ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ ಜನಪರ ಸಂಘಟನೆಗಳ ಆಗ್ರಹ

Last Updated 18 ಜನವರಿ 2012, 10:20 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಆಬಲವಾಡಿಯಲ್ಲಿ ನಡೆದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸುವರ್ಣಾಳ ಸಾವಿಗೆ ಕಾರಣದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು, ನಿಷ್ಪಕ್ಷಪಾತ ತನಿಖೆ ಆಗಲು ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿವಿಧ ಜನಪರ ಸಂಘಟನೆಗಳು ಮಂಗಳವಾರ ಜಾಥಾ, ಪ್ರತಿಭಟನೆ ನಡೆಸಿದವು.

ಪ್ರಗತಿಪರ ಸಂಘಟನೆಗಳು ಮತ್ತು ಜನವಾದಿ ಮಹಿಳಾ ಸಂಘಟನೆಯು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿಯನ್ನು ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿ ಬಲಪ್ರದರ್ಶನ ನಡೆಸಿದವು.

ಸ್ಪಂದನಾ, ವಿಮೋಚನಾ ಮಹಿಳಾ ಸಂಘಟನೆಗಳ ಪ್ರತಿಭಟನೆ: ಸ್ಪಂದನಾ, ಮಹಿಳಾ ಮುನ್ನಡೆ, ವಿಮೋಚನಾ ಸಂಘಟನೆ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಹೆದ್ದಾರಿ ಮೂಲಕ ಪ್ರತಿಭಟನಾ ಜಾಥಾ ತೆರಳಿ ಸಿಬಿಐ ತನಿಕೆಗೆ ಆಗ್ರಹಪಡಿಸಿ ಜಿಲ್ಲಾಧಿಕಾಗಳ ಕಚೇರಿಗೆ ಮನವಿ ಸಲ್ಲಿಸಿದವು.

ಸುವರ್ಣಾಳನ್ನು ಆಕೆಯ ಮನೆಯವರೇ ಸಾರ್ವಜನಿಕವಾಗಿ ನೇಣು ಹಾಕಿದ್ದಾರೆ. ಪ್ರಕರಣ ಆಗಲೇ ಪೊಲೀಸರ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಂಡಿಲ್ಲದೇ ಇರುವುದು ಖಂಡನೀಯ. ಈಗ ಪ್ರಕರಣ ಬೆಳಕಿಗೆ ಬಂದ ಮೇಲೂ  ಪೊಲೀಸರು ಮೌನವಾಗಿ ಇರುವುದು ಶಂಖೆಗೆ ಆಸ್ಪದವಾಗಿದೆ ಎಂದು ಎಚ್ಚರಿಸಿದರು.

ಕರ್ತವ್ಯ ಲೋಪ ತೋರಿದ ಪೊಲೀಸರ ಮೇಲೂ ಕ್ರಮ ಕೈಗೊಂಡಿಲ್ಲ. ಇನ್ನೊಂದೆಡೆ, ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಹೀಗೆ ಮಾಡಲಾಗುತ್ತಿದೆ, ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಅನುಮಾನವು ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.

 ವ್ಯವಸ್ಥೆಯ, ಸಾಂಪ್ರಾದಾಯಿಕ ಚೌಕಟ್ಟು ಮೀರುವ, ಸ್ವಾಭಿಮಾನಿ ಕೆಲಸಕ್ಕೆ ಮಹಿಳೆಯರು ಮುಂದಾದರೆ ಕಿರುಕುಳ, ಹತ್ಯೆ, ಆ್ಯಸಿಡ್ ದಾಳಿ ನಡೆಯಲಿದೆ. ಇದನು ತಪ್ಪಿಸಲು ಅಗತ್ಯಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆ ಎಂದು ಪ್ರತಿಪಾದಿಸಿದರು.

ಪ್ರತಿಭಟನೆಯಲ್ಲಿ ಸುನಾಂದಾ ಜಯರಾಂ, ನಿರ್ಮಲಾ ಚಿಕ್ಕೇಗೌಡ, ಜನಶಕ್ತಿ ಸಂಘಟನೆಯ ಕೃಷ್ಣಪ್ರಕಾಶ್, ಲಕ್ಷ್ಮಣ, ಗೀತಾಂಜಲಿ, ಸೌಮ್ಯ, ವಿಕಸನ ಸಂಘಟನೆಯ ಮಂಜುಳಾ, ನಾಗರೇವಕ್ಕ ಮತ್ತಿತರರು ಇದ್ದರು.

ಜನವಾದಿ ಮಹಿಳಾ ಸಂಘಟನೆ: ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಂಟಿಯಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯ ಮಂಚೂಣಿಯಲ್ಲಿ ದೇವಿ, ಮತ್ತಿತರರು ಇದ್ದರು. ಸುವರ್ಣಾಳ ಮರ್ಯಾದಾ ಹತ್ಯೆ ಪ್ರಕಣದಲ್ಲಿಕರ್ತವ್ಯ ಲೋಪ ತೋರಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು, ಈ ಘಟನೆಯ ಬಳಿಕ ನೊಂದಿರುವ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮನವಿ ನೀಡಲಾಯಿತು.

ಅಂತರ್ಜಾತಿ ಮದುವೆಗೆ ಮುಂದಾದುದೇ ಯುವತಿಯ ಹತ್ಯೆಗೆ ಕಾರಣವಾಗಿದೆ. ಯುವತಿಯ ಹತ್ಯೆಯ ಜೊತೆಗೆ, ಪ್ರೀತಿಸಿದ ಯುವಕನ ಕುಟುಂಬದ ಮೇಲೂದೌರ್ಜನ್ಯ ನಡೆದಿರುವುದು ಖಂಡನೀಯ. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT