆಯ ಕ್ಷಣ ಕೂಡ. ಸಿನಿಮಾ ಕ್ಷೇತ್ರದಲ್ಲಿ ಕ್ರಿಯಾಶೀಲತೆಯ ಪ್ರಾಮುಖ್ಯತೆಯ ಪಾಠವನ್ನು ಈ ಸಿನಿಮಾ ಕಲಿಸಿತು.

ನಿರೀಕ್ಷಿತ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಗಲಿಲ್ಲವಾದರೂ, ದೊರೆತ ಅನುಭವಗಳಂತೂ ಅವಿಸ್ಮರಣೀಯ. ಒಮ್ಮೆ ಮೂಡಿಸಿದ ಹೆಜ್ಜೆ ಗುರುತಿನ ಮೇಲೆಯೇ ಮತ್ತೆ ಹೆಜ್ಜೆಯನ್ನಿರಿಸಬಾರದು. ನನ್ನ ಸಿನಿಮಾಗಳು ಮತ್ತೊಬ್ಬರದಕ್ಕಿಂತ ಭಿನ್ನ ಎಂದು ಹೇಳಿಕೊಳ್ಳುವುದಿಲ್ಲ. ನಿನ್ನೆಯದ್ದು ಇಂದಿಗಿರಬಾರದು, ಇಂದಿನದ್ದು, ನಾಳೆಗೆ ಪುನರಾವರ್ತಿಸಬಾರದು, ಪ್ರತಿಯೊಂದರಲ್ಲೂ ಹೊಸತನ ಕಾಣಬೇಕು ಎಂಬುದಷ್ಟೇ ಉದ್ದೇಶ.

ಇದು ನನ್ನ ಮುಂದಿನ ಸಿನಿಮಾಗಳಲ್ಲೂ ಪಾಲನೆಯಾಗುತ್ತದೆ. ಈಗ ಕಲಾತ್ಮಕ ಚಿತ್ರದಿಂದ ಕಮರ್ಷಿಯಲ್‌ನತ್ತ ಹೆಜ್ಜೆ ಇಟ್ಟಿದ್ದೇನೆ. ನಟ ಗಣೇಶ್ ಮತ್ತು ದೀಪಾ ಸನ್ನಿಧಿ ಜೋಡಿಯ `ಸಕ್ಕರೆ' ನನ್ನ ಮೊದಲ ಕಮರ್ಷಿಯಲ್ ಸಿನಿಮಾ. ಬಿ. ಸುರೇಶ್ ನಿರ್ಮಾಣದ ಹೊಣೆ ಹೊರುವ ಮೂಲಕ ಮತ್ತೆ ಬೆನ್ನುತಟ್ಟಿದ್ದಾರೆ.

ಇದುವರೆಗೂ 35 ಸಾಕ್ಷ್ಯಚಿತ್ರ,  10-11 ಕಿರುಚಿತ್ರ, 2 ಮ್ಯೂಸಿಕ್ ವಿಡಿಯೋ ತಯಾರಿಸಿದ್ದೇನೆ. ಎಲ್ಲದರಲ್ಲೂ ಪರಿಸರ ಕಾಳಜಿಯ ಅಂಶವಿರಬೇಕೆನ್ನುವುದು ನನ್ನ ಕಳಕಳಿ. ಸಿನಿಮಾ ಎಂದರೆ ಒಬ್ಬ ವ್ಯಕ್ತಿ ಮತ್ತೊಬ್ಬ ಆಪ್ತ ವ್ಯಕ್ತಿಯೊಂದಿಗೆ ಚೆಂದದ ಕತೆಯೊಂದನ್ನು ಸುಂದರವಾಗಿ, ಸರಳವಾಗಿ, ಮನಮುಟ್ಟುವ ರೀತಿಯಲ್ಲಿ ಹೇಳಿರುವಂತೆ ಇರಬೇಕು. ಅದೇ ಹುಕಿಯಲ್ಲಿ ಚಿತ್ರ ನಿರ್ದೇಶಿಸುವ ಹಂಬಲ ನನ್ನದು. ಪತ್ನಿ ರಶ್ಮಿ ಧಾರಾವಾಹಿ ನಟಿ.

ಇಬ್ಬರದ್ದೂ ಒಂದೇ ಕ್ಷೇತ್ರವಾದ್ದರಿಂದ ತಪ್ಪು ಒಪ್ಪುಗಳನ್ನು ಮುಕ್ತವಾಗಿ ಚರ್ಚಿಸುತ್ತೇವೆ. ಸಿನಿ ಪಯಣ ಈಗಷ್ಟೇ ಶುರುವಾಗಿದೆ. ಒಂದೊಂದು ದಾರಿಯಲ್ಲೂ ಬಗೆ ಬಗೆಯ ಅನುಭವಗಳು. ಅವೆಲ್ಲವೂ ಹೊಸ ಕನಸುಗಳಿಗೆ ಜೀವ ತುಂಬುತ್ತಿವೆ. ಐತಿಹಾಸಿಕ ಕಥೆಗಳನ್ನು ವಿಭಿನ್ನವಾಗಿ ಸಿನಿಮಾ ರೂಪಕ್ಕೆ ತರುವ ಕನಸು ಅವುಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT