ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆಯಿಂದ ತನಿಖೆಗೆ ಹಿನ್ನಡೆ: ಶರ್ಮಾ

Last Updated 20 ಡಿಸೆಂಬರ್ 2013, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌)ಗೆ ವಿಶೇಷ ಸರ್ಕಾರಿ ಅಭಿಯೋಜಕರ ಹುದ್ದೆಯನ್ನು ಮಂಜೂರು ಮಾಡಬೇಕು ಎಂಬ ಮನವಿಯನ್ನು ಒಂದೂವರೆ ವರ್ಷದ ಹಿಂದೆಯೇ ಮಾಡಲಾಗಿದ್ದು, ಸರ್ಕಾರದಿಂದ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬಿಎಂಟಿಎಫ್‌ ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.

ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ‘ಬಿಎಂಟಿಎಫ್‌ನಲ್ಲಿ ಹಲವು ವಿಶೇಷ ಪ್ರಕರಣಗಳು ದಾಖಲಾಗಿರುವ ಕಾರಣ, ಕೋರ್ಟ್‌ನಲ್ಲಿ ವಾದ ಮಂಡಿಸಲು ವಿಶೇಷ ಅಭಿಯೋಜಕರ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

‘ಸರ್ಕಾರಕ್ಕೆ ಎಷ್ಟು ಸಲ ಪತ್ರ ಬರೆದು ನೆನಪಿಸಲಾಗಿದೆ ಎಂಬುದು ನೆನಪಿಲ್ಲ. ಆದರೆ, ಹಲವು ಬಾರಿ ಪತ್ರ ಬರೆಯಲಾಗಿದೆ’ ಎಂದು ಹೇಳಿದರು. ‘ಹೈಕೋರ್ಟ್‌ ಹಲವು ಪ್ರಕರಣಗಳನ್ನು ವಜಾಗೊಳಿಸಿದ್ದರಿಂದ ಖಾಸಗಿ ಕಟ್ಟಡಗಳ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇವೆ’ ಎಂದು ಹೇಳಿದರು.

‘ಮ್ಯಾಜಿಸ್ಟ್ರೇಟ್‌ ಒಪ್ಪಿಗೆ ಪಡೆದೇ ಪ್ರಕರಣ ದಾಖ­ಲಿಸಿದ್ದರೂ ಹೈಕೋರ್ಟ್‌ ಅವುಗಳನ್ನು ವಜಾಗೊಳಿ­ಸಿತ್ತು. ಅಕ್ಟೋಬರ್‌ 10ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್‌ ಬಿಎಂಟಿಎಫ್‌ ವ್ಯಾಪ್ತಿಯನ್ನು ಮಿತಿಗೊಳಿಸಿದೆ’ ಎಂದು ಮಾಹಿತಿ ನೀಡಿದರು.

‘ಬಿಎಂಟಿಎಫ್‌ಗೆ ಸಿಬ್ಬಂದಿ ಕೊರತೆ ತೀವ್ರ­ವಾಗಿ­ದೆ’ ಎಂದು ಪುನರುಚ್ಚರಿಸಿದ ಅವರು, ‘ಮಂಜೂ­ರಾದ 15 ನಗರ ಯೋಜನೆ ಎಂಜಿನಿಯರ್‌ ಹುದ್ದೆಗಳ ಪೈಕಿ 12 ಖಾಲಿ ಇವೆ. ಹೆಚ್ಚುವರಿ ಆಯುಕ್ತರ (ಕಂದಾಯ) ಹುದ್ದೆ ಖಾಲಿ ಇದೆ. ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳ ತನಿಖೆಗೆ ಇದರಿಂದ ಹಿನ್ನಡೆಯಾಗಿದೆ’ ಎಂದು ಹೇಳಿದರು.

‘ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಇದು­ವರೆಗೆ 24 ದೂರುಗಳು ದಾಖಲಾಗಿದ್ದು, 15 ದೂರು­ಗಳು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಬಂದರೆ, ಮಿಕ್ಕುಳಿದವು ಸಾರ್ವಜನಿಕರಿಂದ ದಾಖಲಾಗಿವೆ’ ಎಂದು ತಿಳಿಸಿದರು.

‘ಸಂಪಂಗಿರಾಮನಗರದ ಬಿಬಿಎಂಪಿ ಆಸ್ತಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯ ಎಂ. ಗೋಪಿ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಬಂಧನದ ಭೀತಿಯಲ್ಲಿ ಇರುವ ಬಿಬಿಎಂಪಿ ಅಧಿಕಾರಿಯೊಬ್ಬರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಸರ್ಕಾರಿ ಸ್ಮಶಾನ ಮತ್ತು ಹೈದರಾಲಿ ಮಕ್ಕಾನ್‌ಗಳಷ್ಟೇ ಇದ್ದ ಜಾಗದಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳು ಜಾಗ ಕಬಳಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜತೆ ಸೇರಿ ಈ ಆಸ್ತಿಗಳಿಗೆ ಅಕ್ರಮ ದಾಖಲೆ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಅಲ್ಲದೆ, ಖಾತೆ ನೀಡಿ, ಕಟ್ಟಡ ನಿರ್ಮಾಣಕ್ಕೆ ನಕ್ಷೆಯನ್ನೂ ಮಂಜೂ­ರು ಮಾಡಿದ್ದಾರೆ ಎಂಬ ವಿವರ ದೂರಿನಲ್ಲಿದ್ದು, ತನಿಖೆ ನಡೆದಿದೆ ಎಂದು ತಿಳಿಸಿದರು.

‘ಬಿಬಿಎಂಪಿ ಜಂಟಿ ಆಯುಕ್ತರು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT