ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರಕ್ಕೆ ಬಸ್‌ ಸಂಚಾರ ಸ್ಥಗಿತ

ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ನೂಕುನುಗ್ಗಲು
Last Updated 26 ಸೆಪ್ಟೆಂಬರ್ 2013, 6:54 IST
ಅಕ್ಷರ ಗಾತ್ರ

ಬಳ್ಳಾರಿ: ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಸ್ಥಗಿತಗೊಂಡಿರುವುದರಿಂದ ಆಂಧ್ರಕ್ಕೆ ತೆರಳುವ ಪ್ರಯಾಣಿಕರು ರೈಲುಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದು, ನಿತ್ಯವೂ ನಗರದ ರೈಲು ನಿಲ್ದಾಣದಲ್ಲಿ ನೂಕುನುಗ್ಗಲು ಕಂಡುಬರುತ್ತಿದೆ.

ಆಂಧ್ರದ ಕರಾವಳಿ ಭಾಗದ 9 ಹಾಗೂ ರಾಯಲಸೀಮಾ ಭಾಗದ 4 ಜಿಲ್ಲೆಗಳಲ್ಲಿ ಕಳೆದ ಜುಲೈ 30ರಿಂದ ತೀವ್ರ ಹೋರಾಟ ನಡೆಯುತ್ತಿರುವುದರಿಂದ ಅಂದಿನಿಂದ  ರಾಜ್ಯದ ಸಾರಿಗೆ ಸಂಸ್ಥೆಯ ಬಸ್‌ಗಳು ಆಂಧ್ರಕ್ಕೆ ತೆರಳುತ್ತಿಲ್ಲ.

ಬಳ್ಳಾರಿಯಿಂದ ಆಂಧ್ರದತ್ತ ನಿತ್ಯ ಬೆಳಗಿನಜಾವ 4ಕ್ಕೆ ತೆರಳುವ ಹುಬ್ಬಳ್ಳಿ–ವಿಜಯವಾಡಾ, ಬೆಳಿಗ್ಗೆ 11ಕ್ಕೆ ಇರುವ ಹುಬ್ಬಳ್ಳಿ– ತಿರುಪತಿ ಫಾಸ್ಟ್‌ ಪ್ಯಾಸೆಂಜರ್,  ಮಧ್ಯಾಹ್ನ 4.30ಕೆ ತೆರಳುವ ಅಮರಾವತಿ ಎಕ್ಸ್‌ಪ್ರೆಸ್‌, ರಾತ್ರಿ 8.15ಕ್ಕೆ ತೆರಳುವ ಕೊಲ್ಲಾಪುರ– ಹೈದರಾಬಾದ್‌ ಶಾಹು ಮಹರಾಜ್‌ ಎಕ್ಸ್‌ಪ್ರೆಸ್‌, 10.45ಕ್ಕೆ ಇರುವ ಹಂಪಿ ಎಕ್ಸ್‌ಪ್ರೆಸ್‌, 11.30ಕ್ಕೆ ಇರುವ ಕೊಲ್ಲಾಪುರ– ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್‌, ಬಳ್ಳಾರಿಯಿಂದ ಗುಂತಕಲ್‌ಗೆ ತೆರಳುವ ಪ್ಯಾಸೆಂಜರ್‌ ರೈಲುಗಳನ್ನೇ ಪ್ರಯಾಣಿಕರು ಅವಲಂಬಿಸಿದ್ದಾರೆ.

ರಾಯದುರ್ಗದತ್ತ ತೆರಳುವವರು ಹೊಸಪೇಟೆ­ಯಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್‌ ರೈಲನ್ನು ನೆಚ್ಚಿಕೊಳ್ಳುವಂತಾಗಿದೆ.
ವಿಶೇಷವಾಗಿ ಹೊಸಪೇಟೆ, ಸಿರುಗುಪ್ಪ ಮತ್ತು ಬಳ್ಳಾರಿಯಿಂದ ವಿವಿಧ ಕೆಲಸ, ಕಾರ್ಯಗಳಿಗಾಗಿ ನಿತ್ಯ ಆಂಧ್ರಕ್ಕೆ ಹೋಗುವ ಸಾವಿರಾರು ಜನ ಸಾರಿಗೆ ಸಂಸ್ಥೆಯ ಬಸ್‌ಗಳಿಲ್ಲದ್ದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ವಿಶೇಷ ರೈಲು ಬಿಡಲು ಮನವಿ: ಆಂಧ್ರದ ವಿವಿಧೆಡೆ ತೆರಳಬೇಕೆಂದರೆ, ಬೆಳಿಗ್ಗೆ 11ರ ನಂತರ ಸಂಜೆ 4.30ರವರೆಗೆ ರೈಲುಗಳಿಲ್ಲ. ಸುದೀರ್ಘ ಕಾಲ ಬಸ್‌ ಸಂಚಾರ ರದ್ದಾದ ಸಂದರ್ಭಗಳಲ್ಲಿ ರೈಲ್ವೆ ಇಲಾಖೆ ಕೆಲವು ವಿಶೇಷ ರೈಲುಗಳನ್ನು ಬಿಡುವ ಮೂಲಕ ಪ್ರಯಾಣಿಕರ ನೆರವಿಗೆ ಬರಬೇಕು ಎಂಬುದು ಪ್ರಯಾಣಿಕರ ಕೋರಿಕೆಯಾಗಿದೆ.

ಒಂದೆರಡು ಪ್ಯಾಸೆಂಜರ್‌ ರೈಲುಗಳನ್ನು ಹೊರತುಪಡಿಸಿ, ಈ ಮಾರ್ಗದಲ್ಲಿ ಬಹುತೇಕ ಎಕ್ಸ್‌ಪ್ರೆಸ್‌ ರೈಲುಗಳೇ ಇದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದೂ ಅನೇಕರು ತಿಳಿಸಿದ್ದಾರೆ.

ಹೊಸಪೇಟೆ, ತೋರಣಗಲ್ಲು ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ನಿತ್ಯ ನಿಯಂತ್ರಣಕ್ಕೆ ಬಾರದಂತೆ ನೂಕುನುಗ್ಗಲು ಕಂಡುಬರುತ್ತಿದೆ. ಪ್ರಯಾಣಿಕರಿಂದ ಬರುವ ಆದಾಯದಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಬಳ್ಳಾರಿಯಿಂದ 33 ಬಸ್‌ ಸ್ಥಗಿತ: ಬಳ್ಳಾರಿ ವಿಭಾಗ­ದಿಂದ ನಿತ್ಯವೂ ಮಂತ್ರಾಲಯ, ಶ್ರೀಶೈಲ, ಕಡಪ, ಗುತ್ತಿ, ವಿಜಯವಾಡ, ಗುಂತಕಲ್‌, ಕರ್ನೂಲ್‌, ಅನಂತಪುರ, ತಿರುಪತಿ, ರಾಯದುರ್ಗ ಹಾಗೂ ಅನಂತಪುರ ಮಾರ್ಗವಾಗಿ ಚೆನ್ನೈಗೆ ತೆರಳುತ್ತಿದ್ದ ಒಟ್ಟು 33 ಬಸ್‌ಗಳ ಸಂಚಾರ ರದ್ದಾಗಿದೆ. ಇದರಿಂದ ಸಂಸ್ಥೆಗೆ ನಿತ್ಯವೂ ಅಂದಾಜು ರೂ.3 ಲಕ್ಷ ಆದಾಯ ಖೋತಾ ಆಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದುರ್ಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರಾತ್ರಿ ವೇಳೆ ರಾಯಚೂರು ಮಾರ್ಗವಾಗಿ ಹೈದರಾಬಾದ್‌ಗೆ 4 ಬಸ್‌ಗಳು ತೆರಳುತ್ತಿವೆ. ಈ ಬಸ್‌ ಹೊರತುಪಡಿಸಿ ಆಂಧ್ರದ ಬೇರೆ ಭಾಗಕ್ಕೆ ಬಸ್‌ ಸಂಚಾರ ಇಲ್ಲ. ಹುಬ್ಬಳ್ಳಿ, ಮಂಗಳೂರು, ಕಾರವಾರ ಕಡೆಯಿಂದ ರಾತ್ರಿ ವೇಳೆ ಕೆಲವು ಬಸ್‌ಗಳು ಮಂತ್ರಾಲಯದತ್ತ ಸಂಚರಿಸುತ್ತವೆ ಎಂದು ಅವರು ಹೇಳಿದ್ದಾರೆ.

ಅದೇರೀತಿ, ರಾಜ್ಯಕ್ಕೆ ಆಗಮಿಸುವ ಆಂಧ್ರಪ್ರದೇಶದ ಸಾರ್ವಜನಿಕ ವಲಯದ ಎಪಿಎಸ್‌ಆರ್‌ಟಿಸಿ ಬಸ್‌ಗಳು ಸ್ಥಗಿತಗೊಳಿಸಿದ್ದು, ಪ್ರಯಾಣಿ­ಕರು ಪರದಾಡುವ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT