ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಇಲ್ಲದ ಆಸ್ಪತ್ರೆ!

Last Updated 7 ಜುಲೈ 2012, 5:40 IST
ಅಕ್ಷರ ಗಾತ್ರ

ಚಿಟಗುಪ್ಪಾ: ಜನರ ಆರೋಗ್ಯ ಭಾಗ್ಯ ಕಾಪಾಡಬೇಕಾದ ಸರ್ಕಾರಿ ಆಸ್ಪತ್ರೆಗಳೇ ಅನಾರೋಗ್ಯದಿಂದ ನರಳುತ್ತಿರುವ ಸ್ಥಿತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಂಡುಬರುತ್ತಿದೆ.ಐದಾರು ವರ್ಷಗಳಿಂದ ಆಸ್ಪತ್ರೆಯ ಪರಿಸ್ಥಿತಿ ಹದಗೆಟ್ಟಿದೆ.

ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ, ಸಂಬಂಧಿಸಿದ ಜನ ಪ್ರತಿನಿಧಿಗಳು, ಆರೋಗ್ಯ ಇಲಾಖೆ  ಗಮನ ಹರಿಸದಿರುವುದು ವಿಷಾದನೀಯ ಸಂಗತಿ ಎಂಬ ಆಕ್ಷೇಪ ಪುರಸಭೆ ಸದಸ್ಯ ಸುರೇಶ ಕುಂಬಾರ, ಬಿಜೆಪಿ ನಾಯಕ ಮಲ್ಲಿಕಾರ್ಜುನ ಪಾಟೀಲ ಮತ್ತಿತರರದು.

ಜರ್ಮನ್ ತಂತ್ರಜ್ಞಾನದಲ್ಲಿ ಈ ಆಸ್ಪತ್ರೆ ನಿರ್ಮಿಸಿದ್ದು, ಒಳಗಡೆ ಮಾತ್ರ ಯಾವುದೆ ಸೌಲಭ್ಯ ಇದುವರೆಗೂ ಲಭಿಸಿಲ್ಲ. ಹೊರಗಡೆ ಸಮುದಾಯ ಆರೋಗ್ಯ ಕೇಂದ್ರದ ನಾಮಫಲಕವಿದ್ದು, ಒಳಗಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯವಸ್ಥೆ ಇರುವುದು ಕಂಡುಬರುತ್ತಿದೆ ಎಂದು ವಿಜಯಕುಮಾರ ಬೊಮಣಿ, ಶಿವಕುಮಾರ ಪಾಟೀಲ ಆಕ್ಷೇಪಿಸುತ್ತಾರೆ.

ಆರು ತಿಂಗಳಿನಿಂದ ಕೇವಲ ಒಬ್ಬ ವೈದ್ಯಾಧಿಕಾರಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಹೊರರೋಗಿಗಳು (ಒ.ಪಿ.ಡಿ) ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೆ ಕನಿಷ್ಠ ಐದಾರು ಹೆರಿಗೆಗಳಾಗುತ್ತವೆ. ಸದ್ಯಕ್ಕೆ ಐದು ಜನ ವೈದ್ಯರ ಹುದ್ದೆಗಳಲ್ಲಿ ನಾಲ್ಕು ಖಾಲಿ ಉಳಿದಿವೆ.

ಸ್ಟಾಫ್ ನರ್ಸ್ ಹುದ್ದೆಗಳೇ ಮಂಜೂರಾಗದಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. 30 ಹಾಸಿಗೆಯ ಸಿ.ಎಸ್.ಇ ಆಸ್ಪತ್ರೆ ಇದಾಗಿರುವುದರಿಂದ ಸದ್ಯಕ್ಕೆ ದಾದಿಯರ ಎಲ್ಲ ಹುದ್ದೆಗಳು ಖಾಲಿ ಉಳಿದಿದ್ದು, ಇರುವ ಇಬ್ಬರು ದಾದಿಯರಿಗೆ ಸರ್ಕಾರ ದೂರದ ಊರುಗಳಿಗೆ ವರ್ಗ ಮಾಡಿದೆ. ಮಲ, ಮೂತ್ರ, ರಕ್ತ ಪರೀಕ್ಷಾ ಘಟಕಗಳಿದ್ದು, ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇರುವುದರಿಂದ ಯಂತ್ರಗಳು ಹಾಳಾಗುತ್ತಿವೆ.

ಕ್ಷ-ಕಿರಣ ಕೋಣೆ, ಉಪಕರಣಗಳು ಲಭ್ಯವಿದ್ದು ಸಿಬ್ಬಂದಿ ಇರುವುದಿಲ್ಲ. ಆಸ್ಪತ್ರೆಯ ದೈನಂದಿನ ಸ್ವಚ್ಛತೆಗಾಗಿ ಕನಿಷ್ಠ 10 ಜನ ಸಫಾಯಿ ಕಾರ್ಮಿಕರ ಅವಶ್ಯಕತೆ ಇದೆ ಎಂದು ಸಿಬ್ಬಂದಿ ತಿಳಿಸುತ್ತಾರೆ. ಆದರೆ ಸೇವೆ ಮಾಡುತ್ತಿರುವವರ ಸಂಖ್ಯೆ ಕೇವಲ 4 ಜನ ಮಾತ್ರ.

ಒಟ್ಟಾರೆ, ನಾಲ್ಕೂ ವೈದ್ಯರ, ಕನಿಷ್ಠ 5 ಜನ ದಾದಿಯರ, 6 ಜನ ಸಫಾಯಿ ಕಾರ್ಮಿಕರ, ವಿವಿಧ ಟೆಕ್ನಿಷಿಯನರ್ ಅವಶ್ಯಕತೆ ಆಸ್ಪತ್ರೆಗಿದ್ದು, ತುರ್ತಾಗಿ ಸರ್ಕಾರ ಸಿಬ್ಬಂದಿಯನ್ನು ನೇಮಿಸಿದಲ್ಲಿ ಮಾತ್ರ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಈ ಆಸ್ಪತ್ರೆ ಯಶಸ್ವಿಯಾಗಬಲ್ಲದು ಎಂಬ ಆಶಯ ಸಾರ್ವಜನಿಕರದು.

ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಇರುವ ಒಬ್ಬ ವೈದ್ಯಾಧಿಕಾರಿ ರಾಜಶೇಖರ್ ಕೋರವಾರ ದಕ್ಷತೆಯಿಂದ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತ ಬಂದಿದ್ದಾರೆ ಎಂದು ನಾಗರಿಕರು ಮೆಚ್ಚುಗೆ ಸೂಚಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT