ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಸ್ವತಂತ್ರವಾಗಿರಲಿ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

`ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು, ಅದರ ನಿರ್ದೇಶಕರ ಆಯ್ಕೆಯನ್ನು ಲೋಕಸಭೆಯ ವಿರೋಧಪಕ್ಷದ ನಾಯಕರೂ ಸದಸ್ಯರಾಗಿರುವ ಪ್ರತ್ಯೇಕ ನೇಮಕಾತಿ ಸಮಿತಿ ನಡೆಸಬೇಕು ಮತ್ತು ನಿರ್ದೇಶಕರ ಅಧಿಕಾರಾವಧಿ ಕಡ್ಡಾಯ ಐದು ವರ್ಷಗಳಿರಬೇಕು' ಎಂದು ಸಿಬಿಐ ನಿವೃತ್ತ ನಿರ್ದೇಶಕ ಎ.ಪಿ.ಸಿಂಗ್ ನೀಡಿರುವ ಸಲಹೆಗಳಲ್ಲಿ ಯಾವುದೂ ಹೊಸದಲ್ಲ.

ಸಿಬಿಐ ಅಸ್ತಿತ್ವಕ್ಕೆ ಬಂದ ನಂತರದ 49 ವರ್ಷಗಳ ಅವಧಿಯಲ್ಲಿ  ಇಂತಹ ಸಲಹೆಗಳು ಹಲವಾರು ಬಾರಿ ಚರ್ಚೆಗೀಡಾಗಿವೆ. ಸಿಬಿಐ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಡ್ಡಿಯಾಗಿರುವುದು ರಾಜಕೀಯ ಮಧ್ಯಪ್ರವೇಶ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಸಿಬಿಐ ಇತಿಹಾಸಕ್ಕೆ ಕಣ್ಣುಹಾಯಿಸಿದರೆ ಇಲ್ಲಿಯವರೆಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿರುವುದನ್ನು ಕಾಣಬಹುದು. `ಕಾರ‌್ಯಾಂಗದ ನಿಯಂತ್ರಣದಲ್ಲಿರುವ ಸಿಬಿಐ ಗಣ್ಯರು ಮತ್ತು ಪ್ರಭಾವಿಗಳ ಬಗ್ಗೆ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯ ಇಲ್ಲ.

ಆದ್ದರಿಂದ ಕೇಂದ್ರ ಜಾಗೃತ ಆಯೋಗ (ಸಿವಿಸಿ)ಕ್ಕೆ ಶಾಸನ ಬದ್ಧ ಸ್ಥಾನಮಾನ ನೀಡಿ ಸಿಬಿಐ ಉಸ್ತುವಾರಿಯನ್ನು ಅದಕ್ಕೆ ಒಪ್ಪಿಸಬೇಕು' ಎಂದು ಸುಪ್ರೀಂ ಕೋರ್ಟ್ , ಜೈನ್ ಹವಾಲಾ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೇಳಿತ್ತು. ಈ ನಿರ್ದೇಶನವೂ ಸೇರಿದಂತೆ ಸಿಬಿಐ ಸುಧಾರಣೆಗಾಗಿ ಸುಪ್ರೀಂಕೋರ್ಟ್ ನೀಡಿರುವ ಯಾವ ನಿರ್ದೇಶನಗಳ ಪಾಲನೆಯೂ ಆಗಿಲ್ಲ.

ವಿನೀತ್‌ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿದ್ದ `ಜಂಟಿ ಕಾರ‌್ಯದರ್ಶಿಗಳಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಸಿಬಿಐ ಕ್ರಮ ಕೈಗೊಳ್ಳುವ ಮುನ್ನ ಸರ್ಕಾರದ ಪೂರ್ವಾನುಮತಿ ಅಗತ್ಯ' ಎಂಬ `ಏಕ ನಿರ್ದೇಶನ'ಕ್ಕೆ ಮರಳಿ ಜೀವ ತುಂಬಿದ್ದು ಎನ್‌ಡಿಎ ಸರ್ಕಾರ. ಈಗಿನ ವ್ಯವಸ್ಥೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕೂಡಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ. 

ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯಲ್ಲಿ `ವಿಶೇಷ ರಜಾ ಅರ್ಜಿ'ಗೆ (ಎಸ್‌ಎಲ್‌ಪಿ) ಮಹತ್ವದ ಪಾತ್ರ ಇದೆ. ಹೈಕೋರ್ಟ್ ಇಲ್ಲವೇ ನ್ಯಾಯಮಂಡಳಿಯ ತೀರ್ಪಿನ ವಿರುದ್ಧದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಬೇಕೆಂದು ಕಕ್ಷಿದಾರರು ಕೋರುವ  `ವಿಶೇಷ ರಜಾ ಅರ್ಜಿ(ಎಸ್‌ಎಲ್‌ಪಿ) ಸಲ್ಲಿಸಲು ಕೂಡಾ ಕೇಂದ್ರ ಕಾನೂನು ಇಲಾಖೆಯ ಅನುಮತಿ ಅಗತ್ಯ.

ಈ ರೀತಿ ಸಿಬಿಐ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿದೆ.  ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ಆಡಳಿತ ಪಕ್ಷದವರಿಗೆ ಮಾತ್ರವಲ್ಲ, ವಿರೋಧ ಪಕ್ಷಗಳಿಗೂ ಬೇಡ. ಸ್ವತಂತ್ರ ಸಿಬಿಐ ಎರಡೂ ವರ್ಗಗಳ ರಾಜಕಾರಣಿಗಳಿಗೆ ಅಪಾಯಕಾರಿಯಾಗಬಹುದೆಂಬ  ಭೀತಿ ಇದಕ್ಕೆ ಕಾರಣ.

ಆದ್ದರಿಂದ ಆಡಳಿತ ಪಕ್ಷ  ಇದನ್ನು ದುರ್ಬಳಕೆ ಮಾಡುವ ಮೂಲಕ ಮತ್ತು ವಿರೋಧ ಪಕ್ಷಗಳು ಇದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಚಾರಿತ್ರ್ಯಹನನ ಮಾಡುವ ಮೂಲಕ ದುರ್ಬಲಗೊಳಿಸುತ್ತಿವೆ. ಸಾಂವಿಧಾನಿಕ ಸ್ಥಾನಮಾನ ನೀಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದೆ ಸಿಬಿಐ ಅನ್ನು ರಾಜಕೀಯದ ದಾಸ್ಯದಿಂದ ಬಿಡುಗಡೆಗೊಳಿಸುವುದು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT