ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವಕ್ಕಿಲ್ಲ ವ್ಯವಸ್ಥಿತ `ಚಪ್ಪರ'

Last Updated 24 ಡಿಸೆಂಬರ್ 2012, 20:59 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವೊಂದನ್ನು ಏರ್ಪಡಿಸಲು ಸೂಕ್ತ ವ್ಯವಸ್ಥೆ ನಗರದಲ್ಲಿಲ್ಲ ಎಂಬ ಕೂಗು ಬಹುದಿನಗಳಿಂದ ಕೇಳಿ ಬರುತ್ತಿದೆ.ತಾಂತ್ರಿಕ ಸೌಲಭ್ಯಗಳ ಕೊರತೆ, ವಿಶ್ವದರ್ಜೆಯ ಚಿತ್ರಮಂದಿರಗಳ ಅಭಾವ ಹಾಗೂ ಒಂದೇ ಸೂರಿನಡಿ ಚಲನಚಿತ್ರ ವೀಕ್ಷಣೆ ಸಾಧ್ಯವಿಲ್ಲದಿರುವುದು ಸಿನಿಮೋತ್ಸವಗಳ ಹಿನ್ನಡೆಗೆ ಕಾರಣ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಈ ಬಾರಿಯ ಚಲನಚಿತ್ರೋತ್ಸವದ ಅಂಗವಾಗಿ ನಗರದ ನಾಲ್ಕು ಕಡೆಗಳಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಒಂದು ಚಿತ್ರಮಂದಿರ ಮಗ್ರತ್ ರಸ್ತೆಯಲ್ಲಿದೆ. ಮತ್ತೊಂದು ಟ್ರಿನಿಟಿ ವೃತ್ತದಲ್ಲಿದೆ. ಉಳಿದೆರಡು ಚಿತ್ರಮಂದಿರಗಳು ಹಡ್ಸನ್ ವೃತ್ತ ಹಾಗೂ ಇನ್ಫೆಂಟ್ರಿ ರಸ್ತೆಯಲ್ಲಿವೆ. ಇನ್ಫೆಂಟ್ರಿ ರಸ್ತೆಯಿಂದ ಕ್ರಮವಾಗಿ ಟ್ರಿನಿಟಿ ವೃತ್ತ, ಮಗ್ರತ್ ರಸ್ತೆ, ಹಡ್ಸನ್ ವೃತ್ತ ಹಾಗೂ ಅಲ್ಲಿಂದ ಮರಳಿ ಇನ್ಫೆಂಟ್ರಿ ರಸ್ತೆಗೆ ಒಂದು ಸುತ್ತು ಬರಲು ಹತ್ತು ಕಿ.ಮೀಗೂ ಹೆಚ್ಚು ದೂರ ಕ್ರಮಿಸಬೇಕು.

ಸಿನಿ ಹಬ್ಬಗಳಲ್ಲಿ ಕನಿಷ್ಠ ಒಂದರಿಂದ ಹಿಡಿದು ಗರಿಷ್ಠ ಐದು ಸಿನಿಮಾ ನೋಡುವ ಸಿನಿ ಪ್ರಿಯರಿದ್ದಾರೆ. ಒಂದು ಚಿತ್ರಕ್ಕೂ ಮತ್ತೊಂದು ಚಿತ್ರಕ್ಕೂ ನಡುವೆ ಇರುವ ಕಾಲಾವಕಾಶವೂ ಕಡಿಮೆ. ಹೀಗಾಗಿ ಒಂದು ಚಿತ್ರಮಂದಿರದಿಂದ ಮತ್ತೊಂದು ಚಿತ್ರಮಂದಿರಕ್ಕೆ ತೆರಳುವುದು, ತಮ್ಮ ನೆಚ್ಚಿನ ಸಿನಿಮಾ ನೋಡುವುದು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. 

ತಿರುವನಂತಪುರದಲ್ಲಿ ನಡೆಯುವ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ಬಾರಿ ಭಾಗವಹಿಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಪಂಡಿತ್ ಅಲ್ಲಿನ ಸೌಲಭ್ಯಗಳ ಕುರಿತು ಪ್ರಜಾವಾಣಿಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ. `ತಿರುವನಂತಪುರದ ಕಲಾಭವನ್, ಕೈರಳಿಯಲ್ಲಿ ಸಿನಿಮೋತ್ಸವ ಸಂಘಟಿಸಲಾಗುತ್ತದೆ. ಎರಡೂ ಸರ್ಕಾರಿ ಸ್ವಾಮ್ಯದ ಕಟ್ಟಡಗಳು. ಕೈರಳಿಯೊಂದರಲ್ಲೇ ಮೂರು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಚಿತ್ರ ಪ್ರದರ್ಶಿಸುವ ವ್ಯವಸ್ಥೆ ಇದೆ. ಇವುಗಳಲ್ಲದೆ ಬೆಂಗಳೂರಿನಂತೆ ಖಾಸಗಿ ಚಿತ್ರಮಂದಿರಗಳಲ್ಲಿ ಕೂಡ ಚಿತ್ರ ಪ್ರದರ್ಶನ ನಡೆಯುತ್ತದೆ. ಈ ಎಲ್ಲಾ ಚಿತ್ರಮಂದಿರಗಳಿಗೆ ಕೇವಲ ಕಾಲ್ನಡಿಗೆಯಲ್ಲಿ ತೆರಳಬಹುದು' ಎನ್ನುತ್ತಾರೆ ಅವರು.

`ಸಿನಿಮೋತ್ಸವಗಳನ್ನು ಸಂಘಟಿಸಲೆಂದೇ ಕೋಲ್ಕತ್ತದಲ್ಲಿ ನಂದನ್ ಚಿತ್ರಮಂದಿರವಿದೆ. ಇಲ್ಲಿ ವರ್ಷ ಪೂರ್ತಿ ವಿವಿಧ ಚಿತ್ರೋತ್ಸವಗಳು ನಡೆಯುವ ಜೊತೆಗೆ ಸದಭಿರುಚಿಯ ಚಲನಚಿತ್ರಗಳು ಕೂಡ ತೆರೆಕಾಣುತ್ತವೆ. ಅಲ್ಲದೆ ಸಿನಿಮಾ ಕುರಿತ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತದೆ. ದೆಹಲಿಯಲ್ಲೂ ಇಂಥದ್ದೊಂದು ಪ್ರತ್ಯೇಕ ಚಿತ್ರಮಂದಿರ ಅಸ್ತಿತ್ವದಲ್ಲಿದೆ' ಎಂದು ಮಾಹಿತಿ ನೀಡತ್ತಾರೆ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಎನ್. ಶಶಿಧರ.

ಪಾರ್ಕಿಂಗ್ ಶುಲ್ಕ: ಸಿನಿಮೋತ್ಸವದ ಪ್ರವೇಶ ಶುಲ್ಕಕ್ಕಿಂತ ಪಾರ್ಕಿಂಗ್ ಶುಲ್ಕ ದುಬಾರಿ ಎನ್ನುವುದು ಪ್ರಶಾಂತ್ ಅವರ ಮತ್ತೊಂದು ಆರೋಪ. ಮಾಲ್ ಒಂದರಲ್ಲಿ ಸಿನಿಮಾ ನೋಡಲು ಬಂದ ಅವರಿಗೆ ಗಂಟೆಗೆ ಇಷ್ಟು ಎಂಬಂತೆ ಸುಮಾರು ಇನ್ನೂರು ರೂಪಾಯಿಗಳಷ್ಟು ಶುಲ್ಕ ವಿಧಿಸಲಾಗಿದೆ. ಅಲ್ಲಿಗೆ ವಾರಪೂರ್ತಿ ನಡೆಯುವ ಸಿನಿಮೋತ್ಸವಕ್ಕೆ ಸಾವಿರಾರು ರೂಪಾಯಿ ಶುಲ್ಕ ನೀಡಬೇಕು ಎನ್ನುವ ಅಸಮಾಧಾನ ಅವರದು. ಆದರೆ ಪಶ್ಚಿಮ ಬಂಗಾಳ ಸರ್ಕಾರ ಸಿನಿಮೋತ್ಸವಗಳಿಗೆಂದೇ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುತ್ತದೆ ಎನ್ನುವುದು ವಿಶೇಷ. 

ಮಾಲ್ ಬೇಡ: ನಗರದ ಮಾಲ್‌ಗಳಲ್ಲಿರುವ ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ನಡೆಸಲು ಸಿನಿಮಾ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. `ಮಾಲ್‌ಗಳಲ್ಲಿ ಸಿನಿಮೋತ್ಸವಕ್ಕೆ ಬರುವವರಾರು, ಇತರೆ ಗ್ರಾಹಕರು ಯಾರು ಎಂಬುದೇ ಅರಿವಾಗುವುದಿಲ್ಲ. ಕ್ರಿಸ್‌ಮಸ್, ವೀಕೆಂಡ್‌ನಂತಹ ಸಂದರ್ಭಗಳಲ್ಲಿ ಮಾಲ್‌ಗಳಲ್ಲಿ ಜನಜಂಗುಳಿ ಹೆಚ್ಚು. ಸಂತೆಯಲ್ಲಿ ಸಿನಿಮಾ ನೋಡುವುದಕ್ಕೂ ಇದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ' ಎನ್ನುತ್ತಾರೆ ಚಿತ್ರೋತ್ಸವಕ್ಕೆ ಬಂದಿರುವ ಮೈಸೂರು ಸಿನಿಮಾ ಸಮಾಜದ ಸದಸ್ಯ ಮಂಜುನಾಥ್.

ಬೇರೆ ರಾಜ್ಯಗಳ ಚಿತ್ರೋತ್ಸವಗಳಲ್ಲಿ, ಸಿನಿಮಾ ಪ್ರದರ್ಶನ ಪಟ್ಟಿ ನೋಡಿ ಎಸ್‌ಎಂಎಸ್ ಮೂಲಕ ಸ್ಥಳ ಕಾಯ್ದಿರಿಸಬಹುದು. ಆದರೆ ಇಲ್ಲಿಯ ಪರಿಸ್ಥಿತಿಯೇ ಬೇರೆ. `ಚಿತ್ರ ಪ್ರದರ್ಶನಕ್ಕೂ ಅರ್ಧ- ಮುಕ್ಕಾಲು ಗಂಟೆ ಮೊದಲೇ ಸರತಿಯಲ್ಲಿ ನಿಲ್ಲಬೇಕು. ಮಾಲ್‌ಗಳಲ್ಲಿ ಅಕ್ಕಪಕ್ಕದಲ್ಲೇ ಚಿತ್ರಮಂದಿರಗಳಿದ್ದು ಸ್ಥಳದ ಕೊರತೆಯಿಂದಾಗಿ ಗೊಂದಲ ಸೃಷ್ಟಿಯಾಗುತ್ತಿದೆ. ಪ್ರದರ್ಶನದಲ್ಲಿ ಸ್ಥಳ ಭರ್ತಿಯಾಗುತ್ತಿದ್ದಂತೆ ಸರತಿಯಲ್ಲಿ ನಿಂತವರನ್ನು ಹೊರಗೆ ಕಳುಹಿಸಲಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರೇಕ್ಷಕಿ ಮೀನಾ.

ಕಾಡುವ ಪುಟ್ಟಣ್ಣ ಚಿತ್ರಮಂದಿರ: ಚಿತ್ರೋತ್ಸವದ ಅವ್ಯವಸ್ಥೆಗಳ ಕುರಿತು ಮಾತನಾಡುವ ಅನೇಕ ಮಂದಿಗೆ ಥಟ್ಟನೆ ನೆನಪಾಗುವುದು ಜಯನಗರ ನಾಲ್ಕನೇ ಹಂತದಲ್ಲಿದ್ದ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ. ನವೀಕರಣದ ನೆಪದಲ್ಲಿ 2004ರಲ್ಲಿ ಸ್ಥಗಿತಗೊಂಡ ಚಿತ್ರಮಂದಿರ ಮತ್ತೆ ಪ್ರೇಕ್ಷಕರಿಗೆ ಮುಕ್ತವಾಗಲೇ ಇಲ್ಲ. ಸಿನಿಮಾರಂಗದ ಅನೇಕ ಗಣ್ಯರು ಚಿತ್ರಮಂದಿರ ಉಳಿಸಿಕೊಳ್ಳಲು ನಡೆಸಿದ ಯತ್ನ ಫಲಿಸಲಿಲ್ಲ. ಕೆಲವು ದಿನಗಳ ಕಾಲ ಅದನ್ನು ಪೊಲೀಸ್ ಠಾಣೆಯಾಗಿ ಪರಿವರ್ತಿಸಲಾಗಿತ್ತು. ಈಗ ಅದನ್ನು ಪೂರ್ಣ ನೆಲಸಮ ಮಾಡಿ ಅಲ್ಲಿ ಐದು ಅಂತಸ್ತಿನ ಕಟ್ಟಡ ಹಾಗೂ ಎರಡು ಚಿತ್ರಮಂದಿರಗಳನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ. 

`ಅದೊಂದು ಚಿತ್ರಮಂದಿರವಾಗಿರಲಿಲ್ಲ. ಸಾಂಸ್ಕೃತಿಕ ಕೇಂದ್ರದಂತೆ ತೋರುತ್ತಿತ್ತು. ಅನೇಕ ಸದಭಿರುಚಿಯ ಚಿತ್ರಗಳು ಅಲ್ಲಿ ತೆರೆ ಕಂಡಿದ್ದವರು. ಸರ್ಕಾರದ ಒಡೆತನದಲ್ಲಿದ್ದ ಆ ಚಿತ್ರಮಂದಿರ ಹಾಗೆಯೇ ಉಳಿಯಬೇಕಿತ್ತು' ಎನ್ನುತ್ತಾರೆ ಪ್ರೇಕ್ಷಕ ಶ್ರೀನಿಧಿ.

ಕಟ್ಟಡ ತಲೆ ಎತ್ತಲಿ: ಕನ್ನಡ ಚಿತ್ರರಂಗ 75 ವರ್ಷ ಪೂರ್ಣಗೊಳಿಸಿದ ನೆನಪಿಗೆ ಅಮೃತಮಹೋತ್ಸವ ಕಟ್ಟಡ ನಿರ್ಮಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಕಟ್ಟಡದಲ್ಲಿ ಚಲನಚಿತ್ರೋತ್ಸವಗಳಿಗೆ ಪ್ರತ್ಯೇಕ ಜಾಗ ಮೀಸಲಿಡಬೇಕು. ಒಂದಕ್ಕಿಂತ ಹೆಚ್ಚು ಚಿತ್ರಮಂದಿರಗಳು, ಉತ್ಸವದ ನಿರ್ದೇಶನಾಲಯ ಕಚೇರಿ, ಕಾರ್ಯಾಗಾರ, ವಿಚಾರಗೋಷ್ಠಿಗಳನ್ನು ನಡೆಸುವ ಸಭಾಂಗಣ, ಕೆಫೆ, ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಈ ಸಂಕೀರ್ಣದಲ್ಲಿರಬೇಕು. ಹೀಗಾದಾಗ ತೊಂದರೆ ತಪ್ಪುತ್ತದೆ ಎನ್ನುವುದು ಬರಹಗಾರ್ತಿ ಡಾ. ವಿಜಯಾ ಅವರ ಅನಿಸಿಕೆ.

ವಾರ್ತಾ ಇಲಾಖೆಯ `ಸುಲೋಚನಾ' ಚಿತ್ರಮಂದಿರದಲ್ಲಿ ಇರುವಷ್ಟು ವ್ಯವಸ್ಥೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸುಪರ್ದಿಯಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರಕ್ಕೆ ಇಲ್ಲ. ಇದು ಹಳೆಯ ಚಿತ್ರಮಂದಿರವಾಗಿದ್ದು ಸೀಮಿತ ಸ್ಥಳಾವಕಾಶ ಹೊಂದಿದೆ.ನೂತನ ತಂತ್ರಜ್ಞಾನ ಬಳಸಿಕೊಂಡ ಚಲನಚಿತ್ರಗಳನ್ನು ಇಲ್ಲಿ ಪ್ರದರ್ಶಿಸುವುದು ಸಾಧ್ಯವಿಲ್ಲ. ಹೀಗಾಗಿ ಹೆಚ್ಚು ಪ್ರೇಕ್ಷಕರು ಮಾಲ್‌ಗಳು ಅಥವಾ ಐಷಾರಾಮಿ ಚಿತ್ರಮಂದಿರಗಳತ್ತಲೇ ಒಲವು ತೋರುತ್ತಾರೆ ಎಂಬ ಮಾತಿದೆ. ಭಾನುವಾರ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಅಕಿರ ಕುರೊಸವಾ ಅವರ `ಐ ಲೀವ್ ಇನ್ ಫಿಯರ್' ಚಿತ್ರದ ಪ್ರದರ್ಶನದ ವೇಳೆ ಕಾಣಿಸಿಕೊಂಡ ತಾಂತ್ರಿಕ ತೊಂದರೆ ಈ ಮಾತಿಗೆ ಕನ್ನಡಿ ಹಿಡಿದಂತಿತ್ತು.

ಯೋಜನೆ ಪ್ರಗತಿಯಲ್ಲಿದೆ...
ಮಾಲ್‌ಗಳಲ್ಲಿ ಸಿನಿಮೋತ್ಸವ ಆಯೋಜಿಸುವುದು ಹಣಕಾಸಿನ ದೃಷ್ಟಿಯಿಂದ ದುಬಾರಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಬಂದಿದ್ದಾರೆ. ಪ್ರತ್ಯೇಕ ಸಿನಿಮಾ ಸಂಕೀರ್ಣ ನಿರ್ಮಿಸುವ ಸರ್ಕಾರದ ಯೋಜನೆ ಪ್ರಗತಿಯಲ್ಲಿದೆ. ಬೇರೆ ಚಿತ್ರೋತ್ಸವಗಳಿಗೆ ಹೋಲಿಸಿದರೆ ನಮ್ಮ ಚಿತ್ರೋತ್ಸವಕ್ಕೆ ಕೇವಲ ಐದು ವರ್ಷಗಳ ಪ್ರಾಯ. ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊತ್ತು ನಡೆಸುತ್ತಿರುವ ಉತ್ಸವ ಇದೇ ಮೊದಲನೆಯದು. ತಾಂತ್ರಿಕ ದೃಷ್ಟಿಯಿಂದ ಈ ಬಾರಿಯದು ಉತ್ತಮ ಉತ್ಸವ ಎಂದು ಗಿರೀಶ್ ಕಾಸರವಳ್ಳಿ ಸೇರಿದಂತೆ ಅನೇಕ ಚಿತ್ರ ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಸಂಘಟನೆಯ ಲೋಪದೋಷಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದ್ದು ಬರುವ ದಿನಗಳಲ್ಲಿ ಅವುಗಳನ್ನು ನಿವಾರಿಸಲಾಗುವುದು.
ಎನ್.ಆರ್. ವಿಶುಕುಮಾರ್ವಾರ್ತಾ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT