ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ನ್ಯಾಯಾಧೀಶರ ಹುದ್ದೆ- ನೋಟಿಸ್

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಕರೆದಿರುವ ಅರ್ಜಿಯಲ್ಲಿ ಅಭ್ಯರ್ಥಿಗಳ ವಯೋಮಾನ ಕಡಿತಗೊಳಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ವಕೀಲ ಜಿ.ಎಂ.ಚಂದ್ರಶೇಖರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ. ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಖಾಲಿ ಇರುವ 152 ನ್ಯಾಯಾಧೀಶರ ಹುದ್ದೆ ಭರ್ತಿಗೆ ಕಳೆದ ಆ.6ರಂದು ಕರೆದಿರುವ ಅಧಿಸೂಚನೆಯನ್ನು ಪ್ರಶ್ನಿಸಿದ್ದಾರೆ.

`2008ರ ಜೂನ್ 28ರ ಸರ್ಕಾರಿ ಆದೇಶದ ಅನ್ವಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 60ಕ್ಕೆ ಏರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ನಿಯಮಕ್ಕೆ ಸರ್ಕಾರ ತಿದ್ದುಪಡಿ ಮಾಡಿ ನೇಮಕಾತಿಯ ವಯೋಮಾನವನ್ನೂ ಹೆಚ್ಚು ಮಾಡಿದೆ.

ಇದರ ಅನ್ವಯ ಸಾಮಾನ್ಯ ವರ್ಗದ ಅಭ್ಯರ್ಥಿಯ ಗರಿಷ್ಠ ವಯಸ್ಸನ್ನು 33 ರಿಂದ 35ಕ್ಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳ ವಯಸ್ಸನ್ನು 38 ರಿಂದ 40ಕ್ಕೆ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಯಸ್ಸನ್ನು 38 ರಿಂದ 40ಕ್ಕೆ ಏರಿಸಲಾಗಿದೆ. ಇದೇ ನಿಯಮ ನ್ಯಾಯಾಂಗ ಇಲಾಖೆಗೂ ಅನ್ವಯ ಆಗಬೇಕು~ ಎನ್ನುವುದು ಅರ್ಜಿದಾರರ ದೂರು.

ಆದರೆ `ಕರ್ನಾಟಕ ನ್ಯಾಯಾಂಗ ಸೇವೆಗಳ (ನೇಮಕಾತಿ) ನಿಯಮ-2004~ಕ್ಕೆ ಇದುವರೆಗೂ ತಿದ್ದುಪಡಿ ಮಾಡಲಾಗಿಲ್ಲ. ಇದರಿಂದ ಹಿಂದಿನ ವಯೋಮಾನವೇ ಈಗಲೂ ಚಾಲ್ತಿಯಲ್ಲಿ ಇದೆ. ಇದನ್ನೇ ಈಗ ಕರೆದಿರುವ ಅಧಿಸೂಚನೆಯಲ್ಲಿಯೂ ಅಳವಡಿಸಲಾಗಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆ ಆಗಿದೆ ಎನ್ನುವುದು ಅರ್ಜಿದಾರರ ಆರೋಪ.

ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT