ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಸಂಗ್ರಹ

ಬ್ಲಾಗಿಲನು ತೆರೆದು...
Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಿಯುವ ನದಿಯಾ ನೋಡುತ ನಿಂತೆ
ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ...
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ
ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು’ ಎನ್ನುವ ಮೇಲಿನ ಗೀತೆ ಯಾವ ಚಿತ್ರದ್ದೆಂದು ಬಲ್ಲಿರಾ? ಮೊದಲಾದರೆ, ಇಂಥ ಹಾಡುಗಳು ರೇಡಿಯೋ ಮೂಲಕ ಕಿವಿ ತಲುಪುವಾಗ– ಚಿತ್ರದ ಹೆಸರು, ಗೀತರಚನೆಕಾರ, ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕರ ಹೆಸರುಗಳೂ ಕಿವಿಯ ಮೇಲೆ ಬಿದ್ದು ಮಾಹಿತಿ ಮನಸ್ಸಿನಲ್ಲಿ ಅಚ್ಚಾಗುತ್ತಿತ್ತು.

ಹಾಡಿನ ಪುಸ್ತಕಗಳು ಕೂಡ ಮಾಹಿತಿ ಪೂರೈಕೆಯ ಸಾಧನಗಳಾಗಿದ್ದವು. ಇದಾವುದೂ ಇಲ್ಲದ ಈಗ, ಹಾಡಿನ ಸಾಲುಗಳಷ್ಟೇ ನೆನಪಿನಲ್ಲಿ ಉಳಿದು, ಗೀತೆಗೆ ಸಂಬಂಧಿಸಿದ ಇತರ ಸಂಗತಿಗಳು ಗಮನಕ್ಕೆ ಬಾರದೇ ಹೋಗುತ್ತವೆ. ಸಿನಿಮಾ ಗೀತೆಗಳಿಗೆ ಸಂಬಂಧಿಸಿದ ಇಂಥ ಕೊರತೆ ತುಂಬುವಲ್ಲಿ ಕೆಲವು ಜಾಲತಾಣಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳಲ್ಲೊಂದು– ‘ನಮ್ಮಸಂಗ್ರಹ’.

ಹಾಂ, ಸಂಗ್ರಹದ ಒಳ ಹೋಗುವ ಮೊದಲು ಸಂಪಿಗೆ ಗೀತೆಯ ವಿವರಗಳನ್ನು ತಿಳಿದುಕೊಳ್ಳೋಣ. ಆರ್.ಎನ್. ಜಯಗೋಪಾಲ್ ರಚಿಸಿದ ಈ ಗೀತೆಗೆ ಸಂಗೀತ ವಿಜಯಭಾಸ್ಕರ್ ಅವರದು. ಸಂಪಿಗೆಯ ಕಂಪನ್ನು ಹಾಡಿನಲ್ಲಿ ತುಂಬಿದ ಕೊರಳು ಬಿ.ಕೆ. ಸುಮಿತ್ರ ಅವರದು. ‘ಉಪಾಸನೆ’ ಎನ್ನುವ ಹೆಸರೇ ಎಷ್ಟೊಂದು ಸ್ಮೃತಿಗಳನ್ನು ನಮ್ಮೆದುರು ತಂದು ನಿಲ್ಲಿಸುತ್ತದಲ್ಲವೇ? ಪುಟ್ಟಣ್ಣ ಕಣಗಾಲ್‌, ಆರತಿ ಅವರನ್ನು ಮರೆಯಲು ಸಾಧ್ಯವೇ? ಇದೇ ಚಿತ್ರದ ‘ಭಾರತ ಭೂಶಿರ’ ಗೀತೆಯೂ ಅದರೊಂದಿಗೆ ಕನ್ಯಾಕುಮಾರಿಯ ಸುಂದರ ಚಿತ್ರಿಕೆಗಳೂ ನೆನಪಾಗಲೇಬೇಕು. ಈ ಕಾರಣದಿಂದಲೇ ‘ನಮ್ಮಸಂಗ್ರಹ’ ಬ್ಲಾಗನ್ನು ಭಾವನೆಗಳ ಕೋಶ – ಸ್ಮೃತಿಸಂಚಯ ಎಂದೂ ಪ್ರೀತಿಯಿಂದ ಕರೆಯಬಹುದು.

ಈಗ ಸಂಗ್ರಹದ ಒಳಗೆ ಹೋಗೋಣ. ‘ನಮ್ಮಸಂಗ್ರಹ’ ಎನ್ನುವ ಹೆಸರೇ ಎಷ್ಟು ಚೆನ್ನಾಗಿದೆ ಅಲ್ಲವೇ? ಇದು ಕನ್ನಡ ಗೀತೆಗಳ ಸಂಗ್ರಹ. ಸಿನಿಮಾ ಹಾಡುಗಳ ಜೊತೆಗೆ ಭಾವಗೀತೆಗಳ ಕಟ್ಟೂ ಇಲ್ಲಿಹುದು. ಈ ಹಾಡುಗಳ ಮೂಲಕ ಕನ್ನಡ ಸಿನಿಮಾ–ಸಾಹಿತ್ಯದ ಸುಮಧುರ ನೆನಪುಗಳ ಸಹೃದಯರೊಂದಿಗೆ ಬ್ಲಾಗು ಸಂವಾದ ನಡೆಸುವಂತೆ ಕಾಣಿಸುತ್ತದೆ.

ಯಜ್ಞೇಶ್‌ ‘ನಮ್ಮಸಂಗ್ರಹ’ (nammasangraha.blogspot.in) ಬ್ಲಾಗ್‌ನ ಸಂಪಾದಕರು. ಮಲೆನಾಡಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು, ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅವರು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಅವರಿಗೆ ಆಸಕ್ತಿಯಂತೆ. ಈ ಹವ್ಯಾಸ ಪಟ್ಟಿಯೇ ಹಾಡುಗಳ ಸಂಗ್ರಹಕ್ಕೆ ಅವರನ್ನು ಪ್ರಚೋದಿಸಿದಂತಿದೆ.

‘‘ಇದು ಕನ್ನಡ ಭಾವಗೀತೆ, ಚಿತ್ರಗೀತೆ, ಭಕ್ತಿಗೀತೆ, ಕವನ, ಜಾನಪದ ಗೀತೆಗಳನ್ನು ಕ್ರೋಡೀಕರಿಸುವ ಒಂದು ಪ್ರಯತ್ನ. ಎಷ್ಟೋ ಸಿನಿಮಾ ಹಾಡುಗಳ / ಭಾವಗೀತೆಗಳ ಸಾಹಿತ್ಯ ಅಲ್ಪ ಸಲ್ಪ ನೆನಪಿತ್ತು. ವೀಡಿಯೋ ಜೊತೆ ಸಾಹಿತ್ಯ ಇದ್ರೆ ವಿಡಿಯೋ ನೋಡ್ತಾ ನಾವು ಹಾಡು ಹೇಳಬಹುದಲ್ಲಾ ಅಂತ ಒಮ್ಮೆ ಅನಿಸ್ತು. ಅದ್ಕೆ ಈ ಬ್ಲಾಗ್ ಶುರು ಮಾಡಿದೆ’’ ಎಂದು ಬ್ಲಾಗಿಗರು ತಮ್ಮ ಸಂಗ್ರಹವನ್ನು ಕರೆದುಕೊಂಡಿದ್ದಾರೆ. ಈ ಕ್ರೋಡೀಕರಣದ ಬಗೆಯೂ ಅಚ್ಚುಕಟ್ಟಾಗಿದೆ.

ಸಿನಿಮಾಗಳ ಹೆಸರಿನಲ್ಲಿ, ರಚನಕಾರರ ಹೆಸರಿನಲ್ಲಿ, ಸಂಗೀತಗಾರರ, ಹಾಡುಗಾರರ ಹೆಸರಿನಲ್ಲಿ– ಹೀಗೆ, ಹಲವು ರೀತಿಯಲ್ಲಿ ಹಾಡುಗಳು ಸಂಕಲನಗೊಂಡಿವೆ. ನಮೂದುಗಳ ಪಟ್ಟಿಯಲ್ಲಿನ ಕೆಲವು ಹೆಸರುಗಳನ್ನು ನೋಡಿ: ಚಿ. ಉದಯ ಶಂಕರ್, ರಾಜನ್-ನಾಗೇಂದ್ರ, ಎಸ್. ಜಾನಕಿ, ಆರ್.ಎನ್. ಜಯಗೋಪಾಲ್, ಸಿ. ಅಶ್ವಥ್, ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ರಾಜಕುಮಾರ್, ಸಂತ ಶಿಶುನಾಳ ಶರೀಫ, ಉಪೇಂದ್ರ ಕುಮಾರ್, ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ, ಎಂ. ರಂಗರಾವ್, ಮೈಸೂರು ಅನಂತಸ್ವಾಮಿ, ಕೆ.ಎಸ್. ನರಸಿಂಹಸ್ವಾಮಿ, ಜಿ.ಕೆ. ವೆಂಕಟೇಶ್, ಮೈಸೂರ ಮಲ್ಲಿಗೆ– ಈ ಪ್ರತಿಯೊಂದು ಹೆಸರೂ ಸಹೃದಯರ ಪಾಲಿಗೆ ಒಂದೊಂದು ಸುಂದರ ಅಧ್ಯಾಯಲ್ಲವೇ?

ಯಜ್ಞೇಶ್‌ ತಮ್ಮ ಸಂಗ್ರಹದಲ್ಲಿದ್ದ ಹಾಡುಗಳನ್ನು ದಾಖಲಿಸುವುದ ಜೊತೆಗೆ ಅಂತರ್ಜಾಲದ ಬೇರೆ ಬೇರೆ ಕಡೆಗಳಲ್ಲಿ ದೊರೆತ ಹಾಡುಗಳನ್ನೂ ಒಟ್ಟು ಮಾಡಿದ್ದಾರೆ. ಸಾಹಿತ್ಯ ಮಾತ್ರವಲ್ಲ, ದನಿಮುದ್ರಿಕೆಗಳು, ವೀಡಿಯೊ ಚಿತ್ರಾವಳಿಗಳೂ ಇಲ್ಲಿ ಸೇರಿವೆ. ‘ನಮ್ಮ ಸಂಗ್ರಹ’ ಬ್ಲಾಗಿಗರ ಮೂಗಿನ ನೇರಕ್ಕೆ ನಡೆಯುವ ಬ್ಲಾಗೂ ಅಲ್ಲ.

‘‘ನಿಮ್ಮ ಹತ್ತಿರ ‘ತೋಟದಾಗೆ ಹೂವ ಕಂಡೆ’, ‘ನಿನ್ನ ಕಂಗಳ ಜ್ಯೊತಿಯಾಗುವೆ ನಾನು’ ಗೀತೆಯ ಸಾಹಿತ್ಯವಿದ್ದರೆ ದಯವಿಟ್ಟು ಕೊಡಿ’ ಎನ್ನುವ ರೀತಿಯ ಓದುಗರ ಕೋರಿಕೆಗಳಿಗೂ ಇಲ್ಲಿ ಜಾಗವಿದೆ. ಇಂಥ ಕೋರಿಕೆಗಳನ್ನು ಪೂರೈಸಲು ಪ್ರಯತ್ನಿಸುವ ಯಜ್ಞೇಶ್‌, ಓದುಗರ ಕೂಡ ತಮ್ಮಿಷ್ಟದ ಹಾಡಿನ ಸಾಹಿತ್ಯ, ಕೊಂಡಿಗಳನ್ನು ಕಳುಹಿಸಿಕೊಡಬಹುದು ಎಂದಿದ್ದಾರೆ. ಈ ಕಾರಣದಿಂದಾಗಿ ಕೂಡ ಇದು– ‘ನಮ್ಮ ಸಂಗ್ರಹ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT