ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರ ರಾಜಧಾನಿಗೆ ಸಮಿತಿ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉದ್ದೇಶಿತ ತೆಲಂಗಾಣ ರಚನೆ ಬಳಿಕ ಉಳಿಯುವ ಆಂಧ್ರಪ್ರದೇಶದ ಸೀಮಾಂಧ್ರ (ರಾಯಲ­ಸೀಮೆ ಮತ್ತು ಕರಾವಳಿ ಆಂಧ್ರ) ಭಾಗಕ್ಕೆ  ಹೊಸ ರಾಜಧಾನಿ ನಿರ್ಮಿಸುವ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು ಎಂದು  ಸರ್ಕಾರ ಶನಿವಾರ ತಿಳಿಸಿದೆ.

ತೆಲಂಗಾಣ ಕುರಿತ ಮಸೂದೆಗೆ ಸಂಸತ್‌ ಅಂಗೀಕಾರ ನೀಡಿದ 45 ದಿನ­ದೊಳಗೆ ಈ ಸಮಿತಿ ರಚಿಸಲಾಗು­ವುದು ಎಂದು ಕೇಂದ್ರ ಗ್ರಾಮೀಣಾಭಿ­ವೃದ್ಧಿ ಸಚಿವ ಜೈರಾಂ ರಮೇಶ್‌ ಹೇಳಿದರು. ಹೊಸ ರಾಜಧಾನಿಯಲ್ಲಿ ರಾಜ­ಭವನ, ಸಚಿವಾಲಯ, ಹೈಕೋರ್ಟ್ ಕಟ್ಟಡಗಳು ಹಾಗೂ ಇನ್ನಿತರ ಸೌಕರ್ಯ­ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಹಣಕಾಸು ನೆರವು ನೀಡಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಉನ್ನತ ಮಂಡಳಿಗಳು: ವಿವಾದಕ್ಕೆ ಕಾರಣವಾಗಿರುವ ನದಿಗಳ ನೀರು ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾ­ರವು ಎರಡು ಹಂತದ ಉನ್ನತ ಮಂಡಳಿ­ಗಳನ್ನು ರಚಿಸಲು ಉದ್ದೇಶಿಸಿದೆ. ಈ ಮಂಡಳಿಗಳು ಸರ್ಕಾರದ ಪ್ರತಿನಿ­ಧಿ­ಗಳು ಮತ್ತು ಅಧಿಕಾರಿ ಪ್ರತಿನಿಧಿ­ಗಳನ್ನು ಒಳ­ಗೊಂಡಿರಬೇಕು ಎಂಬ ಸಲಹೆಯನ್ನು ಕರಡು ಮಸೂದೆಯಲ್ಲಿ ನೀಡಲಾಗಿದೆ’ ಎಂದರು.

‘ಉದ್ದೇಶಿತ ಮಂಡಳಿಗಳಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಇರು­ತ್ತಾರೆ. ಇವರು ನದಿ ನೀರು ಹಂಚಿಕೆ ಕುರಿತಂತೆ ಚರ್ಚಿಸುವರು. ನದಿ ನೀರು ಹಂಚಿಕೆ ಕುರಿತ ನ್ಯಾಯಮಂಡಳಿಗಳ ತೀರ್ಪು ಅನುಷ್ಠಾನವನ್ನು ಕೃಷ್ಣಾ ಮತ್ತು ಗೋದಾವರಿ ಮಂಡಳಿಗಳು  ನಿರ್ವಹಿಸಲಿವೆ.
ಕೃಷ್ಣಾ ಮಂಡಳಿಯು ಸೀಮಾಂಧ್ರ ಭಾಗ­ದಲ್ಲೂ, ಗೋದಾವರಿ ಮಂಡಳಿ­ಯು ತೆಲಂಗಾಣ ಭಾಗದಲ್ಲಿ ಈ ಕಾರ್ಯ ನಿರ್ವಹಿಸಲಿವೆ.

ಬಿಕ್ಕಟ್ಟು ಉಂಟಾಗಬಾರದು ಎಂಬ ಕಾರಣದಿಂದ ಈ ಮಂಡಳಿಗಳ ಕಾರ್ಯ ನಿರ್ವಹಣೆ ಬಗ್ಗೆ ಇದೇ ಮೊದಲ ಬಾರಿಗೆ ರಾಜ್ಯ ವಿಭಜನೆಯ ಕರಡು ಮಸೂದೆಯಲ್ಲೇ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸ­ಲಾಗಿದೆ’ ಎಂದರು. ಪೋಲಾವರಂ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸ­ಲಾಗುವುದು ಮತ್ತು ಇದನ್ನು  ಕೇಂದ್ರ ಸರ್ಕಾರವೇ ನಿರ್ವಹಿಸ­ಲಿದೆ ಎಂದರು.

ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವ ಕರಡು ಮಸೂದೆಯಲ್ಲಿ 10 ವರ್ಷಗಳ ಕಾಲ ಹೈದರಾಬಾದ್‌ ಉಭಯ ರಾಜ್ಯ­ಗಳಿಗೂ ರಾಜಧಾನಿ­ಯಾಗ­ಲಿದೆ ಎಂಬ ಅಂಶ ಇದೆ. ಇದನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಲಾಗುವುದು. ಅವರು ಇದನ್ನು ಆಂಧ್ರ ವಿಧಾನ­ಮಂಡಲಕ್ಕೆ ಅಭಿ­ಪ್ರಾಯ ಸೂಚಿಸಲು ಕಳುಹಿಸುವರು.

ಸೀಮಾಂಧ್ರ ಬಂದ್‌: ಮಿಶ್ರ ಪ್ರತಿಕ್ರಿಯೆ
ಹೈದರಾಬಾದ್‌ (ಪಿಟಿಐ):
ಆಂಧ್ರ ವಿಭಜನೆ ಕುರಿತ ಕರಡು ಮಸೂ­ದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವು­ದನ್ನು ಖಂಡಿಸಿ ಅಖಂಡ ಆಂಧ್ರಪ್ರದೇಶ ಪರ ಹೋರಾಟ ನಡೆಸುತ್ತಿರುವ ಸಂಘ­ಟನೆಗಳು ನೀಡಿದ್ದ ಬಂದ್‌ ಕರೆಗೆ ಶನಿ­ವಾರ ಸೀಮಾಂಧ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಅಖಂಡ ಆಂಧ್ರಪ್ರದೇಶ ಪರ ಹೋರಾಟ ಮಾಡುತ್ತಿರುವ ಸಂಘಟನೆಗಳೊಂದಿಗೆ ಸೇರಿ ಸೀಮಾಂಧ್ರ ಭಾಗದಲ್ಲಿ ಪ್ರತಿಭಟನೆ­ಗಳನ್ನು ಆಯೋಜಿಸಿದ್ದವು. ಈ ಮುನ್ನ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮಾತ್ರ ಶುಕ್ರವಾರ ಬಂದ್‌ಗೆ ಕರೆ ನೀಡಿತ್ತು. ನಂತರ ಇದನ್ನು ಶನಿವಾರಕ್ಕೂ ವಿಸ್ತರಿಸುವಂತೆ ಆ ಪಕ್ಷ ಕರೆ ಕೊಟ್ಟಿತು.  ಆಂಧ್ರಪ್ರದೇಶ ಪತ್ರಾಂಕಿತೇತರ ಅಧಿಕಾರಿ­ಗಳ ಸಂಘ, ಟಿಡಿಪಿ ಪ್ರತ್ಯೇಕವಾಗಿ ಶನಿ­ವಾರ ಬಂದ್‌ಗೆ ಕರೆ ನೀಡಿದ್ದವು. 

ಈ ಮಧ್ಯೆ, ಆಂಧ್ರಪ್ರದೇಶ ವಿಭಜನೆ ಕುರಿತು ಪ್ರತಿ­ಕ್ರಿಯಿಸಿದ ಕೇಂದ್ರ ಜವಳಿ ಸಚಿವ ಕಾವೂರಿ ಸಾಂಬಸದಾಶಿವ ರಾವ್‌, ಈ ಕುರಿತ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕುವ ಸಾಧ್ಯತೆ ಇಲ್ಲ ಎಂದರು. ‘ಕರಡು ಮಸೂದೆಗೆ ಸಂಪುಟ ಒಪ್ಪಿಗೆ ನೀಡಿರಬಹುದು ಆದರೆ, ಈ ಮಸೂದೆ ಸಂಸತ್ತಿಗೆ ಬರುವುದೇ ಅನುಮಾನ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT