ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ್‌ರಾಂ ಮತ್ತೆ ಆಸ್ಪತ್ರೆಗೆ: ಇಂದು ಜಾಮೀನು ವಿಚಾರಣೆ?

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವ ಕೇಂದ್ರ ಮಾಜಿ ಸಚಿವ ಸುಖ್‌ರಾಂ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ.

ಸುಖ್‌ರಾಂ, ಮಾಜಿ ಅಧಿಕಾರಿ ರುನು ಘೋಷ್ ಮತ್ತು ಹೈದರಾಬಾದ್ ಮೂಲದ ಉದ್ಯಮಿ ಪಿ. ರಾಮರಾವ್ ಅವರ ಜಾಮೀನು ಅರ್ಜಿ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಸ್ಥಳೀಯ ನ್ಯಾಯಾಲಯಕ್ಕೆ ಶನಿವಾರ ಶರಣಾದ ಸುಖ್‌ರಾಂ ಅವರನ್ನು ಸೆರೆಮನೆಗೆ ಕಳುಹಿಸುವಂತೆ ಕೋರ್ಟ್ ಆದೇಶಿಸಿತ್ತು. ಅದರಂತೆ ಸುಖ್‌ರಾಂ ಅವರನ್ನು ತಿಹಾರ್ ಜೈಲಿಗೆ ರವಾನಿಸಲಾಯಿತು. ಆ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ.

86 ವರ್ಷ ವಯಸ್ಸಿನ ಸುಖ್‌ರಾಂ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದೃಢಪಡಿಸಿದ ಜೈಲಿನ ವೈದ್ಯರು, ಆಸ್ಪತ್ರೆಗೆ ದಾಖಲಿಸುವಂತೆಯೂ ಸಲಹೆ ನೀಡಿದರು. ಆದ್ದರಿಂದ ಅವರನ್ನು ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ ದಾಖಲಿಸಲಾಯಿತು ಎಂದು ತಿಹಾರ್ ಜೈಲಿನ ಡಿಐಜಿ ಆರ್.ಎನ್. ಶರ್ಮಾ ಹೇಳಿದ್ದಾರೆ. `ಸುಖ್‌ರಾಂ ಅವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಈಗಿನ ಸ್ಥಿತಿಗೆ ಚಿಕಿತ್ಸೆ ನೀಡುವಷ್ಟು ಸೌಲಭ್ಯ ಜೈಲಿನ ಆಸ್ಪತ್ರೆಯಲ್ಲಿ ಇಲ್ಲ. ಆದ್ದರಿಂದ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಯಿತು~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1993ರಲ್ಲಿ ನಡೆದ ಟೆಲಿಕಾಂ ಹಗರಣದಲ್ಲಿ  ಸುಖ್‌ರಾಂ ತಪ್ಪಿತಸ್ಥರು ಎಂದು ಪರಿಗಣಿಸಿದ ಅಧೀನ ನ್ಯಾಯಾಲಯವು ಅವರಿಗೆ ಮೂರು ವರ್ಷಗಳ ಕಾಲ ಸೆರೆವಾಸ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ  ಶರಣಾಗುವಂತೆ ಸುಖ್‌ರಾಂ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಖ್‌ರಾಂ ಸುಪ್ರೀಂಕೋರ್ಟ್ ಮೊರೆ ಹೋದರು. ಆದರೆ ಮನವಿ ತಳ್ಳಿಹಾಕಿದ ಸುಪ್ರೀಂಕೋರ್ಟ್, ಮೊದಲು ಶರಣಾಗಿ ನಂತರವಷ್ಟೆ ಅರ್ಜಿಯನ್ನು  ಪರಿಗಣಿಸಲಾಗುವುದು ಎಂದು ಹೇಳಿತು.

ಸುಪ್ರೀಂಕೋರ್ಟ್ ಕೂಡ ಶರಣಾಗುವಂತೆ ಸೂಚಿಸಿದ ಮೇಲೆ ಸುಖ್‌ರಾಂ ಅವರ ವಕೀಲರು ತಮ್ಮ ಕಕ್ಷಿದಾರರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಧೀನ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು.

ಆದರೆ, ಸುಖ್‌ರಾಂ ದಾಖಲಾಗಿದ್ದ ಮೆಟ್ರೊ ಹೃದಯ ಆರೋಗ್ಯ ಸಂಸ್ಥೆ  ವೈದ್ಯರು, ಸುಖ್‌ರಾಂ ಕೋಮಾ ಸ್ಥಿತಿಯಲ್ಲೇನು ಇಲ್ಲ. ಆರೋಗ್ಯ ಸ್ಥಿರವಾಗಿದೆ ಎಂದು ಶುಕ್ರವಾರ ಸ್ಪಷ್ಟನೆ ನೀಡಿದರು. ಈ ಹಿನ್ನೆಲೆಯಲ್ಲಿ ಸುಖ್‌ರಾಂ ಅವರು ಅಧೀನ ನ್ಯಾಯಾಲಯದಲ್ಲಿ ಶನಿವಾರ ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT