ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ ಮೆಚ್ಚುವ ನೀರೆ

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

`ನಾನಾಗ 15ರ ಪೋರಿ. ಕನಸುಗಳು ಅರಳುವ ವಯಸ್ಸು. ಸೀರೆ ಉಡಬೇಕೆಂಬ ಮನಸ್ಸಾಯಿತು. ಜತೆಗೆ ನನಗಾಗಿಯೇ ಒಂದು ಸೀರೆ ಖರೀದಿಸುವ ಹಂಬಲ ಮನಸ್ಸಿನಲ್ಲಿ ಮೂಡಿತು. ಪೋಷಕರ ಬಳಿ ಹೇಳಿಕೊಂಡೆ.
 
ಅವರು ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ದೀಪಂ ಸಿಲ್ಕ್ಸ್‌ಗೆ ಕರೆದುಕೊಂಡು ಹೋದರು. ಅಂದು ಅಲ್ಲಿ ಖರೀದಿಸಿದ ಮನಕ್ಕೊಪ್ಪುವ ಸೀರೆ ಇಂದಿಗೂ ನನಗೆ ಅಚ್ಚುಮೆಚ್ಚು~ ಎನ್ನುವಾಗ ಮಲೆನಾಡ ಹುಡುಗಿ ದೀಪಾ ಸನ್ನಿಧಿಯ ಮುಖ ಅರಳಿತ್ತು.

ಬರಲಿರುವ ವರಮಹಾಲಕ್ಷ್ಮಿ ವ್ರತಕ್ಕೆ ದೀಪಂ ಪರಿಚಯಿಸುತ್ತಿರುವ ಹೊಸ ಬಗೆಯ ಸೀರೆಗಳ ಅನಾವರಣ ಹಾಗೂ ಬ್ರೈಡಲ್, ಫಾರ್ಮಲ್ ಮತ್ತು ಪಾರ್ಟಿವೇರ್ ಸೀರೆಗಳ ಮೇಲಿನ ಶೇ 40ರಷ್ಟು ರಿಯಾಯಿತಿ ಸುಗ್ಗಿಯನ್ನು ಉದ್ಘಾಟಿಸಲು ದೀಪಾ ಜಯನಗರದ ದೀಪಂ ಸಿಲ್ಕ್ಸ್‌ಗೆ ಭೇಟಿ ನೀಡಿದ್ದರು.

ಬರೋಬ್ಬರಿ ಒಂದು ಲಕ್ಷ ರೂಪಾಯಿ ಅಪ್ಪಟ ಜರಿ ಸೀರೆಯನ್ನು ಅಚ್ಚುಕಟ್ಟಾಗಿ ಉಟ್ಟು ಬಂದಿದ್ದ ದೀಪಾ, ಪ್ರಖರ ದೀಪದ ಬೆಳಕಿಗೆ ಮಿರಮಿರನೆ ಮಿಂಚುತ್ತಿದ್ದರು. ತನ್ನಷ್ಟೇ ಎತ್ತರದ ಇನ್ನಿಬ್ಬರು ವೃತ್ತಿಪರ ಮಾಡೆಲ್‌ಗಳ ನಡುವೆ ನಿಂತಿದ್ದ ದೀಪಾ ಮೊಗದಲ್ಲಿ ಮುಗ್ಧತೆ ಎದ್ದು ಕಾಣುತ್ತಿತ್ತು.

ಸಕಲೇಶಪುರದ ಕಾಫಿ ಎಸ್ಟೇಟ್ ಮಾಲೀಕರ ಮಗಳಾಗಿರುವ ದೀಪಾಗೆ ಬಾಲ್ಯದಿಂದಲೇ ದೀಪಂ ನಂಟಂತೆ. ಅಮ್ಮನೊಂದಿಗೆ ದೀಪಂಗೆ ಬಂದು ಸೀರೆ ಖರೀದಿಸುತ್ತಿದ್ದ ನೆನಪು ಇನ್ನೂ ಅವರಲ್ಲಿ ಅಚ್ಚಾಗಿತ್ತು. `ಮಳಿಗೆಗೆ ಭೇಟಿ ನೀಡಿದಾಗ ಅಂದು ಸಿಗುತ್ತಿದ್ದ ಅದೇ ಕಾಳಜಿ ಹಾಗೂ ಪ್ರೀತಿ ಇಂದಿಗೂ ಇರುವುದು ಸಂತೋಷದ ವಿಷಯ~ ಎಂದು ಮಳಿಗೆ ಕುರಿತು ದೀಪಾ ಮೆಚ್ಚುಗೆಯ ಮಾತನ್ನಾಡಿದರು.

ಸಿನಿಮಾಗಳಲ್ಲಿ ಸಾಕಷ್ಟು ಕ್ಯಾಷುಯಲ್ ಉಡುಪುಗಳನ್ನೇ ತೊಡುವ ದೀಪಾಗೆ ನಿಜವಾಗಿಯೂ ಇಷ್ಟವಾಗುವುದೆಂದರೆ ಸೀರೆ ಅಥವಾ ಲಂಗಾ ದಾವಣಿಯಂತೆ. ಹೀಗೆಂದು ಸ್ವತಃ ದೀಪಾ ಒಪ್ಪಿಕೊಂಡಿದ್ದಾರೆ.

`ಎಲ್ಲಾ ಉಡುಪುಗಳು ನನಗಿಷ್ಟ. ಆದರೆ ಅವುಗಳಲ್ಲಿ ಅಚ್ಚುಮೆಚ್ಚೆಂದರೆ ಸೀರೆಯೇ. ಹೀಗಾಗಿ ಈಗ ತೊಟ್ಟಿರುವ ಭಾರೀ ಜರಿಯ ಈ ಸೀರೆಯೂ ನನಗೆ ಹಿತಾನುಭವ ನೀಡುತ್ತಿದೆ. ಯಾವುದೇ ಸಮಾರಂಭಗಳಿಗೆ ಅಥವಾ ಹಬ್ಬಗಳಲ್ಲಿ ನಾನು ಸೀರೆಯನ್ನೇ ಬಹುವಾಗಿ ಮೆಚ್ಚಿ ಉಡುತ್ತೇನೆ~ ಎಂದರು.

ಕಾಂಚೀವರಂ ಕಾರ್ತಿಕ್ ಸೆಲ್ವನ್ ಎಂಬ ಯುವಕ ವಿನ್ಯಾಸ ಮಾಡಿದ ಬಂಗಾರ ಹಾಗೂ ಬೆಳ್ಳಿ ಜರಿಯುಳ್ಳ ಅಪ್ಪಟ ರೇಷ್ಮೆ ಸೀರೆ ಅಂದಿನ ಪ್ರಮುಖ ಆಕರ್ಷಣೆ. ಸಾಂಪ್ರದಾಯಿಕ ನೇಯ್ಗೆ ಪದ್ಧತಿಯನ್ನೇ ಬಳಸಿ ಆಧುನಿಕ ಸ್ಪರ್ಶ ನೀಡಲಾಗಿರುವ ಸೀರೆ ಇದಾಗಿದೆ.

ಆಧುನಿಕ ಪೇಂಟಿಂಗ್, ವ್ಯಾಕ್ಸ್ ಪೇಂಟಿಂಗ್, ಮೂರು ಆಯಾಮದ (ಥ್ರೀಡಿ) ವಿನ್ಯಾಸ ಹಾಗೂ ಚಿತ್ತಾಕರ್ಷಕ ಹೂಗಳ ಬಳಕೆ ಈ ಸೀರೆಗಳಲ್ಲಿ ಢಾಳವಾಗಿವೆ. ರೇಷ್ಮೆ ಸೀರೆಯೇ ಆದರೂ ಅದಕ್ಕೊಂದು ಆಧುನಿಕ ಸ್ಪರ್ಶ ನೀಡುವ ಪ್ರಯತ್ನ ಇದಾಗಿದೆ.
 
ಈ ಪ್ರಯತ್ನ ಸ್ವತಃ ಆಭರಣ ವಿನ್ಯಾಸಕಿಯಾಗಿರುವ ದೀಪಾ ಸನ್ನಿಧಿಗೆ ಮೆಚ್ಚುಗೆಯಾಗಿದೆಯಂತೆ.ಕನ್ನಡದಲ್ಲಿ ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಬೇರೆ ಭಾಷೆಗಳತ್ತ ಮುಖ ಮಾಡುವ ಇರಾದೆ ಇದೆಯೇ ಎಂದು ಕೇಳಿದ್ದಕ್ಕೆ, `ಕನ್ನಡ ಸಿನಿಮಾರಂಗದಲ್ಲೇ ನನಗೆ ಖುಷಿ ಇದೆ.

ಬೇರೆ ಭಾಷೆ ಸಿನಿಮಾಗಳನ್ನು ಒಪ್ಪಿಕೊಂಡು ಕನ್ನಡ ಸಿನಿಮಾಗಳ ಡೇಟ್‌ಗಳಿಗೆ ತೊಂದರೆಯಾಗಬಾರದೆನ್ನುವುದು ನನ್ನ ಕಾಳಜಿ~ ಎಂಬ ಉತ್ತರ ದೀಪಾ ಸನ್ನಿಧಿಯವರದ್ದು.

ಸಾಹಸಮಯ ಪ್ರವೃತ್ತಿಯುಳ್ಳ ಹಾಗೂ ಆಧುನಿಕ ವಸ್ತ್ರಗಳನ್ನು ಇಷ್ಟಪಡುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾದ ವಿಶೇಷ ಸೀರೆಯ ಜತೆಗೆ ಇರುವ ಮತ್ತಿತರ ಬಗೆಬಗೆಯ ಸೀರೆಗಳನ್ನು ದೀಪಂ ಪ್ರದರ್ಶಿಸುತ್ತಿದೆ. 1.5 ಸಾವಿರದಿಂದ 1.5 ಲಕ್ಷ ರೂಪಾಯಿವರೆಗಿನ ತರಹೇವಾರಿ ಸೀರೆಗಳು ಇಲ್ಲಿ ಲಭ್ಯ.

ವರಮಹಾಲಕ್ಷ್ಮಿ ವ್ರತದ ಸಂದರ್ಭದಲ್ಲಿ ಜುಲೈ 11ರಿಂದ 29ರವರೆಗೆ ನಡೆಯಲಿರುವ ರಿಯಾಯಿತಿ ಮಾರಾಟದಲ್ಲಿ ದೀಪಂ ಸಿಲ್ಕ್ಸ್ ಶೇ 40ರ ರಿಯಾಯಿತಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT