ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಳ್ ನುಡಿ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಫ್ಯಾಷನ್ ಕ್ಷೇತ್ರದಲ್ಲಿ ಕೆಲವು ಪದಗಳು ಚಾಲ್ತಿಯಲ್ಲಿವೆ. ಸಾಮಾನ್ಯವಾಗಿ ಇವೆಲ್ಲವೂ ಆಂಗ್ಲಭಾಷೆಯ ಪದ ಪ್ರಯೋಗ. ಪದಕೋಶದಲ್ಲಿನ ಮೂಲ ಅರ್ಥಕ್ಕೂ ಹಾಗೂ ಗ್ಲಾಮರ್ ಲೋಕದಲ್ಲಿ ಅದನ್ನು ಬಳಸುವ ವಿಶಿಷ್ಟವಾದ ಅರ್ಥಕ್ಕೂ ಒಂದಿಷ್ಟೂ ಸಂಬಂಧ ಇರುವುದಿಲ್ಲ.
 ಗಮನಿಸುವ ಅಂಶವೆಂದರೆ ಮೂಲದಲ್ಲಿ ಅವು ಫ್ಯಾಷನ್‌ಗೆ ಸಂಬಂಧಿಸಿದವೇ ಆಗಿವೆ.

ಆದರೆ ಅವುಗಳನ್ನು ವ್ಯಂಗ್ಯವಾಗಿ ಪ್ರಯೋಗಿಸುವುದೂ ಇದೆ. ಆದ್ದರಿಂದ ಅವುಗಳ ಮೂಲ ಅರ್ಥವು ಕಳಚಿಕೊಂಡು ಬೇರೊಂದು ಅಂಶವನ್ನು ಸಂಕೇತಿಸುತ್ತದೆ. ಇವುಗಳನ್ನು ರಾಗ ಎಳೆದು ಪ್ರಯೋಗಿಸಿದಾಗ ಪದದ ಮೂಲದಲ್ಲಿ ಅಡಗಿದ ಗುಣ ಮರೆಯಾಗಿ ಬೇರೊಂದು ಸ್ವರೂಪಕ್ಕೆ ತಿರುಗುತ್ತದೆ.
 
ಫ್ಯಾಷನ್ ವಿಶ್ಲೇಷಕರು ಕೂಡ ಇಂಥ ಪದಗಳನ್ನು ಎಗ್ಗಿಲ್ಲದೇ ಬಳಸುವುದನ್ನು ಕಾಣಬಹುದು. ಯಥಾರ್ಥ ಹಾಗೂ ಭಿನ್ನಾರ್ಥಗಳ ನಡುವೆ ಸಣ್ಣದೊಂದು ರಾಗದ ಎಳೆ ಇರುತ್ತದೆ. ಅದನ್ನು ಬೇರೆ ಮಾಡಿದಾಗ ಯಾವ ಸಂದರ್ಭದಲ್ಲಿ ಏಕೆ ಇಂಥ ಪದವನ್ನು ಪ್ರಯೋಗಿಸಲಾಯಿತೆಂದು ಮನದಟ್ಟಾಗುತ್ತದೆ. ವಿಶಿಷ್ಟಾರ್ಥವನ್ನು ಪದಕೋಶದಲ್ಲಿ ಹುಡುಕುವ ಸಾಹಸ ಮಾಡಿದರೆ ಅದು ವ್ಯರ್ಥ ಪ್ರಯಾಸ ಎನಿಸುವುದು ಖಚಿತ. ಅಂಥ ಕೆಲವು ಪದಗಳನ್ನು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಬೊಹೊ, ಇಕೊ ಷೀಕ್
`ಬೊಹೊ~ ಅಥವಾ `ಬೊಬೊ~ ಷೀಕ್ ಇದು ವಿಶಿಷ್ಟವಾದ ವಸ್ತ್ರವಿನ್ಯಾಸಕ್ಕೆ ಸಂಬಂಧಿಸಿದ್ದು. ಹಿಪ್ಪಿ ಪ್ರಭಾವದೊಂದಿಗೆ ರೂಪುಗೊಂಡ ಫ್ಯಾಷನ್ ಪ್ರಯೋಗವಿದು. ಬ್ರಿಟನ್ ನಟಿಯರಾದ ಸೀಯೆನ್ನಾ ಮಿಲ್ಲರ್, ಕೇಟ್ ಮೋಸ್ ಹಾಗೂ ಅಮೆರಿಕಾದ ಮೇರಿ ಕೇಟ್ ಮತ್ತು ಅಶ್ಲಿ ಓಲ್ಸೆನ್ ಇಂಥದೊಂದು ಉಡುಪಿಗೆ ಪ್ರಚಾರ ನೀಡಿದರು.

`ಬೊಹೊ~ ಎನ್ನುವ ಪದ ಬಂದಿದ್ದು ಬಹಾಮಸ್‌ನಿಂದ ಅದೇ `ಷೀಕ್~ ಎನ್ನುವುದು ಫ್ರಾನ್ಸ್‌ನ ಪುರುಷ ಉಡುಪು. ಪತ್ತೇದಾರಿ ಕಥೆಯ ಶರ್ಲಾಕ್ ಹೋಮ್ಸ ಪಾತ್ರಧಾರಿ ತೊಟ್ಟುಕೊಂಡಂಥ ಮೇಲಂಗಿ ಇರುತ್ತದಲ್ಲ ಅಂಥದ್ದು. ಆದರೆ ಇವೆರಡೂ ಒಂದಾಗಿ ಮಹಿಳೆಯರ ವಿಶಿಷ್ಟ ವಿನ್ಯಾಸದ ಉಡುಪಾಗಿ ಸ್ವರೂಪ ಪಡೆದುಕೊಂಡಿದೆ.

ಇದಿಷ್ಟು ಮೂಲ ಸ್ವರೂಪದಲ್ಲಿ ಪ್ರಯೋಗವಾಗುವ ಪದದ ಅರ್ಥ. ಆದರೆ ಇದೇ `ಬೊಹೊ~ ಇಲ್ಲವೆ `ಬೊಬೊ~ ಷೀಕ್ ಅನ್ನು ವ್ಯಂಗ್ಯಾರ್ಥದಲ್ಲಿಯೂ ಬಳಸಲಾಗುತ್ತದೆ. ಅಂದರೆ ಭಾರಿ ಅಹಂ ಇರುವಂಥ ರೂಪದರ್ಶಿಯನ್ನು ಹೀಗೆ ಕರೆಯಲಾಗುತ್ತದೆ. ಅಷ್ಟೇ ಅಲ್ಲ ಗಂಡಿನಂಥ ವರ್ತನೆ ತೋರುವ ಹುಡುಗಿಗೆ ಹಾಗೂ ಹುಡುಗನಂಥ ಭಾವಭಂಗಿ ವ್ಯಕ್ತಪಡಿಸುವ ಹುಡುಗಿಯರಿಗೂ ಹೀಗೆ ಕರೆಯಲಾಗುತ್ತದೆ.

`ಇಕೊ ಷೀಕ್~ ಮಾತ್ರ ಒಳ್ಳೆಯದನ್ನು ಬಿಂಬಿಸುವಂಥದ್ದು. ಪರಿಸರ ಸ್ನೇಹಿಯಾದ ಉಡುಪಿಗೆ ಬಳಸುವ ಪದವನ್ನೇ ಒಳ್ಳೆಯ ವರ್ತನೆಯ ಸಭ್ಯ ರೂಪದರ್ಶಿಗಳಿಗೂ ಬಳಸಲಾಗುತ್ತದೆ. ಅಷ್ಟೇ ಅಲ್ಲ ಸ್ನೇಹಯುತ ಗುಣವನ್ನು ಹೊಂದಿದವರಿಗೂ ಇದೇ ರೀತಿಯಲ್ಲಿ ಹೇಳಲಾಗುತ್ತದೆ.
 
`ಅವಳು ಇಕೊ ಷೀಕ್ ಇದ್ದಂತೆ~ ಎಂದು ಹೇಳುವುದನ್ನು ಗ್ಲಾಮರ್ ಲೋಕದವರ ನಡುವೆ ಇದ್ದಾಗ ಕೇಳಬಹುದಾಗಿದೆ. `ಟ್ರೆಸ್ ಷೀಕ್~ ಎಂದು ಹೇಳಿ ನಕ್ಕರೆ ಅತಿಯಾದ ಲಾಲಿತ್ಯದಿಂದ ಉಲಿದಾಡುವುದನ್ನು ವಿಡಂಬನೆ ಮಾಡಲಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಪ್ರೆಪಿ
ಭಾರಿ ದುಬಾರಿ ಖಾಸಗಿ ಶಾಲೆಯಲ್ಲಿ ಓದಿದಂತೆ ಕಾಣುವವರಿಗೆ ಅಮೆರಿಕನ್ನರು `ಪ್ರೆಪಿ~ ಎಂದು ಕರೆಯುತ್ತಾರೆ. ಆದರೆ ಫ್ಯಾಷನ್ ಜನರು ಇದಕ್ಕೆ ಹಲವಾರು ಅರ್ಥ ನೀಡಿ ಪ್ರಯೋಗಿಸುತ್ತಿದ್ದಾರೆ. ಗ್ಲಾಮರ್ ಕ್ಷೇತ್ರಕ್ಕೆ ಕಾಲಿಟ್ಟ ತಕ್ಷಣವೇ ದೊಡ್ಡಸ್ತಿಕೆ ತೋರಿಸಿದರೆ `ಪೆಪ್ರಿ...ಹಾಂ...!~ ಎಂದು ಕೀಟಲೆ ಮಾಡುವುದು ಸಹಜ.

ಭಾರಿ ದುಬಾರಿ ವಿನ್ಯಾಸಗಳನ್ನು ರೂಪಿಸುವ ಫ್ಯಾಷನ್ ಡಿಸೈನರ್‌ಗೆ ಕೂಡ ಹೀಗೆಯೇ ಹೇಳಲಾಗುತ್ತದೆ. ಆದರೆ ಒಂದು ಅಂಶ ಸ್ಪಷ್ಟವಾಗಿ ಗಮನಿಸಬೇಕು. ಇದು ಸಕಾರಾತ್ಮಕವಾಗಿ ಪ್ರಯೋಗ ಆಗುವುದಿಲ್ಲ. ಹೊಗಳಿಕೆಯಂತೂ ಅನಿಸುವುದಿಲ್ಲ. ಒಂದು ರೀತಿಯಲ್ಲಿ ಟೀಕೆಯೇ ಆಗಿರುತ್ತದೆ.

ಕೆಟ್ಟ ಗುಣವಾಚಕದ ತೊಡುಗೆ ತೊಡಿಸಿ ಈ ಪದವನ್ನು ಫ್ಯಾಷನ್ ವಿಶ್ಲೇಷಕರು ಬಳಸುತ್ತಾರೆ. ಆದ್ದರಿಂದ `ಪೆಪ್ರಿ~ ಮುಕ್ತ ಮನಸ್ಸಿನಿಂದ ಸ್ವೀಕರಿಸುವಂಥ ಮೆಚ್ಚುಗೆಯ ನುಡಿಯಾಗಿ ಉಳಿದಿಲ್ಲ. ಫ್ಯಾಷನ್ ಪಾರ್ಟಿಯಲ್ಲಿ ಕೆಲವೊಮ್ಮೆ ಇದು ಗುಣಾತ್ಮಕ ಪದ ಪ್ರಯೋಗ ಆಗಿರುತ್ತದೆ.
 
ಒಳ್ಳೆಯ ರೂಪದರ್ಶಿ ತನ್ನ ಸಭ್ಯ ವರ್ತನೆಯಿಂದ ಮೆಚ್ಚುಗೆ ಗಳಿಸಿದಾಗ ಮಾತ್ರ ಹೊಗಳಿಕೆಯಾಗುತ್ತದೆ `ಪೆಪ್ರಿ~. ಆದರೆ ಇಂಥ ಒಳಿತಾದ ಅರ್ಥದೊಂದಿಗೆ ಇದನ್ನು ಬಳಸುವುದು ತೀರ ಅಪರೂಪವೇ ಆಗಿದೆ. ಮೇಲು ನೋಟಕ್ಕೆ ಭಾರಿ ಶಿಸ್ತು ಎನ್ನುವಂತೆ ನಡೆದುಕೊಳ್ಳುವ ವಿನ್ಯಾಸಕರನ್ನು ರೂಪದರ್ಶಿಗಳು ವ್ಯಂಗ್ಯ ಮಾಡುವುದೇ ಈ ಪದದಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT