ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರ್ಸಿ-ಅಗರ ಜಂಕ್ಷನ್ ಸಿಗ್ನಲ್: ಯೋಜನೆ ಕೈಬಿಟ್ಟ ಬಿಡಿಎ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಸ್ಯ ಕಾಶಿ~ ಲಾಲ್‌ಬಾಗ್ ಮೂಲಕ ಸಿರ್ಸಿ-ಅಗರ ಜಂಕ್ಷನ್ ಸಿಗ್ನಲ್‌ಮುಕ್ತ ಕಾರಿಡಾರ್ ಕೈಗೆತ್ತಿಕೊಳ್ಳುವ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಬಿಟ್ಟಿದೆ.

ಈ ಉದ್ದೇಶಕ್ಕಾಗಿ ಲಾಲ್‌ಬಾಗ್‌ನ ಕೆಲ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಡಿಎ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಕಳೆದ ತಿಂಗಳು ಹೈಕೋರ್ಟ್‌ಗೆ ಸಲ್ಲಿಸಿದ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ಪ್ರಾಧಿಕಾರ ಈ ಅಂಶವನ್ನು ನ್ಯಾಯಾಲಯಕ್ಕೆ ತಿಳಿಸಿದೆ.

2009ರಲ್ಲಿ ಬಿಬಿಎಂಪಿಯು ಈ ಸಂಬಂಧ ಡಿಪಿಆರ್ ರೂಪಿಸಿತ್ತು. ಆದರೆ, ಹಣಕಾಸಿನ ಕೊರತೆಯಿಂದ ಅದನ್ನು ನಂತರ ಬಿಡಿಎಗೆ ವರ್ಗಾಯಿಸಲಾಯಿತು.

ಕರ್ನಾಟಕ ಉದ್ಯಾನಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರದೆ ಈ ಯೋಜನೆಗೆ ಲಾಲ್‌ಬಾಗ್‌ನ ಜಾಗವನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಬಿಡಿಎ ಸ್ಪಷ್ಟಪಡಿಸಿದೆ.

`ನಾವು ಲಾಲ್‌ಬಾಗ್‌ನ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂಬ ಅಂಶವನ್ನು ಪುನರುಚ್ಚರಿಸಿದ್ದೇವೆ. ಆದರೆ, ಹೈಕೋರ್ಟ್‌ಗೆ ಸಲ್ಲಿಸಿರುವ ಡಿಪಿಆರ್ ಅಂತಿಮವಲ್ಲ. ಅದನ್ನು ಮರು ಪರಿಶೀಲಿಸಬಹುದಾಗಿದೆ~ ಎಂದು ಬಿಡಿಎ ತಾಂತ್ರಿಕ ಸದಸ್ಯ ಚಿಕ್ಕರಾಯಪ್ಪ ತಿಳಿಸಿದ್ದಾರೆ.

ಚಿಕ್ಕರಾಯಪ್ಪನವರ ಪ್ರಕಾರ, ಉದ್ಯಾನದ ಬಳಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಹೈಕೋರ್ಟ್‌ನ ಈ ಹಿಂದಿನ ತೀರ್ಪಿನಲ್ಲಿಯೂ ಅವಕಾಶ ನಿರಾಕರಿಸಿರುವುದರಿಂದ `ಸಸ್ಯಕಾಶಿ~ಯ ಜಾಗವನ್ನು ಕಾರಿಡಾರ್ ಯೋಜನೆಗೆ ಬಳಸಿಕೊಳ್ಳುವಂತಹ ಸಾಧ್ಯತೆಗಳಿಲ್ಲ. ಅಲ್ಲದೆ, ಬಿಎಂಆರ್‌ಸಿಎಲ್ `ಮೆಟ್ರೊ~ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೂ ಹೈಕೋರ್ಟ್ ಸಮಿತಿಯೊಂದನ್ನು ರಚಿಸಿ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರವೇ 2009ರಲ್ಲಿ ಅನುಮತಿ ನೀಡಿದೆ ಎಂದು ಅವರು ವಿವರಿಸಿದರು.

ಬಿಬಿಎಂಪಿಯ ಮೂಲ ಯೋಜನೆ ಪ್ರಕಾರ, ಕಾರಿಡಾರ್ ಯೋಜನೆಯ ಅಂಗವಾಗಿ ಜವರಯ್ಯ ವೃತ್ತದಲ್ಲಿ ಲಾಲ್‌ಬಾಗ್ ಕೋಟೆ ರಸ್ತೆಯನ್ನು ವಿಸ್ತರಿಸಲು ಉದ್ಯಾನದ ಎರಡು ಮೀಟರ್ ಜಾಗ ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತು. ಈ ಮಹಾತ್ವಾಕಾಂಕ್ಷೆಯ ಯೋಜನೆ ಪೂರ್ಣಗೊಳ್ಳಬೇಕಾದರೆ ಸುಮಾರು 13,800 ಚದರ ಮೀಟರ್‌ನಷ್ಟು ಉದ್ಯಾನದ ಜಾಗ ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿತ್ತು. ಆದರೆ, 2009ರ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಈ ನಡುವೆ, ಲಾಲ್‌ಬಾಗ್ ಮುಖ್ಯ ದ್ವಾರ ಹಾಗೂ ಜೆ.ಸಿ. ರಸ್ತೆ ನಡುವಣ ಭಾಗ ಅತ್ಯಂತ ಕಿರಿದಾಗಿರುವುದರಿಂದ ಜಾಗ ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಬಿಬಿಎಂಪಿ ಸಲಹೆ ಮಾಡಿತ್ತು.

ಆದರೆ, ಈ ವೃತ್ತದಲ್ಲಿನ ಕೆಲವು ಪೆಟ್ಟಿಗೆ ಅಂಗಡಿಗಳು ಹಾಗೂ ಗ್ಯಾರೇಜ್‌ನ ಜಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಡಿಎ ಇದೀಗ ಹೇಳುತ್ತಿದೆ. ಉದ್ದೇಶಿತ ಸಿಗ್ನಲ್‌ಮುಕ್ತ ಕಾರಿಡಾರ್ ಯೋಜನೆಯನ್ವಯ ವೃತ್ತವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆಯಾದರೂ ಕೆಲವು ಸ್ವಹಿತಾಸಕ್ತಿಗಳು ಅನಗತ್ಯವಾಗಿ ಈ ವಿಷಯದ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ ಎಂದು ಚಿಕ್ಕರಾಯಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT