ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರೀವಾಜ್ಞೆಗೆ 5 ದಿನ ಜೀವಾಳ

Last Updated 16 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ಬೆಂಗಳೂರು:ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಸೀಮಿತಗೊಳಿಸಿ ಕಳೆದ ಅ.3ರಂದು ಹೊರಡಿಸಿದ್ದ ಸುಗ್ರೀವಾಜ್ಞೆ ಈಗ ಪುನಃ ಸುದ್ದಿಯಲ್ಲಿದೆ.

ಭಾರಿ ವಿವಾದ ಸೃಷ್ಟಿಸಿದ್ದ ಕರ್ನಾಟಕ ಪಂಚಾಯತ್‌ರಾಜ್‌ಗೆ ಸಂಬಂಧಿಸಿದ ಈ ಸುಗ್ರೀವಾಜ್ಞೆಯ ಅವಧಿ ಕೊನೆಗೊಳ್ಳಲು ಕೇವಲ ಐದು ದಿನ ಮಾತ್ರ ಬಾಕಿ ಇದೆ.
ಕಳೆದ ತಿಂಗಳು ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಸುಗ್ರಿವಾಜ್ಞೆಗೆ ಕಾಯ್ದೆ ರೂಪ ನೀಡುವ ಪ್ರಸ್ತಾವವುಳ್ಳ ಮಸೂದೆ ಮಂಡನೆಯಾಗಬೇಕಿತ್ತು. ಆದರೆ ಮಸೂದೆ ಮಂಡನೆಯಾಗಲೇ ಇಲ್ಲ.

 ಸಂವಿಧಾನದ ಪ್ರಕಾರ ಸುಗ್ರೀವಾಜ್ಞೆ ಜಾರಿಯಾದ ಬಳಿಕ ಆರಂಭವಾಗುವ ಅಧಿವೇಶನದ ಮೊದಲ ದಿನದಿಂದ ಆರು ವಾರಗಳ ಅವಧಿಯಲ್ಲಿ ಕಾಯ್ದೆ ರೂಪ ನೀಡದೆ ಹೋದರೆ ಅದು ಅಸ್ತಿತ್ವ ಕಳೆದುಕೊಳ್ಳುತ್ತದೆ.ಈ ಪ್ರಕರಣದಲ್ಲಿಯೂ ಇದೇ ರೀತಿ ಆಗಿದೆ. ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೇ 21ರಂದು ಅದು ಕೊನೆಗೊಳ್ಳಲಿದೆ.

ಆದರೆ ಸುಗ್ರೀವಾಜ್ಞೆ ಅನ್ವಯವೇ ನಡೆದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ನೀಡಿರುವ ಮೀಸಲಾತಿ ಮೇಲೆ ಇದು ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಕಾನೂನು ಇಲಾಖೆಯ ಮೂಲಗಳು ತಿಳಿಸಿವೆ.

ಹಾಗಿದ್ದರೆ ಮುಂದೇನು?: ಪರಿಸ್ಥಿತಿ ಹೀಗಾದರೆ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಉತ್ತರಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಜಗದೀಶ ಶೆಟ್ಟರ್ ಅವರು, ‘ಇದನ್ನು ಶಾಸನ ಸಭೆಯಲ್ಲಿಯೇ ನಿರ್ಧರಿಸಬೇಕಾಗುತ್ತದೆ. ಸುಗ್ರೀವಾಜ್ಞೆಗೆ ಅನುಗುಣವಾಗಿ ಮೀಸಲಾತಿ ನೀಡುವ ಸಲುವಾಗಿ ಈ ಬಾರಿಯ ಬಜೆಟ್‌ನಲ್ಲಿ ಮಸೂದೆ ರೂಪಿಸುವ ಚಿಂತನೆ ನಡೆದಿದೆ’ ಎಂದರು.

‘ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಶೇ 50ಕ್ಕೆ ಮೀಸಲಾತಿಯನ್ನು ನಿರ್ಬಂಧಿಸಬೇಕೆ ಅಥವಾ ಈ ಹಿಂದೆ ಇದ್ದಂತೆ ಹಿಂದುಳಿದ ವರ್ಗಗಳಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕೆ ಎಂಬ ಬಗ್ಗೆ ಅಲ್ಲಿಯೇ ನಿರ್ಧಾರವಾಗಲಿದೆ’ ಎನ್ನುತ್ತಾರೆ ಅವರು. ಒಟ್ಟಿನಲ್ಲಿ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT