ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಪರ್ಕದ ಮಂತ್ರ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಒಂದು ದೇಶದ ಅಭಿವೃದ್ಧಿಯನ್ನು ಅದರ ಶ್ರೀಮಂತಿಕೆಯಿಂದ ಅಳೆಯುವುದಕ್ಕಿಂತ ಯೋಜನಾಬದ್ಧ ಪ್ರಗತಿಯ ಮೂಲಕ ಅದನ್ನು ಹೇಗೆ ಸಾಧಿಸಲಾಯಿತು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಉಚಿತ ಎನ್ನಿಸುತ್ತದೆ. ದೇಶಗಳನ್ನು ನಿಕಟಗೊಳಿಸಿ, ಜಗತ್ತನ್ನು ಕಿರಿದುಗೊಳಿಸಿ, ಅಭಿವೃದ್ಧಿಯ ಬಾಗಿಲುಗಳನ್ನು ಮುಕ್ತವಾಗಿರಿಸಿದ ನಂತರವೂ ನಮ್ಮ ಅಭಿವೃದ್ಧಿಯ ವೇಗ ಕುಂಠಿತಗೊಂಡಿದ್ದರೆ ಅದಕ್ಕೆ ನಾಯಕತ್ವದಲ್ಲಿನ ಚಿಂತನಶೀಲತೆಯ ಕೊರತೆ ಎಂದು ಹೇಳಬೇಕಾಗುತ್ತದೆ.

ವಿಶ್ವಮಾರುಕಟ್ಟೆಗೆ ತೆರೆದುಕೊಂಡಿದ್ದರೂ ನಮ್ಮ ದೇಶದ ಅಭಿವೃದ್ಧಿ ಕಾರ್ಯಗಳು ಚೀನಾದೇಶದ ಪ್ರಗತಿ ನಕ್ಷೆಯ ಮುಂದೆ ಮಂದಗತಿಯಲ್ಲಿರುವುದನ್ನು ಅಲ್ಲಗಳೆಯಲಾಗದು. ನಮ್ಮ ರಾಜ್ಯದ ಉದಾಹರಣೆಯನ್ನೇ ನೋಡಿ, ಕೈಗಾರಿಕೋದ್ಯಮಕ್ಕೆ ಅಪಾರ ಶ್ರಮಹಾಕಲಾಗುತ್ತಿದೆ. ಜಾಗತಿಕ ಹೂಡಿಕೆದಾರರನ್ನು ಸೆಳೆದು ಎಲ್ಲ ಸೌಲಭ್ಯ ನೀಡುವುದಾಗಿ ಭರವಸೆ ನೀಡಲಾಗುತ್ತಿದೆ.

ಬಂಡವಾಳವೇನೋ ಉತ್ಸಾಹದಾಯಕವಾಗಿ ಹರಿದುಬರುತ್ತಿದೆ. ಆದರೆ ಕೈಗಾರಿಕೋದ್ಯಮಿಗಳಿಗೆ ಸೌಲಭ್ಯ ಸವಲತ್ತುಗಳನ್ನು ಸಮರ್ಪಕವಾಗಿ ನೀಡಲಾಗಿದೆಯೇ ಎನ್ನುವ ಪ್ರಶ್ನೆ ಬಂದಾಗ ಉತ್ತರಿಸುವುದು ಕಷ್ಟವಾಗುತ್ತದೆ. ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗುವ ಉದ್ದೇಶದಿಂದ ರಾಜ್ಯದ 2ನೇ ಹಂತದ ನಗರಗಳಿಗೆ ವಿಮಾನಹಾರಾಟ ಕಲ್ಪಿಸಲು ಸಣ್ಣ ವಿಮಾನಯಾನ ಕಲ್ಪನೆ ರೂಪಿಸಿದ ಕ್ಯಾಪ್ಟನ್ ಗೋಪಿನಾಥ್ ಅವರ ಜೊತೆ ಸರ್ಕಾರ ಒಪ್ಪಂದವೊಂದನ್ನು ಮಾಡಿಕೊಂಡಿರುವುದು ಒಳ್ಳೆಯ ನಿರ್ಧಾರ.

ಮೊದಲಹಂತದಲ್ಲಿ ಗುಲ್ಬರ್ಗ, ಮೈಸೂರು, ಬೆಳಗಾವಿ ನಗರಗಳಿಗೆ ವಿಮಾನಯಾನ ಕಲ್ಪಿಸುವ ಒಪ್ಪಂದವಾಗಿದೆ.
ಬೆಂಗಳೂರು ನಗರದಲ್ಲೇ ಕೈಗಾರಿಕೆಗಳು ಕೇಂದ್ರೀಕೃತವಾಗುವುದನ್ನು ತಪ್ಪಿಸಬೇಕೆಂದು ಎಲ್ಲರೂ ಅಭಿಪ್ರಾಯ ಪಡುತ್ತಾರೆ. ಇತರ ದೊಡ್ಡ ನಗರಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉದ್ಯಮಿಗಳೇನೋ ಉತ್ಸುಕರಾಗಿದ್ದಾರೆ. ಆದರೆ ಅವರಿಗೆ ಮೂಲಭೂತಸೌಕರ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಸಮರ್ಪಕವಾಗಿ ಮಾಡುವಲ್ಲಿ ಎಡವಿದೆ.

ಇತರ ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸುವ ತೀರ್ಮಾನವೇ ಇಷ್ಟೊಂದು ತಡವಾಗಿದೆ. ಸಾರಿಗೆ, ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಲಭ್ಯಗಳನ್ನೇ ನೀಡದೆ ವಿಶ್ವ ಹೂಡಿಕೆದಾರರನ್ನು ಆಕರ್ಷಿಸಲು ಹೇಗೆ ಸಾಧ್ಯ? ನಮ್ಮಲ್ಲಿ ಆರಂಭಿಕ ಶೌರ‌್ಯ ಎದ್ದು ಕಾಣುತ್ತದೆಯೇ ಹೊರತು ವ್ಯವಸ್ಥಿತ ಕಾರ್ಯ ಕಾಣುತ್ತಿಲ್ಲ. ಬೆಳಗಾವಿ, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು ನಗರಗಳು ಸೇರಿದಂತೆ ಇನ್ನೂ ಹಲವಾರು ಜಿಲ್ಲೆಗಳು ಕೈಗಾರಿಕೋದ್ಯಮ ಸ್ಥಾಪನೆಗೆ ಪ್ರಶಸ್ತವಾಗಿದ್ದರೂ ಸಮರ್ಪಕ ರಸ್ತೆಗಳಿಲ್ಲದೆ, ರೈಲು ಸೌಲಭ್ಯವಿಲ್ಲದೆ ಹಿನ್ನಡೆಯಾಗಿದೆ.

8 ನಗರಗಳಲ್ಲಿ 50 ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನೇನೋ ಈ ಹಿಂದೆ ಕೈಗೊಳ್ಳಲಾಗಿತ್ತು. ಆದರೂ ಅಂತಹ ಸುಧಾರಣೆ ಕಾಣಲಿಲ್ಲ. ಬೆಂಗಳೂರೂ ಸೇರಿದಂತೆ ಎಲ್ಲ ನಗರಗಳ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ತೀರಾ ಅವಶ್ಯ. ವಾಸ್ತವಸ್ಥಿತಿ ಏನೆಂದರೆ, ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ನಗರಗಳೂ ಯೋಜನಾಬದ್ಧವಾಗಿಯೇ ನಿರ್ಮಾಣಗೊಂಡಿಲ್ಲ. ಬೆಂಗಳೂರು ಬೇರೆಬೇರೆ ಕ್ಷೇತ್ರಗಳಲ್ಲಿ, ಸಾಧನೆಗಳಲ್ಲಿ ಎಷ್ಟೇ ಹೆಸರುಗಳಿಸಿದ್ದರೂ ರಸ್ತೆ ವಿಷಯದಲ್ಲಿ ಮಾನ ಕಳೆದುಕೊಂಡಿದೆ. ರಸ್ತೆಗಳನ್ನು ಅಗಲಗೊಳಿಸುವ ಯೋಜನೆಗಳೂ ನೂರಕ್ಕೆ ನೂರರಷ್ಟು ಆಗಿಲ್ಲ.

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಾಗಲಿ, ಜಿಲ್ಲಾ ಪಂಚಾಯತ್  ರಸ್ತೆಯೋಜನೆಗಳಾಗಲಿ ಎಲ್ಲವನ್ನೂ ಗುಣಮಟ್ಟಕ್ಕೆ ಆದ್ಯತೆನೀಡಿ ನಿರ್ದಿಷ್ಟ ಅವಧಿಯಲ್ಲಿ ಮುಗಿಸಬೇಕು. ಅದರ ನಿರ್ವಹಣೆಯನ್ನೂ ಅತಿ ಎಚ್ಚರಿಕೆಯಿಂದ ಮಾಡಬೇಕು.ರಸ್ತೆ ಸಂಪರ್ಕ ವ್ಯವಸ್ಥೆ ಸುಗಮವಾದಷ್ಟೂ ಆರ್ಥಿಕ ಚಟುವಟಿಕೆಯ ಜೊತೆಗೆ ಅಭಿವೃದ್ಧಿಯ ಹೊಂಗಿರಣವೂ ಹೊರಹೊಮ್ಮಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT