ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಬಲೆಗೆ ಸುಪ್ರೀಂ ಕೋರ್ಟ್ ವಕೀಲರು

Last Updated 22 ಡಿಸೆಂಬರ್ 2010, 10:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾನೂನು ಮಹಾವಿದ್ಯಾಲಯವೊಂದಕ್ಕೆ ಭಾರತೀಯ ವಕೀಲ ಮಂಡಳಿಯ (ಬಿಸಿಐ) ಮನ್ನಣೆ ಹಾಗೂ ಸಂಯೋಜನೆ ದೊರಕಿಸುವ ಸಂಬಂಧ ಲಂಚ ಪಡೆದ ಆರೋಪದ ಮೇರೆಗೆ ಸುಪ್ರೀಂ ಕೋರ್ಟಿನ ಇಬ್ಬರು ಹಿರಿಯ ವಕೀಲರನ್ನು ಸಿಬಿಐ ಬಂಧಿಸಿದೆ.

ರಾಜೇಂದ್ರ ಸಿಂಗ್ ರಾಣಾ ಹಾಗೂ ಮನೀಶ್ ತ್ಯಾಗಿ ಎಂಬ ವಕೀಲರನ್ನು ಸೋಮವಾರ ಉತ್ತರ ದೆಹಲಿಯ ಪೀತಂಪುರದಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಮಂಗಳವಾರ ತಿಳಿಸಿವೆ.

ರಾಣಾ ಮತ್ತು ತ್ಯಾಗಿ ಅವರ ನಡುವಿನ ದೂರವಾಣಿ ಸಂಭಾಷಣೆ ಆಧರಿಸಿ ಸಿಬಿಐ ಈ ಕಾರ್ಯಾಚರಣೆ ನಡೆಸಿದೆ. ತ್ಯಾಗಿ ಅವರು ಕಾನೂನು ಕಾಲೇಜಿನ ಕೆಲವು ಕಡತಗಳೊಂದಿಗೆ ರಾಣಾ ಅವರ ಪೀತಂಪುರದ ನಿವಾಸಕ್ಕೆ ಸೋಮವಾರ ಸಂಜೆ ಆಗಮಿಸಿದರು. ಆಗ ಇಬ್ಬರನ್ನೂ ಬಂಧಿಸಲಾಯಿತು ಅಂತೆಯೇ ಇದೇ ವೇಳೆ ರಾಣಾ ಅವರ ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ನಗದನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ವಕೀಲರ ಕಚೇರಿ ಹಾಗೂ ಇವರಿಗೆ ಸಂಬಂಧಿಸಿದ ಪ್ರಮುಖವಾದ ಏಳು ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ಗಾಜಿಯಾಬಾದ್‌ನ ಕಾನೂನು ಮಹಾವಿದ್ಯಾಲಯಕ್ಕೆ ಭಾರತೀಯ ವಕೀಲ ಮಂಡಳಿಯ ಮನ್ನಣೆ ಹಾಗೂ ಸಂಯೋಜನೆ ದೊರಕಿಸಲು ಈ ವಕೀಲರಿಬ್ಬರೂ ಲಂಚ ಪಡೆದಿದ್ದಾರೆ ಎಂಬ ದೂರನ್ನು ಆಧರಿಸಿ ಸಿಬಿಐ ಇವರನ್ನು ಬಂಧಿಸಲು ಜಾಲ ಬೀಸಿತ್ತು.

ರಾಣಾ ಅವರು 1998ರಲ್ಲಿ ದೆಹಲಿಯ ರಾಜ್ಯ ವಕೀಲರ ಮಂಡಳಿಗೆ ಆಯ್ಕೆಯಾದರು. ನಂತರ 2000ದಲ್ಲಿ ಅದರ ಉಪಾಧ್ಯಕ್ಷರೂ ಆದರು. ತದನಂತರ 2010ರಲ್ಲಿ ಭಾರತೀಯ ವಕೀಲ ಮಂಡಳಿಗೂ ಇವರು ಆಯ್ಕೆಯಾದರು. ಭಾರತೀಯ ವಕೀಲ ಮಂಡಳಿಯ ವೆಬ್‌ಸೈಟ್ ಮಾಹಿತಿ ಅನುಸಾರ ತ್ಯಾಗಿ ಅವರು ಸದ್ಯ ಜಾಗತಿಕ ಕಾನೂನು ಮಹಾವಿದ್ಯಾಲಯಗಳ ಸಲಹಾ ಸಮಿತಿ ಸದಸ್ಯರೂ ಆಗಿದ್ದಾರೆ.

ವಿಚಾರಣೆಗೆ ಅನುಮತಿ: ಬಂಧಿತ ವಕೀಲರಾದ ರಾಣಾ ಮತ್ತು ತ್ಯಾಗಿ ಅವರನ್ನು ಸಿಬಿಐ ಮುಕ್ತ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇವರ ಬಂಧನದ ಅವಧಿಯನ್ನು ಡಿ.23ರವರೆಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT