ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಚಾರ ನೆಪದಲ್ಲಿ ಬಿಡಾಡಿ ದನಕರು ತೆರವು

Last Updated 2 ಜನವರಿ 2012, 7:55 IST
ಅಕ್ಷರ ಗಾತ್ರ

ರಾಯಚೂರು:ಹಳೆ ವರ್ಷ ಕಳೆದು ಹೊಸ ವರ್ಷ 2012 ಬಂದಿದೆ. ಹಿಂದಿನ ವರ್ಷದಲ್ಲಿ ನಗರದ ಪ್ರಮುಖ ರಸ್ತೆಗಳು ದುರಸ್ತಿಗೊಂಡು ಈ ಹೊಸ ವರ್ಷದಲ್ಲಿ ಸುಗಮ ಸಂಚಾರಕ್ಕೆ ಸ್ವಲ್ಪ ಅನುಕೂಲ ಆಗಬಹುದು ಎಂಬ ನಗರದ ಜನತೆಯ ನಿರೀಕ್ಷೆ ಹುಸಿಯಾಗಿದೆ.

ಗೋಶಾಲ ರಸ್ತೆ ದುರಸ್ತಿ ಆಗಲಿಲ್ಲ. ಧೂಳು ತಪ್ಪಲಿಲ್ಲ. ಗದ್ವಾಲ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಒಳಚರಂಡಿ ನಿರ್ಮಾಣ ಕಾಮಗಾರಿ ಹೆಸರಿನಲ್ಲಿ ಮುಂದೂಡಲಾಗುತ್ತಿದೆ. ರಸ್ತೆ ಅಕ್ಕಪಕ್ಕದ ಜನತೆಯ ಮನೆಗಳು ಅತಿಕ್ರಮಣ, ರಸ್ತೆ ಅಗಲೀಕರಣ ಹೆಸರಿನಲ್ಲಿ ತೆರವುಗೊಂಡು ವರ್ಷಗಳೇ ಕಳೆದಿದೆ.

ರಸ್ತೆಯೂ ಆಗಲಿಲ್ಲ. ಚರಂಡಿ ನಿರ್ಮಾಣವೂ ಪೂರ್ಣ ಆಗುತ್ತಿಲ್ಲ. ನಮ್ಮ ಕುಟುಂಬಗಳು ಬೀದಿಗೆ ಬಿದ್ದು ಜೀವನ ನಡೆಸುವ ಗೋಳು ತಪ್ಪಿಲ್ಲ ಎಂದು ಇಲ್ಲಿನ ನಿವಾಸಿಗಳು ನಿತ್ಯ ಗೋಳಾಡುತ್ತಿರುವ ದೃಶ್ಯ ಸಾಮಾನ್ಯ.

ಎಪಿಎಂಸಿ ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದವರೆಗಿನ ರಸ್ತೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು ವರ್ಷ ಆಗುತ್ತ ಬಂದಿದ್ದರೂ ಪೂರ್ಣಗೊಂಡಿಲ್ಲ. ನಗರದ ಮಾರುಕಟ್ಟೆ ಪ್ರದೇಶದ ವಾಣಿಜ್ಯ ಚಟುವಟಿಕೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಈಗ ನಿರ್ಮಾಣ ಹೆಸರಿನಲ್ಲಿ ಹದಗೆಟ್ಟು ಹೋಗಿದೆ. ಸಂಚಾರಕ್ಕೆ ಜನ ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ರೈಲ್ವೆ ಸ್ಟೇಶನ್ ರಸ್ತೆ ಟ್ರಾಫಿಕ್ ಸಮಸ್ಯೆ ಮುಂದುವರಿದಿದೆ.

ಬಸ್ ನಿಲ್ದಾಣದಿಂದ ಮಾರುಕಟ್ಟೆ ಪ್ರದೇಶದ ತೀನ್ ಕಂದೀಲ್ ವೃತ್ತ ತಲುಪಲು ಸರ್ಕಸ್ ಮಾಡಬೇಕಾದ ಸ್ಥಿತಿ ನಿತ್ಯ ಇದ್ದದ್ದೇ. ಒಂದು ತಿಂಗಳಲ್ಲಿ ಆಗಬೇಕಾದ ಕಾಮಗಾರಿ ಮೂರು ತಿಂಗಳು ಮಾಡಲಾಗುತ್ತಿದೆ. ಅದೂ ಕೂಡಾ ಅರೆಬರೆ ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸುತ್ತಾರೆ.

ಈ ಸ್ಥಿತಿಯಲ್ಲಿ ಗದ್ವಾಲ್-ರಾಯಚೂರು ರೈಲ್ವೆ ಮಾರ್ಗ ವಿಸ್ತರಣೆ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತದ ಬಳಿ ಇರುವ ರೈಲ್ವೆ ಮೇಲ್ಸೆತುವೆ ತೆರಳುಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

ನಗರದ ರಸ್ತೆಗಳೆ ಹದಗೆಟ್ಟು ಹೋಗಿವೆ. ನಗರದೊಳಗಡೆ ಬರಲು ಮತ್ತು ಹೋಗಲು ಒಂದೇ ಪ್ರಮುಖ ರಸ್ತೆ. ಅದನ್ನೂ ಬಂದ್ ಮಾಡಿದರೆ ಕಷ್ಟ ಎಂದು ಸಾರ್ವಜನಿಕರು ಮತ್ತು ಸಂಘ ಸಂಸ್ಥೆಯವರು ಗೋಳು ತೋಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ವಾಪಸ್ ಪಡೆದು ವಾಹನ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಿದ್ದಾರೆ. ಕಾರಣ ಪರ್ಯಾಯ ಮಾರ್ಗ ಇಲ್ಲದೇ ಇರುವುದು ಈ ಸಮಸ್ಯೆಗೆ ಕಾರಣ.

ಕಾಮಗಾರಿ ಕೈಗೊಳ್ಳುವ ಮುನ್ನ ಮುಂದಾಲೋಚನೆ ಇಲ್ಲ. ಕೈಗೊಂಡ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣ ಮಾಡುವುದಿಲ್ಲ. ಕಾಮಗಾರಿ ಹೆಸರಿನಲ್ಲಿ ರಸ್ತೆ ಹದಗೆಡಿಸುವುದು, ವರ್ಷ ಪೂರ್ತಿ ಕೆಲಸ ಮಾಡುತ್ತಲೇ ಇರುವುದು.

ಹಣ ಬಂದಿಲ್ಲ, ಗುತ್ತಿಗೆದಾರರು ವಿಳಂಬ, ಗುತ್ತಿಗೆದಾರರ ಹೆಸರಲ್ಲಿ ಮತ್ತೊಬ್ಬ ಕೆಲಸ ಮಾಡುತ್ತಿದ್ದಾನೆ ಅದಕ್ಕೆ ಹೀಗಾಗಿದೆ ಸರಿ ಮಾಡೋಣ, ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ಇಲ್ಲ ಹೀಗೆ ಹತ್ತಾರು ಸಬೂಬುಗಳು ಆಡಳಿತ ವರ್ಗದಿಂದ ಬರುತ್ತವೆ. ಇದೇ ಜನತೆ ಸಮಸ್ಯೆ ಎದುರಿಸಲು ಕಾರಣ ಆಗಿದೆ ಎಂದು ಜನ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಗರಸಭೆ ಹೊಸ ವರಸೆ: ಕೈಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಹಿನ್ನೆಡೆ ಎದುರಿಸುತ್ತಿರುವ ರಾಯಚೂರು ನಗರಸಭೆಯು ಈಗ ನಗರದ ರಸ್ತೆಗಳಲ್ಲಿ ಜಾನುವಾರು ಸಂಚಾರ, ತಿರುಗಾಡುತ್ತಿರುವುದರಿಂದ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ದನಗಳ ಮಾಲೀಕರು, ತಮ್ಮ ಮನೆ ಆವರಣದಲ್ಲಿ ಕಟ್ಟಿಕೊಳ್ಳಬೇಕು. ಜನವರಿ 10 ರೊಳಗೆ ಕಟ್ಟಿಕೊಳ್ಳದೇ ಇದ್ದರೆ ಗೋಶಾಲಾಕ್ಕೆ ಅಥವಾ ಹರಾಜು ಮಾಡುವ ಹೇಳಿಕೆ ನೀಡಿ ಹೊಸ ವರಸೆ ಆರಂಭಿಸಿದೆ. ರಾಜ್ಯ ಮಾನವ ಹಕ್ಕು ಆಯೋಗ ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದೆ.

ನಗರದ ರಸ್ತೆಯಲ್ಲಿ ಜಾನುವಾರು ಸಂಚಾರಕ್ಕೇನೂ ಕಡಿಮೆ ಇಲ್ಲ. ನಗರದ ಪ್ರಮುಖ ರಸ್ತೆ, ವೃತ್ತ, ಬಡಾವಣೆ ರಸ್ತೆಗೆ ಹೋದರೂ ಹಿಂಡು ಹಿಂಡು ದನಕರುಗಳು ಸುತ್ತುವುದು, ಮಲಗಿರುವ ದೃಶ್ಯ ಸಾಮಾನ್ಯ. ಇಂಥ  ಶೇ 90ರಷ್ಟು ದನಕರುಗಳಿಗೆ ಮಾಲೀಕರು ಇದ್ದಾರೆ.

ಹಾಲು ಕರೆದು ಬೀದಿಗೆ ಬಿಡುತ್ತಾರೆ. ಗೋಮಾತೆ ಪೂಜಕರು, ದನಕರುಗಳ ಬಗ್ಗೆ ಪ್ರೀತಿ ಇದ್ದವರು ಅವುಗಳಿಗೆ ಆಹಾರ ಹಾಕಿ ಸ್ವಲ್ಪ ಪ್ರೀತಿ ತೋರಿಸುತ್ತಾರೆ. ಆದರೆ ಈ ದನಕರುಗಳ ಮಾಲೀಕರು ರಸ್ತೆಯನ್ನೇ ದನದ ಕೊಟ್ಟಿಗೆಯಾಗಿ ಪರಿವರ್ತಿಸಿ ಅಲ್ಲಿ ಮಲಗಿರುವ ದನಕರುಗಳಿಗೆ ಮೇವು ತಂದು ಸುರಿಯುವುದು ಕಂಡು ಬರುತ್ತಿದೆ.

ಈ ಸಮಸ್ಯೆ ಹಲವು ದಿನಗಳದ್ದು. ನಗರಸಭೆಗೆ ಹಲವು ಬಾರಿ ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ ನಗರಸಭೆ ಈಗ ಎಚ್ಚೆತ್ತಿರುವುದೇ ದೊಡ್ಡ ಸಂಗತಿ! ದುರಸ್ತಿ ಹೆಸರಲ್ಲಿ ಬಗೆದಿರುವ ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಮಾಡಲಿ. ಅರೆಬರೆ ಕಾಮಗಾರಿ ಪೂರ್ಣ ಮಾಡಿದರೆ ಸುಗಮ ಸಂಚಾರಕ್ಕೇನೂ ತೊಂದರೆ ಆಗುವುದಿಲ್ಲ ಎಂದು ಜನತೆ ಅಶಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT