ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟ್ ಬೆಲ್ಟ್ ಜೀವರಕ್ಷಕ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಂಜೆ ಸುಮಾರು ಏಳು ಮೂವತ್ತರ ಮಬ್ಬು. ಊರಹಬ್ಬವನ್ನು ತೋಟದ ಬಳಿ ಆಚರಿಸಿ  ಐಶಾರಾಮಿ ಎಂಟು ಸೀಟಿನ ಕಾರೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು ರಾಮಶೇಷಪ್ಪ, ಇವರ ಹೊಸ ವಾಹನವನ್ನು ನೋಡಿದ ಸ್ನೇಹಿತರು ಮತ್ತು ಆಳುಕಾಳುಗಳು ತಾವೂ ಬೆಂಗಳೂರಿನಲ್ಲಿ ಸುತ್ತಾಡಿಕೊಂಡು ಬರುವ ಯೋಜನೆ ಹಾಕಿದರು. ಹಾಕಿ ಅದೇ ಕಾರಿನಲ್ಲಿ ಒಟ್ಟು ಎಂಟು ಜನರು ಹೊರಟರು.

ಐದಾರು ಕಿಲೋಮೀಟರ್ ಚಲಿಸಿದ ಕಾರು ತನಗಾರು ಸಾಟಿಯಿಲ್ಲ ಎಂಬಂತೆ ಗಾಳಿಯನ್ನು ಸೀಳಿಕೊಂಡು ಪವನರಾಜನಂತೆ ಹೆದ್ದಾರಿಯಲ್ಲಿದ್ದ ಎಲ್ಲಾ ವಾಹನಗಳನ್ನು ಹಿಮ್ಮೆಟ್ಟಿ  ಸಾಗುತ್ತಿತ್ತು. ಚಾಲನೆ ಮಾಡುತ್ತಿದ್ದ ರಾಮಶೇಷಪ್ಪ ಹತ್ತಾರು ವರ್ಷಗಳ ಚಾಲನೆಯ ಸಂಪೂರ್ಣ ಅನುಭವ ಇದ್ದವರು, ಎಲ್ಲರೂ ತೋಟದ ಮನೆಯಲ್ಲಿನ ಊಟದ ಬಗ್ಗೆಯೆ ಹರಟುತ್ತಾ ಸಾಗಿದರು.

ತಕ್ಷಣವೇ ಹೆದ್ದಾರಿಯಲ್ಲಿ ಎಡಭಾಗದಲ್ಲಿ ನಿಧಾನವಾಗಿ ಸಾಗುತ್ತಿದ್ದ ಮಾರುತಿ ಕಾರೊಂದಕ್ಕೆ ಸ್ವಲ್ಪವೇ ತಾಗಿದಂತಾಗಿ ರಾಮಶೇಷಪ್ಪ ತಮ್ಮ ಕಾರನ್ನು ಬಲಭಾಗಕ್ಕೆ ತಿರುಗಿಸಿದರು. ಪವರ್ ಸ್ಟೇರಿಂಗ್ ಇದ್ದ ಕಾರು ಸ್ವಲ್ಪ ಹೆಚ್ಚಾಗಿಯೇ ತಿರುಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇವರ ಕಾರು ಮೂರ‌್ನಾಲ್ಕು ಪಲ್ಟಿ ಹೊಡೆದು ಚಕ್ರಗಳನ್ನು ಮೇಲ್ಮುಖ ಮಾಡಿಕೊಂಡು ನಿಂತಿತು. ಇನ್ನೊಂದು ಮಾರುತಿ ಕಾರು ಒಂದು ಪಲ್ಟಿ ಹೊಡೆದು ರಸ್ತೆಯ ಎಡಭಾಗದಲ್ಲಿ ಹಿಂದೆ ತಿರುಗಿ ನಿಂತಿತು.

ಸ್ಥಳದಲ್ಲಿ ಕೂಗಾಟ, ಚೀರಾಟ, ಆಕ್ರಂದನ, ರಸ್ತೆಯಲ್ಲಿ ರಕ್ತದೋಕುಳಿ ಶುರುವಾಯಿತು. ಬೆಂಗಳೂರಿಗೆ ಸಮೀಪವಾದ್ದರಿಂದ ಸ್ಥಳಕ್ಕೆ ಆಂಬುಲೆನ್ಸ್, ಪೊಲೀಸ್ ಜೀಪು ತಕ್ಷಣ ಆಗಮಿಸಿ ಪರಿಶೀಲಿಸಿದಾಗ ಐಶಾರಾಮಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೆ ಮರಣಹೊಂದಿದ್ದರು, ಉಳಿದ ಮೂವರಿಗೆ ತೀವ್ರತರ ಪೆಟ್ಟಾಗಿತ್ತು.

ಮಾರುತಿ ಕಾರಿನಲ್ಲಿದ್ದ ಎಲ್ಲಾ ಐವರಿಗೂ ಸಣ್ಣ ಪುಟ್ಟ ಗಾಯಗಳು ಮಾತ್ರ ಕಂಡುಬಂದಿತು. ಮತ್ತೊಂದು ಪ್ರಕರಣದಲ್ಲಿ ಹಿರಿಯ ಕಾನೂನು ಅಧಿಕಾರಿಯೊಬ್ಬರು ರಾಮನಗರ ಬಳಿ ತಮ್ಮ ಕಾರನ್ನು ತಾಮೊಬ್ಬರೇ ಚಾಲನೆ ಮಾಡಿಕೊಂಡು ಬೆಂಗಳೂರಿಗೆ ಹೋಗುವಾಗ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಇವರ ವಾಹನಕ್ಕೆ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಹಿಂದಿನಿಂದ ಗುದ್ದಿದ ರಭಸಕ್ಕೆ ಇವರ ಕಾರು ಪಲ್ಟಿ ಹೊಡೆದು ಪಕ್ಕದ ರಸ್ತೆಯಲ್ಲಿ ನೇರವಾಗಿ ನಿಂತಿತು.

ಸಾರ್ವಜನಿಕರೆಲ್ಲಾ ಸಹಾಯಹಸ್ತ ಚಾಚಿ ರಕ್ಷಿಸಲು ಮುಂದಾದಾಗ ಯಾವುದೇ ಸಣ್ಣಪುಟ್ಟ ಗಾಯಗಳು ಆಗದೆ ಕಾರಿನಿಂದ ಹೊರಬಂದರು. ಮೊದಲನೆ ಪ್ರಕರಣದಲ್ಲಿ ಐಶಾರಾಮಿ ಕಾರಿನಲ್ಲಿದ್ದವರಾರೂ  ಸೀಟ್ ಬೆಲ್ಟ್ ಧರಿಸಿರಲಿಲ್ಲ. ಆದರೆ ಮಾರುತಿ ಕಾರಿನಲ್ಲಿದ್ದವರೆಲ್ಲರೂ  ಸೀಟ್ ಬೆಲ್ಟ್ ಧರಿಸಿದ್ದರು ! ಎರಡನೆ ಪ್ರಕರಣದಲ್ಲಿ ಚಾಲಕರಾದ ಕಾನೂನು ಅಧಿಕಾರಿ  ಸೀಟ್‌ಬೆಲ್ಟ್ ಧರಿಸಿದ್ದರು. ಹೌದು, ಸೀಟ್ ಬೆಲ್ಟ್‌ಗಳಿಗೆ ಪ್ರಾಣ ಕಾಪಾಡುವ ಮಾಂತ್ರಿಕ ಶಕ್ತಿ ಇದೆ!

ಯಾವುದೇ ವಾಹನವು ವೇಗವಾಗಿ ಚಲಿಸುತ್ತಿರುವಾಗ ಅದರ ಒಳಾಂಗಣದ ಪ್ರತಿಯೊಂದು ವಸ್ತುವೂ-ಪ್ರಯಾಣಿಕರೂ ಸೇರಿದಂತೆ-ಅಷ್ಟೇ ವೇಗದಲ್ಲಿ ಚಲಿಸುತ್ತಿರುತ್ತವೆ. ಈ ವಾಹನವನ್ನು ಆಕಸ್ಮಿಕವಾಗಿ ತಕ್ಷಣ ನಿಲ್ಲಿಸಿದಾಗ ಅಥವಾ ಡಿಕ್ಕಿ ಸಂಭವಿಸಿದಾಗ ವಾಹನ ಮಾತ್ರ ನಿಲ್ಲುತ್ತದೆ.

ಒಳಗಿರುವ ಎಲ್ಲಾ ವಸ್ತುಗಳು ಮತ್ತು ಪ್ರಯಾಣಿಕರು ವೇಗಕ್ಕೆ ಅನುಗುಣವಾದ ವಾಹನದ  ಮೊಮೆಂಟಮ್‌ನಿಂದಾಗಿ ಹೊರಗೆಸೆಯಲ್ಪಡುತ್ತಾರೆ. ಕವಣೆಯಿಂದ ಬೀಸಲಾಗುವ ಕಲ್ಲು ಹಾರುವುದೂ ಇದೇ ಬಗೆಯಲ್ಲಿ. ಕವಣೆ ಬೀಸುವ ನಮ್ಮ ಕೈಯಲ್ಲೇ ಸ್ಥಗಿತಗೊಂಡಾಗ ಕಲ್ಲು ಸಿಡಿದು ಮುಂದಕ್ಕೆ ಸಾಗುತ್ತದೆ.

ವಾಹನದ ವೇಗ ಮತ್ತು ಅದರ ಅಶ್ವಶಕ್ತಿಗೆ ಹೋಲಿಸಿದಾಗ ಮಾನವನ ದೇಹವು ತುಂಬಾ ದುರ್ಬಲವಾಗಿರುವುದರಿಂದ ವಾಹನದಿಂದ ಎಸೆಯಲ್ಪಟ್ಟಾಗ ಅಥವಾ ಕಾರಿನ ಒಳಾಂಗಣದ ಯಾವುದೇ ಭಾಗಕ್ಕೆ ತಾಕಿದಾಗ ಮಾರಣಾಂತಿಕ ಗಾಯಗಳಾಗಿಬಿಡುತ್ತೆವ. ಆದುದರಿಂದ ಪ್ರತಿಯೊಬ್ಬ ಪ್ರಯಾಣಿಕ/ಚಾಲಕರೂ ಸಹ ತಮ್ಮನ್ನು ತಾವು ಯಾವುದಾದರೂ ಒಂದು ಸ್ಥಿರವಸ್ತುವಿಗೆ ತಮ್ಮನ್ನು ಬಂಧಿಸಿಕೊಳ್ಳುವುದು ಅತ್ಯವಶ್ಯಕ. ಸೀಟ್ ಬೆಲ್ಟ್‌ಗಳು ಈ `ಬಂಧನ~ದ ಕ್ರಿಯೆಯನ್ನು ನೆರವೇರಿಸುತ್ತವೆ.
 
ಸಾಮಾನ್ಯವಾಗಿ ಸೀಟ್ ಬೆಲ್ಟ್ ಅನ್ನು ವಾಹನದ ಸೀಟುಗಳಿಗೆ ಅಥವಾ ವಾಹನದ ಒಳಾಂಗಣದ ಚ್ಯಾಸಿಗೆ ಅಳವಡಿಸಿರುತ್ತಾರೆ.ಸೀಟ್‌ಬೆಲ್ಟ್ ವಿನ್ಯಾಸಗಳಲ್ಲಿ ವಿವಿಧ ಬಗೆಗಳಿವೆ.

ಅವುಗಳಲ್ಲಿ ಮುಖ್ಯವಾದವುಗಳೆಂದರೆ ಸೊಂಟದ ಭಾಗವನ್ನು ಸೀಟಿಗೆ ಫಿಕ್ಸ್  ಮಾಡುವ ಎರಡು  ಪಾಯಿಂಟ್‌ಗಳ ಸೀಟ್‌ಬೆಲ್ಟ್- ಇದನ್ನು ವಿಮಾನಗಳಲ್ಲಿ ಉಪಯೋಗಿಸುತ್ತಾರೆ, ಸೊಂಟ ಮತ್ತು ಎದೆಭಾಗವನ್ನು ಸೀಟಿಗೆ ಫಿಕ್ಸ್ ಮಾಡುವ ಮೂರು ಪಾಯಿಂಟ್‌ಗಳ ಸೀಟ್ ಬೆಲ್ಟ್- ಇವುಗಳನ್ನು ಮೋಟಾರು ವಾಹನಗಳಲ್ಲಿ ಬಳಸಲಾಗುತ್ತದೆ. ದೇಹವನ್ನು ಪೂರ್ಣವಾಗಿ ಸೀಟಿಗೆ ಫಿಕ್ಸ್ ಮಾಡುವ ಐದು ಪಾಯಿಂಟ್‌ಗಳ ಸೀಟ್‌ಬೆಲ್ಟ್ ಮತ್ತೊಂದು ಬಗೆಯದ್ದು. ಇದನ್ನು ಸಾಮಾನ್ಯವಾಗಿ ಮೋಟಾರು ವಾಹನಗಳಲ್ಲಿ ಹಸುಳೆಗಳು ಅಥವಾ ಸಣ್ಣ ಮಕ್ಕಳಿಗಾಗಿ ಉಪಯೋಗಿಸುತ್ತಾರೆ.

ಮೂರು ಮತ್ತು ಐದು ಪಾಯಿಂಟ್‌ಗಳಲ್ಲಿ ಫಿಕ್ಸ್ ಮಾಡಿರುವ ಸೀಟ್ ಬೆಲ್ಟ್‌ನ ಎದೆಯ ಭಾಗದ ಬೆಲ್ಟ್ ಕಡಿಮೆ ಬಿಗಿ ಇರುವಂತೆ ಕಂಡುಬಂದರೂ ಸಹ ವಾಹನವು ವೇಗವಾಗಿ ಚಲಿಸುವಾಗ ದಿಢೀರೆಂದು ಮುಂದಕ್ಕೆ ಬಾಗಿದರೂ ಬೆಲ್ಟ್‌ನ ಹಿಡಿತ  (Tension) ಹೆಚ್ಚಾಗುವಂತೆ  ವಿನ್ಯಾಸಗೊಳಿಸಲಾಗಿದೆ.  ಇದರಿಂದ ಪ್ರಯಾಣಿಕರು  (ಅಥವಾ  ಮಕ್ಕಳು)  ಸುರಕ್ಷಿತವಾಗಿ  ಸೀಟಿಗೆ  ಅಂಟಿಕೊಂಡಂತೆಯೇ  ಕುಳಿತುಕೊಳ್ಳಲು ಸಹಕಾರಿಯಾಗಿದೆ.
 
ಮೋಟಾರು ವಾಹನ ಕಾಯ್ದೆ1998ರ ಅನ್ವಯ ಎಲ್ಲಾ ವಿಧದ ಕಾರುಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕ ಹಾಗೂ ಚಾಲಕ ಸಹ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಕೆಲವು ಆಧುನಿಕ ಐಶಾರಾಮಿ ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ಆಗಿಂದಾಗ್ಗೆ ನೆನಪಿಸುವ ಎಚ್ಚರಿಕೆಯ ಅಲಾರ್ಮ್‌ನ ವ್ಯವಸ್ಥೆಯೂ ಇರುತ್ತದೆ. ಆದರೂ ಚಾಲಕರು ಮತ್ತು ಪ್ರಯಾಣಿಕರು ಎಚ್ಚೆತ್ತುಕೊಳ್ಳದೇ ಇರುವುದರಿಂದ ಅಪಘಾತಗಳು ಮಾರಣಾಂತಿಕವಾಗಿಬಿಡುತ್ತವೆ.

ಚಾಲಕರು ಸೀಟ್‌ಬೆಲ್ಟ್ ಧರಿಸುವುದರಿಂದ ಅಪಘಾತವಾದಲ್ಲಿ ವಾಹನದಿಂದ ಜಿಗಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಅನಾಹುತ ಇನ್ನೂ ಹೆಚ್ಚಾಗುತ್ತದೆ ಎಂದು ವಾದಿಸುವುದುಂಟು, ಆದರೆ  ನಿಜ  ಸನ್ನಿವೇಶದಲ್ಲಿ ವಾಹನವು ಅತ್ಯಧಿಕ ವೇಗದಲ್ಲಿ ಚಲಿಸುತ್ತಿದ್ದಾಗ ರಕ್ಷಣೆಗಾಗಿ ವಾಹನದಿಂದ ಜಿಗಿದು ಬದುಕುಳಿಯುವುದು ದುಸ್ಸಾಹಸವೇ ಸರಿ. ವಾಹನದ ಒಳಗಿದ್ದರೇ ಹೆಚ್ಚು ಸುರಕ್ಷಿತ ಮತ್ತು ಕ್ಷೇಮ.

ವಾಹನಗಳಲ್ಲಿ ಮಕ್ಕಳಿಗಾಗಿ ಯಾವುದೇ ಸೀಟ್ ಬೆಲ್ಟ್‌ಗಳು ಪ್ರತ್ಯೇಕವಾಗಿ ಇರುವುದಿಲ್ಲ. ಬದಲಾಗಿ ವಯಸ್ಕರ ಸೀಟ್‌ಬೆಲ್ಟ್‌ಗಳನ್ನೇ ಮಕ್ಕಳು ಉಪಯೋಗಿಸಬೇಕು. ಅವರನ್ನು ಕಾರಿನ ಹಿಂಬದಿಯ ಸೀಟಿನಲ್ಲಿ ಬೂಸ್ಟರ್ ಕುಷನ್ ಮೇಲೆ ಕುಳ್ಳಿರಿಸಿ, ನಂತರ ವಯಸ್ಕರು ಉಪಯೋಗಿಸುವ ಸೀಟ್‌ಬೆಲ್ಟ್‌ಗಳನ್ನು ಧರಿಸಬೇಕು. ಇದರಿಂದ ಮಕ್ಕಳು ಸ್ವಲ್ಪ ಎತ್ತರಿಸಿದ ಸೀಟುಗಳಲ್ಲಿ ಕುಳಿತು ಕಿಟಕಿಯಿಂದ ಹೊರಗಡೆ ನೋಡಲು ಅನುಕೂಲವಾಗುವುದಲ್ಲದೆ ಸುಖಕರವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಮಕ್ಕಳು ಯಾವುದೇ ಕಾರಣಕ್ಕೂ ಕಾರಿನ ಮುಂಭಾಗದ ಸೀಟಿನಲ್ಲಿ  ಕುಳಿತುಕೊಳ್ಳುವಂತಿಲ್ಲ. ಹಿಂದಿನ ಸೀಟುಗಳಲ್ಲೇ  ಆಸೀನರಾಗಬೇಕು. ಏಕೆಂದರೆ ಮುಂದಿನ ಸೀಟಿನಲ್ಲಿ ಕುಳಿತರೆ, ಅಪಘಾತ ಸಂಭವಿಸಿದಾಗ ಮಾರಣಾಂತಿಕವಾಗಿ ಗಾಯಗೊಳ್ಳಬಹುದು. ತಲೆಗೆ ಪೆಟ್ಟು ಬೀಳಬಹುದು. ಕೆಲವೊಮ್ಮೆ ಮುಂಬದಿಯಲ್ಲಿ ವಯಸ್ಕರು ಕುಳಿತುಕೊಂಡು ತಮ್ಮ ತೊಡೆಯ ಮೇಲೆ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ.

ಇಂಥ ಸಂದರ್ಭಗಳಲ್ಲಿ ಅಪಘಾತವಾದರೆ ದೊಡ್ಡವರು ಮಗುವಿನ ಮೇಲೆ ಬಿದ್ದು ಮಗುವಿನ ಸಾವಿಗೆ ಕಾರಣರಾಗಬಹುದು. ಇನ್ನೂ ಅತಿರೇಕದ ಸಂಗತಿ ಎಂದರೆ ಚಾಲಕರು ತಮ್ಮ ತೊಡೆಯ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಚಾಲನೆ ಮಾಡುವುದು. ಇವರು ಮಕ್ಕಳನ್ನು ಪ್ರೀತಿಸುತ್ತಾರೋ ದ್ವೇಷಿಸುತ್ತಾರೋ ಗೊತ್ತಾಗುವುದಿಲ್ಲ.

ಏಕೆಂದರೆ ಇಂಥ ಸಂದರ್ಭಗಳಲ್ಲಿ ಸಣ್ಣ ಅಪಘಾತ ಕೂಡಾ ಮಕ್ಕಳ ಪಾಲಿಗೆ ಮೃತ್ಯವಿನ ದವಡೆಯಾಗಿಬಿಡಬಹುದು. ಸ್ಟೇರಿಂಗ್ ಮತ್ತು ಚಾಲಕನ ನಡುವೆ ಸಿಲುಕಿ ಮಗು ಅಪ್ಪಚ್ಚಿಯಾಗಿಬಿಡಬಹುದು. ಇಂಥ ಅನಾಹುತಗಳನ್ನೆಲ್ಲಾ ತಪ್ಪಿಸಬಹುದಾದ ಈ ಸೀಟ್ ಬೆಲ್ಟ್ (ಅಥವಾ ಸೇಫ್ಟಿ ಬೆಲ್ಟ್) ಅನ್ನು ವಾಹನಗಳಲ್ಲಿ ಅಳವಡಿಸಿದ ಕೀರ್ತಿ ಸ್ವೀಡನ್  ದೇಶದ ನಿಲ್ಸ್ ಬೊಹ್ಲಿನ್ ಎಂಬ ವಿಜ್ಞಾನಿಗೆ ಸಲ್ಲಬೇಕು.

ಪ್ರತಿವರ್ಷ ನಮ್ಮ ದೇಶದಲ್ಲಿ ಸುಮಾರು 1.5  ಲಕ್ಷ ಜನರು ರಸ್ತೆಯ ಅಪಘಾತದಲ್ಲಿ ಮುಖ್ಯವಾಗಿ ಯುವಜನರು ಸಾವನ್ನಪ್ಪುತ್ತಿರುವ ಮತ್ತು 10-20 ಲಕ್ಷ ಜನರು ತೀವ್ರವಾಗಿ ಗಾಯಗೊಳ್ಳುತ್ತಿರುವ  ಈ ದಿನಗಳಲ್ಲಿ ಇಂತಹ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ವಾಹನ ಚಾಲಕರು ಮತ್ತು ಪ್ರಯಾಣಿಕರು ತಪ್ಪದೇ ಪಾಲಿಸಬೇಕಾಗಿದೆ.
 
 (ಲೇಖಕರು ಪ್ರಾದೇಶಿಕ ಸಾರಿಗೆ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT