ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಪರಿವರ್ತನೆ; ಎಂಟು ಮಂದಿ ಸೆರೆ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಕೋಟಾದ ಸೀಟುಗಳನ್ನು ಅಕ್ರಮವಾಗಿ ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳಾಗಿ ಪರಿವರ್ತಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳು ಮಾಡುತ್ತಿರುವ ದಂದೆಯನ್ನು ಬಯಲಿಗೆಳೆದಿರುವ ನಗರದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ವಂಚನೆ ಆರೋಪದ ಮೇಲೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ವಿಲ್ಸನ್‌ಗಾರ್ಡನ್‌ನ ಡಾ.ಇಬ್ರಾಹಿಂ ಪಾಷಾ(40), ಎಚ್‌ಬಿಆರ್ ಲೇಔಟ್ ಐದನೇ ಬ್ಲಾಕ್‌ನ ರಫತ್ ಮಲ್ಲಿಕ್(53), ಯಶವಂತಪುರದ ಬಿ.ಕೆ.ನಗರದ ಶೇಖ್ ಅಬ್ದುಲ್ ಫಾರೂಕ್(40), ಕೆ.ಆರ್.ಗಾರ್ಡನ್‌ನ ಜೀವನಹಳ್ಳಿಯ ರಾಮಚಂದ್ರಸಾ (32), ಚಿಕ್ಕಮಗಳೂರಿನ ಗಾಂಧಿನಗರದ ಕೆ.ಝಡ್.ವಹೀಂ ಅಹಮ್ಮದ್(32), ಆರ್.ಟಿ. ನಗರದ ಎಂ.ಎಂ.ಲೇಔಟ್‌ನ ಸೈಯದ್ ಅಬ್ರಹಾರ್ (32), ಶಿವಾಜಿನಗರದ ಇಷ್ತಿಯಾಕ್ ಅಹಮ್ಮದ್ ಉರುಫ್ ಇಷ್ತಿಯಾಕ್ ಪೈಲ್ವಾನ್ (40) ಮತ್ತು ಕೋರಮಂಗಲ ಆರನೇ ಬ್ಲಾಕ್‌ನ ರಾಜಗೋಪಾಲರೆಡ್ಡಿ (60) ಬಂಧಿತರು.

ಸರ್ಕಾರಿ ಕೋಟಾದ ಸೀಟುಗಳನ್ನು ಅಕ್ರಮವಾಗಿ ಮ್ಯಾನೇಜ್‌ಮೆಂಟ್ ಸೀಟಿಗೆ ಪರಿವರ್ತಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಂಪೇಗೌಡ ವೈದ್ಯಕೀಯ ಸಂಸ್ಥೆ (ಕಿಮ್ಸ) ಆಡಳಿತ ಮಂಡಳಿ ಸದಸ್ಯ ಎ.ಪ್ರಸಾದ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ವೈದ್ಯರಾಗಿರುವ, ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆರೋಪಿಗಳು ಸಿಇಟಿ ಪರೀಕ್ಷೆ ಬರೆಸುತ್ತಿದ್ದರು. ಪರೀಕ್ಷೆ ಬರೆದವರು ಸೀಟು ಪಡೆದ ನಂತರ ಅವರಿಗೆ ಹಣ ಕೊಟ್ಟು ಕಳುಹಿಸುತ್ತಿದ್ದರು.

ಹಣ ಪಡೆದವರು ಪ್ರವೇಶ ಪಡೆಯದೆ ಇರುವುದರಿಂದ ಆ ಸೀಟು ಖಾಲಿ ಉಳಿಯುತ್ತಿತ್ತು. ನಿಗದಿತ ಸಮಯದೊಳಗೆ ಪ್ರವೇಶ ಪಡೆಯದಿದ್ದರೆ ಸರ್ಕಾರಿ ಕೋಟಾದ ಸೀಟುಗಳು ಆಡಳಿತ ಮಂಡಳಿ ಸೀಟಾಗಿ ಪರಿವರ್ತನೆ ಆಗುತ್ತವೆ. ಹೀಗೆ ಪರಿವರ್ತಿಸಿದ ಸೀಟನ್ನು 75ರಿಂದ 90 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

`ಇಂಥ ಒಂದು ಜಾಲ ಕಾರ್ಯ ನಿರ್ವಹಿಸುತ್ತಿದೆ. ಪರೀಕ್ಷೆ ಬರೆಯುವವರಿಗೆ ಆರೋಪಿಗಳೇ ತರಬೇತಿ ನೀಡುತ್ತಿದ್ದ ಬಗ್ಗೆ ಸಹ ಮಾಹಿತಿ ಸಿಕ್ಕಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ~ ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿಯವರು ಈ ಜಾಲದಲ್ಲಿಭಾಗಿಯಾಗಿದ್ದರೆಯೇ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡದ ಮಿರ್ಜಿ, `ಆ ಬಗ್ಗೆ ತನಿಖೆ ಮಾಡಬೇಕಿದೆ~ ಎಂದರು.

`ಕಾಲೇಜಿನ ಆಡಳಿತ ಮಂಡಳಿಯವರು ಭಾಗಿಯಾಗದೆ ಈ ದಂಧೆ ಮಾಡಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ಸಾಕ್ಷ್ಯಗಳನ್ನು ಕಲೆ ಹಾಕಬೇಕಿದೆ. ಸೀಟು ಪರಿವರ್ತನೆ ಮಾತ್ರವಲ್ಲ, ಸೀಟು ಕೊಡಿಸುವುದಾಗಿ ಹಲವು ಮಂದಿಯಿಂದ ಹಣ ಪಡೆದು ಮೋಸ ಮಾಡುತ್ತಿದ್ದರು. ಬೆದರಿಕೆ ಸಹ ಹಾಕುತ್ತಿದ್ದರು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿಯಮದ ದುರುಪಯೋಗ: ಸರ್ಕಾರಿ ಕೋಟಾದ ಸೀಟು ಪಡೆದ ವಿದ್ಯಾರ್ಥಿ, ಆ ಕಾಲೇಜಿನಲ್ಲಿ ಪ್ರವೇಶ ಪಡೆಯದಿದ್ದರೆ ಅಂತಹ ಸೀಟು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಸೇರುತ್ತದೆ. ಈ ನಿಯಮವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವು ಖಾಸಗಿ ಕಾಲೇಜುಗಳು ವಂಚನೆಯಲ್ಲಿ ನಿರತವಾಗಿವೆ.

ಉದಾಹರಣೆಗೆ, ಈಗಾಗಲೇ ಸೀಟು ಪಡೆದಿರುವ ಅಥವಾ ಕೆಲಸ ಮಾಡುತ್ತಿರುವ ವೈದ್ಯರಿಂದ ಸಿಇಟಿ ಪರೀಕ್ಷೆ ಬರೆಸಲಾಗುತ್ತದೆ. ಅವರು ಉನ್ನತ ರ‌್ಯಾಂಕ್ ಪಡೆದ ನಂತರ ನಿರ್ದಿಷ್ಟ ಕಾಲೇಜಿನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳಲು (ಯಾವ ಕಾಲೇಜಿನ ಆಡಳಿತ ಮಂಡಳಿ ವಂಚನೆಯಲ್ಲಿ ನಿರತವಾಗಿದೆಯೋ ಆ ಕಾಲೇಜಿನಲ್ಲಿ) ಹೇಳಲಾಗುತ್ತದೆ.

ಅದೇ ಸೀಟಿಗೆ ವಿದ್ಯಾರ್ಥಿಯೊಬ್ಬನಿಂದ ಎಪ್ಪತ್ತರಿಂದ ತೊಂಬತ್ತು ಲಕ್ಷ ಹಣ ಪಡೆಯಲಾಗುತ್ತದೆ. ಮೊದಲೇ ಒಪ್ಪಂದವಾದಂತೆ ಸೀಟು ಪಡೆದವರು ಪ್ರವೇಶ ಪಡೆಯುವುದಿಲ್ಲ. ಆ ಸೀಟು ಆಡಳಿತ ಮಂಡಳಿಗೆ ಲಭ್ಯವಾಗುತ್ತದೆ ಮತ್ತು ಮೊದಲೇ ಹಣ ನೀಡಿದ ವಿದ್ಯಾರ್ಥಿಗೆ ಆ ಸೀಟು ನೀಡಲಾಗುತ್ತದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಎಸಿಪಿ ಜಿ.ಟಿ.ಅಜ್ಜಪ್ಪ ಮತ್ತು ಸಿಬ್ಬಂದಿ ತಂಡ ಜಾಲವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದೆ.

ಸಚಿವ, ವಿಧಾನಪರಿಷತ್ ಸದಸ್ಯರಿಗೂ ಪಾಲು
ರಾಜ್ಯದ ಒಬ್ಬ ಹಾಲಿ ಸಚಿವ, ಒಬ್ಬ ವಿಧಾನಪರಿಷತ್ ಸದಸ್ಯ, ಮಂಡಳಿಯೊಂದರ ಉಪಾಧ್ಯಕ್ಷ, ದಾವಣಗೆರೆ ಜಿಲ್ಲೆಯ ಒಬ್ಬ ರಾಜಕಾರಣಿ  ಮತ್ತು ನಗರದ ಪೊಲೀಸ್ ವಿಭಾಗದ ಪ್ರಮುಖ ಹುದ್ದೆಯಲ್ಲಿದ್ದು ಈಗ ವರ್ಗಾವಣೆಯಾಗಿರುವ ಐಪಿಎಸ್ ಆಧಿಕಾರಿಯೊಬ್ಬರ ಹೆಸರನ್ನು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.
ದಂಧೆಯಲ್ಲಿ ಬಂದ ಹಣದಲ್ಲಿ ಎಲ್ಲರಿಗೂ ಪಾಲು ನೀಡಲಾಗಿದೆ. ಬಹಳ ವರ್ಷಗಳಿಂದಲೂ ಈ ದಂಧೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT