ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀತಾರಾಮ ಭಟ್ಟರಿಗೆ ಬಾಲ ಸಾಹಿತ್ಯ ಪುರಸ್ಕಾರ

Last Updated 26 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಮಕ್ಕಳ ಸಾಹಿತಿ, ಉಡುಪಿ ಜಿಲ್ಲೆಯ ಪಳಕಳ ಗ್ರಾಮದ ಪಳಕಳ ಸೀತಾರಾಮ ಭಟ್ಟ ಅವರಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ `ಬಾಲ ಸಾಹಿತ್ಯ ಪುರಸ್ಕಾರ~ ಸಂದಿದೆ. 

 ಒಡಿಶಾದ ಭುವನೇಶ್ವರದಲ್ಲಿ ನಡೆದ ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಒಟ್ಟು 24 ಭಾಷೆಗಳ ತಲಾ ಒಬ್ಬ ಮಕ್ಕಳ ಸಾಹಿತಿಗೆ ಪುರಸ್ಕಾರ ಘೋಷಣೆ ಮಾಡಲಾಯಿತು. ಪ್ರಶಸ್ತಿಯನ್ನು 2010ರಲ್ಲಿ ಸ್ಥಾಪಿಸಲಾಗಿದ್ದು, ಕನ್ನಡದಲ್ಲಿ ಇಲ್ಲಿಯವರೆಗೆ ಕ್ರಮವಾಗಿ ಬೊಳುವಾರು ಮಹಮ್ಮದ್ ಕುಂಞ ಹಾಗೂ ನಾ.ಡಿಸೋಜ ಅವರಿಗೆ ದೊರೆತಿದೆ. ಪ್ರಶಸ್ತಿಯು ರೂ 50 ಸಾವಿರ ನಗದು ಹಾಗೂ ಸ್ಮರಣಿಕೆ ಹೊಂದಿದೆ.

ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು `ಪ್ರಜಾವಾಣಿ~ಯೊಂದಿಗೆ ಮಾತನಾಡಿ, `ಪಳಕಳ ಸೀತಾರಾಮ ಭಟ್ಟರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಳಿಯು ಅವರಿಗೆ ಪ್ರಶಸ್ತಿ ನೀಡುವ ಘೋಷಣೆ ಮಾಡಿದೆ. ಹಿಂದೆ ಪ್ರಶಸ್ತಿ ಪಡೆದ ಇಬ್ಬರೂ ಸಾಹಿತಿಗಳ ಕೃತಿಯೊಂದಕ್ಕೆ ಪ್ರಶಸ್ತಿ ನೀಡಲಾಗಿತ್ತು.

ಸೀತಾರಾಮ ಭಟ್ಟರ ಸಮಗ್ರ ಸಾಹಿತ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಯುವ ಸಂಭವವಿದ್ದು, ಕಾರ್ಯಕ್ರಮ ಸ್ಥಳವನ್ನು ಇನ್ನೂ ನಿಗದಿ ಮಾಡಿಲ್ಲ~ ಎಂದರು.

`ಭಟ್ಟರು ಇಲ್ಲಿಯವರೆಗೂ 120 ಮಕ್ಕಳ ಕೃತಿಗಳನ್ನು ರಚನೆ ಮಾಡಿದ್ದಾರೆ. ಕನ್ನಡದಲ್ಲಿ ಅವರಷ್ಟು ಮಕ್ಕಳ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇನ್ನೊಬ್ಬ ಸಾಹಿತಿ ಇಲ್ಲ~ ಎಂದು ಡಾ.ಪಟ್ಟಣಶೆಟ್ಟಿ ಹೇಳಿದರು.

ಮಕ್ಕಳ ಸಾಹಿತ್ಯದ ಅಗ್ರಗಣ್ಯ
ಮಂಗಳೂರು: ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಮೂಡುಬಿದಿರೆ ಸಮೀಪದ ಚೌಟ ಪುತ್ತಿಗೆ ಗ್ರಾಮದ ಪಳಕಳ ಸೀತಾರಾಮ ಭಟ್ಟ (82) ಅವರಿಗೆ  ರಾಷ್ಟ್ರ ಮಟ್ಟದ ಗೌರವ ಅರಸಿಕೊಂಡು ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅವರು ಪಾತ್ರರಾಗಿದ್ದಾರೆ.

33 ಮಕ್ಕಳ ಕವನ ಸಂಕಲನಗಳು, 60 ಮಕ್ಕಳ ಕತೆಗಳು, 24 ಮಕ್ಕಳ ನಾಟಕಗಳು, ಕೆಲವು ಕಾದಂಬರಿಗಳು, ಜೀವನ ಚರಿತ್ರೆಗಳು, 14 ಚುಟುಕು ಸಂಗ್ರಹದಂತಹ ಪ್ರೌಢ ಸಾಹಿತ್ಯ ಸೇರಿ 122ಕ್ಕೂ ಅಧಿಕ ಕೃತಿಗಳನ್ನು ಹೊರತಂದಿರುವ ಅವರ ಸಾಹಿತ್ಯ ಕೃಷಿ ಈಗಲೂ ಬತ್ತಿಲ್ಲ.

1930 ಜುಲೈ 5ರಂದು ಈಶ್ವರ ಭಟ್-ಲಕ್ಷ್ಮಿ ದಂಪತಿಯ ಹಿರಿಯ ಪುತ್ರನಾಗಿ ಜನಿಸಿದ ಸೀತಾರಾಮ ಭಟ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಮೂಡುಬಿದಿರೆಯಲ್ಲಿ ಪೂರೈಸಿದರು.
 
1951ರಲ್ಲಿ ಕಾಸರಗೋಡಿನ ಮಾಯಿಪ್ಪಾಡಿಯಲ್ಲಿ ಶಿಕ್ಷಣ ತರಬೇತಿ ಪಡೆದ ಬಳಿಕ 12 ವರ್ಷ ಮೂಡುಬಿದಿರೆಯ ಪಾಲಡ್ಕ ಶಾಲೆಯಲ್ಲಿ ಶಿಕ್ಷಕರಾದರು. 1963ರಲ್ಲಿ ಬಿಎಡ್ ಪೂರೈಸಿ ಮೂಡುಬಿದಿರೆ ಜೈನ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾದರು. 1988ರಲ್ಲಿ ಅವರು ಸೇವೆಯಿಂದ ನಿವೃತ್ತರಾದರು.

8ನೇ ತರಗತಿಯಲ್ಲಿದ್ದಾಗಲೇ ಬರೆಯುವ ಗೀಳು ಬೆಳೆಸಿಕೊಂಡಿದ್ದ ಸೀತಾರಾಮ ಭಟ್ ಅವರಿಗೆ 1990ರಲ್ಲಿ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು, ಸನ್ಮಾನಗಳು ಲಭಿಸಿವೆ. ಅವರದು ಪತ್ನಿ, ನಾಲ್ವರು ಪುತ್ರರು, ಪುತ್ರಿಯ ಸುಖೀ ಸಂಸಾರ.

`ಪ್ರಶಸ್ತಿ ನಿರೀಕ್ಷಿಸಿರಲಿಲ್ಲ...~
`ಪ್ರಶಸ್ತಿ ಲಭಿಸಿರುವ ವಿಷಯ ಕೇಳಿ ಬಹಳ ಸಂತೋಷವಾಗಿದೆ. ಆದರೆ ಪ್ರಶಸ್ತಿಯ ನಿರೀಕ್ಷೆಯಲ್ಲಿ ನಾನಿರಲಿಲ್ಲ.  65 ವರ್ಷಗಳಿಂದ ಮುಖ್ಯವಾಗಿ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ನನ್ನಿಂದಾದ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಮಕ್ಕಳ ಸಾಹಿತ್ಯ ಕ್ಷೇತ್ರ ಇನ್ನಷ್ಟು ಶ್ರೀಮಂತವಾಗಬೇಕು ಎಂಬುದೇ ನನ್ನ ಆಶಯ~
 -ಪಳಕಳ ಸೀತಾರಾಮ ಭಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT