ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಸಂಸಾರಗಳು

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

1ಬೆಳಗ್ಗೆ, ಮಧ್ಯಾಹ್ನ, ಸಂಜೆ
ಯಾವಾಗಲೂ
ಕಿಸಪಿಸ ಅಂಟಿಕೊಂಡೇ ಇರುತ್ತಾರೆ;
ಒಟ್ಟಿಗೇ
ದೇವಸ್ಥಾನ, ಪಾರ್ಕು, ಬೀಚು,
ಹೋಟೇಲು, ಸಿನಿಮಾಗಳಿಗೆ ಹೋಗುತ್ತಾರೆ;
ಮಲಗುವುದೂ ಒಂದೇ ಹಾಸಿಗೆಯಲ್ಲಿ
ಅಂತ ಜನ ಹೇಳುತ್ತಾರೆ.

ದಾಂಪತ್ಯ ಎಷ್ಟು ಚೆಂದ ಹಾಗು
ಸುಲಲಿತವಾಗಿತ್ತು ಅಂದರೆ
ಆಕೆ ತೀರಿಕೊಂಡಳು- ಏನೋ ಕಾಯಿಲೆ.
ಆತ ಆಕೆಯಂತಹುದೇ ಮತ್ತೊಂದು
ಗೊಂಬೆಯನ್ನು ಮದುವೆಯಾದ.
ಕಿಸಪಿಸ, ಓಡಾಟ ಮೊದಲಿನ ಹಾಗೇ!

2
ರಾಯರು ಮಹಾ ವಾಚಾಳಿ:
ಸದಾ ಹೆಂಡತಿಯ ಬಗ್ಗೆ
ಒಳ್ಳೆ ಮಾತೇ ಆಡುತ್ತಾರೆ.
ಬಾಯಿಯವರು ಗಯ್ಯಾಳಿ:
ಗಂಡನ ಬಗ್ಗೆ ಕೊಂಕಾಡಿದವರನ್ನು
ಸಿಗಿದು ಹಾಕುತ್ತಾರೆ.
ದಂಪತಿಗಳು ದಾರಿಯಲ್ಲಿ ಹೋಗುವುದೇ ಒಂದು
ಚೆಂದ.

ಅಮ್ಮೋವ್ರ ಮುಂದೆ ಮುಂದೆ
ಯಜಮಾನ್ರು ಹಿಂದೆ ಹಿಂದೆ
ಎಲ್ಲಿ ತಿರುಗಬೇಕು, ಎಲ್ಲಿ ನಿಲ್ಲಬೇಕು
ಯಾವ ಅಂಗಡಿಯಲ್ಲಿ ಬೆಲ್ಲ
ಯಾವ ಅಂಗಡಿಯಲ್ಲಿ ಉಪ್ಪು
ನಾಳೆಗೆ ಬೇಕಾದ್ದು ಯಾವ ಸೊಪ್ಪು
ಕಂಡದ್ದು ಅಚ್ಚುಕಟ್ಟು;
ಕಾಣದ್ದು ಹೇಗೋ? ಏನೋ?
ಕಿಚಾಯಿಸಿ ಸುದ್ದಿ ಹೊರಡಿಸಲು
ಮಕ್ಕಳಿಲ್ಲ.

3
ಗಂಡಸಿನದು ಮಹಾ ಕಿರಿ ಕಿರಿ
ಹೆದರಿ ಹೆಂಗಸಿನ ಕೆಲಸ
ತರಾತುರಿ.
ಸಾರಿನಲ್ಲಿ ಉಪ್ಪು, ಕಾಲರಿನ ಕೊಳೆ
ಗೋಡೆಯಲ್ಲಿ ಡೊಂಕಾದ ಮೊಳೆ
ಮೂಲೆಯಲ್ಲಿ ಕಸ, ಇಂಗಿನಲ್ಲಿ ವಿಷ
ಎಲ್ಲಾ ಹೆಚ್ಚು ಕಮ್ಮಿ.

ಮದುವೆಯಾದದ್ದಕ್ಕೆ ಮಕ್ಕಳು
ಕೈ ಇರುವುದಕ್ಕೆ ಹೊಡೆತ
ಜಡೆ ಇರುವುದಕ್ಕೆ ಎಳೆತ
ಸಿಟ್ಟಿನ ಸ್ಫೋಟಕ್ಕೂ, ಅದುಮಿಟ್ಟುಕೊಳ್ಳುವುದಕ್ಕೂ
ಮನೆಯಲ್ಲಿನ
ಚರಾಚರ ವಸ್ತುಗಳೇ ಸಾಕ್ಷಿ.

ಜಗಳ ಹೊಟ್ಟೆಯಲ್ಲಿಟ್ಟುಕೊಂಡು
ಜೀವನಪೂರ್ತಿ ಬದುಕೋಕಾಗಲ್ಲ.
ಮನೆಯಲ್ಲಿ ಮಚ್ಚು ಇತ್ತು:
ಒಬ್ಬರ ರುಂಡ
ಮತ್ತೊಬ್ಬರು ಉರುಳಿಸಿದರು;

ಮಕ್ಕಳು ಆಟಕ್ಕೆ ಅಂತ ಮಾಡಿದ
ಹಸು-ಹುಲಿ ರುಂಡಗಳು ಇದ್ದವು;
ಇಬ್ಬರೂ ಒಂದೊಂದು ಸಿಗಿಸಿಕೊಂಡರು;
ಮಕ್ಕಳು ಬರುವ ಹೊತ್ತಿಗೆ
ರಕ್ತ ತೊಳೆದು ಸ್ವಚ್ಛ ಮಾಡಿದರು.
ಬಂದ ಮಕ್ಕಳು ರಗಳೆ ಮಾಡಿ ಉಂಡು
ಮಲಗಿದವು.

4
ಬೀದಿಯಲ್ಲಿ ನಡೆಯುವಾಗ ಇವತ್ತಿಗೂ
ಹಸು-ಹುಲಿ ರುಂಡಗಳು ಇರುತ್ತವೆ
ಒಮ್ಮಮ್ಮೆ ಅದಲು ಬದಲಾಗುತ್ತವೆ
ಮತ್ತೊಮ್ಮೆ ಖಾಲಿ ದೇಹ ಮಾತ್ರ;
ಏನು ಫರಕಾಗುತ್ತದೆ ಹೇಳಿ?
ರುಂಡಗಳಿಗೂ ಅಸಲಿ-ನಕಲಿ
ಎಂಬುದುಂಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT