ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ: ತ್ಯಾಜ್ಯ ವಿಲೇವಾರಿಗೆ ತೊಂದರೆ

ನಗರ ಸಂಚಾರ
Last Updated 6 ಜನವರಿ 2014, 6:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ. ಇದರ ಪರಿಣಾಮ ಅನೈರ್ಮಲ್ಯ ಸೃಷ್ಟಿಯಾಗಿದ್ದು, ನಾಗರಿಕರು ಆತಂಕ ಪಡುವಂತಾಗಿದೆ.

ಒಂದೆಡೆ ಒಳಚರಂಡಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಇದರ ಉಸ್ತುವಾರಿ ಹೊತ್ತಿರುವ ಕಂಪೆನಿಗೆ ನಿಗದಿತ ಗಡುವು ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲು ನಗರಸಭೆ ಆಡಳಿತ ಇಂದಿಗೂ ಕ್ರಮಕೈಗೊಂಡಿಲ್ಲ. ವಿವಿಧ ಬಡಾವಣೆಗಳಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.

ಕೆಲವೆಡೆ ದೂರವಾಣಿ ಸಂಪರ್ಕ ಕಲ್ಪಿಸಲು ರಸ್ತೆಬದಿಯಲ್ಲಿ ಗುಂಡಿ ತೋಡುವ ಕೆಲಸವೂ ನಡೆಯುತ್ತಿದೆ. ಇನ್ನೊಂದೆಡೆ ರಸ್ತೆ ಬದಿಯಲ್ಲಿ ಹಾಕುವ ಕಸ ಚರಂಡಿಗೆ ಸೇರುತ್ತಿದೆ. ಇದರಿಂದ ನೀರು ಹೊರಹೋಗುತ್ತಿಲ್ಲ. ಕಲ್ಮಷ ವಾತಾವರಣ ಸೃಷ್ಟಿಯಾಗಿ ಜನರು ರೋಗರುಜಿನಗಳ ಭೀತಿ ಎದುರಿಸುವಂತಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯ ಪೌರ ಕಾರ್ಮಿಕ ಸಿಬ್ಬಂದಿ ಇಲ್ಲ. ಹೀಗಾಗಿ, ಸಮರ್ಪಕವಾಗಿ ಕಸ ವಿಲೇವಾರಿಯ ಹಿನ್ನಡೆಗೆ ಮೂಲಕಾರಣವಾಗಿದೆ. ನಗರಸಭೆಗೆ 100 ಪೌರಕಾರ್ಮಿಕರ ಹುದ್ದೆಗಳು ಮಂಜೂರಾಗಿವೆ. ಆದರೆ, 40 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟು ಸಂಖ್ಯೆಯ ಕಾರ್ಮಿಕರನ್ನು ಬಳಸಿಕೊಂಡು ನಿತ್ಯವೂ ನಗರ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.

ಹಲವು ವರ್ಷ ಕಳೆದರೂ, ಉಳಿದ 60 ಪೌರಕಾರ್ಮಿಕರ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ಇದರ ಪರಿಣಾಮ ಸ್ವಚ್ಛತೆ ಕಣ್ಮರೆಯಾಗಿದೆ ಎಂಬುದು ನಾಗರಿಕರ ಆರೋಪ. ಲೋಕ ಅದಾಲತ್‌ನಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಲಾಗುತ್ತದೆ.

ಆದರೆ, ಅಧಿಕಾರಿಗಳು ಕ್ರಮಕ್ಕೆ ಮುಂದಾಗುವುದಿಲ್ಲ. ಪ್ರತಿಯೊಂದು ವಾರ್ಡ್‌ಗಳಲ್ಲೂ ಹಸಿ ಮತ್ತು ಒಣಗಿದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ನಾಗರಿಕರು ಪ್ಲಾಸ್ಟಿಕ್‌ ಚೀಲಗಳಲ್ಲಿ ಕಸ ಸಂಗ್ರಹಿಸಿ ಖಾಲಿ ಸೈಟ್‌ಗಳು ಹಾಗೂ ರಸ್ತೆಬದಿಯಲ್ಲಿ ಹಾಕುವುದು ಮುಂದುವರಿದಿದೆ. ಇದಕ್ಕೆ ಕಡಿವಾಣ ಹಾಕಿ ಅವರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ.

‘ಕೂಡಲೇ, ನಗರಸಭೆ ನಗರದ ಎಲ್ಲ ಬಡಾವಣೆಗಳಲ್ಲಿ ಸ್ವಚ್ಛತೆಗೆ ಒತ್ತು ನೀಡಲು ಮುಂದಾಗಬೇಕು. ಸರ್ಕಾರ ಅಗತ್ಯ ಪೌರಕಾರ್ಮಿಕರ ನೇಮಕಕ್ಕೆ ಕ್ರಮವಹಿಸಬೇಕು. ರಸ್ತೆಬದಿಯಲ್ಲಿ ಸಂಗ್ರಹಗೊಂಡಿರುವ ಕಸದ ರಾಶಿಗಳ ವಿಲೇವಾರಿ ಆಗಬೇಕು’ ಎಂದು ಒತ್ತಾಯಿಸುತ್ತಾರೆ ನಾಗರಿಕ ಅವಿನಾಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT