ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಕಾನ್‌ ಸಿಟಿಯಲ್ಲಿ ಆರೋಗ್ಯ ಮೇಳ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಲಾದ ಜೀವನಶೈಲಿ, ಸಾಂಕ್ರಾಮಿಕ ರೋಗಗಳಾದ ಡೆಂಗೆ, ಚಿಕೂನ್‌ಗೂನ್ಯ, ಮಲೇರಿಯಾ ಮುಂತಾದವುಗಳಿಂದ ಜನ ತಲ್ಲಣಗೊಂಡಿದ್ದಾರೆ. ಹೀಗಾಗಿ ಆರೋಗ್ಯ ಕುರಿತ ಕಾಳಜಿ ಪ್ರತಿಯೊಬ್ಬರಲ್ಲೂ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ಎಂದರೆ ‘ಹೆಲ್ತ್‌ ಟೂರಿಸಂ ಸ್ಪಾಟ್’ ಎಂದೇ ಜಗತ್‌ಪ್ರಸಿದ್ಧ.

ಗಲ್ಲಿಗೊಂದು ಆರೋಗ್ಯ ಕೇಂದ್ರ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ಪ್ರಕೃತಿ ಚಿಕಿತ್ಸೆ, ಹೋಮಿಯೋಪಥಿ, ಆಯುರ್ವೇದ ಹಾಗೂ ಸೌಂದರ್ಯ ಚಿಕಿತ್ಸೆ ಸೇರಿದಂತೆ ಉತ್ತಮ ಆರೋಗ್ಯಕ್ಕೆ ಬೇಕಿರುವ ಎಲ್ಲಾ ರೀತಿಯ ನೆರವಿನ ಕೇಂದ್ರಗಳು ಬೆಂಗಳೂರಿನಲ್ಲಿವೆ.

ಹೀಗಾಗಿಯೇ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಹೆಲ್ತ್‌ ಪ್ರೊವೈಡರ್ಸ್ ಇಂಡಿಯಾ ಒಕ್ಕೂಟ ಹಾಗೂ ಅಂತರರಾಷ್ಟ್ರೀಯ ಬೆಂಗಳೂರು ಪ್ರದರ್ಶಕರ ಸೇವೆಗಳು ಜಂಟಿಯಾಗಿ ‘ಆರೋಗ್ಯ ಮೇಳ 2013’ ಹಾಗೂ ‘ಹೆಲ್ತೆಕ್ಸ್‌ 2013’ ಇಂಟರ್‌ನ್ಯಾಷನಲ್‌ ಎಂಬ ಮೇಳವನ್ನು ಆಯೋಜಿಸಿವೆ.

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇಳ ನಡೆಯಲಿದೆ. ಆರೋಗ್ಯ ಕಾಳಜಿಯ ಮುಂಜಾಗ್ರತಾ ಕ್ರಮಗಳು ಹಾಗೂ ತಪಾಸಣೆ, ಸುರಕ್ಷಿತ ಔಷಧೋಪಚಾರ, ಆರೋಗ್ಯ ರಕ್ಷಣೆಗೆ ಆರ್ಥಿಕ ನೆರವು ಯೋಜನೆಯ ಜತೆಗೆ ಬಹುಮುಖ್ಯವಾಗಿ ರೋಗಿಯ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತಂತೆ ಸಲಹೆ ನೀಡುವ ಹಲವಾರು ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಂಡಿವೆ.

ಅನಾರೋಗ್ಯದಿಂದ ಬಳಲುತ್ತಿರುವವರೊಂದಿಗೆ ನೇರ ಸಂಪರ್ಕ ಹೊಂದಿರುವ ಆರೋಗ್ಯ ಸಂಬಂಧಿ ಸಂಸ್ಥೆಗಳು ಹಾಗೂ ಆರೋಗ್ಯ ವಿಜ್ಞಾನ ಶಿಕ್ಷಣ ಸಂಸ್ಥೆಗಳಿಗೆ ಮೇಳ ನೆರವಾಗಲಿದೆ. ಉತ್ತಮ ಆರೋಗ್ಯ ಸೇವೆಯ ನಿರೀಕ್ಷೆಯಲ್ಲಿರುವ ಸಾರ್ವಜನಿಕರೂ ಪಾಲ್ಗೊಳ್ಳಬಹುದಾದ ಈ ಮೇಳದಲ್ಲಿ ಅಂತರರಾಷ್ಟ್ರೀಯ ವ್ಯಾಪಾರಿಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾ ಕಂಪೆನಿಗಳು, ಆರೋಗ್ಯ ಪ್ರವಾಸ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು, ಪ್ರಮುಖ ಕೈಗಾರಿಕಾ ಸಂಸ್ಥೆಗಳ ಮುಖ್ಯ ಸಿಇಒಗಳು ಹಾಗೂ ರಾಜ್ಯದ ಆರೋಗ್ಯ ಹಾಗೂ ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ನೂರಕ್ಕೂ ಹೆಚ್ಚು ಮಳಿಗೆಗಳು ಇದ್ದು, ಪರಿಣತರ ಮಾತು, ಶೈಕ್ಷಣಿಕ ಸಾಕ್ಷ್ಯಚಿತ್ರಗಳ ಪ್ರದರ್ಶನ, ಆರೋಗ್ಯ ತಪಾಸಣೆ, ಪರ್ಯಾಯ ಚಿಕಿತ್ಸೆ, ಆರೋಗ್ಯ ಕಾರ್ಯಕ್ರಮ, ತಜ್ಞರೊಂದಿಗೆ ಸಮಾಲೋಚನೆ, ಸಲಹೆ ಸೇರಿದಂತೆ ಹತ್ತು ಹಲವು ಆರೋಗ್ಯ ಸಂಬಂಧಿ ಸೇವೆಗಳು ಇಲ್ಲಿ ಲಭ್ಯ. ಹೃದಯ, ಪರ್ಯಾಯ ಔಷಧೋಪಚಾರ, ಸೌಂದರ್ಯವರ್ಧಕ ಹಾಗೂ ಚರ್ಮ ಸಂಬಂಧಿ ಚಿಕಿತ್ಸೆ, ದಂತ ಆರೈಕೆ, ಡಯಗ್ನಾಸ್ಟಿಕ್ಸ್‌ ಹಾಗೂ ಪ್ರಯೋಗಾಲಯಗಳು, ಎಂಡೋಕ್ರೈನಾಲಜಿ, ತೂಕ ನಿರ್ವಹಣೆ ಹಾಗೂ ನ್ಯೂಟ್ರಿಷನ್‌, ನೇತ್ರ ಆರೈಕೆ, ಕೌಟುಂಬಿಕ ಹಾಗೂ ವೈಯಕ್ತಿಕ ಆರೋಗ್ಯ, ಮಾನಸಿಕ ಆರೋಗ್ಯ, ಮೂಳೆ ಹಾಗೂ ಕ್ರೀಡೆಗೆ ಸಂಬಂಧಿಸಿದ ಆರೋಗ್ಯ, ಪುನರ್‌ವಸತಿ, ವಿಶೇಷ ಅಗತ್ಯಗಳು, ಮಹಿಳೆ ಮತ್ತು ಮಕ್ಕಳ ಆರೈಕೆ ಸೇರಿದಂತೆ ಹಲವು ಬಗೆಯ ಆರೋಗ್ಯ ಸಂಬಂಧಿ ಮಳಿಗೆಗಳು, ಸಲಹೆ ಸೂಚನೆಗಳು, ಮಾರ್ಗೋಪಾಯ, ಉಪಕರಣ ಇತ್ಯಾದಿ ಮೇಳದಲ್ಲಿ ಲಭ್ಯ.

ಮತ್ತೊಂದೆಡೆ ಹೆಲ್ತೆಕ್ಸ್‌ ಇಂಟರ್‌ನ್ಯಾಷನಲ್‌ ವಿಭಾಗದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕ್ಲಿನಿಕ್‌, ಡಯಗ್ನಾಸ್ಟಿಕ್‌ ಸೆಂಟರ್‌ಗಳಿಗೆ ನೆರವಾಗಬಲ್ಲ ಮಳಿಗೆಗಳಿವೆ. ಔಷಧ, ಶಸ್ತ್ರಚಿಕಿತ್ಸೆ ಉಪಕರಣಗಳು ಹಲವು ತಯಾರಕರ ಮಳಿಗೆಗಳು ಇಲ್ಲಿವೆ. ವಿದೇಶಗಳ ಹಲವಾರು ಕಂಪೆನಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ಮತ್ತೊಂದು ವಿಶೇಷ. ಈಗಾಗಲೇ ಮೂರು ಬಾರಿ ಪ್ರದರ್ಶನ ಆಯೋಜಿಸಿರುವ ಹೆಲ್ತೆಕ್ಸ್‌ ಈ ಬಾರಿ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

‘ರೋಗಿಯ ಸುರಕ್ಷತೆ ಹಾಗೂ ಗುಣಮಟ್ಟದ ಚಿಕಿತ್ಸೆಯ ಶುಲ್ಕ ತಗ್ಗಿಸುವ ವಿಷಯವೇ ಈ ವರ್ಷದ ಪ್ರಮುಖ ವಿಷಯ. ಅದರಲ್ಲೂ ಆರ್ಥರೈಟಿಸ್‌ ಹಾಗೂ ಸಂಧಿವಾತಗಳಿಗೆ ವೇದಿಕ್‌ ಮೆಡಿಕಲ್‌ ಮ್ಯಾನೇಜ್ಮೆಂಟ್‌ ಎಂಬ ನೋವು ನಿವಾರಕ ವ್ಯವಸ್ಥೆ, ಸ್ಥೂಲಕಾಯ, ಜೀವನ ಶೈಲಿ ವೃದ್ಧಿ ಹಾಗೂ ಒತ್ತಡ ನಿವಾರಣೆಗೆ ಮಾರ್ಗೋಪಾಯ, ಹಿರಿಯರಿಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಆರೈಕೆಯ ಮಾನದಂಡಗಳು ಹಾಗೂ ಉತ್ತಮ ಆರೋಗ್ಯಕ್ಕೆ ವೇದಿಕ್‌ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ನಮ್ಮ ಮಳಿಗೆಯಲ್ಲಿ ಮಾಹಿತಿ ನೀಡಲಾಗುತ್ತಿದೆ’ ಎಂದು ಡಾ. ಮೂರ್ತೀಸ್‌ ಮೆಡಿಕಲ್‌ ಸೆಂಟರ್‌ನ ಡಾ. ರವಿ ತಿಳಿಸಿದರು.

ಸೆ. ಏಳರವರೆಗೂ ನಡೆಯಲಿರುವ ಈ ಮೇಳದಲ್ಲಿ ಮಳಿಗೆಗಳ ಸುತ್ತಾಟದ ಜತೆಗೆ ಉಪನ್ಯಾಸ, ಕಾರ್ಯಾಗಾರ, ತಪಾಸಣೆ, ಪ್ರಾತ್ಯಕ್ಷಿಕೆಗಳ ಜತೆಗೆ ಆಸ್ಪತ್ರೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದು ಹೇಗೆ ಎಂಬುದರ ಕುರಿತೂ ಮಾಹಿತಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT