ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಐಪ್ರಕಟಣೆಗೆ ನಿರ್ಧಾರ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಿಲ್ಲರೆ ಸರಕುಗಳ ಬೆಲೆಏರಿಕೆ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮ ಸ್ಥಿತಿಯಲ್ಲಿ ಪ್ರತಿಫಲಿಸುವ ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ) ತಿಂಗಳಿಗೊಮ್ಮೆ ಪ್ರಕಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹಣದುಬ್ಬರ ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೂಡ ಈ ಹೊಸ ಸೂಚ್ಯಂಕ ನೆರವಾಗಲಿದೆ. ಹೊಸ `ಸಿಪಿಐ~ ಜಾರಿಗೆ ಬರುತ್ತಿದ್ದಂತೆ, ಸದ್ಯಕ್ಕೆ ಬಳಕೆಯಲ್ಲಿ ಇರುವ, ಸಗಟು ಬೆಲೆ ಸೂಚ್ಯಂಕವು (ಡಬ್ಲ್ಯುಪಿಐ) ಅಸ್ತಿತ್ವ ಕಳೆದುಕೊಳ್ಳಲಿದೆ. ಕಾರ್ಮಿಕ ಇಲಾಖೆ ಸಿದ್ಧಪಡಿಸುವ ಕೃಷಿ ಕಾರ್ಮಿಕರು, ಗ್ರಾಮೀಣ ಕಾರ್ಮಿಕರು ಮತ್ತು ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಬೆಲೆ ಸೂಚ್ಯಂಕದ ಜೊತೆ ಹೆಚ್ಚುವರಿಯಾಗಿ ಮಾಸಿಕ `ಸಿಪಿಐ~ ಪ್ರಕಟಿಸಲಾಗುವುದು.

ಹೊಸ ಅಂಕಿ ಅಂಶಗಳನ್ನು, ಅಂಕಿ ಅಂಶ ಮತ್ತು  ಕಾರ್ಯಕ್ರಮ ಜಾರಿ ಸಚಿವಾಲಯ ಸಿದ್ಧಪಡಿಸಲಿದೆ. ಈ ಅಂಕಿ ಅಂಶಗಳನ್ನು ಸರಕುಗಳ ಬಳಕೆ ಆಧರಿಸಿ ಸಿದ್ಧಪಡಿಸುವುದರಿಂದ, ಗ್ರಾಹಕರ ಮೇಲೆ ಆಗುವ ಪರಿಣಾಮಗಳ ವಾಸ್ತವ ಚಿತ್ರಣ ದೊರೆಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಸರ್ಕಾರದ ನೀತಿ ನಿರ್ಧಾರ ಮತ್ತು `ಆರ್‌ಬಿಐ~ನ ಹಣಕಾಸು ನೀತಿಗಳನ್ನು  ನಿರ್ಧರಿಸುವುದರ ಮೇಲೆ `ಡಬ್ಲ್ಯುಪಿಐ~ ಬೀರುತ್ತಿದ್ದ ಪ್ರಭಾವ ತಗ್ಗಿಸಲು `ಸಿಪಿಐ~ಗೆ ಕೆಲ ವರ್ಷಗಳೇ ಬೇಕಾಗಬಹುದು ಎಂದೂ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

`ಡಬ್ಲ್ಯುಪಿಐ~, ಜೀವನ ವೆಚ್ಚವನ್ನು ದುರ್ಬಲವಾಗಿ ಪ್ರತಿಫಲಿಸುತ್ತಿತ್ತು. ಗ್ರಾಹಕರು ಸರಕು ಖರೀದಿಸುವ ಬೆಲೆಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತಿರಲಿಲ್ಲ. ಸರಕುಗಳ ಬಳಕೆಯಲ್ಲಿನ ಬೆಲೆ ಬದಲಾವಣೆ ಬದಲಿಗೆ, ಉತ್ಪಾದನಾ ವಲಯದ ಬೆಲೆ ಪರಿಸ್ಥಿತಿಯನ್ನು ಇಲ್ಲಿ ಪರಿಗಣಿಸಲಾಗುತ್ತಿತ್ತು. ಹೀಗಾಗಿ ಸ್ಪಷ್ಟ ಚಿತ್ರಣ ದೊರೆಯುತ್ತಿರಲಿಲ್ಲ. ಸದ್ಯಕ್ಕೆ  ಜಾಗತಿಕವಾಗಿಯೂ `ಸಿಪಿಐ~ ವ್ಯವಸ್ಥೆಯೇ ಬಳಕೆಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT