ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯದ ಬ್ಯಾಂಕ್‌

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿ ಹಣ್ಣು, ತೋಟಗಾರಿಕೆ, ತರಕಾರಿ ಬೆಳೆಗಾರರೇ ಹೆಚ್ಚು. ಈ ನಡುವೆ ಹಿಡುವಳಿಯಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿರುವ ಹೊನ್ನೂರು ಸುತ್ತಮುತ್ತಲ ಕೃಷಿಕರು ಬರಗಾಲವನ್ನು ಎದುರಿಸುತ್ತಲೇ ಅರಳುವ ಅನನ್ಯ ಬೆಳೆ ಸಿರಿ ಧಾನ್ಯಗಳನ್ನು ಸಂರಕ್ಷಿಸುವತ್ತಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗುತ್ತಿರುವ ನವಣೆ, ಸಾಮೆ, ಬರಗು, ಊದಲು, ಹಾರಕ, ರಾಗಿ, ಸಜ್ಜೆ ಮತ್ತು ಸ್ಥಳೀಯ ಜೋಳ ಬೆಳೆದು ಇತರರಿಗೆ ಮಾದರಿಯಾಗುವ ಪ್ರಯತ್ನವನ್ನು ಇಲ್ಲಿನವರು ಮಾಡುತ್ತಲೇ ಇದ್ದಾರೆ. 2008ರಲ್ಲಿ ಜಾಗತಿಕ ಬ್ಯಾಂಕಿನ ಸಹಾಯದೊಂದಿಗೆ ಭಾರತೀಯ ಅನುಸಂಧಾನ ಪರಿಷತ್ ‘ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯ ಅಭಿವೃದ್ಧಿ ಯೋಜನೆ’ಯೂ ಇಲ್ಲಿನ ಬೆಳೆಗಾರರಿಗೆ ಸ್ಫೂರ್ತಿ ತುಂಬಿದೆ.

ಕಿರುಧಾನ್ಯ ಸಂರಕ್ಷಣೆ
‘ಹೊಲದಿಂದ ತಟ್ಟೆಗೆ’ ಈ ಮಾತಿನಂತೆ ಈ ಎಲ್ಲ ಕಿರುಧಾನ್ಯಗಳ ಮೌಲ್ಯವರ್ಧಿಸಿ ಪೂರೈಸುವ ಇರಾದೆಯನ್ನು ಒಳಗೊಂಡಿರುವ ಈ ಯೋಜನೆಯ ಫಲ ಕಾಣುವುದು ರೈತ ಹೊನ್ನೂರು ಪ್ರಕಾಶ್ ಅವರ ತೋಟದಲ್ಲಿ.

ಇಪ್ಪತ್ತು ವರ್ಷಗಳಿಂದ 20 ಎಕರೆಯಲ್ಲಿ ವೈವಿಧ್ಯಮಯ ಫಸಲು ಬೆಳೆದು ಸದಾ ಪ್ರಯೋಗದತ್ತ ಹೊರಳುತ್ತಿರುವ ಪ್ರಕಾಶ್‌ ಅವರು ಐದು

ವರ್ಷಗಳಿಂದ 2 ಎಕರೆಯನ್ನು ಸಾವಯವ ಕೃಷಿಯಲ್ಲಿ ಜೋಳ, ಊದಲು, ಸಾಮೆ ಸೇರಿದಂತೆ ಇನ್ನಿತರ ಸಿರಿಧಾನ್ಯ ಬೆಳೆಯಲು ಮೀಸಲಿಟ್ಟಿದ್ದಾರೆ.  ಕಿರುಧಾನ್ಯ ಸಂರಕ್ಷಣೆಗೆ ಆದ್ಯತೆ ನೀಡಿ ಇನ್ನಿತರ ಉತ್ಪಾದಕರಿಗೂ ಮಾದರಿಯಾಗಿದ್ದಾರೆ. ಒಂದೇ ತಾಕಿನಲ್ಲಿ ಹತ್ತಾರು ಬೆಳೆ ಬೆಳೆದು ಜಾಗೃತಿ ಮೂಡಿಸುತ್ತಿದ್ದಾರೆ.

ಹಲವರ ತಾಕಿಗೆ ಭೇಟಿ ನೀಡಿ ಕಿರುಧಾನ್ಯಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ‘ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ’ ದಾಖಲೆಯಲ್ಲಿ ಕೊರಲೆ, ಹಾರಕದ ಸುಳಿವಿಲ್ಲ. ಆದರೆ, ಅಳಿದು ಹೋಗುತ್ತಿರುವ ಇವುಗಳನ್ನು ಇಲ್ಲಿ ಬೆಳೆಯಲಾಗಿದೆ. ಇಂತಹ ತಳಿಗಳನ್ನು ಉಳಿಸಿ, ಇತರರು ಇವುಗಳನ್ನು ಬೆಳೆಯಲು ಉತ್ತೇಜಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಸಲ ಸೆಪ್ಟೆಂಬರ್‌ನಲ್ಲಿ ‘ಸಿರಿಧಾನ್ಯ ಕ್ಷೇತ್ರೋತ್ಸವ’ ಆಚರಿಸುವುದಾಗಿ ಕೃಷಿಕ ಹೊನ್ನೂರು ಪ್ರಕಾಶ್ ಸಂತಸದಿಂದ ಹೇಳುತ್ತಾರೆ.

‘ಭೂಮಿಯನ್ನು ಹಸನು ಮಾಡಿ, ಮುಂಗಾರು ಇಲ್ಲವೇ ಹಿಂಗಾರಿನಲ್ಲಿ ಸಿರಿಧಾನ್ಯವನ್ನು ಸಾಲು ಬಿತ್ತನೆ ಮಾಡಬೇಕು. ಜೂನ್‌–ಜುಲೈ ಬಿತ್ತನೆಗೆ ಪೂರಕ. ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳ ಅಗತ್ಯ ಇಲ್ಲ. ರೋಗಬಾಧೆ ತಟ್ಟದು. 3–5 ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ನಂತರ ಕಿರು ಧಾನ್ಯಗಳನ್ನು ಒರಳಲ್ಲಿ ಕುಟ್ಟಿ ಸಂಗ್ರಹಿಸಬಹುದು. ದೊಡ್ಡ ತಾಕಿನಲ್ಲಿ ಕಟಾವು ಯಂತ್ರಗಳ ಬಳಕೆಗೆ ಅವಕಾಶ ಇದೆ. ಧಾನ್ಯವನ್ನು ನಿತ್ಯದ ಬಳಕೆಗೆ ಬಳಸಿದರೆ ನಾರು, ಖನಿಜ, ಜೀವಸತ್ವ, ರಾಸಾಯನಿಕ ಉತ್ಕರ್ಷಗಳು ದೇಹಕ್ಕೆ ಲಭ್ಯವಾಗುತ್ತವೆ’ ಎನ್ನುವುದು ಪ್ರಕಾಶ್‌ ಅವರ ಅನುಭವದ ನುಡಿ.

‘ಬಿತ್ತನೆಗೆ ಬಳಸುವವರು ಬಲಿತ ಕೊರಳೆ ಹಾಗೂ ಹಾರಕಗಳನ್ನು ಸಂಸ್ಕರಿಸದೆ 6 ತಿಂಗಳು ಇಟ್ಟುಕೊಳ್ಳಬಹುದು. ನಂತರ ಧಾನ್ಯ ಬೇರ್ಪಡಿಸಿ ಬಿತ್ತನೆ ಮಾಡಬಹುದು. ಆದರೆ, ನವಣೆ, ಸಾವೆ, ಬರಗು, ಹೂದಲು ಸಂಗ್ರಹಿಸಿ ಇಟ್ಟುಕೊಂಡು ಬಳಸಲು ತೊಂದರೆಯಿಲ್ಲ. ಸಿರಿಧಾನ್ಯ ಬೆಳೆದ ತಾಕಿನಲ್ಲಿ ಹತ್ತು ಪಟ್ಟು ಭೂ ಫಲವತ್ತತೆಯೂ ಹೆಚ್ಚುತ್ತದೆ. ಬೇಸಾಯದಲ್ಲಿ ಸುಸ್ಥಿರತೆಯೂ ನೆಲೆಗೊಳ್ಳುತ್ತದೆ. ಇವುಗಳ ಸೇವನೆಯಿಂದ ಜಾನುವಾರುಗಳ ಹಾಲಿನ ಇಳುವರಿಯೂ ವೃದ್ಧಿಸುತ್ತದೆ’ ಎನ್ನುತ್ತಾರೆ ಅವರು.

ರಾಷ್ಟ್ರದಲ್ಲಿ ಉತ್ಪಾದನೆ ಕುಸಿತ
‘ರಾಷ್ಟ್ರದಲ್ಲಿ 1966–2006ರ ಅವಧಿಯಲ್ಲಿ ಶೇ 44 ರಷ್ಟು ಸಿರಿಧಾನ್ಯ ಪ್ರದೇಶಗಳು ಇತರ ಬೆಳೆಗಳ ಪಾಲಾಗಿವೆ.  ಸುಮಾರು 4.0 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 3.6 ದಶಲಕ್ಷ ಟನ್ ಸಿರಿಧಾನ್ಯ ಉತ್ಪಾದಿಸಲಾಗುತ್ತಿದೆ. ಕರ್ನಾಟಕದಲ್ಲಿ 1.3 ದಶಲಕ್ಷ ಹೆಕ್ಟೇರ್ ಪ್ರದೇಶದಿಂದ 1.6 ದಶಲಕ್ಷ ಟನ್ ಬೆಳೆಯಲಾಗುತ್ತದೆ. ದೇಶದಲ್ಲಿಯೇ ಶೇ 60ರಷ್ಟು ರಾಗಿ ಕರ್ನಾಟಕ ಒಂದರಿಂದಲೇ ಪೂರೈಸುತ್ತದೆ.

ಬೀಜ ಬ್ಯಾಂಕ್
ಸಾಮೆ ಹಾಗೂ ನವಣೆ ಬೆಳೆಯುವ ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಗದಗ, ಧಾರವಾಡ ಜಿಲ್ಲೆಗಳ ಸ್ಥಾನಿಕ ತಳಿಗಳನ್ನು ಸಂಗ್ರಹಿಸಿ

ಬ್ಯಾಡಗಿ ಹಾಗೂ ಹಾವೇರಿಗಳಲ್ಲಿ ಬೀಜಬ್ಯಾಂಕ್ ಸ್ಥಾಪಿಸಲಾಗಿದೆ. ಸಸ್ಯಜನ್ಯ ಔಷಧಿಗಳ ನಿಧಿಯಾದ ಇವುಗಳಿಗೆ ಬರಗಾಲದ ಮಿತ್ರರು ಎಂಬ ಹೆಸರಿದೆ. ಕೃಷಿ ಉತ್ಸವಗಳಲ್ಲಿ ರೈತರಿಗೆ, ಕಿರುಧಾನ್ಯದ ಮಹತ್ವವನ್ನು ಮನಗಾಣಿಸಲಾಗಿದೆ ಎನ್ನುತ್ತಾರೆ ಯಳಂದೂರು ಸಹಾಯಕ ಕೃಷಿ ನಿರ್ದೇಶಕರಾದ ಸುಂದರಮ್ಮ.

ಸಿರಿಧಾನ್ಯಗಳಿಗೆ ಉತ್ತೇ­ಜನ ನೀಡಲು ಮುಂದಿನ ಮುಂಗಾರು ಹಂಗಾಮಿನಿಂದ ಇವುಗಳನ್ನು ಬೆಳೆಯುವ ಕೃಷಿಕ­ರಿಗೆ ಪ್ರತಿ ಎಕರೆಗೆ 5 ಸಾವಿರ ರೂಪಾಯಿ ಪ್ರೋತ್ಸಾಹ­ಧನ ನೀಡಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲೆಯ ಹೊಸನಗರದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಘೋಷಿಸಿ­ದ್ದು, ಇದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ಪ್ರಕಾಶ್‌ ಅವರ ಸಂಪರ್ಕಕ್ಕೆ  96206 22213.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT