ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮ್ ಕಾರ್ಡ್ ಖರೀದಿ: ನವೆಂಬರ್‌ನಿಂದ ಹೊಸ ಮಾರ್ಗಸೂಚಿ

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊಬೈಲ್ ಫೋನ್ ಬಳಕೆದಾರರು ನಕಲಿ ದಾಖಲೆ ನೀಡಿ `ಸಿಮ್~ ಕಾರ್ಡ್ ಪಡೆಯುವ ಪ್ರವೃತ್ತಿಗೆ ಇನ್ನು ಕಡಿವಾಣ ಬೀಳಲಿದೆ.

ಮೂರನೇ ವ್ಯಕ್ತಿಯ ದಾಖಲೆ ನೀಡಿ ಅಥವಾ ಖೊಟ್ಟಿ ದಾಖಲೆ ಒದಗಿಸಿ ಒಂದಕ್ಕಿಂತ ಹೆಚ್ಚು `ಸಿಮ್~ ಕಾರ್ಡ್  ಪಡೆಯುವ ಗ್ರಾಹಕರ ಮೇಲೆ `ಎಫ್‌ಐಆರ್~ ದಾಖಲಿಸುವಂತೆ ದೂರವಾಣಿ ಇಲಾಖೆ, `ಸಿಮ್~ ಮಾರಾಟಗಾರರಿಗೆ ಸೂಚನೆ ನೀಡಿದೆ. ಜತೆಗೆ `ಸಿಮ್~ ಕಾರ್ಡ್ ದುರುಪಯೋಗ ತಪ್ಪಿಸಲು ಹೊಸ ಮೊಬೈಲ್ ದೂರವಾಣಿ ಮಾರ್ಗಸೂಚಿಯನ್ನು ನವೆಂಬರ್‌ನಲ್ಲಿ ಜಾರಿಗೆ ತರಲಿದೆ.

ದಾಖಲೆ ಪರಿಶೀಲನೆ ವೇಳೆ ನಕಲಿ ಎಂದು ತಿಳಿದುಬಂದರೆ ಚಂದಾದಾರರ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ 15 ದಿನಗಳೊಳಗಾಗಿ ದೂರು ನೀಡಬೇಕು. ಸಿಮ್ ಕಾರ್ಡ್ ವಿತರಕರು/ಮಾರಾಟ ಸಂಸ್ಥೆಗಳು ಕೂಡಲೇ ಈ ಸಂಗತಿಯನ್ನು ದೂರವಾಣಿ ಸೇವಾ ಪೂರೈಕೆ ಸಂಸ್ಥೆಗಳ ಗಮನಕ್ಕೂ ತರಬೇಕು. ಯಾವುದೇ ಕಾರಣಕ್ಕೂ ಮೂಲ ದಾಖಲೆಗಳ ಜತೆ ಪರಿಶೀಲಿಸಿ ಧೃಡಪಡದ ಹೊರತು `ಸಿಮ್~ ಕಾರ್ಡ್  ನೀಡಬಾರದು ಎಂದು ಮಾರಾಟಗಾರರಿಗೆ ಕಡ್ಡಾಯ ಸೂಚನೆ ನೀಡಲಾಗಿದೆ.

ನವೆಂಬರ್‌ಗೆ ಹೊಸ ಮಾರ್ಗಸೂಚಿ
ಖೊಟ್ಟಿ ದಾಖಲೆ ನೀಡಿ `ಸಿಮ್~  ಪಡೆಯುವುದು ಅಪರಾಧ. ಇಂತಹ  ಗ್ರಾಹಕರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬಹುದು ಎಂದು ದೂರಸಂಪರ್ಕ ಇಲಾಖೆ ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ. ನವೆಂಬರ್ 2ನೇ ವಾರದಿಂದ ಈ ನಿಯಮಗಳು ಜಾರಿಗೆ ಬರಲಿವೆ.

ದಾಖಲೆ ಪರಿಶೀಲನೆ ವೇಳೆ ಫೋಟೊ, ಸಹಿ, ವಿಳಾಸ ಸೇರಿದಂತೆ ಚಂದಾದಾರರು ನೀಡಿರುವ ದಾಖಲೆಗಳು ನಕಲಿ ಎಂದು ತಿಳಿದುಬಂದರೆ, ನೋಟಿಸ್ ನೀಡಿ 15 ದಿನಗಳೊಳಗಾಗಿ ಪ್ರಕರಣ ದಾಖಲಿಸಬಹುದಾಗಿದೆ.

ಮಾರಾಟಗಾರರಿಗೂ ಶಿಕ್ಷೆ!
ನಕಲಿ ದಾಖಲೆ ಸ್ವೀಕರಿಸಿ ಸಿಮ್ ಕಾರ್ಡ್ ವಿತರಿಸಿರುವುದು ದೃಢಪಟ್ಟರೆ ಅಂತಹ ಮಾರಾಟಗಾರ ಅಥವಾ ಮಾರಾಟ ಕೇಂದ್ರದ ವಿರುದ್ಧವೂ ದೂರವಾಣಿ ಸೇವಾ ಸಂಸ್ಥೆಗಳು ನಿರ್ದಾಕ್ಷ್ಯಣ್ಯ ಕ್ರಮ ಕೈಗೊಳ್ಳಬಹುದು. 

ಒಂದೊಮ್ಮೆ ದೂರವಾಣಿ ಸೇವಾ ಸಂಸ್ಥೆ ಕ್ರಮ ಕೈಗೊಳ್ಳಲು ವಿಫಲವಾದರೆ, ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿಸಿ ದೂರವಾಣಿ ಇಲಾಖೆಯೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂದೂ ಮೂಲಗಳು ತಿಳಿಸಿವೆ.
10ಕ್ಕಿಂತ ಹೆಚ್ಚು ಸಂಪರ್ಕ ರದ್ದು!

ಹೊಸ ದೂರವಾಣಿ ನೀತಿಯಂತೆ ಒಬ್ಬ ಗ್ರಾಹಕ ದೂರವಾಣಿ ವೃತ್ತವೊಂದರಲ್ಲಿ 10ಕ್ಕಿಂತಲೂ ಹೆಚ್ಚು ಸಿಮ್ ಕಾರ್ಡ್/ ಮೊಬೈಲ್ ಸಂಪರ್ಕ ಪಡೆದುಕೊಳ್ಳುವಂತಿಲ್ಲ. ಈ ಕುರಿತು ಮೊಬೈಲ್ ಸೇವಾ ಪೂರೈಕೆ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದ್ದು, ಇಂತಹ ಸಗಟು ಸಂಪರ್ಕಗಳನ್ನು ರದ್ದುಪಡಿಸುವಂತೆ ಇಲಾಖೆ ಸೂಚಿಸಿದೆ.

ಸಗಟು ಸಂಪರ್ಕ ಪಡೆದುಕೊಳ್ಳುವ ಗ್ರಾಹಕರು ಖುದ್ದಾಗಿ ವಿತರಕರ ಬಳಿ ಭೇಟಿಯಾಗಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು ಹಾಗೂ ಆರು ತಿಂಗಳಿಗೊಮ್ಮೆ ಸೇವಾ ಪೂರೈಕೆ ಸಂಸ್ಥೆಗಳು ದಾಖಲೆ ಮರು ಪರಿಶೀಲಿಸುವುದೂ ಕಡ್ಡಾಯ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.

ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರು ನೀಡಿದ ದಾಖಲೆ ಪರಿಶೀಲಿಸಿ, ಧೃಢಪಡಿಸಿದ ನಂತರ ಒಳಬರುವ ಮತ್ತು ಹೊರ ಹೋಗುವ ಕರೆಗಳನ್ನು ಚಾಲನೆಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT