ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ್ ರಾಮ್ ಮತ್ತಿಬ್ಬರಿಗೆ ಮಧ್ಯಂತರ ಜಾಮೀನು

Last Updated 9 ಜನವರಿ 2012, 8:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 1993ರ ದೂರಸಂಪರ್ಕ ಹಗರಣ ಪ್ರಕರಣದಲ್ಲಿ ಮೂರು ವರ್ಷಗಳ ಸೆರೆವಾಸದ ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಶನಿವಾರ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಿದ್ದ  ಮಾಜಿ ದೂರಸಂಪರ್ಕ ಸಚಿವ ಸುಖ್ ರಾಮ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿತು.

ಮಾಜಿ ಅಧಿಕಾರಿ ರುನು ಘೋಷ್ ಮತ್ತು ಹೈದರಾಬಾದ್ ಮೂಲದ ಉದ್ತಮಿ ಪಿ. ರಾಮರಾವ್ ಅವರಿಗೂ ನ್ಯಾಯಾಲಯ ಜನವರಿ 16ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಖಾಯಂ ಜಾಮೀನಿಗಾಗಿ ಕೈದಿಗಳು ಸಲ್ಲಿಸಿರುವ ಅರ್ಜಿ ಜನವರಿ 16ರಂದು ವಿಚಾರಣೆಗೆ ಬರಲಿದೆ.

ನ್ಯಾಯಮೂರ್ತಿ ಪಿ. ಸದಾಶಿವಂ ಮತ್ತು ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರನ್ನು ಒಳಗೊಂಡ ಪೀಠವು ಜಾಮೀನು ಮಂಜೂರು ಮಾಡುತ್ತಾ ~ವಿಚಾರಣಾ ನ್ಯಾಯಾಲಯವು ಪರಿಹಾರ ನೀಡುವಾಗ ತನಗೆ ತೃಪ್ತಿಯಾಗುವಂತೆ  ಅಗತ್ಯ ಷರತ್ತು ವಿಧಿಸಬಹುದು ಎಂದು ಹೇಳಿತು.

ಈ ಮೂವರು ಸಲ್ಲಿಸಿದ ಜಾಮೀನು ಅರ್ಜಿ ಸಂಬಂಧವಾಗಿ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿ ಜನವರಿ 16ರ ಒಳಗಾಗಿ ಉತ್ತರ ಸಲ್ಲಿಸುವಂತೆ ಸೂಚಿಸಿತು.

ಶನಿವಾರ ನ್ಯಾಯಾಲಯದಲ್ಲಿ ಶರಣಾಗತರಾದ ಸುಖ್ ರಾಮ್ ಅವರು ತಿಹಾರ್ ಸೆರೆಮನೆ ತಲುಪುತ್ತಿದ್ದಂತೆಯೇ ತೀವ್ರ ಅಸ್ವಸ್ಥರಾದ ಪರಿಣಾಮವಾಗಿ ಅವರನ್ನು ದೀನದಯಾಳ್ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಗಿ ಬಂದಿತ್ತು.

ಹಿರಿಯ ವಕೀಲರಾದ ಗೋಪಾಲ  ಸುಬ್ರಮಣ್ಯಂ, ಹರೀಶ್ ಸಾಲ್ವೆ ಮತ್ತು ಮುಕುಲ್ ರೋಹ್ಟಗಿ ಅವರು ಕ್ರಮವಾಗಿ ಈ ಮೂವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ ~ಅರ್ಜಿದಾರರು ಕಳೆದ 20 ವರ್ಷಗಳಿಂದ ಜಾಮೀನಿನಲ್ಲಿ ಇದ್ದು ಅವರು ಪರಾರಿಯಾಗುವ ಭಯ ಇಲ್ಲ~ ಎಂದು ವಾದಿಸಿದರು.
 
ಸುಖ್ ರಾಮ್ ಅವರು 86 ವರ್ಷಗಳ ವಯೋವೃದ್ಧರಾಗಿದ್ದು, ಜಾಮೀನು ಮಂಜೂರು ಮಾಡುವಾಗ ಈ ಅಂಶವನ್ನೂ ಗಮನಿಸಬೇಕು ಎಂದು ಸುಖ್ ರಾಮ್ ಪರ ವಕೀಲ ಸುಬ್ರಮಣ್ಯಂ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT