ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರ ಸಚಿವ ಶಾಸಕರ ನಿರಶನ

ತೆಲಂಗಾಣ ರಾಜ್ಯ ರಚನೆಗೆ ವಿರೋಧ
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್(ಪಿಟಿಐ): ಅಖಂಡ ಆಂಧ್ರಪ್ರದೇಶಕ್ಕೆ ಒತ್ತಾಯಿಸಿ ಕರಾವಳಿ ಆಂಧ್ರ ಹಾಗೂ ರಾಯಲಸೀಮಾ ಭಾಗದ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಚಿವರು ಮಂಗಳವಾರ ವಿಧಾನಸಭೆ ಆವರಣದ ಗಾಂಧಿ ಪ್ರತಿಮೆ ಬಳಿ ಉಪವಾಸ ಪ್ರತಿಭಟನೆ ನಡೆಸಿದರು.

ಅಖಂಡ ಅಂಧ್ರಪ್ರದೇಶ ಕಾಂಗ್ರೆಸ್ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ವೇದಿಕೆ ಹಮ್ಮಿಕೊಂಡಿದ್ದ ಮೂರು ಗಂಟೆಗಳ ಪ್ರತಿಭಟನೆಯಲ್ಲಿ 12 ಸಚಿವರು, 29 ವಿಧಾನಸಭೆ ಸದಸ್ಯರು  ಹಾಗೂ ಆರು ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಎನ್.ರಘುವೀರ ರೆಡ್ಡಿ,  ತೆಲಂಗಾಣ ರಾಜ್ಯ ರಚನೆಗಾಗಿ ಕಾಂಗ್ರೆಸ್ ಪಕ್ಷವೊಂದನ್ನೇ ದೂಷಿಸಲಾಗುತ್ತಿದೆ. ಆದರೆ ಆಂಧ್ರ ವಿಭಜನೆ ನಿರ್ಧಾರದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಇತರ ಹಲವು ಪಕ್ಷಗಳು ರಾಜ್ಯ ಒಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ' ಎಂದು ದೂರಿದರು.

`ಸೀಮಾಂಧ್ರ ಭಾಗದ ಜನರ ಭಾವನೆಗೆ ನೋವುಂಟು ಮಾಡುವ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ತೀರ್ಮಾನವನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಬೇಕು' ಎಂದು ಹಣಕಾಸು ಸಚಿವ ಅನಂ ರಾಂ ನಾರಾಯಣ ರೆಡ್ಡಿ ಹೇಳಿದರು.

ಇದೇ ಮೊದಲ ಬಾರಿಗೆ ಸೀಮಾಂಧ್ರ ಭಾಗದ ಶಾಸಕರು ಆಂಧ್ರ ವಿಭಜನೆ ವಿರುದ್ಧ ಉಪವಾಸ ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಧಾನಸಭೆ ಆವರಣದಲ್ಲಿ ಪೊಲೀಸರನ್ನು ನೇಮಿಸಿ ಭದ್ರತೆ ಒದಗಿಸಲಾಗಿತ್ತು.

ಸಚಿವಾಲಯ ಸಿಬ್ಬಂದಿ ಪ್ರತಿಭಟನೆ: ಆಂಧ್ರ ಇಬ್ಭಾಗ ವಿರೋಧಿಸಿ ರಾಜ್ಯ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಸೀಮಾಂಧ್ರ ಭಾಗದ ನೌಕರರು ಪ್ರತಿಭಟನೆ ನಡೆಸಿದರು. ರಾಯಲಸೀಮಾ ಹಾಗೂ ಕರಾವಳಿ ಆಂಧ್ರ ಭಾಗದ ಸಿಬ್ಬಂದಿ ಕಾರ್ಯಸ್ಥಗಿತಗೊಳಿಸಿದ್ದರಿಂದ ರಾಜ್ಯದ ಆಡಳಿತ ಕೇಂದ್ರದಲ್ಲಿ ತೊಂದರೆಯಾಯಿತು. ಸಚಿವಾಲಯದಲ್ಲಿರುವ 2500 ಸಿಬ್ಬಂದಿ ಪೈಕಿ 1800 ಸೀಮಾಂಧ್ರ ಭಾಗದವರು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತೀರ್ಮಾನವನ್ನು ಕೈಬಿಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸೀಮಾಂಧ್ರ ಉದ್ಯೋಗಿಗಳ ವೇದಿಕೆ ಅಧ್ಯಕ್ಷ ಯು.ಮುರಳಿಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT