ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವದಲ್ಲಿ ಮುಂದುವರಿದ ಗೊಂದಲ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ವೀಕ್ಷಣೆಗೆಂದು ಬಂದ ನಿರ್ದೇಶಕರೊಬ್ಬರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಸಾರ್ವಜನಿಕರೊಬ್ಬರು ಅಡ್ಡಿಪಡಿಸಿದ್ದು ವಿವಾದಕ್ಕೆ ಕಾರಣವಾಯಿತು. ಈ ಮಧ್ಯೆ ಮಂಗಳವಾರವೂ ಚಿತ್ರ ವೀಕ್ಷಣೆ ವೇಳೆ ಗೊಂದಲ ಮುಂದುವರಿದಿತ್ತು.

ಸಿನಿಮೋತ್ಸವದ ಅಂಗವಾಗಿ ಸೋಮವಾರ ಮಧ್ಯಾಹ್ನ ನಗರದ ಮಾಲ್ ಒಂದರಲ್ಲಿ ಚಿತ್ರ ಪ್ರದರ್ಶಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಚಿತ್ರರಂಗದ ಸಹೋದ್ಯೋಗಿಗಳೊಂದಿಗೆ ಬಂದಿದ್ದ ನಿರ್ದೇಶಕ ಶಿವಮಣಿ ಸರತಿ ಸಾಲಿನ ನಡುವೆ ಸೇರಿಕೊಳ್ಳಲು ಯತ್ನಿಸಿದರು. ಆದರೆ ಇದಕ್ಕೆ ಒಪ್ಪದೆ ಸಾರ್ವಜನಿಕರೊಬ್ಬರು ಎಳೆದಾಡಿದ್ದರು. ಇದರಿಂದ ಸಿಟ್ಟಿಗೆದ್ದ ಶಿವಮಣಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಗಳವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು `ಚಿತ್ರೋತ್ಸವ ಚಿತ್ರರಂಗದವರಿಗಲ್ಲ, ಜನಗಳಿಗೆ. ಇಷ್ಟ ಇದ್ದರೆ ಸಿನಿಮಾ ನೋಡಿ, ಇಲ್ಲದಿದ್ದರೆ ಹೊರಡಿ ಎಂದು ತಾರಾ ಹೇಳಿದರು. ಇಷ್ಟು ಹೇಳುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಸೂಕ್ತ ವೇದಿಕೆಯಲ್ಲಿ ಉತ್ತರಿಸುವುದಾಗಿ ಹೇಳಿ ಹೊರಬಂದೆ. ಸಾಮಾನ್ಯ ವ್ಯಕ್ತಿಯಂತೆ ನನ್ನ ಜತೆ ವರ್ತಿಸಿದ್ದು ನೋವು ತಂದಿದೆ' ಎಂದು ಅಳಲು ತೋಡಿಕೊಂಡರು.

`ಚಿತ್ರರಂಗಕ್ಕೆ ಸಂಬಂಧಿಸಿಲ್ಲ ಎನ್ನುವುದಾದರೆ ಚಲನಚಿತ್ರ ವಾಣಿಜ್ಯ ಮಂಡಳಿಯ ಸಹಾಯ ಏಕೆ ಪಡೆಯಲಾಗಿದೆ. ನಾನು ತಾರಾ ಅವರ ಮನೆ ಕಾರ್ಯಕ್ರಮಕ್ಕೆ ಬಂದಿಲ್ಲ. ಸಿನಿಮೋತ್ಸವಕ್ಕೆ ಪ್ರವೇಶ ನೀಡಿ ಎನ್ನುವುದು ನನ್ನ ಹಕ್ಕು ಕೂಡ.  ಆದರೆ ನನ್ನಂತಹ ಸಿನಿಮಾ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವುದು ವಿಪರ್ಯಾಸ' ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

`ದೇಶದ ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಪ್ರಮಾಣ ಪತ್ರ ಪಡೆಯದ ಚಿತ್ರಗಳನ್ನು ಕೂಡ ಈ ಬಾರಿ ಪ್ರದರ್ಶಿಸಲಾಗಿದೆ. ಸಿನಿಮಾ ಬಗ್ಗೆ ಗೊತ್ತಿಲ್ಲದವರು, ಕೀಳು ಅಭಿರುಚಿ ಹೊಂದಿದವರು ಇದರಿಂದ ಸಿನಿಮಾ ವೀಕ್ಷಣೆಗೆ ಬರುವಂತಾಗಿದೆ. ಪ್ರಮಾಣಪತ್ರ ಪಡೆಯದೆ ಪ್ರದರ್ಶನ ನಡೆಸುವುದು ಎಷ್ಟು ಸರಿ' ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಾರಾ, `ಹಿಂದಿ ಚಿತ್ರವೊಂದರ ವೀಕ್ಷಣೆ ವೇಳೆ ನನಗೂ ಸ್ಥಳಾವಕಾಶ ದೊರೆಯಲಿಲ್ಲ. ಉತ್ಸವದ ನಿಯಮಗಳನ್ನು ಗೌರವಿಸಿ ನಾನು ಅಲ್ಲಿಂದ ಹೊರಬಂದೆ. ಯಾವ ಚಿತ್ರೋತ್ಸವದಲ್ಲಿಯೂ ಆಸನಗಳನ್ನು ಮೀಸಲಿಡುವ ಪರಿಪಾಠ ಇಲ್ಲ. ಈ ಬಾರಿ ವಿಐಪಿ ವಿವಿಐಪಿ ಎಂಬ ಪಾಸುಗಳನ್ನು ನೀಡಿಲ್ಲ. ಚಿತ್ರೋತ್ಸವದಲ್ಲಿ ಎಲ್ಲರೂ ಒಂದೇ. ಈ ಕುರಿತು ಉತ್ಸವಕ್ಕೂ ಮೊದಲೇ ತಿಳಿಸಲಾಗಿತ್ತು. ಚಲನಚಿತ್ರ ಆಯ್ಕೆ ಸಮಿತಿ ಬಹುತೇಕ ಸೆನ್ಸಾರ್ ಪ್ರಮಾಣಪತ್ರವಿರುವ ಚಿತ್ರಗಳನ್ನೇ ಪ್ರದರ್ಶಿಸುತ್ತಿದೆ' ಎಂದರು.

ತಪ್ಪು ಮಾಡಿಲ್ಲ: ನಿರ್ದೇಶಕರ ಕ್ಷಮೆ ಯಾಚಿಸುವಿರಾ ಎಂಬ ಪ್ರಶ್ನೆಗೆ ತಾರಾ, `ಅಂತಹ ತಪ್ಪನ್ನು ನಾನು ಮಾಡಿಲ್ಲ' ಎಂದರು. `ಗಿರೀಶ್ ಕಾಸರವಳ್ಳಿ, ಎಂ.ಎಸ್. ಸತ್ಯು ಅವರಂತಹ ದೊಡ್ಡ ನಿರ್ದೇಶಕರು ಕೂಡ ಸರತಿಯಲ್ಲೇ ನಿಂತು ಸಿನಿಮಾ ನೋಡಿದ್ದಾರೆ. ಸ್ಥಳಾವಕಾಶ ದೊರೆಯದಿದ್ದಾಗ ಅವರಿಂದ ಆಕ್ಷೇಪ ವ್ಯಕ್ತವಾಗಿಲ್ಲ. ಚಿತ್ರರಂಗದವರೂ ಸೇರಿಕೊಂಡಂತೆ ಎಲ್ಲರಿಗೂ ಚಿತ್ರೋತ್ಸವ ಸೇರಿದೆ ಎಂದು ನಾನು ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ಶಿವಮಣಿ ತಿರುಚಿದ್ದಾರೆ. ಇಷ್ಟಾಗಿಯೂ ಅವರು ಕ್ಷಮೆ ಬಯಸುವುದಾದರೆ ನನ್ನ ಅಭ್ಯಂತರ ಇಲ್ಲ. ನಾನು ಕೂಡ ಚಿತ್ರರಂಗದಿಂದಲೇ ಬಂದವಳು. ನಿರ್ದೇಶಕರನ್ನು ತಂದೆ ಸಮಾನ ಎಂದು ತಿಳಿದವಳು' ಎಂದು ಹೇಳಿದರು.

ಗೊಂದಲ: ಈ ಮಧ್ಯೆ ಪ್ರೇಕ್ಷಕರಿಗೆ ಪ್ರವೇಶಾವಕಾಶ ಕಲ್ಪಿಸುವ ಸಂಬಂಧ ಮಂಗಳವಾರವೂ ಗೊಂದಲ ಮುಂದುವರಿದಿತ್ತು. ಮಾಲ್ ಒಂದರಲ್ಲಿ ಮಧ್ಯಾಹ್ನ 3.30ಕ್ಕೆ `ದಿ ಸಿಟಿ ಆಫ್ ಲೈಫ್ ಅಂಡ್ ಡೆತ್' ಚಲನಚಿತ್ರ ಪ್ರದರ್ಶನ ಏರ್ಪಾಡಾಗಿತ್ತು. ಈ ಸಂದರ್ಭದಲ್ಲಿ ಸ್ಥಳಾವಕಾಶ ಕಲ್ಪಿಸುವ ಸಂಬಂಧ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕೆಲವು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.

`ಮಾಲ್‌ನ ಚಿತ್ರಮಂದಿರಗಳಲ್ಲಿ ನಾಲ್ಕು ಪ್ರವೇಶದ್ವಾರಗಳಿವೆ. ಅವುಗಳಲ್ಲಿ ಎರಡರಲ್ಲಿ ಮಾತ್ರ ಪಾಸು ಪಡೆದವರಿಗೆ ಪ್ರವೇಶ ಕಲ್ಪಿಸಲಾಗಿದೆ. ಉಳಿದ ಎರಡು ದ್ವಾರಗಳಿಂದ ಸಂಘಟಕರು ತಮ್ಮ ಪರಿಚಯಸ್ಥರಿಗೆ, ಮಾಲ್ ಜತೆ ಸಂಪರ್ಕ ಹೊಂದಿರುವವರಿಗೆ ಪ್ರವೇಶ ಕಲ್ಪಿಸುತ್ತಾರೆ. ಸ್ವತಃ ಫೊನ್ ಕರೆ ಮಾಡಿ ಚಿತ್ರ ವೀಕ್ಷಣೆಗೆ ಆಹ್ವಾನಿಸುತ್ತಾರೆ' ಎಂದು ಸಿನಿಮಾ ವೀಕ್ಷಣೆಗೆ ಬಂದಿದ್ದ ಪ್ರಭು ಅಸಮಾಧಾನ ತೋಡಿಕೊಂಡರು.

`ಮುಂದಿನ ಎರಡು ಸಾಲುಗಳನ್ನು ಹಿರಿಯ ನಾಗರಿಕರಿಗೆ ಹಾಗೂ ಚಿತ್ರರಂಗದವರಿಗೆ ಎಂದು ಖಾಲಿ ಬಿಟ್ಟಿರುತ್ತಾರೆ. ಅಲ್ಲಿ ಆ ಪಾಸು ಪಡೆದವರು ಕೂರದಿದ್ದರೂ ಸೀಟುಗಳು ಖಾಲಿಯೇ ಉಳದಿರುತ್ತವೆ. ಆದರೆ ಹೊರಗೆ ಮಾತ್ರ ಚಿತ್ರ ವೀಕ್ಷಿಸಲು ಬಂದವರಿಗೆ ಮಾತ್ರ ಮುಲಾಜಿಲ್ಲದೆ ಪ್ರವೇಶ ನಿರಾಕರಿಸಲಾಗುತ್ತದೆ. ಮಾಲ್‌ನ ಚಿತ್ರಮಂದಿರಗಳಲ್ಲಿ ಕನಿಷ್ಠ ನಿಂತು ಚಲನಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಬೇಕು' ಎಂದು ಹೆಸರು ಹೇಳಲು ಇಚ್ಛಿಸದ ಪ್ರೇಕ್ಷಕರೊಬ್ಬರು ತಿಳಸಿದರು.

ಮೀಸಲಿಡಿ: ಗಣ್ಯರು ಸರತಿ ಸಾಲಿನಲ್ಲಿ ನಿಂತು ಸಿನಿಮಾ ವೀಕ್ಷಿಸುವುದು ಕಷ್ಟ. ನಗರದ ಬಾದಾಮಿ ಹೌಸ್‌ನಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಚಿತ್ರರಂಗದ ಗಣ್ಯರು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಪ್ರದರ್ಶನ ಏರ್ಪಡಿಸಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಸೀಮಿತ ಆಸನಗಳನ್ನು ಹೊಂದಿರುವ ಅದು ವಿಶೇಷ ಪ್ರದರ್ಶನಕ್ಕೆ ಅನುಕೂಲಕರವಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT