ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಎಲ್... ಚಿಯರ್ಸ್‌...

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹುಟ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ಸಿನಿಮಾ ತಾರೆಗಳು ಬ್ಯಾಟ್ ಹಿಡಿದು ಬಾಲ್  ಬೌಂಡರಿಗೆ ಅಟ್ಟುತ್ತಿದ್ದ ಪರಿ ಕಂಡು ಜನ ಹುಚ್ಚೆದ್ದು ಕುಣಿದರು.

ಕ್ರಿಕೆಟ್‌ಗೆ ಗ್ಲಾಮರ್‌ನ ಗ್ರ್ಯಾಮರ್ ತುಂಬಿಕೊಂಡಿದ್ದು ಆಗಲೇ. ಕ್ರಿಕೆಟ್ ಜತೆಗೆ ತಂಡ ಬೆಂಬಲಿಸುವ ಸಲುವಾಗಿ ತುಂಡುಡುಗೆ ತೊಟ್ಟು ಕ್ರಿಕೆಟ್ ಅಂಗಳಕ್ಕೆ ಹಿಂಡು ಹಿಂಡಾಗಿ ಕಾಲಿಟ್ಟ ಬಾಲಿವುಡ್ ಹಾಗೂ ದಕ್ಷಿಣ ಭಾರತದ ನಟೀಮಣಿಯರನ್ನು ನೋಡಿ ಪ್ರೇಕ್ಷಕರು ಧನ್ಯರಾದರು. ಚಿಯರ್‌ಗರ್ಲ್ಸ್ ಚಿನ್ನಾಟಕ್ಕೆ ಮನಸೋತರು.

ಈಗ ಸಿಸಿಎಲ್ ಹವಾ ಮತ್ತೆ ಹುಟ್ಟಿಕೊಂಡಿದೆ. ಕರ್ನಾಟಕ ಬುಲ್ಡೋಜರ್ಸ್‌ ತಂಡದಲ್ಲಿ ಸುದೀಪ್, ದರ್ಶನ್, ಚಿರಂಜೀವಿ ಸರ್ಜಾ, ತರುಣ್‌ಚಂದ್ರ, ಧ್ರುವ, ಪ್ರದೀಪ್, ರಾಹುಲ್, ತರುಣ್ ಸುಧೀರ್, ಭಾಸ್ಕರ್, ಕಾರ್ತಿಕ್ ಮೊದಲಾದ ನಟರಿದ್ದಾರೆ. ಆಟಗಾರರನ್ನು ಹುರಿದುಂಬಿಸುವ ಸಲುವಾಗಿ ತಾರೆಯರಾದ ಅಂಬರೀಷ್, ಮಾಧುರಿ ಭಟ್ಟಾಚಾರ್ಯ, ಐಂದ್ರಿತಾ ರೇ, ಸಂಜನಾ, ತೇಜಸ್ವಿನಿ, ಹರ್ಷಿತಾ ಪೂಣಚ್ಚ ಜತೆಗೆ ಇಡೀ ಚಿತ್ರ ತಂಡ ಭಾಗವಹಿಸಲಿದೆ.

ಮೈಸೂರಿನ ಗಲ್ಲಿ ಗಲ್ಲಿಯಲ್ಲೂ ಕ್ರಿಕೆಟ್ ಆಡಿ ಬೆಳೆದವರು ದರ್ಶನ್. `ಸಿಸಿಎಲ್ ಸೀಸನ್ 2~ರಲ್ಲಿ ನಟ ದರ್ಶನ್ ಆಟವಾಡುತ್ತಿರುವುದು ಈ ಬಾರಿಯ ಮತ್ತೊಂದು ಆಕರ್ಷಣೆ. ಇವರ ಆಗಮನ ತಂಡಕ್ಕೆ ಗಜಬಲ ಬಂದಂತಾಗಿದೆ. ಅಂದಹಾಗೆ, ಗಲ್ಲಿ ಕ್ರಿಕೆಟ್ ಆಟ ಆಡಿ ಬೆಳೆದಿರುವ ದರ್ಶನ್‌ಗೆ ಕ್ರಿಕೆಟ್‌ನ `ಎಬಿಸಿಡಿ~ ಕೂಡ ಗೊತ್ತಿಲ್ಲವಂತೆ!

`ಕಳೆದ ಬಾರಿಯ ಸಿಸಿಎಲ್‌ನಲ್ಲಿಯೇ ನಾನು ಆಟವಾಡಬೇಕಿತ್ತು. ಶೂಟಿಂಗ್ ಶೆಡ್ಯೂಲ್ ಜಾಸ್ತಿ ಇದ್ದಿದ್ದರಿಂದ ಸಮಯ ಹೊಂದಾಣಿಕೆ ಆಗಲಿಲ್ಲ. ಈ ಬಾರಿ ಸಿಸಿಎಲ್‌ನಲ್ಲಿ ಆಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ. ಪ್ರಾಕ್ಟೀಸ್ ತುಂಬಾ ಜೋರಾಗಿದೆ. ನಾನು ಕೊನೆ ಬಾರಿ ಬ್ಯಾಟ್ ಹಿಡಿದಿದ್ದು ರಾಜ್ ಕಪ್‌ನಲ್ಲಿ. ನಮ್ಮದು 11 ಜನರ ಸಿಂಹದ ಗುಂಪು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸುದೀಪ್ ಸಾರಥ್ಯದಲ್ಲಿ ಮುನ್ನೆಡವ ಕರ್ನಾಟಕ ಬುಲ್ಡೋಜರ್ಸ್‌ ಈ ಬಾರಿ ಸಖತ್ ಸ್ಟ್ರಾಂಗ್ ಆಗಿದೆ~ ಎಂದು ಎದೆಯುಬ್ಬಿಸಿದರು ದರ್ಶನ್.
`ಸಾವಿರಾರು ಜನರ ಮುಂದೆ ಕ್ಯಾಮೆರಾ ಎದುರಿಸುವ ನನಗೆ ಸ್ಟೇಡಿಯಂ ತುಂಬಾ ತುಂಬಿರುವ ಜನರ ನಡುವೆ ಕ್ರಿಕೆಟ್ ಆಡುವುದಕ್ಕೆ ಭಯವೇನೂ ಇಲ್ಲ. ಅಂದಹಾಗೆ, ತಂಡದ ಹುಡುಗರೆಲ್ಲರೂ ಮಾನಸಿಕವಾಗಿ ಸಡೃಢರಾಗಿ ಇರಬೇಕು ಎಂಬ ಉದ್ದೇಶದಿಂದ ಸಿನ್ಸಿಯರ್ ಆಗಿ ಯೋಗ ಕಲಿಯುತ್ತಿದ್ದೇವೆ. ನಮ್ಮ ಹುಡುಗರೆಲ್ಲಾ ಧಮ್, ಗುಂಡು ಬಿಟ್ಟು ಯೋಗಾ ಮಾಡಿ ಮೆಂಟಲಿ ಸ್ಟ್ರಾಂಗ್ ಆಗಿದ್ದಾರೆ~ ಎಂದು ಕಣ್ಣು ಮಿಟುಕಿಸಿದರು.

ಪುಟ್ಟ ಕಂಗಳ ಚೆಲುವೆ ಐಂದ್ರಿತಾ ರೇ ಕರ್ನಾಟಕ ಬುಲ್ಡೋಝರ್ಸ್‌ನ ರಾಯಭಾರಿ. ಇವರಿಗೂ ಕೂಡ ಕ್ರಿಕೆಟ್ ಅಂದರೆ ಪಂಚ ಪ್ರಾಣವಂತೆ. ಅಂತರರಾಷ್ಟ್ರೀಯ ಪಂದ್ಯಗಳಿದ್ದಾಗ ಮನೆ ಮಂದಿಯೆಲ್ಲಾ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡುತ್ತೇವೆ ಎನ್ನುವಾಗ ಆಕೆ ಕಣ್ಣುಗಳಲ್ಲಿ ಹೊಳೆಯುತ್ತವೆ. ಐಂದ್ರಿತಾ ರೇ ಕೂಡ ಅವಾಗವಾಗ ಕ್ರಿಕೆಟ್ ಆಡುತ್ತಾರಂತೆ. ಈ ಬಾರಿ ಕರ್ನಾಟಕ ಬುಲ್ಡೋಜರ್ಸ್‌ನ ರಾಯಭಾರಿ ಆಗಿರುವ ಐಂದ್ರಿತಾ ತಂಡವನ್ನು ಹುರಿದುಂಬಿಸಲು ಸಜ್ಜಾಗಿದ್ದಾರೆ.

`ಕರ್ನಾಟಕ ಬುಲ್ಡೋಝರ್ಸ್‌ ತಂಡ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಬಲಿಷ್ಟವಾಗಿದೆ. ಅದಕ್ಕೆಂದೇ ಸಖತ್ ತಯಾರಿ ಕೂಡ ನಡೆದಿದೆ. ತಂಡ ರಾಯಭಾರಿ ಆಗಿರುವುದು ನನಗೆ ಖುಷಿಯ ವಿಚಾರ. ನಮ್ಮ ತಂಡ ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ. ತಾರೆಗಳೆಲ್ಲರೂ ಆಡುವ ಸಿಸಿಎಲ್‌ಗೆ ಈಗ ಗ್ಲಾಮರ್ ಬಂದಿದೆ~ ಎನ್ನುತ್ತಾರೆ ಅವರು.

`ಈ ತಿಂಗಳು ಬಿಡುಗಡೆ ಆಗಲಿರುವ ಪಾರಿಜಾತ ಸಿನಿಮಾದಲ್ಲಿ ನನ್ನ ಮತ್ತು ದಿಗಂತ್ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಮನಸಾರೆ ಸಿನಿಮಾದಂತಹ ಬಿಗ್‌ಹಿಟ್ ಚಿತ್ರ ನೀಡಿದ ಜೋಡಿ ಮತ್ತೇ ಪಾರಿಜಾತದಲ್ಲಿ ಒಂದಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿ ಮೂಡಿ ಬಂದಿದೆ.
 
ಇನ್ನೂ ದುನಿಯಾ ವಿಜಯ್ ಜತೆಗಿನ ರಜನಿಕಾಂತ್ ಸಿನಿಮಾ ಕೂಡ ಸಿನಿಪ್ರಿಯರನ್ನು ಮೋಡಿ ಮಾಡಲಿದೆ ಎನ್ನುವ ಐಂದ್ರಿತಾಗೆ ಗಂಗೂಲಿ ನೆಚ್ಚಿನ ಬ್ಯಾಟ್ಸ್‌ಮನ್ ಅಂತೆ.

ವಿ ಆರ್ ಗುಡ್ ಫೈಟರ್ಸ್‌...
ನಟ ಸುದೀಪ್ ಕರ್ನಾಟಕ ಬುಲ್ಡೋಜರ್ಸ್‌ ತಂಡದ ನಾಯಕ. ಹಾಗೆಯೇ ತಂಡದ ಬೆನ್ನೆಲುಬು ಕೂಡ. ಅಭ್ಯಾಸ ಪಂದ್ಯದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರೂ ಕೂಡ ಅವರಲ್ಲಿ ಕ್ರೀಡೋತ್ಸಾಹ ಕುಗ್ಗಿಲ್ಲ. ಇವರು ಸಹ ಆಟಗಾರರನ್ನು ಹುರಿದುಂಬಿಸಿ ತಂಡ ಸ್ಫೂರ್ತಿ ತುಂಬುವ ಪರಿ ವೃತ್ತಿಪರ ಕ್ರಿಕೆಟಿಗರನ್ನು ನೆನಪಿಸುತ್ತದೆ.

ಕಿಚ್ಚ ಸುದೀಪ್ ಮನಸ್ಸಲ್ಲಿ ಕಿಚ್ಚು ಉರಿಯುತ್ತಿದೆ. ಅದಕ್ಕೆ ಕಾರಣ ಕಳೆದ ಬಾರಿ ಸಿಸಿಎಲ್ ಫೈನಲ್ ಮ್ಯಾಚ್. ಅವರು ಕಳೆದ ಬಾರಿಯ ಸಿಸಿಎಲ್ ಹ್ಯಾಂಗೋವರ್‌ನಿಂದ ಇನ್ನೂ ಹೊರಬಂದಿಲ್ಲ. ಏಕೆಂದರೆ ಅವರಿಗೆ ಹೋದಲ್ಲೆಲ್ಲಾ ಎದುರಾಗುವುದು ಒಂದೇ ಪ್ರಶ್ನೆ ಯಂತೆ. ಚನ್ನೈ ವಿರುದ್ದದ ಪಂದ್ಯದಲ್ಲಿ ಸೋತಿದ್ದು ಯಾಕೆ? ಈ ಪ್ರಶ್ನೆ ಎದುರಾದಾಗೆಲ್ಲ ಅವರ ಮನಸ್ಸು ಘಾಸಿಗೊಳ್ಳುತ್ತದಂತೆ.

`ನಾವು ಕಳೆದ ಬಾರಿ ಫೈನಲ್ ಮ್ಯಾಚ್ ಆಡಿ ನಗರಕ್ಕೆ ಬಂದಾಗ ಯಾರು ನಮ್ಮನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಲಿಲ್ಲ. ಬದಲಾಗಿ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡರು. ಆಟದಲ್ಲಿ ಸೋಲು ಗೆಲುವು ಇರುತ್ತದೆ. ಗೆದ್ದಾಗ ಹೊತ್ತು ಕುಣಿಸುವ ಜನರು ಸೋತಾಗ ದೂರಿದರು. ಆಪ್ತೇಷ್ಟರು ಸಹ ತಲೆ ಸವರಿ ಸಾಂತ್ವನ ಹೇಳಲಿಲ್ಲ~ ಎಂದು ಅಲವತ್ತುಕೊಂಡರು.

`ಕ್ರೀಡೆ ಒತ್ತಡ ನಿವಾರಣೆ ಮಾಡುವಂತಹುದು. ನಮ್ಮ ತಂಡದ ಮೇಲೆ ಗೆಲ್ಲಲೇ ಬೇಕು ಎಂದು ಒತ್ತಡ ಹೇರುವುದರ ಬದಲು ನಮ್ಮ ಬಗ್ಗೆ ನಂಬಿಕೆ, ಪ್ರೀತಿ ವಿಶ್ವಾಸ ತೋರಿದರೆ ಮಾತ್ರ ನಮ್ಮಲ್ಲಿ ಸ್ಫೂರ್ತಿ ಉಕ್ಕುತ್ತದೆ. ಒಂದಂತೂ ನಿಜ ವಿ ಆರ್ ಗುಡ್ ಫೈಟರ್ಸ್‌... ನಾವು ಈ ಬಾರಿ ಸಿಸಿಎಲ್ ಕಪ್ ಅನ್ನು ಗೆದ್ದೇ ತೀರುತ್ತೇವೆ~ ಎನ್ನುವಾದ ಸುದೀಪ್ ಅವರ ಕಣ್ಣ ಹುಬ್ಬುನಲ್ಲಿ ಆತ್ಮವಿಶ್ವಾಸ ತುಂಬಿತ್ತು.

ಶ್ರೀದೇವಿ, ಬೋನಿ ಕಪೂರ್ ರಾಯಭಾರಿ ಆಗಿರುವ ಪಶ್ಚಿಮ ಬಂಗಾಳ ತಂಡದೊಂದಿಗೆ ಕರ್ನಾಟಕ ಬುಲ್ಡೋಝರ್ಸ್‌ ಸೆಣಸಲಿದೆ. ಮೊದಲ ಮ್ಯಾಚ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ. ಅಂದಹಾಗೆ, ಬೆಂಗಾಲ್ ಟೈಗರ್ಸ್‌ ಅನ್ನು  ತರಬೇತುಗೊಳಿಸಿರುವುದು ದಾದಾ ಸೌರವ್ ಗಂಗೂಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT