ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐನಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ , ಎಂ.ಡಿ ಬಂಧನ

Last Updated 17 ಡಿಸೆಂಬರ್ 2010, 11:30 IST
ಅಕ್ಷರ ಗಾತ್ರ

ಬೆಂಗಳೂರು: ಗೋಕಾಕ್‌ನ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಯಂತ್ರೋಪಕರಣ ಮತ್ತು ಸಕ್ಕರೆ ಅಡವಿಟ್ಟು ಸಾಲ ಪಡೆದು ಯೂನಿಯನ್ ಬ್ಯಾಂಕ್‌ಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಉಪಾಧ್ಯಕ್ಷ ಅಶೋಕ ಆರ್.ಪಾಟೀಲ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಉಪಾಧ್ಯೆ ಮತ್ತು ಮಾರಾಟ ವಿಭಾಗದ ಉಸ್ತುವಾರಿ ನೌಕರ ಎಸ್.ಎಂ.ಹಿತ್ತಲಮನಿ ಅವರನ್ನು ಸಿಬಿಐ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಗುರುವಾರ ಮೂವರು ಆರೋಪಿಗಳನ್ನೂ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಎರಡು ದಿನಗಳ ಕಾಲ ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಬ್ಯಾಂಕ್‌ಗೆ ಅಡವಿಟ್ಟಿದ್ದ ಸಕ್ಕರೆಯನ್ನು ನಕಲಿ ಕೀಲಿ ಬಳಸಿ ಮಾರಾಟ ಮಾಡಿರುವ ಕುರಿತು ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಕಾರ್ಖಾನೆಯ ಆಡಳಿತ ಮಂಡಳಿಯು 2007ರಲ್ಲಿ ಸಕ್ಕರೆ ಮತ್ತು ಯಂತ್ರೋಪಕರಣಗಳನ್ನು ಅಡವಿಟ್ಟು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಳಗಾವಿ ಮುಖ್ಯ ಶಾಖೆಯಿಂದ 10 ಕೋಟಿ ರೂಪಾಯಿ ಸಾಲ ಪಡೆದಿತ್ತು. ಸಕ್ಕರೆ ಅಡವಿಟ್ಟ ಉಗ್ರಾಣದ ಕೀಲಿಯನ್ನು ಬ್ಯಾಂಕ್‌ನ ವಶಕ್ಕೆ ಒಪ್ಪಿಸಲಾಗಿತ್ತು.

ಆದರೆ ಕೆಲ ದಿನಗಳ ಬಳಿಕ ಅಶೋಕ ಪಾಟೀಲ, ಸಿ.ಎ.ಉಪಾಧ್ಯೆ ಮತ್ತು ಹಿತ್ತಲಮನಿ ಸೇರಿ ನಕಲಿ ಕೀಲಿ ಬಳಸಿ ಸಕ್ಕರೆಯನ್ನು ಮಾರಾಟ ಮಾಡಿದ್ದರು. ಅಲ್ಲದೇ ಕಾರ್ಖಾನೆಯ ಯಂತ್ರೋಪಕರಣಗಳನ್ನು ಈ ಹಿಂದೆಯೇ ಎರಡು ಬ್ಯಾಂಕ್‌ಗಳಿಗೆ ಅಡವಿಟ್ಟು ಸಾಲ ಪಡೆದಿದ್ದರು. ಇದರಿಂದ ಯೂನಿಯನ್ ಬ್ಯಾಂಕ್‌ಗೆ ಒಟ್ಟು 11.76 ಕೋಟಿ ರೂಪಾಯಿ ನಷ್ಟವಾಗಿತ್ತು.

ಈ ಕುರಿತು 2009ರ ಸೆಪ್ಟೆಂಬರ್ 5ರಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದ ಸಿಬಿಐ ಬೆಂಗಳೂರು ವಿಭಾಗದ ‘ಬ್ಯಾಂಕ್ ಭದ್ರತೆ ಮತ್ತು ವಂಚನೆ ಘಟಕ’ದ ಪೊಲೀಸರು ತನಿಖೆ ಆರಂಭಿಸಿದ್ದರು. ಅಶೋಕ ಪಾಟೀಲ, ಸಿ.ಎ.ಉಪಾಧ್ಯೆ ಮತ್ತು ಹಿತ್ತಲಮನಿ ನಕಲಿ ಕೀಲಿ ಬಳಸಿ ಸಕ್ಕರೆಯನ್ನು ಉಗ್ರಾಣದಿಂದ ತೆಗೆದು ಮಾರಾಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.

‘ಬುಧವಾರ ಮೂವರೂ ಆರೋಪಿಗಳನ್ನು ಬಂಧಿಸಿರುವ ಸಿಬಿಐ ಪೊಲೀಸರು, ಅವರನ್ನು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು.  ಮೂವರನ್ನೂ ಸಿಬಿಐ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ನಮ್ಮ ಪೊಲೀಸರ ತಂಡವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸುತ್ತಿದೆ’ ಎಂದು ಸಿಬಿಐ ಬೆಂಗಳೂರು ವಿಭಾಗದ ‘ಬ್ಯಾಂಕ್ ಭದ್ರತೆ ಮತ್ತು ವಂಚನೆ ಘಟಕ’ದ ಮುಖ್ಯಸ್ಥ ನರಸಿಂಹ ಕೋಮರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT