ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನಗರದ ಕುರೂಪ ಮುಖ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಕ್ಷೌರಿಕನಾಗಿ ಹುಟ್ಟಬಾರದಿತ್ತು'
ಮುಖ ಕ್ಷೌರ ಮಾಡಬೇಕಾದ ಸಂದರ್ಭದಲ್ಲಿ ಕೆಲವೊಮ್ಮೆ ತಲೆಯ ಮೇಲೆ ನಮ್ಮ ಕೈ ಇಡಬೇಕಾದ (ಮುಖ ಅಲುಗಾಡದ ಹಾಗೆ) ಸಂದರ್ಭದಲ್ಲಿ ಒಬ್ಬ ಭೂಪ `ನಿಮ್ಮ ಜಾತಿಯವರು ನಮ್ಮ ತಲೆಯ ಮೇಲೆ ಕೈಯಿಟ್ಟರೆ ಅಶುಭವಂತೆ' ಎಂದು ಹೇಳಿಯೇ ಬಿಟ್ಟ ಅವನು ಒಬ್ಬ ಪದವೀಧರ ಶಿಕ್ಷಕ ಬೇರೆ.

- ಕೆಲವೊಮ್ಮೆ ಮಕ್ಕಳನ್ನು ಕರೆತರುವ ತಾಯಂದಿರು ಕಟಿಂಗ್ ಆದ ನಂತರ ಮಕ್ಕಳನ್ನೆ ಮುಟ್ಟಿಸಿ ಕೊಳ್ಳುವುದಿಲ್ಲ. (ಕತ್ತರಿಸಿ ಬಿದ್ದ ಕೂದಲು ತೆಗೆಯಲು ಬಿಡುವುದಿಲ್ಲ, ನಾವು ಅವರ ಮಕ್ಕಳನ್ನು ಮುಟ್ಟುತ್ತೇವೆ ಎಂಬ ಭಯ ಅವರಿಗೆ

- ಕೆಲವೊಮ್ಮೆ ಮನೆಗಳಿಗೆ ಭೇಟಿ ಕೊಡಬೇಕಾದ ಅನಿವಾರ್ಯ ಸಂದರ್ಭದಲ್ಲಿ (ಅಂಗವಿಕಲರಿಗೆ, ವೃದ್ದರಿಗೆ, ಬುದ್ದಿಮಾಂಧ್ಯರಿಗೆ ಅಪಘಾತದಲ್ಲಿ ಕೈಕಾಲು ಕಳೆದು ಕೊಂಡವರಿಗೆ ನಮ್ಮ ಸೇವೆ ಅಗತ್ಯವಾಗಿ ಬೇಕು). ಅಂತಹ ಸಂದರ್ಭಗಳಲ್ಲಿ ಹಿಂಬಾಗಿಲಿನ ಮುಖಾಂತರವೇ ಪ್ರವೇಶ. ಆ ಜಾಗ ಆ ದೇವರಿಗೆ ಪ್ರೀತಿ ಗಬ್ಬೆದ್ದು ನಾರುವ ಜಾರುವ 2/3 ಅಡಿಯ ಬಾತ್ ರೂಮಿನಲ್ಲಿ ಗುಪ್ತಾಂಗಗಳಲ್ಲಿನ ಸಹ ಕೂದಲು ತೆಗೆದು ಹಾಕಿ ಎಂಬ ಧಮಕಿ ಬೇರೆ.

- ಬೆಳಿಗ್ಗೆ ಕ್ಷೌರಿಕರ ಮುಖ ನೋಡಬಾರದೆಂಬ ಬ್ರಹ್ಮಾಂಡ ಖ್ಯಾತಿಯ ಜ್ಯೋತಿಷಿಯೊಬ್ಬರು ಕೆಲ ದಿನಗಳ ಹಿಂದೆ ಹೇಳಿದ್ದರು. ಆ ಮೇಲೆ ಒತ್ತಡದಿಂದ ಕ್ಷಮಾಪಣೆ ಕೇಳಿದರು. ಆ ಪ್ರಶ್ನೆ ಬೇರೆ. ನೋಡಿದರೂ ಏನಾದರೂ ಸಂಭವಿಸಬಹುದೆಂಬ ಸಾಮಾನ್ಯ ಜನರ ಭಯ ಬೇರೆ.
- ಆಗಾಗ ಜನರೂ ತಮಾಷೆಗಾಗಿಯೇ ಬೈಯುವುದಕ್ಕಾಗಿ `ಹಜಾಮ' ಎಂಬ ಪದವನ್ನು ಉಪಯೋಗಿಸುವುದನ್ನು ಕೇಳಿದರೆ ಯಾಕಾದರೂ ಈ ಜಾತಿಯಲ್ಲಿ ಹುಟ್ಟಿದೆನೊ ಎಂದು ಅನಿಸುತ್ತದೆ.
  ಮುರುಳಿ ಎ. ಬೆಂಗಳೂರು

ಜನಗಳಿದ್ದಷ್ಟು ಧರ್ಮಗಳಿರಲಿ
ನಾನು ಹುಟ್ಟಿದ್ದು ಲಿಂಗಾಯಿತ ಕುಟುಂಬದಲ್ಲಿಯಾದರೂ, ಯಾವುದೇ ಜಾತಿಯ ಜನರನ್ನು ಕೀಳಾಗಿ ಅಥವಾ ಮೇಲೆಂದು ಕಾಣುವ ಪ್ರವೃತ್ತಿ ಬಾಲ್ಯದಿಂದ ನನಗೆ ಬರಲಿಲ್ಲ. ಮುಸಲ್ಮಾನ, ಹರಿಜನ, ಚಮ್ಮಾರ .... ವಿವಿಧ ಜನಾಂಗದವರು, ಮದುವೆಗಳಿಗೆ ನನ್ನನ್ನು ಕರೆಯುತ್ತಾರೆ. ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೇನೆ. ಜನರು ಸುಶಿಕ್ಷಿತರಾಗುತ್ತಿದ್ದಾರೆ. ಧರ್ಮ, ಜಾತಿ ಆಚರಣೆಗಳ ಸೂಕ್ಷ್ಮತೆಗಳ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಒಂದು ಕಡೆಗೆ ಮಾಂಸಾಹಾರ, ಬೇರೆ ಕಡೆಗೆ ಸಸ್ಯಾಹಾರ ಊಟದ ವ್ಯವಸ್ಥೆ ಮಾಡುತ್ತಾರೆ.

ಜನರು ಅವರವರ ಇಷ್ಟದ ಭೋಜನ ಮಾಡುತ್ತಾರೆ. ನನ್ನ ಮನೆಯ ಹತ್ತಿರ ವಾಸಿಸುವ ಮುಸಲ್ಮಾನ ಕುಟುಂಬದವರೆಲ್ಲ ಸುಶಿಕ್ಷಿತರು. ತಮ್ಮ ಮನೆಯಲ್ಲಿ ಜರಗುವ ಮದುವೆ ಸಮಾರಂಭಗಳಲ್ಲಿ, ಕೇವಲ, ಉತ್ತಮ ದರ್ಜೆಯ ಸಸ್ಯಾಹಾರಿ ಭೋಜನವನ್ನು ಮಾಡಿಸುತ್ತಾರೆ.
`ನಿಮ್ಮ ಜನಾಂಗದವರು ಇಷ್ಟ ಪಡುವ ಮಾಂಸದ ಅಡಿಗೆಯನ್ನೇಕೆ ಮಾಡಿಸಲಿಲ್ಲ?, ಇದರಿಂದ, ನಿಮ್ಮ ಧಾರ್ಮಿಕ ಜನರ ಅಪೇಕ್ಷೆಗಳಿಗೆ ವ್ಯತ್ಯಯವಾಗುವದೆಂದು ನಿಮಗೆ,ಅನಿಸುವುದಿಲ್ಲವೇ?' ಎಂದು ಅವರನ್ನು ಕೇಳಿದಾಗ, `ಮುಸಲ್ಮಾನರು ವರ್ಷದ ಎಲ್ಲಾ ದಿನಗಳಲ್ಲಿ, ಹೆಚ್ಚಾಗಿ ಸೇವಿಸುವುದು ಸಸ್ಯಾಹಾರವನ್ನೇ!, ಹಬ್ಬ, ಮುಂಜಿ .... ಮುಂತಾದ ಕೆಲವೇ ದಿನಗಳಲ್ಲಿ ಮಾತ್ರ ಮಾಂಸದ ಭೋಜನವನ್ನು ಮಾಡುತ್ತಾರೆ. ಒಂದೇ ತರದ ಭೋಜನವನ್ನು ತಯಾರಿಸುವುದರಿಂದ, ಏಕತೆಯ ಸಾಮರಸ್ಯ, ಸೌಹಾರ್ದತೆ ಕಾಯ್ದುಕೊಂಡಂತಾಗುತ್ತದೆ'. ಎಂದು ಉತ್ತರಿಸಿದರು. ಇಂಥಹವರೂ ನಮ್ಮಂದಿಗಿದ್ದಾರೆ.

ಇನ್ನು, ಅವರ ಆಚರಣೆಗಳ ಬಗ್ಗೆ ಹೇಳುವುದಾದರೆ, ವಧುವನ್ನು ವೇದಿಕೆಯ ಮೇಲೆ ವರನ ಜೊತೆ ಕೂಡ್ರಿಸುವುದಿಲ್ಲ. ಇದು ಸರಿ ಅಥವಾ ತಪ್ಪು ಎಂಬ ವಿಮರ್ಶೆಯ ಗೊಡವೆಗೆ ನಾನು ಹೋಗುವುದಿಲ್ಲ. ಯಾಕೆಂದರೆ, `ಮನುಷ್ಯ ಎಲ್ಲ ಧರ್ಮಗಳನ್ನು ಗೌರವಿಸಬೇಕು, ತನ್ನ ಧರ್ಮದಲ್ಲಿ ಬದುಕಬೇಕು' ಎಂಬ ಸಿದ್ಧಾಂತವನ್ನು ನಾನು ಸಂಪೂರ್ಣವಾಗಿ ನಂಬಿ, ನಡೆಯುತ್ತಿರುವವನು. ಕೊನೆಯಲ್ಲಿ ಸ್ವಾಮಿ ವಿವೇಕಾನಂದರ ಒಂದು ಮಾತನ್ನು ನೆನಪಿಸುತ್ತೇನೆ, `ಧರ್ಮವೆಂಬುದು ಮಾನವ ಜೀವನದ  ವಿಕಾಸಕ್ಕೆ ಸಹಕಾರಿಯಾಗಬಲ್ಲ, ರೀತಿ, ನೀತಿ, ನಿಯಮಗಳ ಸಂವಿಧಾನ, ಇದನ್ನು ಅರಿತು ಆಚರಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ಯಾವ ಮನುಷ್ಯನೂ ಯಾವುದೇ ಧರ್ಮಕ್ಕೆ ಹುಟ್ಟಿಲ್ಲ; ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಧರ್ಮವನ್ನು ಒಳಗೊಂಡಿದ್ದಾರೆ; ಆದ್ದರಿಂದ ಜಗತ್ತಿನಲ್ಲಿ ಎಷ್ಟು ಜನರಿದ್ದಾರೋ, ಅಷ್ಟು ಧರ್ಮಗಳಿರಲಿ'.
   ಕೆ. ಜಿ. ಭದ್ರಣ್ಣವರ, ಮುದ್ದೇಬಿಹಾಳ

ಹಳ್ಳಿಗಿಂತಲೂ ನಗರ ಉತ್ತಮ
ಎಪ್ಪತ್ತರ ದಶಕದಲ್ಲಿ ನಾನು ಹಳ್ಳಿಯಿಂದ ನಗರಕ್ಕೆ ಬಂದೆ. ನಮ್ಮ ತಂದೆ ವೈದ್ಯರಾಗಿದ್ದರು.  ನಾನು ನಗರದ ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿದೆ. ನನಗೆ ಬಹಳಷ್ಟು ಹಿಂದೂ ಗೆಳೆಯರಿದ್ದರು. ಅಂತಹ ಆತ್ಮೀಯ ಗೆಳೆಯನೊಬ್ಬನ ಮನೆಯಲ್ಲಿ ಮದುವೆಗೆ ಕರೆದಿದ್ದರು.

ನಾನು ಹೋಗಲು ಹಿಂಜರಿದೆ. ನಾನು ಹಳ್ಳಿಯಲ್ಲಿ  ಲಿಂಗಾಯತರ ಮನೆಗೆ ಹೋದರೆ ನಾನು ಉಂಡ ತಟ್ಟೆಯನ್ನು ನಾನೇ ತೊಳೆದು ಇಟ್ಟು ಬರುತ್ತಿದ್ದೆ. ಈ ಹಿಂದು ಗೆಳೆಯನ ಮನೆಯಲ್ಲಿ ಇದೇ ಸಂಪ್ರದಾಯವಿರಬಹುದು ಎಂದು ನನ್ನ ಇನ್ನೊಬ್ಬ ಆತ್ಮೀಯ ಗೆಳೆಯನಲ್ಲಿ ಹೇಳಿದಾಗ ಇಲ್ಲಿ ಹಾಗೇನೂ ಇಲ್ಲವೆಂದು ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋದ. ಜೊತೆಯಲ್ಲಿ ನನ್ನ ಗೆಳೆಯನು ಇದ್ದಾನಲ್ಲವೆಂಬ ಧೈರ್ಯದಿಂದ ಮದುವೆಯ ಸಮಾರಂಭವಿರುವ ಮನೆಗೆ ಹೋದಾಗ ಆ ಗೆಳೆಯನ ಮನೆಯವರು ತೋರಿದ ಆತ್ಮೀಯತೆಯನ್ನು ಹೊಗಳಲು ಅಕ್ಷರಗಳೇ ಸಾಲವು. ನಾನು ಹೋಗುವುದು ತಡವಾದುದರಿಂದ ನನ್ನ ಗೆಳೆಯನ ಚಿಕ್ಕಪ್ಪ, ಚಿಕ್ಕಮ್ಮ ನನ್ನನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು ಧೈರ್ಯ ತುಂಬಿದರು. ಆಶ್ಚರ್ಯದ ವಿಷಯವೆಂದರೆ ಮದು ಮಗಳು ಸಹ ನನ್ನ ಪಕ್ಕದಲ್ಲಿಯೇ ಕುಳಿತದ್ದು.ನನ್ನ ಅನುಭವದ ಪ್ರಕಾರ ಜಾತಿ ಬರಿ ಹಳ್ಳಿಗಳಲ್ಲಿ ಮಾತ್ರವಿರುವುದು ನಗರದ್ಲ್ಲಲಲ್ಲ .
ಅಬ್ದುಲ್ ವಹ್ಹಾಬ್ ಮುಲ್ಲಾ,ಗಂಗಾವತಿ

`ವಾಸ್ತವ ಸತ್ಯ'
ಕೆಲವು ಡೋಂಗಿಗಳು ಬರಿಮಾತಿಗೆ `ನಾವೆಲ್ಲಾ ಒಂದೇ' ಎಂದು ಹೇಳುತ್ತಾರೆ. ನನ್ನ ಗೆಳೆಯನೊಬ್ಬ ಕೆಟ್ಟುನಿಂತ ವಿದ್ಯುತ್ ಸರಿಪಡಿಸಲು ಬ್ರಾಹ್ಮಣರೊಬ್ಬರ ಮನೆಗೆ ಹೋದರೆ ಕೆಲಸ ಆಗೋವರೆಗೆ ಸುಮ್ಮನಿದ್ದು ನಂತರ ಗೋಮೂತ್ರ ಹಾಕಿ ಮನೆ ಶುಚಿಗೊಳಿಸಿದರಂತೆ. ಕಾಫಿ ಕುಡಿಯಲು ತಮ್ಮ ಮನೆಯ ಸೂರಿನಲ್ಲಿ ಸಿಕ್ಕಿರುವ ಲೋಟವನ್ನು ತೆಗೆದುಕೊಳ್ಳಲು ಹೇಳಿದರಂತೆ. ಇದರಿಂದ ಕೋಪಗೊಂಡ ಸ್ವಾಭಿಮಾನಿ ಗೆಳೆಯ ನಿರಾಕರಿಸಿ ಬಂದನಂತೆ. ಇದೇ ರೀತಿ ನಾನು ಮತ್ತು ಗೆಳೆಯ ಮೇಲ್ಜಾತಿಯ ಶ್ರೀಮಂತರೊಬ್ಬರ ಮನೆಯ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಟ್ಟೆವು. ಆದರೆ ಗೃಹಪ್ರವೇಶಕ್ಕೆ ಹೋದಾಗ ಮನೆಯ ಒಳಗೆ ಕರೆಯದೆ ಅವಮಾನ ಮಾಡಿದ್ದರು.

ನಾವು ಕೆಲವು ಮೇಲ್ಜಾತಿಯವರ ಮನೆಗಳಿಗೆ ಮದುವೆ, ತಿಥಿ ಅಂತಹ ಸಮಾರಂಭಗಳಿಗೆ ಹೋಗಿದ್ದೆವು. ಆದರೆ ಅಲ್ಲಿ ಯಾರೂ ಸಹ ಅವರ ಸಮಾನಕ್ಕೆ ನಮ್ಮನ್ನು ನಡೆಸಿಕೊಂಡಿಲ್ಲ. `ಆಗುವವರಗೆ ಅರಸ ಆದ ಮೇಲೆ ಆಳು' ಎನ್ನುವ ಈ ನೀಚ ವ್ಯವಸ್ಥೆಯಲ್ಲಿ ಸಮಾನತೆ ಎಂಬುದು ಕೇವಲ ಮರೀಚಿಕೆಯಾಗಿದೆ. ನಾನು ಕಂಡಂತೆ ಮೇಲ್ಜಾತಿಯವರ ಮನೆಯ ಮದುವೆ, ತಿಥಿ ಕಾರ್ಯಗಳಿಗೆ ತಮಟೆ, ಡೋಲು, ಬಡಿಯಲು ಕೆಳವರ್ಗದವರನ್ನು ಕರೆದುಕೊಂಡು ಹೋಗುತ್ತಾರೆ. ತಮ್ಮ ಕೆಲಸವೆಲ್ಲ ಮುಗಿದ ಮೇಲೆ ಸಹಪಂಕ್ತಿಯಲ್ಲಿ ಕೂರಿಸಿ ಊಟ ಹಾಕುವುದಿಲ್ಲ. ದೂರದಲ್ಲಿ ನೆಲದಲ್ಲಿ ಕೂರಿಸಿ ಊಟ ಹಾಕುತ್ತಾರೆ, ಇದು ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ ನಗರದಲ್ಲಿಯೂ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತ ನಗರ ವಾಸಿಗಳಲ್ಲಿಯೇ ಮಡಿ, ಮೈಲಿಗೆ, ಮೌಢ್ಯಗಳು ಹೆಚ್ಚಾಗುತ್ತಿವೆ.
     ಡಿ.ಕೆ. ಮಂಜುದೇವಿ, ಹಾಸನ.

ದೇವರಿಗೂ ಜಾತಿ, ಆಹಾರಕ್ಕೂ ಜಾತಿ
ಅದು ಎಪ್ಪತ್ತರ ದಶಕದ ದಿನಗಳು. ನಾನಾಗ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನನ್ನ ಗೆಳೆಯರ ಗುಂಪಿನಲ್ಲಿ ನಾನೊಬ್ಬನೆ ಲಿಂಗಾಯಿತ. ಉಳಿದವರೆಲ್ಲರೂ ಬ್ರಾಹ್ಮಣರು. ಆಗಾಗ ಅವರ ದೇವರುಗಳ ಮೆರವಣಿಗೆ ಹೊರಡುತ್ತಿದ್ದವು. ಬಿಳಿಯ ಕಚ್ಚೆಪಂಚೆ, ಹೆಗಲಮೇಲೆ ರೇಷ್ಮೆ ಶಲ್ಯವನ್ನು ಹಾಕಿಕೊಂಡು ನನ್ನ ಗೆಳೆಯರು ಭಜನೆ ಮಾಡುತ್ತ ಮೆರವಣಿಗೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ನಾನು ನಿಂತು ನೋಡುತ್ತಿದ್ದೆ. ನನಗೂ ಅದರಲ್ಲಿ ಭಾಗವಹಿಸುವ ಆಸೆಯಾಗುತ್ತಿತ್ತು. 

ಆದರೆ ನನ್ನ ದೇವರೆ ಬೇರೆ; ಅವರ ದೇವರೇ ಬೇರೆ. ಉಗ್ರನರಸಿಂಹ ಎಷ್ಟೇ ಉಗ್ರನಾದರೂ ಲಿಂಗಾಯಿತರು ಹೆದರುವುದಿಲ್ಲ. ನಮ್ಮ ದೇವರು ಇನ್ನೂ ಭಯಂಕರ. ಕೈಯಲ್ಲಿ ಖಡ್ಗ, ಕೊರಳಲ್ಲಿ ರುಂಡಮಾಲೆ ಹಾಕಿಕೊಂಡಿರುವ ವೀರಭದ್ರ. ಬ್ರಾಹ್ಮಣರೂ ಅಷ್ಟೆ, ಬೇರೆ ದೇವರುಗಳಿಗೆ ಸೊಪ್ಪು ಹಾಕದಷ್ಟು ಬುದ್ಧಿವಂತರು. ಶಾಲೆಯಲ್ಲಿ ನನ್ನ ಸಹಪಾಠಿಗಳು ನಮ್ಮ ಜಾತಿಯ ಬಗ್ಗೆ ಪ್ರಾಸಬದ್ಧವಾಗಿ, ಆದರೆ ಅಶ್ಲೀಲವಾಗಿ ಹಾಡು ಹೇಳಿ ನನ್ನನ್ನು ರೇಗಿಸುತ್ತಿದ್ದರು. ನನಗೊ, ಭೂಮಿ ಬಾಯ್ತೆರೆದು ನುಂಗಬಾರದೇ ಎಂದು ಅನಿಸುತ್ತಿತ್ತು. 

ಕೋಳಿ, ಕುರಿ ಮತ್ತು ಮೀನುಗಳನ್ನು ಚಪ್ಪರಿಸಿ ತಿನ್ನುವ ಲಿಂಗಾಯಿತ ಮತ್ತು ಬ್ರಾಹ್ಮಣ ಹುಡುಗರು ಮದುವೆಯ ವಿಷಯಕ್ಕೆ ಬಂದಾಗ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುತ್ತಾರೆ. ಯಾಕೆಂದರೆ ವ್ಯವಸ್ಥೆಗೆ ಹೊಂದಿಕೊಂಡು ಹೋದರೆ ಹೆಚ್ಚು ಸುಖ ಮತ್ತು ನೆಮ್ಮದಿ ಎಂದು ಅವರಿಗೆ ಗೊತ್ತಿರುತ್ತದೆ.  ನಾವಾಡುವ ಮಾತುಗಳಲ್ಲಿ ಜಾತಿ ಇದೆ. ನಮ್ಮ ಉಡುಗೆ-ತೊಡುಗೆಗಳಲ್ಲಿ ಜಾತಿ ಇದೆ. ನಾವು ತಿನ್ನುವ ಪದಾರ್ಥದಲ್ಲಿ ಜಾತಿ ಇದೆ. ನಾವು ತಿನ್ನುವ ರೀತಿಯಲ್ಲಿ ಇದೆ. ಅಷ್ಟೇ ಏಕೆ, ನಮ್ಮ ತರಕಾರಿಗಳಲ್ಲೂ ಜಾತಿ ಅಡಗಿ ಕುಳಿತಿದೆ. ಬಾಯಿಯಲ್ಲಿ ಬೆಳ್ಳುಳ್ಳಿಯ ವಾಸನೆ ಶೂದ್ರತನದ ಸಂಕೇತ. ಪ್ರಳಯ ಆಗುವುದಿಲ್ಲ; ಜಾತಿ ಹೋಗುವುದಿಲ್ಲ.
ಜಗದೀಶ್ ಎಚ್.ಬಿ., ಹುಬ್ಬಳ್ಳಿ.

ಜಾತಿ-ವರ್ಣಭೇದ ನಗರದಲ್ಲಿ ಹೆಚ್ಚು
ನಗರೀಕರಣದಿಂದ ಮಹಲುಗಳು ನಿರ್ಮಾಣವಾಗುತ್ತಿದೆಯೆ ಹೊರತು, ಒಳ್ಳೆಯ ಮನಸ್ಸುಗಳು ನಿರ್ಮಾಣವಾಗುತ್ತಿಲ್ಲ. ಹಿಂದಿನ ನಗರಗಳ ಜಾತೀಯತೆಗಿಂತಲೂ ಇಂದಿನ ನಗರಗಳ ಜಾತೀಯತೆ ಪರಿಸ್ಥಿತಿ ಶೋಚನೀಯವಾಗಿದೆ. ವರ್ಣಭೇದ, ಜಾತಿಭೇದ ಮತ್ತು ಅಸ್ಪೃಶ್ಯತೆಗಳಲ್ಲಿ ವರ್ಣಭೇದ  ಮತ್ತು ಜಾತಿಭೇದ ನಗರಗಳಲ್ಲಿ ಹೆಚ್ಚು. ಅಸ್ಪೃಶ್ಯತೆ ಹಳ್ಳಿಗಳಲ್ಲಿ ಹೆಚ್ಚು. ಇದರಿಂದಾಗಿ ನಗರಗಳಲ್ಲಿ ಬಾಡಿಗೆ ಮನೆ ಇಲ್ಲವೆ ಒಳ್ಳೆಯ ಉದ್ಯೋಗ ಸಿಗುವುದಿಲ್ಲ.

ಖಾಸಗೀಕರಣದಿಂದ ಜಾತಿ ಭಾವನೆ ಉಲ್ಬಣವಾಗುತ್ತಿವೆ. ಇದರಿಂದಾಗಿ ಕೆಳವರ್ಗದವರು ಕೆಲಸದಿಂದ ವಂಚಿತರಾಗುತ್ತಾರೆ, ಕೆಲಸ ಸಿಕ್ಕಿದರೂ ಕೂಡಾ ಅರ್ಹತೆಗೆ ತಕ್ಕ ಅಥವಾ ಉನ್ನತ ಹುದ್ದೆ ಇರುವುದಿಲ್ಲ. ನಗರಗಳಲ್ಲಿ ಜಾತಿಯ `ಹೆಮ್ಮರದ' ಬೇರುಗಳು ಆಳವಾಗಿ, ಅಗಲವಾಗಿ ತನ್ನ ಬಾಹುಗಳನ್ನ ಚಾಚಿ ತನ್ನ ಜಾತಿಯವರಿಗೆ ಮಾತ್ರ ನೆರಳು ಮತ್ತು ಹಣ್ಣುಗಳನ್ನು ಕೊಟ್ಟು ಉಳಿದವರನ್ನು ಉರಿಬಿಸಿಲಿನಲ್ಲಿ ನಿಲ್ಲಿಸಿವೆ.   
ಕೆ.ಸಿ. ರಾಜಣ್ಣ, ಕುಣಿಗಲ್.

`ಜಾತ್ಯತೀತ'ರ ನಿಜ ಬಣ್ಣ

ನಗರಗಳ ತಥಾಕಥಿತ ಶಿಕ್ಷಿತ, ಜಾಗೃತ ಯುವಜನರ `ಜಾತ್ಯತೀತತೆ'ಯ ಬಣ್ಣ ಅರಿಯಬೇಕಾದರೆ ಭಾನುವಾರದ ಇಂಗ್ಲೀಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ `ಮೆಟ್ರೊಮೊನಿಯಲ್' ಅಂಕಣಗಳನ್ನು ಓದಬೇಕು. ತಮ್ಮದೇ ಜಾತಿ-ಗೋತ್ರಗಳ ಮಾತ್ರವಲ್ಲ ಇಂತಿಷ್ಟು ಎತ್ತರದ, ಇಂತಹದೇ (ಬಿಳಿ) ಬಣ್ಣದ ವಧು-ವರರನ್ನು ಹುಡುಕುತ್ತಿರುವ ನಗರದ `ಜಾತ್ಯತೀತ' ಯುವಜನರು ನೂರಾರು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಇದರಲ್ಲಿ `ಹಿಂದೂ, ನಾವೆಲ್ಲ ಒಂದು' ಎಂದು ಬೀದಿ ಭಾಷಣ ಮಾಡುವ ದೇಶಭಕ್ತರು ಮತ್ತು ಜಾತಿ ಬಗ್ಗೆ ಚರ್ಚೆ ನಡೆಸುವುದೇ ಜಾತಿವಾದ ಎಂದು ಬುದ್ದಿ ಹೇಳುವ ಪ್ರಭೃತಿಗಳು ಸೇರಿದ್ದಾರೆ. ಇವರನ್ನೇನು ಮಾಡಬೇಕು?.
ಸತ್ಯನಾರಾಯಣ ಎಂ.ಎಚ್.ಬೆಂಗಳೂರು

`ಜಾತಿ ವಿಷಯದಲ್ಲಿ ಹಳ್ಳಿಯೇ ವಾಸಿ'
ನಗರ-ಪಟ್ಟಣಗಳಲ್ಲಿಯೂ ಜಾತೀಯತೆ ಇದೆ, ಆದರ ರೂಪ-ಬಣ್ಣಗಳು ಮಾತ್ರ ಬದಲಾಗಿದೆ. ನಾನೊಬ್ಬ ಹಿಂದುಳಿದ ಜಾತಿಯ  ಪದವೀಧರ ಯುವಕ. ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಇಂಟರ್‌ವ್ಯೆಗೆ ಕರೆಬಂದಿತ್ತು. ನಮ್ಮ ತಂದೆಯ ಸ್ನೇಹಿತರೊಬ್ಬರು ಆ ಸಂಸ್ಥೆಯ ಮುಖ್ಯಸ್ಥರಿಗೆ ದೂರದ ಸಂಬಂಧಿ. ಆ ಸ್ನೇಹಿತರ ಕುಟುಂಬಕ್ಕೆ ನಾವು ಬಹಳ ಆಪ್ತರು. ಅವರು ಮೇಲ್ಜಾತಿಯವರಾಗಿದ್ದರೂ ಅವರೆಂದೂ ಕೆಳಜಾತಿಯ ನಮ್ಮನ್ನು  ಊಟ-ತಿಂಡಿ ವಿಷಯದಲ್ಲಿ ಕೀಳಾಗಿ ಕಂಡಿಲ್ಲ. ಎಷ್ಟೋ ಬಾರಿ ನಾವೇ ನಾನ್‌ವೆಜ್ ಮಾಡಿಕೊಂಡು ಹೋಗಿ ಅವರ ಮನೆಯಲ್ಲಿ ಒಟ್ಟಿಗೆ ಹೋಗಿ ಕೂತು ತಿಂದಿದ್ದೇವೆ. ಅವರ ಮಕ್ಕಳು ನಮ್ಮ ಮನೆಗೆ ಬಂದು ಅಮ್ಮನ ಹತ್ತಿರ ನಾನ್‌ವೆಜ್ ಬೇಕೆಂದು ಕೇಳಿ ತಿನ್ನುತ್ತಿದ್ದರು.

ಈ ಎಲ್ಲ ಕಾರಣಗಳಿಂದ ನನಗೆ ಕೆಲಸ ಗ್ಯಾರಂಟಿ ಎಂದು ತಿಳಿದುಕೊಂಡಿದ್ದೆ. ಆದರೆ ಅದು ಬೇರೊಬ್ಬರ ಪಾಲಾಯಿತು. ವಿಚಾರಿಸಿದಾಗ ತಿಳಿದುಬಂದ ಸಂಗತಿಯೇನೆಂದರೆ ತಂದೆಯ ಸ್ನೇಹಿತರು ನನ್ನ ಪರವಾಗಿ ಹೇಳದೆ ಅವರದ್ದೇ ಜಾತಿಯ ಯುವಕನಿಗೆ ಶಿಫಾರಸು ಮಾಡಿದ್ದರು. ಹಿತೈಷಿಗಳಂತೆ ನಟಿಸಿ ವಿಶ್ವಾಸಘಾತ ಮಾಡುವ ನಗರದ ಜನರಿಗಿಂತ ಹಳ್ಳಿಗಳ ನೇರಾನೇರ ಹಿತಶತ್ರುಗಳು ಲೇಸು.
ಎಸ್.ಜಿ.ಯಶವಂತ್, ಮೈಸೂರು

ಊರಿನ ಮಗನಾದೆ..
ನಾನು ವೈದ್ಯ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಂಟು ತಿಂಗಳಾಗಿತ್ತು. ನಮ್ಮದು ಅಂತರ್ಜಾತಿ ವಿವಾಹ, ಪತ್ನಿ ಬ್ರಾಹ್ಮಣಳು. 10 ಕಿ.ಮೀ. ದೂರದಲ್ಲಿನ ಹೇಮಾವತಿ ತಟದ ಊರು. ಊರ ಹೊರಗೆ  ಗ್ರಾಮ ಸೇವಕರ ವಸತಿ ಗೃಹದಲ್ಲಿ ವಾಸ. ಸಾಕು ನಾಯಿಯೊಂದೆ ನಮ್ಮ ಸಂಬಂಧಿ. ದೂರ ನಿಂತು ನಮ್ಮನ್ನು ನೋಡುತ್ತಿದ್ದ ಊರಿನ ಜನ, ಮನೆಯ ನೀರಿಗೆ ಕಾಲುವೆಗೆ ಹೋದರೆ, ಬೆತ್ತ ಹಿಡಿದು ಕಾಯುವ ಪಟೇಲರು. 6 ತಿಂಗಳು ಹಾಲು ಕೊಡಲಿಲ್ಲ. ಕಾರಣ ಹಸು ರಕ್ತ ಕರೆಯುತ್ತದೆ ಎಂಬ ಮೂಢನಂಬಿಕೆ. ನಿಧಾನವಾಗಿ ನಮ್ಮ ನಡವಳಿಕೆ ಸೇವೆಯಿಂದ ಊರ ಜನಕ್ಕೆ ಹತ್ತಿರವಾಗಿದ್ದೆವು. ಅಷ್ಟರಲ್ಲಿ ನನ್ನ ಹೆಂಡತಿ ಗರ್ಭಿಣಿಯಾದಳು. ಊರಿನಲ್ಲಿರುವ ಒಕ್ಕಲಿಗರು ಅಸ್ಪೃಶ್ಯರಂತೆ ಸೀಮಂತ ಮಾಡಿದರು. ಪಕ್ಕದ ಊರಿನ ಬ್ರಾಹ್ಮಣ ಜನ ಅವರ ಆಚರಣೆಯಂತೆ ಸೀಮಂತ ಮಾಡಿದರು.

ಹೀಗೆಯೇ ತಾಲ್ಲೂಕಿನಲ್ಲಿ 35 ವರ್ಷದ ಸರ್ಕಾರಿ ಸೇವೆ ಮುಗಿಸುವ ಹೊತ್ತಿಗೆ ಎಲ್ಲವೂ ಬದಲಾಗಿತ್ತು. ಪುಣ್ಯಾರ್ಜನೆ ಮಾಡಿ ಬೆಳ್ಳಿ ಲೋಟದಲ್ಲಿ ನೀರುಕೊಟ್ಟ ಜನ (ಬ್ರಾಹ್ಮಣರು) ಊಟ ಹಾಕಿ, ನನ್ನ ಊಟದೆಲೆಯನ್ನು ಎತ್ತಿದರು.  ನಿವೃತ್ತಿಯ ನಂತರ ಕರೆದು ಜಿಲ್ಲಾಪ್ರತಿನಿಧಿಯಾಗಿ ಆಯ್ಕೆ ಮಾಡಿದರು. ಇವರಲ್ಲಿ ಯಾರಿಗೂ ನನ್ನ ಊರು ತಿಳಿದಿಲ್ಲ. ಬಂಡಿಹೊಳೆಯ ಮಗ ಎಂದು ತಿಳಿದಿದ್ದಾರೆ. ನಾವೆಲ್ಲರೂ ಬಂಡಿಹೊಳೆಯ ಹಾಗೂ ತಾಲ್ಲೂಕಿನ ಜನಕ್ಕೆ ಚಿರಋಣಿಗಳು. ಮೊದಲು ಅಸ್ಪೃಶ್ಯರಂತೆ ಕಂಡು ನಂತರ  ಊರಿನ ಮಗನಾಗಿ ಕಂಡ ಮಾನವೀಯ ಜನಕ್ಕೆ  ನಮನ.
  ಡಾ. ಎಸ್. ಕೃಷ್ಣಮೂರ್ತಿ, ಕೆ. ಆರ್. ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT