ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್‌ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ

ವೇಜ್‌ ಬೋರ್ಡ್‌ ಶಿಫಾರಸಿನಂತೆ ವೇತನ ನೀಡಲು ಆಗ್ರಹ, ಉಪವಾಸ ಸತ್ತಾಗ್ರಹ ಎಚ್ಚರಿಕೆ
Last Updated 5 ಡಿಸೆಂಬರ್ 2013, 9:14 IST
ಅಕ್ಷರ ಗಾತ್ರ

ಬಳ್ಳಾರಿ: ಸಿಮೆಂಟ್‌ ತಯಾರಿಕೆ ಕಾರ್ಖಾನೆಗಳು ಕಾರ್ಮಿಕರಿಗೆ ಸೂಕ್ತ ಸೌಲಭ್ಯ ನೀಡದೆ ತೀವ್ರವಾಗಿ ಶೋಷಿಸುತ್ತಿವೆ ಎಂದು ಆರೋಪಿಸಿ ಗುಲ್ಬರ್ಗಾ ಜಿಲ್ಲೆಯಲ್ಲಿರುವ ಕೆಲವು ಕಾರ್ಖಾನೆಗಳ ಸಾವಿ­ರಾರು ಕಾರ್ಮಿಕರು ನಗರದ ಜಿಲ್ಲಾ ಕ್ರೀಡಾಂ­ಗಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಗುಲ್ಬರ್ಗಾ ಜಿಲ್ಲೆಯ ಸೇಡಂ, ಚಿಂಚೋಳಿ ಮತ್ತಿತರ ಕಡೆ ಇರುವ ಬಿರ್ಲಾ ಸಮೂಹದ ಒಡೆತನದ ವಾಸವದತ್ತಾ, ಅಲ್ಟ್ರಾಟೆಕ್‌, ರಾಜಶ್ರೀ ಮತ್ತಿತರ ಸಿಮೆಂಟ್‌ ಕಾರ್ಖಾನೆಗಳ ಆಡಳಿತ ಮಂಡಳಿ­ಯವರು ಗುತ್ತಿಗೆ ಕಾರ್ಮಿಕರಿಗೆ ಸಿಮೆಂಟ್‌ ವೇತನ ಮಂಡಳಿ (ವೇಜ್‌ ಬೋರ್ಡ್‌) ಶಿಫಾರಸಿನ ಮೇರೆಗ ವೇತನ ನೀಡದೆ, ಅತ್ಯಂತ ಕಡಿಮೆ ವೇತನ ನೀಡುತ್ತ ಶೋಷಿಸುತ್ತಿವೆ ಎಂದು ಆರೋಪಿಸಿ ಕಾರ್ಮಿಕರು ಪ್ರಾದೇಶಿಕ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮಂಗಳವಾರವೇ ನಗರಕ್ಕೆ ಆಗಮಿಸಿರುವ ಕಾರ್ಮಿಕರು, ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದ್ದು, ಎರಡು ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಆಮರಣಾಂತ ಉಪಪಾಸ ಸತ್ಯಾಗ್ರಹ ನಡೆಸುವು­ದಾಗಿ ಎಚ್ಚರಿಸಿದರು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈಗಾಗಲೇ ಅನೇಕ ಬಾರಿ ಮನವಿ ಸಲ್ಲಿಸಿದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಕಾರ್ಮಿಕರ ಸಮಸ್ಯೆ ಪರಿ­ಹರಿಸಲು ಗಮನ ಹರಿಸಿಲ್ಲ ಎಂದು ಶ್ರಮಜೀವಿ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಪತ್ರಿಕಾ­ಗೋಷ್ಠಿಯಲ್ಲಿ ಆರೋಪಿಸಿದರು.

ಎರಡು ವರ್ಷಗಳ ಹಿಂದೆಯೇ ನವದೆಹಲಿಯಲ್ಲಿ ಇರುವ ಕಾರ್ಮಿಕ ಇಲಾಖೆಯ ಮುಖ್ಯ ಆಯುಕ್ತರ ಸಮ್ಮುಖ­ದಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ, ಕಾರ್ಮಿಕರಿಗೆ ಎಲ್ಲ ರೀತಿಯ ಸೌಲಭ್ಯ ನೀಡು­ವುದಾಗಿ ತಿಳಿಸಿರುವ ಕಾರ್ಖಾನೆಯ ಆಡಳಿತ ಮಂಡಳಿ­ಯವರು, ಈವರೆಗೂ ಆಯುಕ್ತರ ಆದೇಶ ಜಾರಿಗೊಳಿಸಿಲ್ಲ ಎಂದು  ದೂರಿದರು.

ಕಾರ್ಖಾನೆ ಕಾರ್ಮಿಕರ ಸೇವೆಯನ್ನು ಕಾಯಂ ಮಾಡದೆ ದಿನಕ್ಕೆ ₨170 ವೇತನ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ನ್ಯಾಯಯುತವಾಗಿ ಪ್ರತಿ ಕಾರ್ಮಿಕನಿಗೆ ಮಾಸಿಕ ₨ 15ರಿಂದ 18000 ವೇತನ ನೀಡಬೇಕು. ಆದರೆ, ಕೆಲವರಿಗೆ ಮಾತ್ರ ₨ 7000ದಷ್ಟು ವೇತನ ನೀಡುವ ಆಡಳಿತ ಮಂಡಳಿಯವರು, ಬಹುತೇಕ ಕಾರ್ಮಿಕರಿಗೆ ದಿನಗೂಲಿಯಾಗಿ ₨ 170 ನೀಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಸಿಮೆಂಟ್‌ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ  ರೈತರ ಕುಟುಂಬ ಸದಸ್ಯರಿಗೂ ಕಾಯಂ ಉದ್ಯೋಗ ನೀಡಿಲ್ಲ. ಸೂಕ್ತ ಪರಿಹಾರ­ವನ್ನೂ ನೀಡಿಲ್ಲ. ಈ ಕುರಿತು ಹೋರಾಟ ಮಾಡುವವರನ್ನೇ ಖರೀದಿಸುವ ಯತ್ನವನ್ನೂ ನಡೆಸಲಾಗಿದೆ ಎಂದು ಅವರು ಹೇಳಿದರು.

ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಗಮನ ಸೆಳೆಯಲೆಂದೇ ಕಾರ್ಮಿಕರು ಚಿಕ್ಕ ಮಕ್ಕಳು, ವೃದ್ಧ ಪಾಲಕರೊಂದಿಗೆ ಬಳ್ಳಾರಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸರ್ಕಾರ ಈ ಕುರಿತು ಗಂಭಿರವಾಗಿ ಪರಿಗಣಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ತಿಳಿಸಿದರು.

ರಮಾಕಾಂತ ಕುಲಕರ್ಣಿ, ನಾಗೇಂದ್ರ ಉಡಗಿ, ನಾಗೇಂದ್ರ ಹಾಲಗೇರ, ಮರೆಪ್ಪ ಪೂಜಾರ, ಜಗದೀಶ್ವರಯ್ಯ, ನರಸಪ್ಪ ಯಾದಗಿರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT