ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಮೇಳಕ್ಕೆ ಬನ್ನಿ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಗಾತ್ರದಲ್ಲಿ ಕಿರಿದಾದ, ಪೌಷ್ಟಿಕಾಂಶಗಳ ಆಗರವಾಗಿರುವ ನವಣೆ, ಸಾವೆ, ಸಜ್ಜೆ, ಹಾರಕ, ಕೊರ್ಲೆ ಬರಗು, ರಾಗಿ, ಜೋಳಗಳಂತಹ ಧಾನ್ಯಗಳನ್ನು ಕಿರುಧಾನ್ಯಗಳು ಎನ್ನುತ್ತಾರೆ. ಇವನ್ನು ತೃಣ ಧಾನ್ಯಗಳು  ಎಂದೂ ಕರೆಯುತ್ತಾರೆ. 

ಎಲ್ಲ ಹವಾಮಾನ ಹಾಗೂ ಭೂಮಿಗಳಲ್ಲಿ ಇವನ್ನು ಬೆಳೆಯಬಹುದು. ಇವುಗಳಿಗೆ ಕೀಟ ಮತ್ತು ರೋಗ ಬಾಧೆಗಳು ಕಡಿಮೆ. ಇವುಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸದೆ ಬೆಳೆಯಬಹುದು. ನಿಸರ್ಗಕ್ಕೆ ಹಾನಿ ಮಾಡದೆ ಬೆಳೆಯಬಹುದಾದ ಧಾನ್ಯಗಳನ್ನು  ‘ಸಿರಿ ಧಾನ್ಯ’ಗಳೆಂದೂ ಕರೆಯಬಹುದು.

ಬರಗಾಲವನ್ನು ಎದುರಿಸುತ್ತಲೇ ಅರಳುವ ಪ್ರತಿ ಕಿರು ಧಾನ್ಯದ ಒಡಲಲ್ಲಿ ಹತ್ತಾರು ಪೋಷಕಾಂಶಗಳಿವೆ. ಆಹಾರ ತಜ್ಞರ ಪ್ರಕಾರ ಕಿರುಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ಮಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ.

ಮನುಷ್ಯನ ಹಲವು ರೋಗಗಳಿಗೆ ಆಹಾರದ ರೂಪದಲ್ಲೇ ಈ ಧಾನ್ಯಗಳು ಔಷಧಿಗಳಾಗುತ್ತವೆ.  ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಿರುಧಾನ್ಯಗಳು ಉತ್ತಮ ಆಹಾರವೆಂದು ವೈದ್ಯಶಾಸ್ತ್ರ ಹೇಳಿದೆ.

ಅಧಿಕ ಪೋಷಕಾಂಶಗಳಿರುವ ಈ ಸಿರಿ ಧಾನ್ಯಗಳು ಶತಶತಮಾನಗಳಿಂದ ನಮ್ಮ ಜನರ ದಿನಬಳಕೆಯ ಆಹಾರವಾಗಿತ್ತು. ಆದರೆ ಈಗ ಪಾಲಿಶ್ ಮಾಡಿದ ಅಕ್ಕಿಯ ಅನ್ನ, ನೂಡಲ್ಸ್, ಪಾಸ್ತ, ಕಾರನ್‌ಫ್ಲೇಕ್ಸ್, ಪೀಜಾ, ಬರ್ಗರ್‌ಗಳು ಇಂದಿನ ಯುವಜನರ ಆಹಾರಗಳಾಗಿವೆ.

ಇವುಗಳಲ್ಲಿ ಪೋಷಕಾಂಶಗಳೂ ಇಲ್ಲ. ಔಷಧಿಯ ಗುಣಗಳು ಇಲ್ಲವೇ ಇಲ್ಲ. ಇವುಗಳನ್ನು ತಿನ್ನುವವರು ಸಣ್ಣ ಪುಟ್ಟ ತೊಂದರೆಗಳಿಗೆ ಆಹಾರಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಇಂತಹ ಆಹಾರಗಳನ್ನು ತಿನ್ನುವವರು ಕಂಡು ಕೇಳಿ ಅರಿಯದೆ  ಕಾಯಿಲೆಗಳಿಂದ ನರಳುವ ಸಾಧ್ಯತೆ ಹೆಚ್ಚಿದೆ.

ಇದಕ್ಕೆ ವಿರುದ್ಧ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹೆಚ್ಚುತ್ತಿದೆ. ಪ್ರತಿ ಊಟದಲ್ಲೂ ಪ್ರೋಟೀನ್, ವಿಟಮಿನ್ ಹಾಗೂ ಕ್ಯಾಲರಿಗಳನ್ನು ಲೆಕ್ಕ ಹಾಕಿ ತಿನ್ನುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲಜನರು ಪ್ಯಾಕೇಟ್ ಮಾಡಿದ ಅಹಾರ ಧಾನ್ಯಗಳ ಹಿಟ್ಟುಗಳನ್ನು ಖರೀದಿಸುವಾಗ ಪ್ಯಾಕೆಟ್ ಮೇಲಿರುವ ಪೋಷಕಾಂಶಗಳ ಪಟ್ಟಿ ನೋಡಿ ಖರೀದಿಸುತ್ತಾರೆ. ಪಟ್ಟಿ ಉದ್ದ ಇದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಕರ್ಷಕ ಪ್ಯಾಕಿಂಗ್ ಇರುವ ಹೊರರಾಜ್ಯಗಳಿಂದ ಬಂದ ಅಕ್ಕಿ ಹಾಗೂ ಗೋಧಿಗೆ ಬೇಡಿಕೆ ಹೆಚ್ಚಾಗಿದೆ. ನಮ್ಮ ನೆಲದಲ್ಲೇ ಬೆಳೆದ ಪೋಷಕಾಂಶಗಳ, ವಿಷಮುಕ್ತ ಕಿರುಧಾನ್ಯಗಳು ಮೂಲೆಗುಂಪಾಗಿವೆ. ಕೆಲವು ವರ್ಷಗಳ ನಂತರ ಇವುಗಳ ಹೆಸರೂ ಜನರಿಗೆ ಮರೆತು ಹೋಗುವ ಸಾಧ್ಯತೆಗಳಿವೆ.

ಈ ಕಿರುಧಾನ್ಯಗಳನ್ನು ಮರಳಿ ಮಾರುಕಟ್ಟೆಗೆ ತರಲು ರೈತರು ಪ್ರಯತ್ನಿಸುತ್ತಿದ್ದಾರೆ.   ಸಹಜ ಸಮೃದ್ಧ, ಸಾವಯವ ಕೃಷಿಕರ ಬಳಗ 2011ರ ಫೆಬ್ರವರಿ 5 ಮತ್ತು 6 ರಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಗಾಂಧಿ ಭವನದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5ರ ವರೆಗೆ ಸಿರಿ ಧಾನ್ಯಗಳ ಮೇಳವನ್ನು ಸಂಘಟಿಸಿದೆ.

ಭಾರತೀಯ ಕಿರುಧಾನ್ಯಗಳ ಜಾಲ, ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾಲಯಗಳು ಹಾಗೂ ಕರ್ನಾಟಕದ ವಿವಿಧ ಸಂಸ್ಥೆಗಳು, ರೈತರು, ರೈತ ಗುಂಪುಗಳು ಜೊತೆಗೂಡಿ ‘ಸಿರಿ ಧಾನ್ಯ ಮೇಳ’ವನ್ನು ಏರ್ಪಡಿಸಿವೆ.

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಸಿರಿ ಧಾನ್ಯ ಸಂರಕ್ಷಕರು, ರೈತ ಗುಂಪುಗಳು, ಸ್ವಸಹಾಯ ಗುಂಪುಗಳು ಭಾಗವಹಿಸುತ್ತವೆ. ಅಪರೂಪದ ಸಿರಿಧಾನ್ಯ ತಳಿಗಳ ಪ್ರದರ್ಶನ ಹಾಗೂ ಕಿರುಧಾನ್ಯಗಳ ನೇರ ಮಾರಾಟ ವ್ಯವಸ್ಥೆ ಇದೆ.  ಸಾವೆ,ನವಣೆ ಅಕ್ಕಿಗಳು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ (ರಾಗಿ ಬಿಸ್ಕೆಟ್, ನವಣೆ ಹಪ್ಪಳ, ನವಣೆ ಉಂಡೆ ಮತ್ತು ವಿವಿಧ ತಿನಿಸುಗಳ) ಪ್ರದರ್ಶನ ಹಾಗೂ ಮಾರಾಟ ಇರುತ್ತದೆ.  ಜೊತೆಗೆ ವಿವಿಧ ದೇಸಿ ಅಕ್ಕಿಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಅಲ್ಲದೆ ವೈದ್ಯರು, ಆಹಾರ ತಜ್ಞರು, ಆಹಾರ ಪೋಷಕಾಂಶಗಳ ತಜ್ಞರು ಭಾಗವಹಿಸಿ ವಿಶೇಷ  ಉಪನ್ಯಾಸ, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಡುವರು.

ಈ ಅಪರೂಪದ ಸಿರಿ ಧಾನ್ಯ ಮೇಳವನ್ನು ಬೆಂಗಳೂರಿನ ಗ್ರಾಹಕರು ಮತ್ತು ಆಸಕ್ತರು ಹಾಗೂ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಸಾರ್ವಜನಿಕರು ಕಿರುಧಾನ್ಯ ಮೇಳಕ್ಕೆ ಬರಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ನಂಬರ್‌ಗಳು- 9900653364, 9986453324, 9945382209.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT