ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಇಸಿ: ಭಾರತದ ಆಕ್ಷೇಪಕ್ಕೆ ಟೀಕೆ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಐಎಎನ್‌ಎಸ್‌): ಸುಮಾರು ₹28 ಸಾವಿರ ಕೋಟಿ ವೆಚ್ಚದ ಚೀನಾ–ಪಾಕ್‌ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಒಪ್ಪಂದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿರುವುದನ್ನು ಪಾಕಿಸ್ತಾನ ಟೀಕಿಸಿದೆ.

‘ಸಿಪಿಇಸಿಗೆ ಭಾರತದ ಪ್ರತಿಕ್ರಿಯೆ ಮತ್ತು ಆಕ್ಷೇಪ ಅದರ ನೈಜ ಮುಖವನ್ನು ಜಗತ್ತಿಗೆ ತೆರೆದಿಟ್ಟಿದೆ’ ಎಂದು ಟೀಕಿಸಿದ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್‌ ಅವರು, ‘ಇದು ಪಾಕಿಸ್ತಾನದ ಏಳಿಗೆಯನ್ನು ನೋಡಲು ಈಗಿನ ಭಾರತೀಯ ನಾಯಕತ್ವ ಇಷ್ಟಪಡುವುದಿಲ್ಲ ಎಂಬುದಕ್ಕೆ  ಸ್ಪಷ್ಟ ಪುರಾವೆ.  ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಅವರು ಒಪ್ಪಿಕೊಳ್ಳುವುದಿಲ್ಲ ಎಂಬುದೂ ಸ್ಪಷ್ಟವಾಗಿದೆ’ ಎಂದು ಹೇಳಿದ್ದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

‘ಸಿಪಿಇಸಿ ಪಾಕ್ ಮತ್ತು ಚೀನಾ ನಾಯಕರು ತಮ್ಮ ಜನರ ಪ್ರಯೋಜನ ಮತ್ತು ಶಾಂತಿ, ಸಮೃದ್ಧಿ ಹಾಗೂ ಪ್ರದೇಶದ ಸಾಮಾಜಿಕ–ಆರ್ಥಿಕ ಪ್ರಗತಿಗಾಗಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯ ಪ್ರಣಾಳಿಕೆಯಾಗಿದೆ’ ಎಂದು ಚೌಧರಿ ಹೇಳಿದ್ದಾರೆ.

‘ಈ ಯೋಜನೆಯ ವಿರೋಧವು ಈ ಪ್ರದೇಶದ ಭವಿಷ್ಯದ ವಿರೋಧವೂ ಆಗಿದೆ. ಇದನ್ನು ದೃಢ ಸಂಕಲ್ಪ ಮತ್ತು ಸಾಂಪ್ರದಾಯಿಕ ಸ್ನೇಹ ಬಾಂಧವ್ಯ, ನಂಬಿಕೆ ಹಾಗೂ ಉಭಯ ದೇಶಗಳ ಜನರು ಅನುಭವಿಸುತ್ತಿರುವ ಸಾಮಾನ್ಯ ಆಸಕ್ತಿಯ ವಿಷಯಗಳ ತಳಹದಿಯಲ್ಲಿ ಎದುರಿಸುತ್ತೇವೆ’ ಎಂದಿದ್ದಾರೆ.

‘ಈ ಮಹತ್ವದ ಬೃಹತ್ ಯೋಜನೆಗೆ ಅನಗತ್ಯ ಆಕ್ಷೇಪಣೆ ಎತ್ತುವ ಬದಲು, ತಮ್ಮದೇ ಜನರ ಬೇಡಿಕೆಗಳನ್ನು ಈಡೇರಿಸುವ ಮತ್ತು ಬಡತನ, ಹಸಿವು, ಕಾಯಿಲೆ ಹಾಗೂ ಸಾಮಾಜಿಕ–ಆರ್ಥಿಕ ಹಿಂದುಳಿದಿರುವಿಕೆಯಂತಹ ಪಾರಂಪರಿಕ ಸಮಸ್ಯೆಗಳಿಂದ ಜನರನ್ನು ಹೊರತರುವ ಕೆಲಸದತ್ತ ಗಮನ ಹರಿಸಲಿ’ ಎಂದು ಅವರು ಕಟುವಾಗಿ ಹೇಳಿದ್ದಾರೆ.

ಆಕ್ಷೇಪ ತಿರಸ್ಕರಿಸಿದ ಚೀನಾ
‘ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಆರ್ಥಿಕ ಕಾರಿಡಾರ್‌ ಬಗ್ಗೆ ಭಾರತ ಮಾಡಿರುವ ಆಕ್ಷೇಪವನ್ನು ಚೀನಾ ತಿರಸ್ಕರಿಸಿದೆ’ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌  ಕ್ವೆಟ್ಟಾದಲ್ಲಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಿದ್ದರು. ಸುಮಾರು ₹28 ಸಾವಿರ ಕೋಟಿ  ಮೊತ್ತದ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಒಪ್ಪಂದಕ್ಕೆ ಚೀನಾ ಮತ್ತು ಪಾಕಿಸ್ತಾನ ಏಪ್ರಿಲ್‌ನಲ್ಲಿ ಸಹಿ ಹಾಕಿದ್ದವು.

ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನದ ಗ್ವದಾರ್‌ನಲ್ಲಿರುವ ಅರೇಬಿಯನ್ ಸಮುದ್ರದಾಳದ ಬಂದರಿಗೆ ಚೀನಾ ಪಶ್ಚಿಮ ಭಾಗವನ್ನು ಸಂಪರ್ಕಿಸುವ ಒಪ್ಪಂದ ಇದಾಗಿದೆ. ‘ಈ ಯೋಜನೆಯು ಯಾವುದೇ ಮೂರನೇ ರಾಷ್ಟ್ರವನ್ನು ಗುರಿಯಾಗಿಸಿಲ್ಲ’ ಎಂದು ಚೀನಾ ಸೋಮವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT