ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸ್ಕೊ ಸಿಸ್ಟಮ್ಸ: ಸಮುದಾಯ ಯೋಜನೆಯ ಯಶಸ್ಸು

Last Updated 2 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿ ಭಾರಿ ಅಂತರ ಇದೆ.  ಗ್ರಾಮೀಣ ಪ್ರದೇಶದಲ್ಲಿನ ವೈದ್ಯಕೀಯ ಸೌಲಭ್ಯದ ಚಿತ್ರಣ  ನೆನಪಿಸಿಕೊಂಡರೆ ಆತಂಕವಾಗುತ್ತದೆ.
 
ಹಳ್ಳಿಗಾಡಿನಲ್ಲಿನ ವೈದ್ಯರ ತೀವ್ರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು `ಸಿಸ್ಕೊ ಸಿಸ್ಟಮ್ಸ~ನ ಸಮುದಾಯ ಯೋಜನೆ ನೆರವಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆಯ ವ್ಯವಸ್ಥಿತ ಮತ್ತು ಸಮರ್ಥವಾದ ತಂತ್ರಜ್ಞಾನ ಆಧಾರಿತ ಯೋಜನೆ ಇದಾಗಿದೆ.

ಗ್ರಾಮೀಣ ಪ್ರದೇಶದ ಕಾಯಿಲೆಪೀಡಿತರು ಮತ್ತು ನೂರಾರು ಮೈಲು ದೂರಗಳಲ್ಲಿನ ವೈದ್ಯರ ಮಧ್ಯೆ ನೇರ ಮುಖಾಮುಖಿ ಸಂಪರ್ಕ ಕಲ್ಪಿಸಿ ಅವರಿಗೆ  ವೈದ್ಯರ ಸಲಹೆ ದೊರೆಯುವಂತೆ ಮಾಡುವಲ್ಲಿ `ದೂರ ವೈದ್ಯಕೀಯ~ (tele medicine) ಪ್ರಮುಖ ಪಾತ್ರ ನಿರ್ವಹಿಸುತ್ತದೆ. 

ಇಲ್ಲಿ ಬಳಕೆಯಾಗುವ ದೂರವಾಣಿ ಅಥವಾ ಉಪಗ್ರಹ ಆಧಾರಿತ ಸಂಪರ್ಕ ಸೌಲಭ್ಯವು ಸೀಮಿತ ಪ್ರಯೋಜನಗಳನ್ನು ಹೊಂದಿದೆ. ಒಮ್ಮುಖ ಸಂಪರ್ಕ ಮತ್ತಿತರ ಸಮಸ್ಯೆಗಳು ಇಲ್ಲಿ ಎದುರಾಗುತ್ತವೆ.

ಆದರೆ, ಸಿಸ್ಕೊ ಸಂಸ್ಥೆ ಜಾರಿಗೆ ತಂದಿರುವ ಇಂಟರ್‌ನೆಟ್ ಆಧಾರಿತ(internet protocol) ಬ್ರಾಡ್‌ಬ್ಯಾಂಡ್ ಸೌಲಭ್ಯವು ವಿಡಿಯೊ ಸಂವಾದ  ಸೌಲಭ್ಯದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.

ನೂರಾರು ಕಿ.ಮೀ. ದೂರದಲ್ಲಿನ ಗ್ರಾಮಗಳ ಜತೆಗೂ ನಗರದಲ್ಲಿದ್ದಕೊಂಡೇ ಉತ್ಕೃಷ್ಣ ಗುಣಮಟ್ಟದ ವಿಡಿಯೊ ಸಂವಾದ ನಡೆಸಲು ಇದರಿಂದ ಸಾಧ್ಯವಾಗಿದೆ. ಇದಕ್ಕೆ ಭಾರತ್ ಸಂಚಾರ್ ನಿಗಮ ನಿಯಮಿತದ (ಬಿಎಸ್‌ಎನ್‌ಎಲ್) ಆಪ್ಟಿಕಲ್ ಫೈಬರ್ ಸಂಪರ್ಕ ಜಾಲವೂ ನೆರವಾಗುತ್ತಿದೆ.

ರಾಯಚೂರಿನಿಂದ 30 ಕಿ.ಮೀ ದೂರ ಇರುವ ಗಿಲ್ಲೆಸುಗೂರ್ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಅರೆ ವೈದ್ಯಕೀಯ ಕೇಂದ್ರಕ್ಕೆ (paramedic- Point of Diagnosis)  ಬರುವ ಕಾಯಿಲೆಪೀಡಿತರು, ಬೆಂಗಳೂರಿನ ಪರಿಣತ ವೈದ್ಯರಿಗೆ ಮುಖಾಮುಖಿಯಾಗಿ ತಮ್ಮ ಕಾಯಿಲೆ ಗುಣಲಕ್ಷಣ ಹೇಳಿಕೊಳ್ಳುತ್ತಾರೆ. ಅದನ್ನು ತಮ್ಮೆದುರಿನ ದೊಡ್ಡ ಪರದೆ ಮೇಲೆ ವೀಕ್ಷಿಸುವ ವೈದ್ಯರು ಅದಕ್ಕೆ ಸೂಕ್ತ ಪರಿಹಾರ ಸೂಚಿಸುತ್ತಾರೆ.

ರೋಗಿ ಮತ್ತು ವೈದ್ಯರ ಮಧ್ಯೆ ದ್ವಿಭಾಷಿಯಾಗಿ ಕಾರ್ಯನಿರ್ವಹಿಸುವ ದಾದಿಯು ಸಂವಾದ ಸುಸೂತ್ರವಾಗಿರುವಂತೆ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ನೋಡಿಕೊಳ್ಳುತ್ತಾರೆ. ರೋಗಿಯ ನಾಡಿ ಮಿಡಿತ, ಎದೆಬಡಿತವನ್ನೂ ಬೆಂಗಳೂರಿನಲ್ಲಿ ಇರುವ ವೈದ್ಯರು ಕರಾರುವಾಕ್ಕಾಗಿ ಆಲಿಸಿ ರೋಗಿಯ ಆರೋಗ್ಯದಲ್ಲಿನ ಏರುಪೇರನ್ನು ತಿಳಿದುಕೊಳ್ಳುವಂತೆ ಈ `ದೂರ-ವೈದ್ಯಕೀಯ~ ಸೌಲಭ್ಯ ಸಜ್ಜುಗೊಳಿಸಲಾಗಿದೆ.  ಇದಕ್ಕೆ ಸಿಸ್ಕೊ ಟೆಲೆ ಪ್ರೆಸೆನ್ಸ್ ತಂತ್ರಜ್ಞಾನ ನೆರವಿಗೆ ಬಂದಿದೆ.

ಈ ಯೋಜನೆಯು ಗ್ರಾಮೀಣ ಜನರಿಗೆ ಬಹುಬಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಹೊರರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯರೂ ಗರಿಷ್ಠ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಸಿಸ್ಕೊ ಸಿಸ್ಟಮ್ಸನ `ಆರ್ಥಿಕ ಸೇರ್ಪಡೆ~ ಯೋಜನೆಯ ಅಧ್ಯಕ್ಷ ಅರವಿಂದ ಸೀತಾರಾಮನ್ ಅಭಿಪ್ರಾಯಪಡುತ್ತಾರೆ.

2009ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಹದಿಂದ ತತ್ತರಿಸಿದ್ದ ಮತ್ತು ರಾಜ್ಯದಲ್ಲಿಯೇ ಅತಿ ಹಿಂದುಳಿದ ಜಿಲ್ಲೆ ರಾಯಚೂರಿನ ಗ್ರಾಮಗಳ ಸಂತ್ರಸ್ತರಿಗೆ   ಸಿಸ್ಕೊ ಸಿಸ್ಟಮ್ಸ ಸಂಸ್ಥೆಯು ನೆರವು ಹಸ್ತ ಚಾಚಿತ್ತು.  ಅಮೆರಿಕ ಮೂಲದ `ಸಿಸ್ಕೊ ಸಿಸ್ಟಮ್ಸ~ ದೂರ ಸಂಪರ್ಕ, ಗ್ರಾಹಕ ಬಳಕೆ ವಿದ್ಯುನ್ಮಾನ ಸಾಧನ, ಸಂಪರ್ಕ ಜಾಲ ಮತ್ತು ತಂತ್ರಜ್ಞಾನದ ಬಹುರಾಷ್ಟ್ರೀಯ ಸಂಸ್ಥೆಯಾಗಿದೆ.

`ಉದ್ದಿಮೆ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ~ (ಸಿಎಸ್‌ಆರ್) ಕಾರ್ಯಕ್ರಮದಡಿ  ಮೂರು ಗ್ರಾಮಗಳನ್ನು ದತ್ತು ತೆಗೆದುಕೊಂಡಿದೆ. ಪ್ರವಾಹಪೀಡಿತ 5 ಗ್ರಾಮಗಳ ಸಂತ್ರಸ್ತರಿಗೆ 3570 ಮನೆಗಳ ನಿರ್ಮಾಣ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸಿಸ್ಕೊ ಸಿಸ್ಟಮ್ಸ ರೂ. 45 ಕೋಟಿಗಳನ್ನು ವೆಚ್ಚ ಮಾಡುತ್ತಿದೆ.

ಗ್ರಾಮ ಮತ್ತು ನಗರಗಳ ಮಧ್ಯೆ ಇರುವ ಅಂತರವನ್ನು ತಂತ್ರಜ್ಞಾನದ ಮೂಲಕ ದೂರ ಮಾಡಲು ಸಾಧ್ಯ ಎನ್ನುವುದು `ಸಿಸ್ಕೊ~ ಸಂಸ್ಥೆಯ ನಂಬಿಕೆಯಾಗಿದೆ. ಈ ಕಾರಣಕ್ಕೆ `ಸಮುದಾಯ~ ಯೋಜನೆಯಡಿ ಈ ಸೌಲಭ್ಯಗಳನ್ನು ಜಾರಿಗೆ ತರುತ್ತಿದೆ.

ಬೆಂಗಳೂರಿನ `ಆರ್‌ಎಕ್ಸ್‌ಡಿಎಕ್ಸ್ ಸ್ಪೆಶಾಲಿಟಿ~ ಆಸ್ಪತ್ರೆಯ ಸಹಯೋಗದಲ್ಲಿ ಈ ದತ್ತು ತೆಗೆದುಕೊಂಡ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ `ದೂರ ವೈದ್ಯಕೀಯ~ ಸೌಲಭ್ಯ ಒದಗಿಸುತ್ತಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಜತೆ ಒಪ್ಪಂದವನ್ನೂ ಮಾಡಿಕೊಂಡಿದೆ. `ಸಿಸ್ಕೊ~ದ  ಹೆಲ್ತ್ ಪ್ರೆಸೆನ್ಸ್ ಯೋಜನೆಯು ಧ್ವನಿ ಮತ್ತು ದೃಶ್ಯ  ಆಧಾರಿತ ವೈದ್ಯಕೀಯ ಮಾಹಿತಿಯು ಗರಿಷ್ಠ ಗುಣಮಟ್ಟದ ಸೇವೆ  ಒದಗಿಸಲು ನೆರವಾಗುತ್ತಿದೆ.

ಪೂರಕ ಶಿಕ್ಷಣ
ರಾಯಚೂರು ಜಿಲ್ಲೆಯ ಐದು ಗ್ರಾಮಗಳಲ್ಲಿನ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಶಿಕ್ಷಣ ಸೌಲಭ್ಯದಡಿ ಇಂಗ್ಲಿಷ್ ಬೋಧನೆಯನ್ನೂ ಕಾರ್ಯಗತಗೊಳಿಸಲಾಗುತ್ತಿದೆ.
 
ಬೆಂಗಳೂರಿನಲ್ಲಿ ಇರುವ ವಿಷಯ ಪರಿಣತರು ಸರಳ ಕನ್ನಡದಲ್ಲಿಯೇ ಇಂಗ್ಲಿಷ್ ಬೋಧಿಸುತ್ತಾರೆ. ಬಿಚಾಲಿ, ತುಂಗಭದ್ರಾ ಮತ್ತು ಥಲಮಾರಿ ಗ್ರಾಮಗಳಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ದೊಡ್ಡ ಪರದೆ, ಪ್ರೊಜೆಕ್ಟರ್, ವೆಬ್ ಕ್ಯಾಮರಾ, ಧ್ವನಿವರ್ಧಕ, ಮೈಕ್, ವಿದ್ಯುನ್ಮಾನ ಹಲಗೆ, ಇಂಟರ್‌ನೆಟ್, ವೈರ್‌ಲೆಸ್ ಸಂಪರ್ಕ ಸೌಲಭ್ಯ ಮುಂತಾದವು ಈ ವಿಶಿಷ್ಟ `ದೂರ ಶಿಕ್ಷಣ~ಕ್ಕೆ ನೆರವಾಗುತ್ತಿವೆ.  ಬೇರೆ ಬೇರೆ ಸ್ಥಳಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಬೋಧಿಸಲೂ ಈ ತಂತ್ರಜ್ಞಾನದಿಂದ ಸಾಧ್ಯವಾಗಿದೆ.

ಸರ್ಕಾರೇತರ ಸ್ವಯಂ ಸೇವಾ ಸಂಘಟನೆ `ಚಿಲ್ಡ್ರನ್ಸ್ ಲವ್ ಕಾಸಲ್ಸ್ ಟ್ರಸ್ಟ್~ನ ಸಹಯೋಗದಲ್ಲಿ `ಇ-ಪಾಠಶಾಲೆ~ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪಠ್ಯಕ್ರಮದಡಿ ಹೊಸ ಹೊಸ ವಿಷಯಗಳನ್ನೂ ಬೋಧಿಸಲಾಗುತ್ತಿದೆ. 

`ಸಮುದಾಯ~ ಯೋಜನೆಯನ್ನು ಸದ್ಯಕ್ಕೆ ರಾಯಚೂರು, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಒಂದು ವರ್ಷದ ನಂತರ ಇದರ ಯಶಸ್ಸು ಆಧರಿಸಿ   ಮುಂದುವರೆಸಲು ಮತ್ತು ಇತರ ಜಿಲ್ಲೆಗಳಿಗೆ ವಿಸ್ತರಿಸಲು ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು.

ಖಾಸಗಿ ಮತ್ತು ಸರ್ಕಾರದ ಪಾಲುದಾರಿಕೆಯಡಿ ಈ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರ ಮತ್ತು  ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೂ ಈ  ಯೋಜನೆಯ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.
 
ಆಪ್ಟಿಕಲ್ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್ ಸೌಲಭ್ಯ ಎಲ್ಲೆಡೆ ಜಾರಿಗೆ ಬಂದರೆ, ವೈದ್ಯಕೀಯ ಮತ್ತು ಶೈಕ್ಷಣಿಕ ಸೌಲಭ್ಯ ಒದಗಿಸುವುದು ಇನ್ನಷ್ಟು ಸುಲಭವಾಗಲಿದೆ ಎಂದೂ ಅರವಿಂದ್ ಸೀತಾರಾಮನ್ ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಈ ಬಗೆಯ ವೈದ್ಯಕೀಯ ಮತ್ತು ಪೂರಕ ಶಿಕ್ಷಣ ಸೌಲಭ್ಯ ಅಳವಡಿಸುವ ಯೋಜನೆ   ಇತರ ಜಿಲ್ಲೆಗಳಿಗೂ ವಿಸ್ತರಿಸಿದರೆ ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳು ಗಮನಾರ್ಹವಾಗಿ ದೂರವಾಗಲಿವೆ. ಅವರ ವೈಯಕ್ತಿಕ ಮತ್ತು ಗ್ರಾಮೀಣ ಅರ್ಥ ವ್ಯವಸ್ಥೆಯ ಆರೋಗ್ಯವೂ ಸುಧಾರಿಸೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT