ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದ ಜವಾಬ್ದಾರಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮನರಂಜನಾ ಮಾಧ್ಯಮವಾದ ಚಲನಚಿತ್ರಗಳು, ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುತ್ತಿವೆಯೇ ಎನ್ನುವ ಪ್ರಶ್ನೆ ಪದೇಪದೇ ಚರ್ಚೆಗೆ ಒಳಪಡುತ್ತಿದೆ.

ಮನರಂಜನೆಯನ್ನು ಬಯಸಿ ಬರುವ ಪ್ರೇಕ್ಷಕರ  ಮನಸ್ಸನ್ನು ಉಲ್ಲಸಿತಗೊಳಿಸಬೇಕಾದ, ಆ ಮೂಲಕ ಸಮಾಜದ ಸಾಸ್ಥ್ಯವನ್ನು ಕಾಪಾಡಬೇಕಾದ ಸದುದ್ದೇಶದ ಮಾಧ್ಯಮ, ಹಾದಿ ತಪ್ಪುತ್ತಿರುವುದನ್ನು ಅದು ಬೆಳೆದು ಬಂದ ನೂರು ವರ್ಷದ ಹಾದಿಯ ಅವಲೋಕನದಲ್ಲಿ ಕಾಣಬಹುದು.

ಸಿನಿಮಾ ಪ್ರೇರಣೆಯಿಂದ ಯುವಕರು, ಶಾಲಾ ಬಾಲಕರು ಹಾದಿ ತಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. “ಏಕ್ ಥಾ ಟೈಗರ್‌” ಹಿಂದಿ ಚಲನಚಿತ್ರದಲ್ಲಿ  ನಾಯಕ ಸಲ್ಮಾನ್ ಖಾನ್ ಮಾಡಿದ ಸಾಹಸವನ್ನು ಅನುಕರಿಸಲು ಹೋದ ಶಾಲಾಬಾಲಕನೊಬ್ಬ ದುರಂತ ಸಾವನ್ನಪ್ಪಿದ ಘಟನೆ ನಿಜಕ್ಕೂ ವಿಷಾದಕರ.

ಬೆಂಗಳೂರಿನ ದಂಡು ರೈಲು ನಿಲ್ದಾಣಕ್ಕೆ ಸ್ನೇಹಿತರೊಂದಿಗೆ ತೆರಳಿದ ಶಾಲಾ ಬಾಲಕ, ಚಲನಚಿತ್ರದಲ್ಲಿ ನಾಯಕನಟ ರೈಲಿನ ಬೋಗಿಯ ಮೇಲಿನಿಂದ ಜಿಗಿದದ್ದು ಹೇಗೆ ಎನ್ನುವುದನ್ನು ಪುನರಾವರ್ತನೆ ಮಾಡಲು ಯತ್ನಿಸಿದ. ಹೈಟೆನ್ಷನ್ ತಂತಿಯ ವಿದ್ಯುತ್ ಪ್ರವಹಿಸಿ, ಸುಟ್ಟು ಕರಕಲಾಗಿ ಮೇಲಿನಿಂದ ಬಿದ್ದು ಸತ್ತ.

`ದಂಡು ಪಾಳ್ಯ~ ಎನ್ನುವ ಚಿತ್ರ ಬಿಡುಗಡೆಯಾದ ನಂತರ ರಾಜಧಾನಿಯಲ್ಲಿ ಚಿತ್ರದ ಕಥೆಯಲ್ಲಿ ನಡೆಯುವ ರೀತಿಯದೇ ಆದ ಹಲವಾರು ಕೊಲೆಗಳು ನಡೆದವು. ಕೆಲವು ತಿಂಗಳ ಹಿಂದೆ `ಅಗ್ನಿಪಥ್~ ಎನ್ನುವ ಚಲನಚಿತ್ರದ ಪ್ರೇರಣೆಯಿಂದ ಶಾಲಾ ಬಾಲಕನೊಬ್ಬ ಶಾಲೆಯ ಶಿಕ್ಷಕಿಯನ್ನೇ ಇರಿದು ಕೊಂದ ಘಟನೆ ನಡೆದಿತ್ತು.

ಸಿನಿಮಾ ಒಂದೇ ಅಲ್ಲದೆ, ಜನಸಾಮಾನ್ಯರ ಜೀವನಶೈಲಿಯ ಮೇಲೆ ಟಿವಿ ಧಾರಾವಾಹಿಗಳು ಹಾಗೂ ಕೆಲವು ಕ್ರೈಂ ಹೆಸರಿನ ಕಾರ್ಯಕ್ರಮಗಳು ಕೂಡ ವ್ಯತಿರಿಕ್ತ ಪರಿಣಾಮ ಬೀರಿರುವುದನ್ನೂ ಅಲ್ಲಗಳೆಯುವಂತಿಲ್ಲ. ಪ್ರೇಕ್ಷಕರು  ಯಾವುದೇ ಮುಜುಗರ ಇಲ್ಲದೆ ಸಂಸಾರ ಸಮೇತ ನೋಡುವ ಚಲನಚಿತ್ರಗಳು ಈಗ ಕಣ್ಮರೆಯಾಗಿವೆ.

ಹಿಂಸಾಚಾರ, ಕೊಲೆ, ಸುಲಿಗೆ, ಮಾನಭಂಗ ದೃಶ್ಯಗಳಿಲ್ಲದೆ ಸಿನಿಮಾ ಮಾಡಲು ಸಾಧ್ಯವೇ ಇಲ್ಲ ಎಂದು ನಿರ್ಮಾಪಕರು ಭಾವಿಸಿರುವಂತಿದೆ. ಅಪರಾಧವನ್ನು ವೈಭವೀಕರಿಸುವುದು ವಿಶ್ವವ್ಯಾಪಿಯಾಗಿ ಚಲನಚಿತ್ರದ ಒಂದು ಗುಣಲಕ್ಷಣವಾಗಿ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ.

ಹಾಲಿವುಡ್‌ನ  ಸೂಪರ್‌ಮ್ಯಾನ್, ಬ್ಯಾಟ್‌ಮನ್, ಸ್ಪೈಡರ್‌ಮ್ಯಾನ್‌ಗಳನ್ನು ವೀಕ್ಷಿಸಿದ ಬಾಲಕರು ಕಟ್ಟಡಗಳ ಮೇಲಿಂದ ಸ್ಪೈಡರ್‌ಮ್ಯಾನ್‌ಗಳ ರೀತಿಯಲ್ಲೇ ಹಾರಲು ಹೋಗಿ ಸತ್ತ ಘಟನೆಗಳೂ ನಡೆದಿವೆ. ಸೆನ್ಸಾರ್‌ಮಂಡಳಿಯ ಉದಾರನಿಲುವೂ ಕೂಡ ಇಂತಹ ಬೆಳವಣಿಗೆಗೆ ಕಾರಣವಾಗಿರಬಹುದು.

ಧೂಮಪಾನ ಮಾಡುವ ಹಾಗೂ ಮದ್ಯಪಾನ ಮಾಡುವ ದೃಶ್ಯಗಳನ್ನು ಕತ್ತರಿಸಲು ಬಿಗಿ ನಿಲುವು ಅನುಸರಿಸಿದಂತೆ, ಸಾಮಾಜಿಕವಾಗಿ ದುಷ್ಪರಿಣಾಮ ಬೀರುವ ಚಿತ್ರಗಳನ್ನು ತಡೆಯಲು ಕೆಲವು ಮಾನದಂಡಗಳನ್ನು ಅಳವಡಿಸುವುದು ಸೂಕ್ತ.

ಭಯೋತ್ಪಾದಕರನ್ನೂ, ಉಗ್ರಗಾಮಿಗಳನ್ನೂ, ದೇಶದ್ರೋಹಿಗಳನ್ನೂ ಸಾಹಸಿಗಳಂತೆ ತೋರುವ ಚಿತ್ರಕಥೆಯನ್ನೇ  ಸೆನ್ಸಾರ್‌ಗೆ ಒಳಪಡಿಸುವುದು ಅವಶ್ಯಕ. ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಕೆಲವು ಅಸಭ್ಯಗಳಿಗೂ, ಅತಿರಂಜಕ ಅಪರಾಧ ಕತೆಗಳಿಗೂ ಕಡಿವಾಣ ಹಾಕುವುದು ಅಗತ್ಯ.

ತಂತ್ರಜ್ಞಾನದ ಅಪಾರ ಬೆಳವಣಿಗೆಯಲ್ಲಿ ಸಿನಿಮಾ ಹಲವಾರು ಆಯಾಮಗಳನ್ನು ಕಂಡಿದೆ. ಮನರಂಜನೆಗೆ ನೂರಾರು ಮಾರ್ಗಗಳಿದ್ದರೂ, ಸಿನಿಮಾ ಇಂದಿಗೂ ಭಾರತೀಯ ಪ್ರೇಕ್ಷಕರಿಗೆ ರೋಮಾಂಚಕಾರಿ ಅನುಭವ ನೀಡುವ ಮನರಂಜನಾ ಮಾಧ್ಯಮವಾಗಿಯೇ ಇದೆ. ಅಂತಹ ಆಕರ್ಷಕ ಶಕ್ತಿಯನ್ನು ಪ್ರೇಕ್ಷಕರ ಮನಸ್ಸನ್ನು ಅರಳಿಸಲು ಬಳಸಬೇಕೇ ಹೊರತು ಕೆರಳಿಸಲು ಬಳಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT