ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಮೊಗ್ಗೆಯ ಸೌಂದರ್ಯ ಹೆಚ್ಚಿಸಿದ ಐತಿಹಾಸಿಕ ಕಟ್ಟಡಗಳು

Last Updated 13 ಡಿಸೆಂಬರ್ 2012, 6:59 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿ ಕಳೆದ ಮೂರು ವರ್ಷಗಳಲ್ಲಿ ತನ್ನ ಚಹರೆ ಬದಲಿಸಿಕೊಂಡಿದೆ.

ಕೆಲವೇ ವರ್ಷಗಳ ಹಿಂದೆ ನಗರಕ್ಕೆ ಭೇಟಿ ನೀಡಿದವರು; ಇಂದು ನಗರಕ್ಕೆ ಬಂದರೆ ಇದು ಶಿವಮೊಗ್ಗವೇ ಎಂದು ಬೆರಗುಗೊಳ್ಳುವಷ್ಟು ಬದಲಾಗಿದೆ. ಆದರೆ, ಇಂದಿಗೂ ನಗರದ ಸೌಂದರ್ಯಕ್ಕೆ ಮೆರುಗು ನೀಡಿರುವುದು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ವಿಶಿಷ್ಟ ವಾಸ್ತುಶಿಲ್ಪವುಳ್ಳ ಪಾರಂಪಾರಿಕ ಕಟ್ಟಡಗಳು. ಇಂದು ಸಹ ಸುಸ್ಥಿತಿಯಲ್ಲಿರುವ ಈ ಪಾರಂಪಾರಿಕ ಕಟ್ಟಡಗಳು ಅಂದಿನ ವಾಸ್ತುಶಿಲ್ಪ ಮತ್ತು ಗುಣಮಟ್ಟದ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿವೆ.

ನಗರದಲ್ಲಿ ಇರುವ ಪ್ರಮುಖ ಕಟ್ಟಡಗಳು ಬ್ರಿಟಿಷ್‌ರ ಆಳ್ವಿಕೆ ಕಾಲದಲ್ಲಿ ಹಾಗೂ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾಗಿದ್ದು, ಈ ಕಟ್ಟಡಗಳಲ್ಲಿ ಜಿಲ್ಲೆಯ ಶಕ್ತಿ ಕೇಂದ್ರಗಳಾದ ಜಿಲ್ಲಾ ಪಂಚಾಯ್ತಿ, ನಗರಸಭೆ, ಜಿಲ್ಲಾ ಕಾರಾಗೃಹ ಮತ್ತು ಶಾಲಾ-ಕಾಲೇಜುಗಳು ಇಂದಿಗೂ ಕಾರ್ಯ ನಿರ್ವಹಿಸುತ್ತಿವೆ.
ಇಂದಿನ ನಗರಸಭೆ, ಜಿಲ್ಲಾ ಪಂಚಾಯ್ತಿ, ಬಿ.ಎಚ್. ರಸ್ತೆಯ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಎನ್‌ಸಿಸಿ ಕಟ್ಟಡಗಳು ಅಂದು ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದದ್ದನ್ನು ಇತಿಹಾಸದ ಪುಟಗಳು ಹೇಳುತ್ತವೆ.

ಇಂದು ನಗರಸಭೆ; ಅಂದು ಸಾಂಸ್ಕೃತಿಕ ಕಟ್ಟಡ
ಇಂದು ನಗರಸಭೆ ಕಾರ್ಯನಿರ್ವಹಿಸುತ್ತಿರುವ ಕಟ್ಟಡವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನವೆಂಬರ್ 27, 1898ರಲ್ಲಿ ತಮ್ಮ ತಂದೆ ಜಯಚಾಮರಾಜೇಂದ್ರ ಒಡೆಯರ್ ಅವರ ಹೆಸರಿನಲ್ಲಿ `ಜಯ ಚಾಮರಾಜೇಂದ್ರ ಮೆಮೋರಿಯಲ್ ಹಾಲ್' ಎಂಬ ಕಟ್ಟಡ ನಿರ್ಮಿಸಿದ್ದರು.

ಸಂಗೀತ, ಸಾಹಿತ್ಯ, ಸಂಸ್ಕೃತಿ ಪೋಷಣೆಗೆ ಮಹತ್ವ ನೀಡಿದ್ದ ಮೈಸೂರು ಅರಸರು ಶಿವಮೊಗ್ಗದಲ್ಲಿ ಕಲೆ-ಸಂಸ್ಕೃತಿ ಪೋಷಿಸಲು ಈ ಕಟ್ಟಡ ನಿರ್ಮಿಸಿದ್ದರು.ಆಗಸ್ಟ್19, 1913ರಂದು ಪುರಸಭೆಯ ಪ್ರಥಮ ಅಧಿವೇಶನ ಈ ಕಟ್ಟಡದಲ್ಲಿ ನಡೆದಿದ್ದು, ಈ ಹಿಂದೆ ಕಟ್ಟಡದ ಬಳಕೆ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.

ಎರಡನೇ ಶತಮಾನದತ್ತ ಹೆಜ್ಜೆ
ಬಿ.ಎಚ್. ರಸ್ತೆಯಲ್ಲಿ ಸರ್ಕಾರಿ ಪ್ರೌಢಶಾಲೆ ಜಾಗ ಈ ಹಿಂದೆ 13 ಎಕರೆ ವಿಸ್ತೀಣ ಹೊಂದಿತ್ತು. ಈ ಕಟ್ಟಡದಲ್ಲಿ ಆಂಗ್ಲರ ಅಶ್ವದಳ ತುಕಡಿ ಅಭ್ಯಾಸ ನಡೆಸುತ್ತಿತ್ತು. ಇದೇ ಕಟ್ಟಡದ ಎದುರಿನ ಸೈನ್ಸ್ ಮೈದಾನದ ಕಟ್ಟಡದಲ್ಲಿ ಅಶ್ವದಳಕ್ಕೆ ಸೇರಿದ ಕುದುರೆಲಾಯ ಇತ್ತು. 

ಹಿರಿಯ ಪ್ರಾಥಮಿಕ ಶಾಲೆಯನ್ನು ಚಾರ್ಲ್ಸ್ ವುಡ್ ವರದಿಯಂತೆ ಸ್ಥಾಪಿಸಲಾಗಿತ್ತು. ಆದರೆ, ಅಧಿಕೃತವಾಗಿ ಈ ಕಟ್ಟಡದಲ್ಲಿ ಶಾಲೆ ಆರಂಭವಾಗಿದ್ದು 1881ರಲ್ಲಿ. ಶಿವಮೊಗ್ಗದ ಬಹುತೇಕ ಗಣ್ಯರು ಇದೇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ ಎನ್ನುತ್ತಾರೆ ಇತಿಹಾಸ ತಜ್ಞ ಖಂಡೋಬರಾವ್.

ಈ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಬಳಸಿರುವ ಸಾಮಗ್ರಿಗಳನ್ನು ಇಂಗ್ಲೆಂಡ್‌ನಿಂದ ತರಲಾಗಿದೆ. ಕಟ್ಟಡಕ್ಕೆ ಬಳಸಿರುವ ಹೆಂಚಿನಲ್ಲಿ ಮೇಡ್ ಇನ್ ಇಂಗ್ಲೆಂಡ್ ಎಂದು ಹೆಸರಿದೆ ಎನ್ನುತ್ತಾರೆ ಪ್ರಾಧ್ಯಾಪಕ ಡಾ.ಸದಾನಂದ ಹೆಗಡೆ.

ವಯಸ್ಸು 141; ಇನ್ನೂ ಬಳಕೆಯಲ್ಲಿದೆ
ನಗರವನ್ನು ಸಂಪರ್ಕಿಸುವ ತುಂಗಾ ನದಿ ಸೇತುವೆ ನಿರ್ಮಾಣ ಯೋಜನೆಯನ್ನು ಬ್ರಿಟಿಷ್ ಅಧಿಕಾರಿ ಜೆ.ಡಿ. ಗೋರ್ಡಾನ್ ರೂಪಿಸಿದ್ದರು. ಅಂತಿಮವಾಗಿ ಸೇತುವೆ 1871ರಲ್ಲಿ ನಿರ್ಮಾಣಗೊಂಡಿತು. ಸೇತುವೆ ನಿರ್ಮಾಣಕ್ಕೆ ಕಪ್ಪೆಚಿಪ್ಪಿನ ಸುಣ್ಣ, ಸುಟ್ಟ ಇಟ್ಟಿಗೆಗಳನ್ನು ಬಳಸಲಾಗಿದೆ. 

217ಮೀಟರ್ ಉದ್ದವಿರುವ ಸೇತುವೆ 53.38 ಅಡಿ ಎತ್ತರವಿದ್ದು, 25ಅಡಿ ಅಗಲವಿದೆ. ಸೇತುವೆಯ ಕೆಳಭಾಗದಲ್ಲಿ 16ಕಮಾನುಗಳಿದ್ದು, ಪ್ರತಿ  ಕಮಾನುಗಳು 53.13 ಅಡಿಗಳ ಅಂತರದಲ್ಲಿವೆ. ಇವು ಸೇತುವೆಗೆ ಶಕ್ತಿ ನೀಡಿವೆ.

ನೆನಪಿನಲ್ಲಿ ಮಾತ್ರ ಜಿಲ್ಲಾ ಕಾರಾಗೃಹ
ಹೋರಾಟದ ಭೂಮಿಯಾಗಿರುವ ಜಿಲ್ಲೆಯಲ್ಲಿ ಸ್ವಾತಂತ್ರ ಚಳವಳಿಗಳಲ್ಲಾಗಲಿ, ಹೋರಾಟಗಳಲ್ಲಾಗಲಿ ಜನರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಬ್ರಿಟಿಷರು ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ  1872ರಲ್ಲಿ 46.09ಎಕರೆ ವಿಸ್ತೀರ್ಣದಲ್ಲಿ ಜಿಲ್ಲಾ ಕಾರಾಗೃಹ ಎದ್ದು ನಿಂತಿತ್ತು.

155ಜನ ಪುರುಷ ಮತ್ತು 12ಜನ ಮಹಿಳಾ ಕೈದಿಗಳನ್ನು ಬಂಧಿಸುವಷ್ಟು ವ್ಯವಸ್ಥೆ ಈ ಕಾರಾಗೃಹದಲ್ಲಿದೆ. ಸ್ವಾತಂತ್ರ್ಯ ಹೋರಾಟಗಲ್ಲಿ ಭಾಗವಹಿಸಿದ್ದ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ನಾಗಪ್ಪ ಶೆಟ್ಟಿ, ಎಸ್.ಆರ್. ರುದ್ರಪ್ಪ, ಬಸಪ್ಪ, ಡಿ.ಎಚ್. ಸುಬ್ಬಣ್ಣ ಅವರಂತಹ ಹೋರಾಟಗಾರರು ಈಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್. ಪಟೇಲ್, ಎಸ್. ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ ಅನೇಕ ಹೋರಾಟಗಳಲ್ಲಿ ಭಾಗಿಯಾಗಿ, ಸೆರೆವಾಸ ಮಾಡಿದ್ದರು.

ಸಹ್ಯಾದ್ರಿ ಕಾಲೇಜು
ಇಂಟರ್ ಮೀಡಿಯೇಟ್ ಕಾಲೇಜು ಸ್ಥಾಪಿಸಲು ಈಗಿನ ಸಹ್ಯಾದ್ರಿ ಕಾಲೇಜು ಇರುವ ಕಟ್ಟಡವನ್ನು ಚಾಮರಾಜೇಂದ್ರ ಒಡೆಯರ್ ಫೆಬ್ರುವರಿ 12, 1941ರಲ್ಲಿ ನಿರ್ಮಿಸಿದರು. ಮುಂದೆ ಕುವೆಂಪು ಅವರು ಕಾಲೇಜಿಗೆ `ಸಹ್ಯಾದ್ರಿ ಕಾಲೇಜು' ಎಂದು ನಾಮಕರಣ ಮಾಡಿದರು. ನಂತರ ಕುವೆಂಪು ವಿಶ್ವವಿದ್ಯಾಲಯ ಕಾಲೇಜಿನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿತು.

ಜಿಲ್ಲಾ ಪಂಚಾಯ್ತಿ ಕಟ್ಟಡ
ಜಿಲ್ಲಾ ಪಂಚಾಯ್ತಿ ಕಟ್ಟಡ ಖಾಸಗಿ ಕಟ್ಟಡವಾಗಿದ್ದು, 23ಜನವರಿ 1936ರಲ್ಲಿ ಕೆ. ಶಂಕರನಾರಾಯಣ ಎಂಬುವವರಿಂದ ಅಂದಿನ ಜಿಲ್ಲಾ ಬೋರ್ಡ್ ಕಚೇರಿಗಾಗಿ ್ಙ 15ಸಾವಿರಕ್ಕೆ ಖರೀದಿಸಿತ್ತು. ಈ ಕಟ್ಟಡ 3ಎಕರೆ 11ಗುಂಟೆ ಆವರಣವನ್ನು ಹೊಂದಿದೆ.

ನಗರದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವ ಮೆರೆಯುತ್ತಿರುವ ಸ್ಮಾರಕ ಮತ್ತು ಕಟ್ಟಡಗಳನ್ನು ಉಳಿಸುವ ಬಗ್ಗೆ ಚಿಂತಿಸಬೇಕಿದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಪಾರಂಪಾರಿಕ ಹಿನ್ನೆಲೆ ಹೊಂದಿದ್ದ ಹಳೆ ಜಿಲ್ಲಾಧಿಕಾರಿ ಕಟ್ಟಡ, ಕೋರ್ಪಲ್ಲಯ್ಯನ ಛತ್ರ ಮತ್ತು ಡಯಟ್ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡಗಳನ್ನು ಈಚೆಗೆ ಒಡೆದು ಹಾಕಿ, ಹೊಸ ಕಟ್ಟಡಗಳನ್ನು ಕಟ್ಟಲಾಗಿದೆ. ಪಾರಂಪಾರಿಕ ಕಟ್ಟಡಗಳನ್ನು ನಾಶಪಡಿಸುವ ಬದಲು ಸ್ಮಾರಕಗಳನ್ನಾಗಿ ಉಳಿಸಿ, ಬೇರೆ ಸ್ಥಳದಲ್ಲಿ ಅವಶ್ಯ ಇರುವ ಕಟ್ಟಡ ನಿರ್ಮಿಸುವ ಬಗ್ಗೆ ಚಿಂತಿಸಬೇಕು ಎಂಬುದು ನಾಗರಿಕರ ಆಶಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT