ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ವಸೂಲಿ ಸಿಬ್ಬಂದಿಗೆ ಗನ್ ತೋರಿ ಬೆದರಿಕೆ:ಸಂಸದನ ವಿರುದ್ಧ ಪ್ರಕರಣ ದಾಖಲು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಡೋದರಾ/ನವದೆಹಲಿ (ಪಿಟಿಐ): ರಾಷ್ಟ್ರೀಯ ಹೆದ್ದಾರಿ ಸಂಚಾರಿ ಸುಂಕ ವಿನಾಯ್ತಿ ಪಡೆಯಲು ಮೂಲ ಗುರುತಿನ ಚೀಟಿ ತೋರಿಸದೇ ಸುಂಕ ವಸೂಲಿ ಕೇಂದ್ರದ ಸಿಬ್ಬಂದಿಗೆ ಗನ್ ತೋರಿಸಿ ಬೆದರಿಸಿರುವ ಪೋರಬಂದರ್  ಕ್ಷೇತ್ರದ ಕಾಂಗ್ರೆಸ್ ಸಂಸತ್ ಸದಸ್ಯ ವಿಠಲ್ ರಾಡಾಡಿಯಾ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

 ರಾಡಾಡಿಯಾ ಅವರು ಸಿಬ್ಬಂದಿಗೆ ಗನ್  ತೋರಿಸಿ ಬೆದರಿಸುತ್ತಿರುವ ದೃಶ್ಯ ಸುಂಕ ವಸೂಲಿ ಕೇಂದ್ರದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.   ಘಟನೆಯ ನಂತರ, ಸುಂಕ ವಸೂಲಿ ಕೇಂದ್ರದ ಮ್ಯಾನೇಜರ್ ನೀಡಿರುವ ದೂರಿನ ಅನ್ವಯ ರಾಡಾಡಿಯಾ ವಿರುದ್ಧ ಶಾಂತಿಭಂಗ ನಡೆಸಿದ ಮತ್ತು ಜನರನ್ನು ಬೆದರಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಾಂತಿಭಂಗ ನಡೆಸಿದ್ದಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ  ರಾಡಾಡಿಯಾ ವಿರುದ್ಧ ವಡೋದರಾ ಗ್ರಾಮೀಣ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಇವರೊಂದಿಗೆ ಇತರ ಐವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಸುಂಕ ವಸೂಲಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದಾಗ ಸಂಸದರ ಕಾರಿನ ಚಾಲಕ ಗುರುತಿನ ಚೀಟಿಯ ಛಾಯಾಪ್ರತಿ ತೋರಿಸಿದ.
ಆದರೆ ಕೇಂದ್ರದ ಸಿಬ್ಬಂದಿ ಅದನ್ನು ನಿರಾಕರಿಸಿ ಮೂಲ ಗುರುತಿನ ಚೀಟಿಗಾಗಿ ಬೇಡಿಕೆ ಇಟ್ಟಾಗ ರಾಡಾಡಿಯಾ ತಮ್ಮಲ್ಲಿದ್ದ ಗನ್ ತೋರಿಸಿ ಸಿಬ್ಬಂದಿಯನ್ನು ಬೆದರಿಸಿದರು.

ರಾಷ್ಟ್ರೀಯ ಹೆದ್ದಾರಿ 8ರ  ಕರ್ಜಾನ್ ಸಮೀಪ ಅ. 10ರ ಮಧ್ಯರಾತ್ರಿ ರಾತ್ರಿ ಈ ಘಟನೆ ನಡೆದಿದೆ.
ದೇಶದಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲಾ ಸಂಸದರಿಗೆ ಸುಂಕ ವಿನಾಯ್ತಿ ಇದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವು ರಾಷ್ಟ್ರೀಯ ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದು, ಘಟನೆ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿವೆ.

ಘಟನೆ ಬಗ್ಗೆ ಶೀಘ್ರವಾಗಿ ವರದಿ ನೀಡುವಂತೆ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸೂಚಿಸಲಾಗಿದೆ ಎಂದು ನವದೆಹಲಿಯಲ್ಲಿ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ಸೌರಾಷ್ಟ್ರ ಪ್ರಾಂತ್ಯದಲ್ಲಿ ರಾಡಾಡಿಯಾ ಅವರು ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT