ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಸ್ಫೋಟ ದುರಂತ; ಮೃತರಿಗೆ ಲಕ್ಷ ರೂ ಪರಿಹಾರ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುಮನಹಳ್ಳಿಯ ನರಸಿಂಹಯ್ಯನಪಾಳ್ಯದ ಕಲ್ಯಾಣಮಂಟಪವೊಂದರಲ್ಲಿ ಬುಧವಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟಿಸಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕವಿತಾ ಹಾಗೂ ಜಸ್ವಂತ್ ಅವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮೇಯರ್ ಪಿ. ಶಾರದಮ್ಮ ಗುರುವಾರ ತಿಳಿಸಿದ್ದಾರೆ.

`ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಜಸ್ವಂತ್ ಎಂದು ಗುರುತಿಸಿರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಖಾತ್ರಿಪಡಿಸಿಕೊಂಡು ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.  ಹಾಗೆಯೇ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು~ ಎಂದು ಅವರು ಹೇಳಿದ್ದಾರೆ.

ಪರವಾನಗಿ ರದ್ದು: ನರಸಿಂಹಯ್ಯನಪಾಳ್ಯದಲ್ಲಿ ಬುಧವಾರ ದುರಂತ ಸಂಭವಿಸಿದ ಲಕ್ಷ್ಮಿ ವೆಂಕಟೇಶ್ವರ ಕನ್ವೆನ್ಷನ್ ಹಾಲ್ ಹೆಸರಿನ ಕಲ್ಯಾಣ ಮಂಟಪಕ್ಕೆ ನೀಡಲಾಗಿದ್ದ ಪರವಾನಗಿಯನ್ನು ಬಿಬಿಎಂಪಿ ಗುರುವಾರ ರದ್ದುಪಡಿಸಿದೆ.
`ಶ್ರೀನಿವಾಸ ನಾಯ್ಡು ಎಂಬುವರಿಗೆ ಸೇರಿದ ಕಲ್ಯಾಣ ಮಂಟಪಕ್ಕೆ 2008-09ನೇ ಸಾಲಿನಲ್ಲಿ ಪರವಾನಗಿ ನೀಡಲಾಗಿತ್ತು.

ಆದರೆ ಸೆಲ್ಲಾರ್ ಪ್ರದೇಶದಲ್ಲಿ ಅಡುಗೆಮನೆ ನಿರ್ಮಾಣ ಹಾಗೂ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡದ ಕಾರಣಕ್ಕೆ 2009-10ನೇ ಸಾಲಿನಲ್ಲಿ ಪರವಾನಗಿಯನ್ನು ನವೀಕರಿಸಿರಲಿಲ್ಲ~ ಎಂದು ಪಾಲಿಕೆ ರಾಜರಾಜೇಶ್ವರಿನಗರ ವಲಯದ ಉಪ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ `ಪ್ರಜಾವಾಣಿ~ಗೆ ತಿಳಿಸಿದರು.

`ಸೆಪ್ಟೆಂಬರ್ ಮೊದಲ ವಾರದಲ್ಲೂ ನೋಟಿಸ್ ನೀಡಲಾಗಿತ್ತು. ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪಕ್ಕೆ ನೀಡಲಾಗಿದ್ದ ಪರವಾನಗಿ ರದ್ದುಪಡಿಸಲಾಗಿದೆ~ ಎಂದರು.

ಮುಂದುವರೆದ ಕಾರ್ಯಾಚರಣೆ: ಕಲ್ಯಾಣ ಮಂಟಪದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಿಸಿ ಕಟ್ಟಡ ಕುಸಿದು ಬಿದ್ದಿದ್ದ ಸ್ಥಳದಲ್ಲಿ ಅವಶೇಷ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆದಿದೆ. ಶೇ 50ರಷ್ಟು ಅವಶೇಷಗಳನ್ನು ತೆರವು ಮಾಡಲಾಗಿದೆ. ಕುಸಿದ ಕಟ್ಟಡದ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಯಿತು.

ಕುಟುಂಬದ ಸದಸ್ಯರು ಅವಶೇಷದ ಅಡಿ ಸಿಲುಕಿಲ್ಲ. ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಿದ ನಂತರ ಸಾವಿನ ಸಂಖ್ಯೆ ಎಷ್ಟು ಎಂದು ಗೊತ್ತಾಗಲಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ಕಲ್ಯಾಣ ಮಂಟಪದ ಮಾಲೀಕ ಶ್ರೀನಿವಾಸ ನಾಯ್ಡು ಪರಾರಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಟ್ಟೆಗೆ ಬಣ್ಣ ಹಾಕುವ (ಡೈಯಿಂಗ್ ಯೂನಿಟ್) ಘಟಕವಿದ್ದ ಕಟ್ಟಡದ ಮಾಲೀಕ ದಿನೇಶ್‌ಕುಮಾರ್ ಎಂದು ಗೊತ್ತಾಗಿದೆ. ಈತನ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ತಿಳಿಸಿದರು.

ಕುಸಿದ ಕಟ್ಟಡದ ಮೇಲೆ ಮೊಬೈಲ್ ಸಂಸ್ಥೆಯ ಟವರ್ ಇದ್ದು, ಅದೂ ಕೂಡ ಕುಸಿಯುವ ಸಂಭವ ಇರುವುದರಿಂದ ಅದನ್ನು ತೆರವುಗೊಳಿಸಲು ಸಂಬಂಧಿಸಿದ ಸಂಸ್ಥೆಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT