ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಟಿವಿ ಕ್ಯಾಮೆರಾದಿಂದ ಖಾಸಗಿತನಕ್ಕೆ ಧಕ್ಕೆ

ಸಾರ್ವಜನಿಕ ಸ್ಥಳಗಳಲ್ಲಿ ‘ಕಣ್ಗಾವಲು’ ಅಳವಡಿಕೆಗೆ ನಾಗರಿಕರ ವಿರೋಧ
Last Updated 30 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಲ ಸಾರ್ವಜನಿಕ  ಮನರಂಜನಾ ಸ್ಥಳಗಳೂ ಸೇರಿದಂತೆ ಈಜುಕೊಳ ಮತ್ತು  ಜಿಮ್ನಾಸಿಯಂ ಕೇಂದ್ರದಲ್ಲಿ  ಕಾನೂನುಬಾಹಿರ ಚಟುವಟಿಕೆ­­ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹೊರಡಿಸಿ­ರುವ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿ­ಸುವ ನಿಯಮವನ್ನು ಜಾರಿಗೆ ತಂದರೆ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಆದೇಶ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಆ ಸ್ಥಳಗಳಿಗೆ ಬರುವ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆಯಾಗುವ ಆತಂಕವಿದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಗಳೇ ಅಭಿಪ್ರಾಯಪಟ್ಟಿದ್ದಾರೆ. ಹೊಸ ಮಾರ್ಗಸೂಚಿಯಂತೆ ಸಾರ್ವಜನಿಕ ಮನರಂಜನಾ ಸ್ಥಳದ ಆವರಣದಲ್ಲಿ ಮತ್ತು ಪ್ರವೇಶದ್ವಾರದಲ್ಲಿ ಉತ್ತಮ ಗುಣಮಟ್ಟದ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿ.ಸಿ ಟಿ.ವಿ) ಕ್ಯಾಮೆರಾ ಅಳವಡಿಸಬೇಕು.

ಅಲ್ಲದೇ, ಆ ಸ್ಥಳದಲ್ಲಿ ನಡೆಯುವ ಪ್ರತಿ ಚಟುವಟಿಕೆ ಕ್ಯಾಮೆರಾದಲ್ಲಿ ದಾಖ ಲಾಗುವಂತೆ ವ್ಯವಸ್ಥೆ ಮಾಡಬೇಕು. ಜತೆಗೆ ಪೊಲೀಸರು ಬಯಸಿದ ಎಲ್ಲಾ ಸಂದರ್ಭಗಳಲ್ಲಿ ಕ್ಯಾಮೆರಾ ಚಿತ್ರೀ ಕರಣದ ವಿವರಗಳನ್ನು ಒದಗಿಸಬೇಕು. ಕನಿಷ್ಠ ಮೂರು ತಿಂಗಳ ಚಿತ್ರೀಕರಣದ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಆದರೆ, ಈಜುಕೊಳದಲ್ಲಿ  ಮಹಿಳೆ­ಯರು ಈಜುಡುಗೆ ಅಥವಾ ತುಂಡು­ಡುಗೆಗಳನ್ನು ಧರಿಸಿರುತ್ತಾರೆ. ಜಿಮ್ನಾ­ಸಿಯಂ ಕೇಂದ್ರಗಳಲ್ಲಿ ವ್ಯಾಯಾಮ ಮಾಡುವಾಗ ಬಿಗಿ ಉಡುಪುಗಳನ್ನು ತೊಟ್ಟಿರುತ್ತಾರೆ. ಇದರಿಂದಾಗಿ ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿಯ ತುಣುಕು ಗಳು ದುರುಪಯೋಗ ವಾಗುವ ಭೀತಿ ಇದೆ.

‘ಕ್ಲಬ್‌ನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಲಾಗಿರುತ್ತದೆ. ಆದರೂ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ ಆದೇಶಿಸಿರುವುದು ಅರ್ಥಹೀನ’ ಎಂಬುದು ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಡಾ.ರವೀಂದ್ರ ಲಕ್ಕಪ್ಪ ಅವರ ಅಭಿಪ್ರಾಯ. ‘ಈಜುಕೊಳ ಮತ್ತು ಜಿಮ್ನಾಸಿಯಂ ಕೇಂದ್ರದಲ್ಲಿ ಅಳವಡಿಸುವ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗುವ ಸದಸ್ಯರ ಅಥವಾ ಮಹಿಳೆಯರ ದೃಶ್ಯವನ್ನು ದುರುಪಯೋಗಪಡಿಸಿಕೊಂಡು ಅವರ ಗೌರವಕ್ಕೆ ಧಕ್ಕೆ ತರುವ ಸಾಧ್ಯತೆ ಹೆಚ್ಚಿದೆ’ ಎಂದು ಅವರು ಹೇಳುತ್ತಾರೆ.

‘ಕ್ಲಬ್‌ನ ಸದಸ್ಯರಿಗೆ ಇಂತಹುದೇ ಬಟ್ಟೆ ಧರಿಸಿ ಬನ್ನಿ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ಇಂತಹ ಅಂಶಗಳ ಬಗ್ಗೆ ಪರಿಶೀಲನೆ ನಡೆಸದೆ ಕ್ಯಾಮೆರಾ ಅಳವಡಿಸುವಂತೆ ಆದೇಶಿಸಿದೆ. ಅಲ್ಲದೇ, ಕ್ಯಾಮೆರಾ ಅಳವಡಿಕೆಯಿಂದಾಗುವ ಸಾಧಕ–ಬಾಧಕಗಳ ಬಗ್ಗೆಯೂ ಕ್ಲಬ್‌ಗಳ ಆಡಳಿತ ಮಂಡಳಿ ಯೊಂದಿಗೆ ಚರ್ಚಿಸಿಲ್ಲ. ಈ ಆದೇಶ ದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು’ ಎಂದು ಆರ್‌ಎಂವಿ ಕ್ಲಬ್‌ನ ಉಪಾಧ್ಯಕ್ಷ ಬಿ.ಜಿ.ಹರೀಶ್‌ ದೂರಿದ್ದಾರೆ.

ಪೊಲೀಸ್ ಕಾಯ್ದೆಯಲ್ಲಿ ಏನಿದೆ?: ರಾಜ್ಯ ಪೊಲೀಸ್ ಕಾಯ್ದೆ-1963ರಲ್ಲಿ ಪ್ರಸ್ತಾಪಿಸಿರುವಂತೆ ಚಿತ್ರಮಂದಿರ, ರೇಸ್‌ಕೋರ್ಸ್‌, ಸರ್ಕಸ್‌, ಫೆನ್ಸಿಂಗ್‌ ಶಾಲೆ, ನೃತ್ಯ ಮತ್ತು ಸಂಗೀತಗೋಷ್ಠಿ ನಡೆಯುವ ಸಭಾಂಗಣ, ಜಿಮ್ನಾಸಿಯಂ ಕೇಂದ್ರ, ಈಜುಕೊಳಗಳು ಸಾರ್ವಜನಿಕ ಮನರಂಜನಾ ಸ್ಥಳಗಳಾಗಿವೆ.

ಕಾಯ್ದೆಯ ಅಧ್ಯಾಯ ಒಂದು (ಪ್ರಿಲಿಮಿನರಿ), ನಾಲ್ಕು (ಪೊಲೀಸ್‌ ನಿಯಮಾವಳಿ), ಆರು (ಪೊಲೀಸರ ಕಾರ್ಯ ನಿರ್ವಹಣಾಧಿಕಾರ), ಏಳರ (ಜೂಜು ಚಟುವಟಿಕೆಗಳ ತಡೆ) ಸೆಕ್ಷನ್‌ಗಳ ಅನ್ವಯ ಆ ಸ್ಥಳಗಳಿಗೆ ಸಂಬಂಧ­ಪಟ್ಟಂತೆ ನಿಯಮ ರೂಪಿಸಲು ಮತ್ತು ಪರವಾನಗಿ ನೀಡಲು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರ್ ಅವರಿಗೆ ಮ್ಯಾಜಿಸ್ಟೀರಿ ಯಲ್ ಅಧಿಕಾರವಿರುತ್ತದೆ.  ಈ ನಿಯಮದಡಿಯಲ್ಲಿ ಕ್ಯಾಮೆರಾ ಅಳ ವಡಿಕೆಗೆ ಮಾರ್ಗಸೂಚಿ ಹೊರಡಿಸಲಾಗಿದೆ.

ಖಾಸಗಿತನ ಗೌರವಿಸಿ
‘ಸಿ.ಸಿ ಕ್ಯಾಮೆರಾ ಇದೆ ಎಂಬ ಕಾರಣಕ್ಕೆ ಜನರ ಎಲ್ಲಾ ಚಟುವಟಿಕೆ­ಗಳ ಮೇಲೆ ಕಣ್ಗಾವಲು ಇಡುವುದು ಸರಿಯಲ್ಲ. ಜನರ ಖಾಸಗಿತನವನ್ನು ಗೌರವಿಸಬೇಕು. ಈ ಆದೇಶ ಮತ್ತಷ್ಟು ಅಪರಾಧ ಚಟುವಟಿಕೆಗಳಿಗೆ ಆಸ್ಪದ ಮಾಡಿ ಕೊಡುತ್ತದೆ. ಆದ್ದರಿಂದ ಈಜುಕೊಳ, ಜಿಮ್ನಾಸಿಯಂ ಕೇಂದ್ರ­ಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸು­ವುದನ್ನು ಅಲ್ಲಿನ ಪರವಾನಗಿದಾರರ ವಿವೇಚನೆಗೆ ಬಿಡುವುದು ಸೂಕ್ತ’
–ಎಸ್‌.ಮರಿಸ್ವಾಮಿ, ನಿವೃತ್ತ ಡಿಜಿಪಿ.

ಸದುದ್ದೇಶಕ್ಕೆ ಬಳಕೆಯಾಗಲಿ

‘ಸಾರ್ವಜನಿಕ ಮನರಂಜನಾ ಸ್ಥಳಗಳ ನಿರ್ವಹಣೆ ಸಂಬಂಧ ಸರ್ಕಾರ ಹೊಸ ಮಾರ್ಗಸೂಚಿ ಜಾರಿ­ಗೊಳಿಸಿ­ರುವುದು ಸ್ವಾಗತಾರ್ಹ. ಆದರೆ, ಈ ಆದೇಶ ಸದುದ್ದೇಶಕ್ಕೆ ಬಳಕೆ­ಯಾಗುವಂತೆ ಎಚ್ಚರ ವಹಿಸ­ಬೇಕು. ಏಕೆಂದರೆ ಕಾನೂನು ಸುವ್ಯವಸ್ಥೆ­­ಯಷ್ಟೇ ಖಾಸಗಿತನವೂ ಬಹಳ ಮುಖ್ಯ’
–ಡಾ.ಅಜಯ್‌ಕುಮಾರ್‌ ಸಿಂಗ್‌, ನಿವೃತ್ತ ಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT