ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಯೇ ಇಲ್ಲದ ಮೀನುಗಾರಿಕೆ ಇಲಾಖೆ

Last Updated 5 ಏಪ್ರಿಲ್ 2013, 4:04 IST
ಅಕ್ಷರ ಗಾತ್ರ

ಕೂಡ್ಲಿಗಿ: ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳಿರುವ ತಾಲ್ಲೂಕುಗಳಲ್ಲೊಂದು ಎಂಬ ಹೆಗ್ಗಳಿಕೆಯಿರುವ ಕೂಡ್ಲಿಗಿ ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆಯಿದೆ. ಆದರೆ ಸಿಬ್ಬಂದಿಯೇ ಇಲ್ಲದೆ ಇಲಾಖೆಯ ಕಚೇರಿ ಸದಾ ಬೀಗ ಹಾಕಿಕೊಂಡಿರುತ್ತದೆ.

ಪಟ್ಟಣದಲ್ಲಿ ಸ್ವಂತ ಕಟ್ಟಡವಿಲ್ಲದ ಹಲವಾರು ಇಲಾಖೆ ಕಚೇರಿಗಳಲ್ಲಿ ಮೀನುಗಾರಿಕೆ ಇಲಾಖೆಯ ಕಚೇರಿಯೂ ಒಂದು. ವಿವಿಧೆಡೆ ಬಾಡಿಗೆ ಕಟ್ಟಡಗಳನ್ನು, ಮನೆಗಳನ್ನು ಬಳಸಿಕೊಂಡು ಕಚೇರಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಪಟ್ಟಣದ ಕೇಂದ್ರ ಗ್ರಂಥಾಲಯದ ಬಳಿ  ಇರುವ ಇಲಾಖೆಯ ಕಚೇರಿ ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೇಲಂತಸ್ತಿನಲ್ಲಿರುವ ಈ ಕಚೇರಿಗೆ ಗ್ರಾಮಸ್ಥರು ಹೋಗಿ ನೋಡಿದರೆ ಸದಾ ಬೀಗ ಹಾಕಿರುವುದರಿಂದ ನಿರಾಶರಾಗಿ ಮರಳುತ್ತಾರೆ. ಈ ಕುರಿತು ಹೊಸದಾಗಿ ಅಧಿಕಾರ ವಹಿಸಿರುವ ಸಹಾಯಕ ನಿರ್ದೇಶಕರನ್ನು ಕೇಳಿದರೆ, `ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಮೂರು ತಾಲ್ಲೂಕುಗಳಿಗೂ ತಾವೇ ಕಾರ್ಯನಿರ್ವಹಿಸುತ್ತಿರುವುದರಿಂದಾಗಿ ಕೆಲವು ದಿನಗಳಲ್ಲಿ ಕಚೇರಿಯಲ್ಲಿ ಇರಲಾಗುವುದಿಲ್ಲ, ಬೇರೆ ತಾಲ್ಲೂಕಿಗೂ ಭೇಟಿ ನೀಡಬೇಕಾಗುತ್ತದೆ' ಎಂದು ಹೇಳುತ್ತಾರೆ.

ದುರಂತವೆಂದರೆ ಕಚೇರಿಯಲ್ಲಿ ಸಿಬ್ಬಂದಿಯೇ ಇಲ್ಲ. ಇಡೀ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸಹಾಯಕ ನಿರ್ದೇಶಕರೊಬ್ಬರೇ. ಇಲ್ಲಿ ಗುಮಾಸ್ತರಿಲ್ಲ, ಜವಾನರಿಲ್ಲ, ಕಸ ಗುಡಿಸುವವರೂ ಇಲ್ಲ. ಕಚೇರಿಯಲ್ಲಿ ಪ್ರಸ್ತುತ 2 ಹುದ್ದೆಗಳು ಖಾಲಿ ಇವೆ. ಎರಡೂ ಹುದ್ದೆಗಳು ಮೀನುಗಾರಿಕೆ ಕ್ಷೇತ್ರ ನಿರ್ವಹಣೆಗೆ ಸಂಬಂಧಿಸಿದ ಹುದ್ದೆಗಳು.

ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆಯಡಿಯಲ್ಲಿ ಒಟ್ಟು 28 ಕೆರೆಗಳು ಬರುತ್ತವೆ. ಪ್ರತಿ 5 ವರ್ಷಗಳಿಗೊಮ್ಮೆ ನಿಯಮಾವಳಿಗಳ ಪ್ರಕಾರ ವ್ಯಕ್ತಿ ಅಥವಾ ಸಂಘಗಳಿಗೆ ಮೀನುಗಾರಿಕೆಗೆ ಲೀಸ್ ಮೇಲೆ ಅನುಮತಿಯನ್ನು ನೀಡಲಾಗುತ್ತದೆ. ಲೀಸ್ ಪಡೆದವರು ಕೆರೆಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ತಾವು ನಡೆಸುವ ಪ್ರತಿಯೊಂದು ಚಟುವಟಿಕೆಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕಾಗುತ್ತದೆ. ಅಲ್ಲದೆ ಇಲಾಖೆಯ ಕಚೇರಿಗೆ ಭೇಟಿ ನೀಡುವವರು ಸಾಕಷ್ಟು ಜನ ಇರುವುದರಿಂದ, ಇಲಾಖೆಯ ಕಾರ್ಯವೈಖರಿ ಗ್ರಾಮಸ್ಥರಲ್ಲಿ ಬೇಸರ ತಂದಿದೆ. `ಯಾವಾಗ ಬಂದ್ರೂ ಆಫೀಸ್ ಬೀಗ ಹಾಕಿರ್ತೈತಿ, ನಮಗೂ ಕಾದು ಕಾದು ಸಾಕಾಗೈತಿ' ಎಂದು ಲೋಕಿಕೆರೆಯ ಮಲ್ಲಿಕಾರ್ಜುನ ಹೇಳುತ್ತಾರೆ.

`ಯಾವಾಗ್ಲೂ ಬರೀ ಈ ಆಫೀಸ್‌ಗೆ ತಿರ್ಗೋದೆ ಆತು, ಯಾವಾಗ ಬರ್ತಾರೋ, ಯಾವಾಗ ಹೋಗ್ತಾರೋ ಒಂದೂ ತಿಳ್ಯಂಗಿಲ್ಲ' ಎಂದು ಹೊಸಹಳ್ಳಿಯ ಮಂಜುನಾಥ್ ಹೇಳುತ್ತಾರೆ.

ಕಚೇರಿಗೆ ಸಿಬ್ಬಂದಿಯನ್ನು ಒದಗಿಸಬೇಕು, ಅಧಿಕಾರಿಗಳಿಗೆ 3 ತಾಲ್ಲೂಕುಗಳ ಕಾರ್ಯನಿರ್ವಹಣೆಯ ಬದಲಾಗಿ, ಕೂಡ್ಲಿಗಿ ತಾಲ್ಲೂಕಿನಲ್ಲಿ ಮಾತ್ರ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT