ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನೆನಪುಗಳು

Last Updated 24 ಮೇ 2012, 19:30 IST
ಅಕ್ಷರ ಗಾತ್ರ

`ಹಿಂಬಾಲಿಸುತ್ತಿರುವ ಪೊಲೀಸರಿಂದ ತಪ್ಪಿಸಿಕೊಂಡು ಧುತ್ತನೆ ಮದುವೆ ಮನೆಗೆ ನುಗ್ಗುತ್ತಾನೆ ಕಳ್ಳ. ಅಲ್ಲಿ ಕದಿಯಲು ಏನಾದರೂ ಸಿಗುತ್ತದೆಯೇ ಎಂದು ಹುಡುಕುತ್ತಿರುವಾಗ, ಕಷ್ಟಪಟ್ಟು ಮದುವೆ ಮಾಡುತ್ತಿರುವ ವಧುವಿನ ಅಣ್ಣನ ಮಾತುಗಳು ಕೇಳಿಸುತ್ತವೆ. ಅಣ್ಣ ಮದುವೆ ಸರಾಗವಾಗಿ ನಡೆಯದಿದ್ದರೆ ತನ್ನ ಸಾವು ನಿಶ್ಚಿತ ಎಂದು ಹೇಳಿದ ಮಾತು ಕಿವಿಗೆ ಬೀಳುತ್ತಿದ್ದಂತೆಯೇ ಕಳ್ಳ ಎಚ್ಚೆತ್ತುಕೊಳ್ಳುತ್ತಾನೆ. ಆ ಅಣ್ಣನಿಗೆ ತಿಳಿಯದಂತೆ ಅವನ ಹಣದೊಳಗೆ ತನ್ನ ಹಣವನ್ನೂ ಸೇರಿಸಿ ಮದುವೆ ಮನೆಯಿಂದ ಹೊರಬೀಳುತ್ತಾನೆ. ಅದು `ಮದುವೆ ಮಾಡು ತಮಾಷೆ ನೋಡು~ ಚಿತ್ರದ ದೃಶ್ಯ. ಅದರಲ್ಲಿ ಒಂದೇ ಒಂದು ಸಂಭಾಷಣೆಯೂ ಕಳ್ಳನ ಪಾತ್ರಧಾರಿಗೆ ಇಲ್ಲ. ಆದರೆ ಅದು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಆ ಕಳ್ಳನ ಪಾತಧಾರಿ ಸುಂದರ್ ರಾಜ್.

`ಕಲಿಯುಗ~ ಚಿತ್ರದಲ್ಲಿ ಸಾಕು ತಂದೆ ತಾಯಿಯನ್ನು ಪ್ರೀತಿಸುವ ಮಗ, `ಚಂದನದ ಗೊಂಬೆ~ಯಲ್ಲಿ ಮಾತು ಮಾತಿಗೂ ಸಿಡುಕುವ ಕೋಪಿಷ್ಟ, `ಬೆಂಕಿಯಲ್ಲಿ ಅರಳಿದ ಹೂ~ ಚಿತ್ರದಲ್ಲಿ ಸಹೋದ್ಯೋಗಿಗಳನ್ನು ಕಾಡುವ ಬಾಸ್.. ಹೀಗೆ ತರಾವರಿ ಪಾತ್ರಗಳಿಂದ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟ ಅವರು.

ಬೆಂಗಳೂರಿನವರಾದ ಸುಂದರ್ ರಾಜ್ ಓದಿದ್ದು ನ್ಯಾಷನಲ್ ಕಾಲೇಜಿನಲ್ಲಿ. ನಾಟಕಕಾರ ಬಿ.ವಿ.ಕಾರಂತ್ ತಮ್ಮ `ಹಯವದನ~ ನಾಟಕಕ್ಕೆ ಹೊಸ ಮುಖಗಳನ್ನು ಹುಡುಕುತ್ತಿದ್ದಾಗ ಸುಂದರ್‌ರಾಜ್ ಆಯ್ಕೆಯಾದರು. ಅಲ್ಲಿಂದ ಅವರ ಬಣ್ಣದ ಲೋಕದ ಪಯಣ ಆರಂಭವಾಯಿತು. ವಿದ್ಯಾರ್ಥಿ ದೆಸೆಯಲ್ಲಿ ವಾಯುಪಡೆ ಸೇರುವ ಹಂಬಲ ಹೊತ್ತಿದ್ದ ಸುಂದರ್ ರಾಜ್ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರೂ, ನಟನೆಯಲ್ಲಿ ಸೈ ಎನಿಸಿಕೊಂಡರು.

`ಜೋಕುಮಾರ ಸ್ವಾಮಿ~, `ಸತ್ತವರ ನೆರಳು~, `ತೆರೆಗಳು~ ಹೀಗೆ ಸಾಕಷ್ಟು ನಾಟಕಗಳಿಗೆ ಬಣ್ಣ ಹಚ್ಚಿದರು. `ಕಾಡು~ ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದರು. ಆದರೂ ನಾಟಕದ ನಂಟನ್ನು ಕಳಚಿಕೊಳ್ಳದೇ ಭದ್ರವಾಗಿ ಹಿಡಿದುಕೊಂಡಿದ್ದರು.

`ಪ್ರಾಯ ಪ್ರಾಯ ಪ್ರಾಯ~, `ಮರ್ಯಾದೆ ಮಹಲ್~, `ಗುರುಭಕ್ತಿ~, `ಚೋಮನ ದುಡಿ~, `ಮನಗೆದ್ದ ಮಗ~, `ಒಂದಾನೊಂದು ಕಾಲದಲ್ಲಿ~, `ಮುತ್ತೈದೆ ಭಾಗ್ಯ~, `ಒಂದು ಮುತ್ತಿನ ಕಥೆ~, `ಆಕಸ್ಮಿಕ~, `ಬಾ ನಲ್ಲೆ ಮಧುಚಂದ್ರಕೆ~, `ಸಿಂಹಾದ್ರಿಯ ಸಿಂಹ~, `ಜಮೀನ್ದಾರ~, `ಚಂದ್ರ ಚಕೋರಿ~, `ಆಕಾಶ್~, `ಮೌರ್ಯ~, `ಸತ್ಯವಾನ್ ಸಾವಿತ್ರಿ~ ಹೀಗೆ ಸುಂದರ್ ರಾಜ್ ನಟಿಸಿದ ಚಿತ್ರಗಳ ಪಟ್ಟಿ ಸಾಗುತ್ತದೆ. ಪ್ರೇಕ್ಷಕರಲ್ಲಿ ಸಿಟ್ಟು ಭರಿಸುವ ವಿಲನ್ ಪಾತ್ರಗಳಿಂದ ಹಿಡಿದು ನಗೆ ಉಕ್ಕಿಸುವ ಕಾಮಿಡಿಯನ್ ಆಗಿಯೂ ಅವರು ಮಿಂಚಿದ್ದಾರೆ.

ನಟಿ ಪ್ರಮೀಳಾ ಜೋಷಾಯ್ ಅವರನ್ನು ಕೈ ಹಿಡಿದ ಸುಂದರ್ ರಾಜ್ ಇದೀಗ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಅದರ ಮೂಲಕ ಮೊದಲಿಗೆ `ತಾಯಿ~ ಹೆಸರಿನ ಸಿನಿಮಾ ರೂಪಿಸಿ ಕೈಸುಟ್ಟುಕೊಂಡರು. ಇದೀಗ ಸಾಕಷ್ಟು ಸಿದ್ಧತೆ ಮಾಡಿಕೊಂಡು ಕಮರ್ಷಿಯಲ್ ಚಿತ್ರ ರೂಪಿಸಲು ನಿರ್ಧರಿಸಿದ್ದಾರೆ.
 
ನಿರ್ದೇಶಕನಾಗುವ ಆಸೆಯೂ ಅವರಿಗಿದೆ. ಆರಂಭದಲ್ಲಿ ಗಿರೀಶ್ ಕಾರ್ನಾಡ್, ಎಂ.ಎಸ್.ಸತ್ಯು, ಪಿ.ಎಸ್. ರಂಗನಾಥ್, ಸಿ.ಆರ್. ಸಿಂಹ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದು ನೆರವಾಗಲಿದೆ ಎಂಬ ಆತ್ಮವಿಶ್ವಾಸವೂ ಇದೆ. ಹಿಂದೆ ಅವರು ಕೆಲವು ನಾಟಕಗಳನ್ನಷ್ಟೇ ಅಲ್ಲದೇ ಟೆಲಿಫಿಲ್ಮ್‌ಗಳನ್ನು ನಿರ್ದೇಶಿಸಿದವರು.

ಇದುವರೆಗೂ 186 ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಸುಂದರ್ ರಾಜ್, `ಇಂದು ಚಿತ್ರರಂಗದಲ್ಲಿ ತಂದೆ ಪಾತ್ರಕ್ಕೆ ಹತ್ತು ಜನರ ಹೆಸರಿನ ಪಟ್ಟಿ ಇರುತ್ತದೆ. ಅವರಲ್ಲಿ ಯಾರ ಡೇಟ್ ಸಿಗುತ್ತದೆಯೋ ಅವರನ್ನು ಕರೆಸಲಾಗುತ್ತದೆ. ಯಾರ ಡೇಟೂ ಸಿಗದೇ ಇದ್ದರೆ ಒಂದು ಭಾವಚಿತ್ರ ತೂಗು ಹಾಕಲಾಗುತ್ತದೆ. ಚಿತ್ರರಂಗಕ್ಕೆ ಇಂದು ನಿಜವಾದ ಕಲಾವಿದರ ಅಗತ್ಯ ಇಲ್ಲ~ ಎಂದು ನೊಂದುಕೊಳ್ಳುತ್ತಾರೆ. ಅವರಿಗೆ ರಾಜ್ಯ ಪ್ರಶಸ್ತಿ ದೊರಕದೇ ಇರುವ ದುಃಖ ಇದೆ.

ಮದ್ರಾಸ್ ಫಿಲ್ಮ್ ಫ್ಯಾನ್ಸ್ ಸಂಘದಿಂದ `ಚಂದನ ಗೊಂಬೆ~ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟ, `ತಪ್ಪಿದ ತಾಳ~, `ತಬ್ಬಲಿ ನೀನಾದೆ ಮಗನೆ~ ಚಿತ್ರಕ್ಕೆ ಅತ್ಯುತ್ತಮ ಖಳನಟ, `ಕ್ಷಮಯಾಧರಿತ್ರಿ~ ಧಾರಾವಾಹಿ ನಟನೆಗೆ ಉತ್ತಮ ಪೋಷಕ ನಟ ಪ್ರಶಸ್ತಿಗಳು ಅವರಿಗೆ ಸಂದಿವೆ.


ಸದ್ಯ ಮಗಳು ಮೇಘನಾ ರಾಜ್ ವೃತ್ತಿಬದುಕಿನ ಕಡೆ ಹೆಚ್ಚು ಗಮನ ಹರಿಸುತ್ತಿರುವ ಸುಂದರ್‌ರಾಜ್ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ `ಬೊಂಬಾಟ್ ಲಾಟರಿ~ ಚಿತ್ರದಲ್ಲಿ ಪೋಷಕ ನಟರಿಗೆ ಹೆಚ್ಚು ಅವಕಾಶವಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದಾರೆ. ಅವರು ನಟಿಸಿರುವ `ಸ್ತ್ರೀಶಕ್ತಿ~, `ಲಿಮಿಟ್~ ಚಿತ್ರಗಳು ಬಿಡುಗಡೆಗೆ ಕಾದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT