ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪ್ಪೆ ಜಗಿಯುವ ಕೆಲಸ

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕೆ.ವಿ.ಅಕ್ಷರ ಅವರ ಲೇಖನಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ಹಾಗೂ ಯು.ಆರ್.ಅನಂತಮೂರ್ತಿ ಅವರು ಶಿವಮೊಗ್ಗದಲ್ಲಿ ಈಚೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಡಿದ ಮಾತುಗಳನ್ನೂ ಗಮನದಲ್ಲಿಟ್ಟುಕೊಂಡು ಈ ಟಿಪ್ಪಣಿಗಳು:

ಸಂತಾಪ ಸೂಚನೆ
ಒಂದೆರಡು ಹೊರತುಪಡಿಸಿದಂತೆ, ಎಲ್ಲಾ ಪ್ರತಿಕ್ರಿಯೆಗಳು ಅಕ್ಷರ ಈ ರೀತಿಯಾಗಿ ಬರೆದಿದ್ದಾರೆಂದರೆ ಅವರ ವಿಚಾರವಂತಿಕೆ ದಿವಾಳಿಯ ಹಂತ ತಲುಪಿದೆ ಎಂದು ಸಂತಾಪ ಸೂಚನೆ ಮಾಡಿದಂತಿವೆ. ಕೆಲವರು ಇದನ್ನು ಪ್ರೀತಿಯಿಂದ ಮತ್ತೆ ಕೆಲವರು ಸಿಟ್ಟಿನಿಂದ ಮಾಡಿದ್ದಾರೆ.

ಅನಂತಮೂರ್ತಿ ಅವರು ಪ್ರೀತಿಯಿಂದ ಹೇಳುವವರ ಸಾಲಿಗೆ ಸೇರುತ್ತಾರೆ. ‘ಅಕ್ಷರ ಸಂಕಷ್ಟದಲ್ಲಿ ಹೀಗೆ ಬರೆದಿದ್ದಾನೆ’ ಎನ್ನುವುದು ಅವರ ಮಾತು. ‘ನಮ್ಮವನೇ, ಪಾಪ ಏನೋ ಗೊತ್ತಾಗದೆ ಬರೆದುಬಿಟ್ಟಿದ್ದಾನೆ, ಅವನನನ್ನು ನಾನು ತಿದ್ದುತ್ತೇನೆ’ ಎಂಬ ಧೋರಣೆ ಅವರ ಪ್ರತಿಕ್ರಿಯೆಯಲ್ಲಿ ಕಾಣಿಸುತ್ತದೆ. ಅಪರೂಪದ, ಹೊಸದೊಂದು ಓದಿನಗತ್ಯದ, ಚಿಂತನಶೀಲವಾಗಿರುವ (ವೈದೇಹಿಯವರ ಅಭಿಪ್ರಾಯದಂತೆ) ಇಂತಹ ಕೆಲವು ಲೇಖನಗಳು ಪ್ರಕಟವಾದಾಗ ಇಂಥ ಪ್ರತಿಕ್ರಿಯೆಗಳು ಅವನ್ನು ಹಗುರಗೊಳಿಸಿದಂತಾಗುತ್ತಲ್ಲದೆ- ಅದರ ಆಳವನ್ನು ಅವರೂ ತಿಳಿಯದಂತಾಗಿ, ತಿಳಿಯುವ ಪ್ರಯತ್ನದಲ್ಲಿರುವವರ ದಾರಿಯನ್ನೂ ಮುಚ್ಚಿಹಾಕುತ್ತದೆ.

ಬ್ರಾಹ್ಮಣಿಕೆಯ ಮರುಹುಟ್ಟು
ಎರಡನೆ ರೀತಿಯ ಪ್ರತಿಕ್ರಿಯೆ ಬ್ರಾಹ್ಮಣ್ಯಕ್ಕೆ ಸಂಬಂಧಿಸಿದ್ದು. ಇಂಥ ಪ್ರತಿಕ್ರಿಯೆಗಳಲ್ಲಿ ಅಕ್ಷರ ಸ್ವತಃ ಬ್ರಾಹ್ಮಣರಾಗಿದ್ದು, ಬ್ರಾಹ್ಮಣರು ಹುಟ್ಟುಹಾಕಿದ ಆಚರಣೆಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತೆ ಬ್ರಾಹ್ಮಣರ ಪ್ರಾಧಾನ್ಯವನ್ನು ಸಾಧಿಸುವುದಾಗಿದೆ ಎನ್ನುವ ಅನಿಸಿಕೆಯಿದೆ. ಆದರೆ, ಈ ಾಚರಣೆಯಲ್ಲಿ ಕೇವಲ ಬ್ರಾಹ್ಮಣರು ಭಾಗವಹಿಸದೆ ಜಾತಿ, ಮತ ಭೇದಗಳಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಇದನ್ನೂ ವೈದೇಹಿಯವರು ಗುರುತಿಸಿದ್ದಾರೆ. ಬ್ರಾಹ್ಮಣ್ಯದ ಪತ್ತೇದಾರಿಕೆಯ ಯಾರು ಕೂಡಾ ಈ ಆಚರಣೆಗೂ ಬ್ರಾಹ್ಮಣರಿಗೂ ಯಾವ ರೀತಿಯ ಸಂಬಂಧ ಎಂಬುದನ್ನು ನಿರ್ದಿಷ್ಟವಾಗಿ ತೋರಿಸುತ್ತಿಲ್ಲ. ಈ ಆಚರಣೆಯಿಂದ ಬ್ರಾಹ್ಮಣನ ಪ್ರಾಧಾನ್ಯ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ಈ ಎಲ್ಲ ಪ್ರತಿಕ್ರಿಯೆಗಳು, ಸರಳವಾಗಿ ಬ್ರಾಹ್ಮಣರೆಡೆಗೆ ಕೈ ತೋರಿಸುವ ಕಾರ್ಯವನ್ನಷ್ಟೇ ಮಾಡುತ್ತಿವೆ.

ವಸಾಹತು ಕಣ್ಣು
ಮಡೆಸ್ನಾನವು ಹುಟ್ಟಿನಿಂದ ಬರುವ ಅಸಮಾನತೆಯನ್ನು ಮುಂದುವರೆಸುತ್ತದೆ ಎನ್ನುವುದು ಮತ್ತೊಂದು ರೀತಿಯ ಪ್ರತಿಕ್ರಿಯೆ. ಆದರೆ, ಇತರೆ ಜಾತಿಗಳವರಂತೆಯೇ ಬ್ರಾಹ್ಮಣರೂ ಇತರೆ ಮೇಲ್ಜಾತಿಯವರೂ ಹೊರಳಾಡುವ ಸಂದರ್ಭದಲ್ಲಿ ಯಾರು ಯಾರನ್ನು ಶೋಷಿಸಲು ಸಾಧ್ಯ? ಇಲ್ಲಿ, ಹುಟ್ಟಿನ ಅಸಮಾನತೆಗೂ ಈ ಆಚರಣೆಗೂ ಇರುವ ಸಂಬಂಧವೇನು?

‘ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಲು ಶ್ರಮಿಸುತ್ತಿರುವವರ ಕುರಿತು ಅಕ್ಷರ ಮತ್ತು ಎಸ್.ಎನ್.ಬಾಲಗಂಗಾಧರ ಹಾಗೂ ಅವರ ಶಿಷ್ಯಂದಿರಲ್ಲಿ ತಿರಸ್ಕಾರವಿದೆ’ ಎನ್ನುವ ಆರೋಪವಿದೆಯಲ್ಲ, ಅದು ಅಕ್ಷರಶಃ ನಿಜ. ಅದಕ್ಕೆ ಕಾರಣಗಳಿಷ್ಟೇ; ಮೊದಲನೆಯದಾಗಿ, ನಮ್ಮ ಸಮಾಜವು ಹೇಗಿದೆ ಎಂಬುದನ್ನು ಭಾರತೀಯರ ಕಣ್ಣುಗಳಿಂದ ನೋಡಲು ಪ್ರಯತ್ನಿಸುವುದರ ಬದಲಾಗಿ ವಸಾಹತು ಸಂದರ್ಭದಲ್ಲಿ ಹೇಳಿದ ವೈಚಾರಿಕತೆಯನ್ನೇ ಇಂದೂ ಮುಂದುವರೆಸಿಕೊಂಡು ಬರುತ್ತಿರುವುದು. ಆ ವೈಚಾರಿಕತೆಯು ಭಾರತೀಯ ಆಚರಣೆಗಳನ್ನು ವ್ಯವಸ್ಥಿತ/ವೈಜ್ಞಾನಿಕವಾಗಿ ಅಧ್ಯಯನ ಮಾಡದಂತೆ ತಡೆಯುತ್ತಿರುವುದು. ಇಂತಹ ಇತಿಮಿತಿಗಳನ್ನು ಮೀರಿ ಅಕ್ಷರ ಮತ್ತು ಬಾಲಗಂಗಾಧರರು ನಮ್ಮ ಸಮಾಜ ಮತ್ತು ಸಂಸ್ಕೃತಿಯನ್ನು ನೈಜವಾಗಿ ಗ್ರಹಿಸಲು ಪ್ರಯತ್ನಿಸುತ್ತಿರುವುದೇ ನಮ್ಮಂತಹ ಯುವ ಸಂಶೋಧಕರಿಗೆ ಆಶಾದಾಯಕ ಬೆಳವಣಿಗೆಯಂತೆ ಕಾಣಿಸುತ್ತಿದೆ.
-ಟಿ.ಎಲ್.ಪ್ರವೀಣ್,ಸಂದೀಪ್ ಕುಮಾರ್ ಶೆಟ್ಟಿ, ಶಿವಮೊಗ್ಗ


ಅತಿ ಆತ್ಮವಿಶ್ವಾಸದ ಗ್ರಹಿಕೆ
‘ಹರಕೆ ಹರಾಜು’ ಬರಹ ಓದಿ ದಿಗ್ಭ್ರಮೆಯಾಯಿತು. ಬೌದ್ಧಿಕ ಹತಾರಗಳಿಂದ ಏನನ್ನಾದರೂ ವಿಶ್ಲೇಷಿಸಬಲ್ಲೆ ಎಂಬ ಅತಿಯಾದ ಆತ್ಮವಿಶ್ವಾಸ ಇಂಥ ಅರೆಬೆಂದ ಗ್ರಹಿಕೆಗೆ ಕಾರಣವಾಗಿದೆ. ಒಬ್ಬ ಮಹಿಳೆಯಾಗಿ ಈ ದೃಷ್ಟಿಕೋನ ನನ್ನನ್ನು ತುಂಬಾ ಆತಂಕಕ್ಕೊಳಗುಮಾಡುತ್ತದೆ. ‘ಇಂದಿನ ನಮ್ಮ ಕುಟುಂಬ ವ್ಯವಸ್ಥೆ, ಅದರೊಳಗೆ ಪೊರೆಯುವ ಪಾತ್ರವಾಗಿಯೇ ತನ್ನ ವ್ಯಕ್ತಿತ್ವ ವಿಕಾಸದ ಸಾಧ್ಯತೆಯನ್ನು ಅರಿಯದ ಹೆಣ್ಣುಮಗಳು ಅದನ್ನು ಮೀರಿ ಹೊರಬರದೇ ಇರುವುದಕ್ಕೆ ಇಂತಹ ಚಿಂತನೆಗಳೇ ಕಾರಣವಲ್ಲವೇ’ ಎಂಬ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿರುವ ಸಮಯದಲ್ಲಿ ಇಂತಹ ಪೂರ್ವಗ್ರಹವನ್ನು ದೃಢಪಡಿಸುವ ರೀತಿಯಲ್ಲಿ ಈ ಲೇಖನ ಇದೆ. ಬಹುಶಃ ಒಂದು ಸಂಗತಿ ನಮ್ಮನ್ನು ಕಾಡಬೇಕಾದರೆ, ಪ್ರಶ್ನೆ ಹುಟ್ಟಿಸಬೇಕಾದರೆ ಅಲ್ಲಿ ಹಿಂಸೆಯ ಆಯಾಮವಿರಲೇಬೇಕೇನೋ ಎಂಬಷ್ಟು
ಸಂವೇದನಾಶೂನ್ಯರಾಗುತ್ತಿದ್ದೇವೇನೋ ನಾವು. ತಣ್ಣಗಿನ ಕ್ರೌರ್ಯಗಳಾವುವೂ ನಮ್ಮನ್ನು ತಾಕುವುದೇ ಇಲ್ಲ. ಎಲ್ಲವನ್ನೂ ವೈಭವೀಕರಿಸಿ, ಸರ್ರಿಯಲಿಸ್ಟಿಕ್ ಆಗಿ ಹಿರಿದು ಮಾಡಿ ತೋರಿಸಿದರೆ ಮಾತ್ರ ಅದರ ಗಂಭೀರತೆ ತಟ್ಟುವುದು ಎನ್ನುವ ಬಗೆಯಲ್ಲೇ ನಮ್ಮ ಮಾಧ್ಯಮಗಳು ಪ್ರೊಜೆಕ್ಟ್ ಮಾಡುತ್ತಿವೆ. ಈ ಗದ್ದಲದಲ್ಲಿ ಅತ್ಯಂತ ಸೂಕ್ಷ್ಮವಾದ, ಸಣ್ಣ ಎಳೆಯಂತೆ ಹರಡಿದ್ದೂ ನಮ್ಮ ಇಡೀ ಗ್ರಹಿಕೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಸಂಗತಿಗಳು ತುಂಬಾ ಹಗುರವಾದವು ಎಂದು ಭಾಸವಾಗುತ್ತಿರುವುದು ನಮ್ಮ ಕಾಲದ ದೊಡ್ಡ ಮಿತಿ ಎಂದೇ ಅನಿಸುತ್ತದೆ.
  - ಪಿ.ಭಾರತೀ ದೇವಿ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT